ಯುಪಿಎಸ್ಸಿ ಪರೀಕ್ಷೆ ಫಲಿತಾಂಶ: ಕರ್ನಾಟಕದಲ್ಲಿ ರಂಗಮಂಜು ಟಾಪರ್; ಸಚಿನ್ ಬಸವರಾಜ್‌ಗೂ ಉತ್ತಮ ರ‍್ಯಾಂಕ್
ಯುಪಿಎಸ್ಸಿ ಪರೀಕ್ಷೆ 2024 ಫಲಿತಾಂಶ ಪ್ರಕಟವಾಗಿದ್ದು ಕರ್ನಾಟಕದಿಂದ ರಂಗಮಂಜು, ಸಚಿನ್ ಬಸವರಾಜು, ಮೇಘನಾ ಸಹಿತ ಹಲವರು ಆಯ್ಕೆಯಾಗಿದ್ದಾರೆ. ಅವರ ವಿವರ ಇಲ್ಲಿದೆ.

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆ 2024 ರ ಫಲಿತಾಂಶ ಪ್ರಕಟವಾಗಿದ್ದು ಕರ್ನಾಟಕದಿಂದಲೂ ಹಲವರು ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇದರಲ್ಲಿ ಆರ್. ರಂಗ ಮಂಜು – 24, ಡಾ.ಸಚಿನ್ ಬಸವರಾಜ್ ಗುತ್ತೂರ್ – 41, ವಿಕಾಸ್. ವಿ- 288, ವಿಭೋರೆ ಮೆಂಡಿರಟ್ಟ - 389ನೇ ರ‍್ಯಾಂಕ್, ಬಿಎಂ ಮೇಘನಾ – 425, ಪ್ರತಿವಾ ಲಾಮ - 461ನೇ ರ‍್ಯಾಂಕ್, ರಾಹುಲ್ ಸಿ ಯರತ್ನೇಳಿ - 462ನೇ ರ‍್ಯಾಂಕ್, ಪರಮಿತ ಮಲಕರ್ - 477ನೇ ರ‍್ಯಾಂಕ್, ಡಾ. ಭಾನುಪ್ರಕಾಶ್ – 523, ಅಭಿಶೀಲ್ ಜೈಶ್ವಾಲ್ - 538ನೇ ರ‍್ಯಾಂಕ್, ಎ.ಮಧು - 544ನೇ ರಾಂಕ್, ವರುಣ್ ಕೆ ಗೌಡ - 565ನೇ ರ‍್ಯಾಂಕ್, ಭರತ್ ಸಿ ಯಾರಂ – 567, ಸ್ವಪ್ನಿಲ್ ಭಾಗಲ್ - 620ನೇ ರ‍್ಯಾಂಕ್,ಸಂಪ್ರೀತ್ ಸಂತೋಷ್ - 652ನೇ ರ‍್ಯಾಂಕ್, ನಿಖಿಲ್ ಎಂಆರ್- 724, ಟಿ. ವಿಜಯ್ ಕುಮಾರ್ – 894, ಹನುಮಂತಪ್ಪ ನಂದಿ – 910, ಧನ್ಯ ಕೆ.ಎಸ್- 982, ಮೋಹನ್ ಪಾಟೀಲ್ – 984 ರ‍್ಯಾಂಕ್ ಗಳಿಸಿದವರು. ಇದಲ್ಲದೇ ಇನ್ನೂ ಹಲವರು ಈ ಪಟ್ಟಿಯಲ್ಲಿದ್ದಾರೆ. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಪರೀಕ್ಷೆಗೆ ತಯಾರಿ ಮಾಡಿದವರೂ ಕೂಡ ಹಲವರು ಉತ್ತಮ ರ‍್ಯಾಂಕ್ ಗಳಿಸಿಕೊಂಡಿದ್ದಾರೆ.
ಕಳೆದ ವರ್ಷ ನಡೆದಿದ್ದ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದಲೂ ಹಲವರು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ ಬೆಂಗಳೂರಿನ ಇನ್ಸ್‌ಸೈಟ್ಸ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಹೆಚ್ಚಿನ ಅಭ್ಯರ್ಥಿಗಳು ರ‍್ಯಾಂಕ್ ಪಡೆದುಕೊಂಡಿದ್ದಾರೆ. ಆರ್.ರಂಗಮಂಜು 24ನೇ ರ‍್ಯಾಂಕ್ ಪಡೆದಿರುವುದು ವಿಶೇಷ.
