Universities: ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು; ನೂತನ 8 ವಿವಿಗಳು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಹೇಳಿಕೆ
ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ನೂತನ 8 ವಿಶ್ವವಿದ್ಯಾಲಯಗಳನ್ನ ಸಿಎಂ ಬೊಮ್ಮಾಯಿ ಇಂದು ಉದ್ಘಾಟಿಸಿದ್ದಾರೆ.
ಬೆಂಗಳೂರು: ಜಿಲ್ಲೆಗೆ ಒಂದಾದರೂ ವಿಶ್ವವಿದ್ಯಾಲಯ ಇರಬೇಕು ಎನ್ನುವ ತತ್ವದಡಿಯಲ್ಲಿ ನೂತನವಾಗಿ 8 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದು, ಈ ವಿಶ್ವವಿದ್ಯಾಯಲಯಗಳನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾಪರ್ಣೆಗೊಳಿಸಿದ್ದಾರೆ.
ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ 8 ವಿಶ್ವವಿದ್ಯಾಲಯಗಳನ್ನು ಸಿಎಂ ಉದ್ಘಾಟಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ್ ನಾರಾಯಣ, ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಈ ವೇಳೆ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಆರಂಭಿಸಿರುವ ಎಲ್ಲ ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು ಎಂದಿದ್ದು, ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ಶಿಕ್ಷಣ ಬೆಳವಣಿಗೆ ಆಗಬೇಕು ಅಂತ ಹೇಳಿದ್ದಾರೆ.
ಜಗತ್ತಿನ ಉನ್ನತ ವಿವಿಗಳ ಜೊತೆಗೆ ಒಪ್ಪಂದ
ಈ ರೀತಿಯ ವಿಶ್ವ ವಿದ್ಯಾಲಯಗಳು ದೇಶದಲ್ಲಿಯೇ ಪ್ರಥಮವಾಗಿ ಪ್ರಾರಂಭವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲರೂ ಕರ್ನಾಟಕದ ಮಾದರಿ ಅಳವಡಿಸಿಕೊಳ್ಳುವಂತಾಗಬೇಕು. ದೇಶದಲ್ಲಿ ಉನ್ನತ ಶಿಕ್ಷಣ ಅಂದರೆ ಐಐಟಿ ಅದಕ್ಕೆ ಸಿಇಟಿ ಮೂಲಕ ಆಯ್ಕೆ ಆಗಬೇಕು.
ನಮ್ಮ ಮಕ್ಕಳೂ ಐಐಟಿ ಮಾದರಿಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಕೆಐಟಿ ಸ್ಥಾಪನೆ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಸಂಸ್ಥೆಗಳು ಐಐಟಿ ಮಾದರಿಯಲ್ಲಿ ಇರಲಿವೆ. ಐಐಟಿ ಹುಡುಕಿಕೊಂಡು ಹೋಗುವ ಬದಲು ಇಲ್ಲಿಯೇ ಐಐಟಿ ಸೃಷ್ಟಿಸುತ್ತಿದ್ದೇವೆ. ಜಗತ್ತಿನ ಉನ್ನತ ವಿವಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ನಾಡಿನ ಭವಿಷ್ಯ
ವಿದ್ಯಾರ್ಥಿಗಳು ನಾಡಿನ ಭವಿಷ್ಯ. ಈಗ 21ನೇ ಶತಮಾನ ಜ್ಞಾನದ ಶತಮಾನ. ಮುಂದಿನ ದಿನಗಳಲ್ಲಿ ಭಾರತ ವಿಶ್ವ ಗುರುವಾಗಲಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಪಾಕಿಸ್ತಾನದ ಪ್ರಜೆಗಳು ಮೋದಿಯಂಥ ಪ್ರಧಾನಿ ಬೇಕು ಅಂತ ಹೇಳುತ್ತಿದ್ದಾರೆ. ಚೀನಾನ ಕೂಡ ಭಾರತ ಕೊರೊನಾ ನಿಯಂತ್ರಣ ಮಾಡಿದ್ದನ್ನು ಮೆಚ್ಚಿಕೊಂಡಿದೆ. ಶಿಕ್ಷಣ ಸಂಸ್ಥೆ ಅಂದರೆ ಪಾವಿತ್ರ್ಯತೆೆ. ಸಂಸ್ಥೆಗಳು ಸರಸ್ವತಿಯ ವಾಹನ ಪರಮಹಂಸ ಕೂಡ ಪವಿತ್ರವಾಗಿದ್ದು ವಿದ್ಯಾರ್ಥಿಗಳು ಅಷ್ಟೇ ಎತ್ತರಕ್ಕೆ ಬೆಳೆಯಬೇಕು ಎಂದಿದ್ದಾರೆ.
ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾರ್ಚ್ 20 ರಂದು ಹೊರಡಿಸಿತ್ತು. ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದರು.
ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ.ಬಿ ಕೆ ರವಿ ಅವರನ್ನು ಕೊಪ್ಪಳ ವಿಶ್ವವಿದ್ಯಾಲಯಕ್ಕೆ, ಬಾಗಲಕೋಟೆಯ ತೋಟಗಾರಿಕೆ ವಿ.ವಿಯ ಡಾ.ಅಶೋಕ ಸಂಗಪ್ಪ ಆಲೂರು ಅವರನ್ನು ಕೊಡಗು ವಿವಿಗೆ ನೇಮಕ ಮಾಡಲಾಗಿದೆ.
ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಡಾ.ಎಂ ಆರ್ ಗಂಗಾಧರ ಅವರನ್ನು ಚಾಮರಾಜನಗರ ವಿವಿ, ಬೆಳಗಾವಿಯ ಕೆ.ಎಸ್.ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದ್ ಶರದ್ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿ, ಕುವೆಂಪು ವಿ.ವಿಯ ಡಾ.ಬಿ ಎಸ್ ಬಿರಾದಾರ್ ಅವರನ್ನು ಬೀದರ್ ವಿವಿ ನೇಮಿಸಲಾಗಿದೆ.
ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಡಾ.ಸುರೇಶ್ ಹೆಚ್ ಜಂಗಮಶೆಟ್ಟಿ ಅವರನ್ನು ಹಾವೇರಿ ವಿವಿ ಮತ್ತು ಧಾರವಾಡದ ಕರ್ನಾಟಕ ವಿ.ವಿಯ ನಿವೃತ್ತ ಪ್ರೊಫೆಸರ್ ಆಗಿರುವ ಡಾ.ಟಿ ಸಿ ತಾರಾನಾಥ್ ಅವರನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಿಸಲಾಗಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು.