Nirmala Sitharaman: ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ ಸರಳ ವಿವಾಹ; ರಾಜಕೀಯ ನಾಯಕರಿಗಿಲ್ಲ ಆಹ್ವಾನ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಏಕೈಕ ಪುತ್ರಿ ವಾಙ್ಮಯಿ ಅವರ ವಿವಾಹ ಬೆಂಗಳೂರಿನಲ್ಲಿ ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಏಕೈಕ ಪುತ್ರಿ ಪರಕಾಲ ವಾಙ್ಮಯಿ (Parakala Vangamayi) ಅವರ ವಿವಾಹ ಪ್ರತೀಕ್ ಎಂಬುವರೊಂದಿಗೆ ಬೆಂಗಳೂರಿನಲ್ಲಿ (Bangalore) ಸರಳವಾಗಿ ನೆರವೇರಿಸಿದ್ದಾರೆ.
ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನಡೆದಿದ್ದು, ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ಇರಲಿಲ್ಲ. ಕುಟುಂಬಸ್ಥರು ಹಾಗೂ ಸ್ನೇಹಿತರಷ್ಟೇ ಉಪಸ್ಥಿತರಿದ್ದರು.
ವಧು ವಾಙ್ಮಯಿ ನಸುಗೆಂಪು ಬಣ್ಣ ಸೀರೆಯನ್ನು ಉಟ್ಟಿದ್ದರೆ, ವರ ಪ್ರತೀಕ್ ಬಿಳಿ ಪಂಚೆ ಮತ್ತು ಶಾಲು ಧರಿಸಿದ್ದರು. ಮದುವೆಯ ವಿಡಿಯೋವನ್ನು ಉಡುಪಿಯ ಅದಮಾರು ಮಠದ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶಿಷ್ಯೆ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಇವರ ಸುಪುತ್ರಿ ವಾಙ್ಮಯಿ ಮತ್ತು ಪ್ರತೀಕ್ ಇವರ ವಿವಾಹ ಬೆಂಗಳೂರಿನ ಟ್ಯಾಮರಿಂಡ್ ಟ್ರೀ ನಲ್ಲಿ ನೆರವೇರಿತು.
ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು ವರರನ್ನು ಹರಸಿ ಕಳುಹಿಸಿದ ಮಧುಪರ್ಕ ,ಸೀರೆ, ಶಾಲು ,ಗಂಧ ಪ್ರಸಾದವನ್ನು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ನೀಡಿದರು.
ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ಮಾನ್ಯ ಶ್ರೀಮತಿ ನಿರ್ಮಲ ಸೀತಾರಾಮನ್ ಅವರಿಗೆ ನೀಡಲಾಯಿತು ಎಂದು ಅದಮಾರು ಮಠದ ಎಫ್‌ಬಿಯಲ್ಲಿ ಪೋಸ್ಟ್ ಮಾಡಲಾಗಿದೆ.
ಸಾಮಾನ್ಯವಾಗಿ ರಾಜಕಾರಣಿಗಳು ಮಕ್ಕಳ ಮದುವೆಗಳು ಆಡಂಬರದಿಂದ ಕೂಡಿರುತ್ತವೆ. ಆದರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಏಕೈಕ ಪುತ್ರಿಯ ವಿವಾಹವನ್ನು ಸರಳವಾಗಿ ನೆರವೇರಿಸುವ ಮೂಲಕ ಮಾದರಿಯಾಗಿದ್ದಾರೆ.