Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಸಿಗಲಿದೆ ಆದ್ಯತೆ: ರೈಲ್ವೆ ಸಚಿವ ಸೋಮಣ್ಣ ಹೇಳಿದ್ದೇನು?
Budget 2025: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಈ ಬಾರಿ ಬಜೆಟ್‌ನಲ್ಲಿ ಬೆಂಗಳೂರು ಸರ್ಕುಲರ್ ರೈಲ್ವೆ ಸಹಿತ ಇತರ ಯೋಜನೆಗಳಿಗೆ ಒತ್ತು ಸಿಗಬಹುದು ಎಂದು ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈಗಾಗಲೇ ಸುಮಾರು 40 ಸಾವಿರ ಕೋಟಿ ರೂ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಮಂಜೂರಾಗಿದೆ. ಅದರಲ್ಲೂ 30 ಸಾವಿರ ಕೋಟಿ ರೂ. ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ ಕರ್ನಾಟಕದಲ್ಲಿನ ರೈಲ್ವೆ ಸಂಪರ್ಕ ಜಾಲ ವಿಸ್ತರಣೆ, ಮೂಲಸೌಕರ್ಯ ವೃದ್ದಿಯಂತಹ ಚಟುವಟಿಕೆಗಳಿಗೆ ಒತ್ತು ನೀಡಿ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಅವುಗಳಿಗೆ ಮೊದಲ ಆದ್ಯತೆ ನಮ್ಮದು. 2027ರ ಒಳಗೆ ಈಗಾಗಲೇ ಘೋಷಿತ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಗಿಸಬೇಕು ಎನ್ನುವ ಸೂಚನೆಗಳನ್ನು ಕರ್ನಾಟಕದ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನ ಸರ್ಕುಲರ್ ರೈಲ್ವೆ ಸಹಿತ ಹಲವು ಯೋಜನೆಗಳಿಗೆ ಈ ಬಾರಿಯೂ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆಯಿದೆ.
ಇದು ಕೇಂದ್ರ ರೈಲ್ವೆ ರಾಜ್ಯ ಸಚಿವ ಹಾಗೂ ಜಲಶಕ್ತಿ ರಾಜ್ಯ ಸಚಿವರೂ ಆಗಿರುವ ವಿ.ಸೋಮಣ್ಣ ಅವರ ಅಭಿಪ್ರಾಯ. ದಶಕದ ನಂತರ ಕರ್ನಾಟಕದವರಿಗೆ ಕೇಂದ್ರದಲ್ಲಿ ರೈಲ್ವೆ ಖಾತೆ ದೊರೆತಿದೆ. ಈ ಹಿಂದೆ ಬಿಜೆಪಿ ಸರ್ಕಾರದಲಿ ಕೆಲ ಅವಧಿಗೆ ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದರು. ಈಗ ಅವಕಾಶ ಪಡೆದುಕೊಂಡಿರುವ ಸೋಮಣ್ಣ ಅವರು ಒಂದು ಸುತ್ತು ಕರ್ನಾಟಕದ ಎಲ್ಲಾ ವಿಭಾಗಗಳು, ಪ್ರಮುಖ ನಗರ ಪ್ರದೇಶಗಳಿಗೆ ಭೇಟಿ ನೀಡಿ ರೈಲ್ವೆ ಪ್ರಗತಿ ಪರಿಶೀಲಿಸಿದ್ದಾರೆ. ಆರೇಳು ತಿಂಗಳಲ್ಲಿನಲ್ಲಿಯೇ ರೈಲ್ವೆ ವ್ಯವಸ್ಥೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಈಗ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು. ಇದರ ಜತೆಗೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಜೆಟ್ ಮಂಡನೆಯಾಗುವ ಸಮಯದಲ್ಲಿ ಅವರು ಎಚ್‌ಟಿ ಕನ್ನಡದೊಂದಿಗೆ ಮಾತನಾಡಿದರು.
ನನಗೆ ರೈಲ್ವೆ ಸಚಿವನಾಗುವ ಅವಕಾಶ ಸಿಕ್ಕಿದ್ದು, ಎಲ್ಲೆಡೆ ಪ್ರವಾಸ ಮಾಡಿ ರೈಲ್ವೆ ಸ್ಥಿತಿಗತಿಯನ್ನು ಅರಿತುಕೊಳ್ಳುತ್ತಿದ್ದೇವೆ. ವಿಶೇಷವಾಗಿ ಕರ್ನಾಟಕದ ಯೋಜನೆಗಳು ಯಾವ ಹಂತದಲ್ಲಿವೆ. ಯೋಜನೆ ಜಾರಿಗೆ ಆಗಿರುವ ಅಡ್ಡಿಗಳೇನು, ಇವುಗಳನ್ನು ಮುಗಿಸಿ ಜನ ಬಳಕೆಗೆ ಯಾವಾಗ ಒದಗಿಸಲಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಅಧಿಕಾರಿಗಳ ಹಂತ ಹಾಗೂ ದೆಹಲಿ ಮಟ್ಟದಲ್ಲಿ ಆಗಬೇಕಾದ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ ಅಭಿವೃದ್ದಿ ಪರವಾದ ರಾಜ್ಯ ಎನ್ನುವ ಅಭಿಪ್ರಾಯವಿದೆ. ಇದಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಸೋಮಣ್ಣ.