2024 ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯವನ್ನು ಶ್ರೇಷ್ಠತೆಯಿಂದ ಪ್ರತಿನಿಧಿಸಿ ಅಖಿಲ ಭಾರತ -24ನೇ ರ‍್ಯಾಂಕ್‌ನೊಂದಿಗೆ ಉನ್ನತ ಶ್ರೇಣಿಯನ್ನು ಪಡೆದ ಆರ್ ರಂಗಮಂಜು ಸಾಧನೆಗೆ ಅಭಿನಂದನೆಗಳು. ಅವರ ಯಶಸ್ಸಿನ ಕಥೆ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನದ ಉಜ್ವಲ ಉದಾಹರಣೆಯಾಗಿದೆ ಎಂದು ಇನ್ಸೈಟ್ಸ್ ಐಎಎಸ್ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.
ಈ ಹಿಂದೆ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ, ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದ ಆರ್.ರಮೇಶ್ ಅವರ ಪುತ್ರ ರಂಗಮಂಜು. ಅಪ್ಪನಂತೆಯೇ ಅಧಿಕಾರಿಯಾಗಬೇಕು ಎನ್ನುವ ಉತ್ಕಟ ಬಯಕೆಯೊಂದಿಗೆ ನಿರಂತರ ತಯಾರಿ ನಡೆಸಿ ಆರನೇ ಪ್ರಯತ್ನದಲ್ಲಿ ಅವರು ಆಯ್ಕೆಯಾಗಿದ್ದಾರೆ.
ಅದೇ ರೀತಿ ಹಾವೇರಿ ಜಿಲ್ಲೆಯ ಡಾ.ಸಚಿನ್ ಬಸವರಾಜ ಗುತ್ತೂರ್ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಸಚಿನ್ ಅವರು 41ನೇ ರ‍್ಯಾಂಕ್ ಪಡೆದಿದ್ದಾರೆ. ಸಚಿನ್ ಅವರು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ನಿವಾಸಿ. ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿಯಲ್ಲಿ ತಯಾರಿ ಮಾಡಿದವರು. ವೃತ್ತಿಯಲ್ಲಿ ವೈದ್ಯರಾಗಿರುವ ಸಚಿನ್ ಗುತ್ತೂರ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದುಕೊಂಡಿದ್ದು. ಕರ್ನಾಟಕದಲ್ಲಿಯೇ ಐಎಎಸ್ ಇಲ್ಲವೇ ಐಪಿಎಸ್ ಹುದ್ದೆ ಪಡೆಯಬಹುದು.
ಶಿವಮೊಗ್ಗ ಜಿಲ್ಲೆ ಸಾಗರ ನಿವಾಸಿ ವಿ.ವಿಕಾಸ್ 288ನೇ ರ‍್ಯಾಂಕ್ ಪಡೆದಿದ್ದಾರೆ. ಮೈಸೂರಿನ ಎನ್‌ಐಇ ವಿದ್ಯಾರ್ಥಿಯಾಗಿ ಸದ್ಯ ಎಂಜಿನಿಯರ್ ಆಗಿದ್ದ ವಿಕಾಸ್ ಯುಪಿಎಸ್‌ಸಿ ಪರೀಕ್ಷೆಯಲ್ಲೂ ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಪ್ರಾಥಮಿಕ ಆರೋಗ್ಯಾಧಿಕಾರಿ ಡಾ.ಮಹೇಶ ಆರ್. ಮಡಿವಾಳರ ಯುಪಿಎಸ್ ಸಿ 482ನೇ ರ‍್ಯಾಂಕ್ ಗಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಅಕ್ಕಿಮರಡಿಯ ರೈತನ ಮಗ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಮಹಾಲಿಂಗಪುರ ಸಮೀಪದ (ಮುಧೋಳ ತಾಲೂಕಿನ) ನಾಗರಾಳ ಗ್ರಾಪಂ ವ್ಯಾಪ್ತಿಯ ಪುಟ್ಟ ಹಳ್ಳಿ ಅಕ್ಕಿಮರಡಿಯ ಪಾಂಡುರಂಗ ಸದಾಶಿವ ಕಂಬಳಿ ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ವಿಭಾಗದಲ್ಲಿ 529ನೇ ರ‍್ಯಾಂಕ್ ಪಡೆದಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ನಿಖಿಲ್ ಎಂ.ಆರ್. (724) ಅವರು ಆಯ್ಕೆ ಆಗಿದ್ದಾರೆ.