ಕರ್ನಾಟಕದಲ್ಲಿಯೇ ಸುಮಾರು 40 ಸಾವಿರ ಕೋಟಿ ರೂ. ರೈಲ್ವೆ ಯೋಜನೆಗಳಿಗೆ ಹಿಂದಿನ ಬಜೆಟ್ ನಲ್ಲಿ ಅನುದಾನ ಸಿಕ್ಕಿದೆ. ಈ ಅನುದಾನದಲ್ಲಿ 30 ಸಾವಿರ ಕೋಟಿ ರೂ. ಗಳ ಕೆಲಸಗಳು ಭರದಿಂದ ಸಾಗಿವೆ. ವಿಶೇಷವಾಗಿ ಗದಗ- ವಾಡಿ ರೈಲ್ವೆ ಮಾರ್ಗ, ಮೈಸೂರಿನಲ್ಲಿನ ರೈಲ್ವೆ ಸೇವೆಗಳ ವಿಸ್ತರಣೆ, ಅಶೋಕಪುರಂ ರೈಲ್ವೆ ನಿಲ್ದಾಣ ನಿರ್ಮಾಣದಂತಹ ಯೋಜನೆಗಳು ಸೇರಿವೆ. ಇನ್ನೂ ಹಲವು ರೈಲ್ವೆ ಮಾರ್ಗದ ಯೋಜನೆಗಳು ಆರಂಭಿಕ ಹಂತದಲ್ಲಿದ್ದು. ಅವುಗಳನ್ನು ಕಾಲಮಿತಿಯಲ್ಲಿ ಜಾರಿಗೆ ತರುವುದು ನನ್ನ ಆದ್ಯತೆ. 2027ರ ಹೊತ್ತಿಗೆ ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳು ಒಂದು ಹಂತಕ್ಕೆ ಮುಗಿಯಬೇಕು ಎನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಸೋಮಣ್ಣ ಹೇಳುತ್ತಾರೆ.
ಬೆಂಗಳೂರು ಸರ್ಕುಲರ್ ರೈಲ್ವೆ ಜಾರಿಗೊಳಿಸಬೇಕು ಎನ್ನುವ ಉದ್ದೇಶ. ಇದಕ್ಕೆ ಸಂಬಂಧಿಸಿದ ಯೋಜನೆಗಳು ನಡೆದಿವೆ. ಇದನ್ನೂ ಕೂಡ ಜಾರಿಗೊಳಿಸಲು ಬೇಕಾದ ಆರ್ಥಿಕ ನೆರವನ್ನು ಬಜೆಟ್‌ನಲ್ಲಿ ಪಡೆಯಲಾಗುವುದು. ಇದರಿಂದ ಭವಿಷ್ಯದ ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಲು ಇದು ನೆರವಾಗಲಿದೆ ಎನ್ನುವುದು ಅವರ ವಿವರಣೆ.
ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ ಸಂಬಂಧ ಸಾಕಷ್ಟು ಚರ್ಚೆಗಳು ನಡೆದಿವೆ. ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿಯೇ ಇದು ಘೋಷಣೆಯಾಗಿದೆ ಎನ್ನುವ ಅಭಿಪ್ರಾಯ ತಿಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿ ದಾಖಲೆಗಳಿದ್ದರೆ ಪರಿಶೀಲಿಸಬಹುದು. ದಾಖಲೆ ಕೊಡದೇ ಹೇಳಿದರೆ ಏನು ಉಪಯೋಗ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳು ಜಾರಿಯಾಗಲು ಕೇಂದ್ರ ಸರ್ಕಾರ ಯಥೇಚ್ಛ ಹಣವನ್ನು ನೀಡುತ್ತಿದೆ. ಆದರೆ ಭೂಸ್ವಾಧೀನ ಸಹಿತ ಹಲವು ವಿಚಾರಗಳಲ್ಲಿ ಕರ್ನಾಟಕದ ಸರ್ಕಾರದ ಸಹಕಾರವೇ ಸಿಗುತ್ತಿಲ್ಲ. ಕರ್ನಾಟಕ ಸರ್ಕಾರದ ಸಹಕಾರವಿಲ್ಲದೇ ನಾವು ಏನನ್ನೂ ಮಾಡಲು ಆಗುವುದಿಲ್ಲ. ಅದು ರಾಜ್ಯ ಸರ್ಕಾರದ ಕರ್ತವ್ಯವೂ ಹೌದು ಎಂದರು ಸೋಮಣ್ಣ.
