ಕನ್ನಡ ಸುದ್ದಿ  /  Karnataka  /  Urigowda And Nanjegowda Issue Hd Kumaraswamy Attack On Bjp Leaders

HDK: ಸುಳ್ಳಿನ ಉರಿಗೌಡ, ನಂಜೇಗೌಡ ಮಾತು ಹಾಗಿರಲಿ; ಜೀವಂತ ಬೇಯುತ್ತಿರುವ ಉರಿಗೌಡ, ನಂಜೇಗೌಡರ ಪಾಡೇನು? ಹೆಚ್ಡಿಕೆ ಪ್ರಶ್ನೆ

ಉರಿಗೌಡ, ನಂಜೇಗೌಡ ವಿಚಾರ ಈಗ ಅಪ್ರಸ್ತುತ. ಒಂದು ಸಮಾಜ, ಇನ್ನೊಂದು ಸಮಾಜವನ್ನ ಅನುಮಾನದಿಂದ ನೋಡುವಂತಾಗಿದೆ. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಇದನ್ನು ಎತ್ತಿಕಟ್ಟುತ್ತಿದೆ. ಇವರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಉರಿಗೌಡ, ನಂಜೇಗೌಡ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರಿ ಸುದ್ದಿಯಾಗುತ್ತಿರುವ ಈ ಎರಡು ಹೆಸರುಗಳು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವಿನ ಭಾರಿ ವಾಗ್ವಾದಕ್ಕೆ ಕಾರಣವಾಗಿದ್ದು, ಇಂದು ಕೂಡ ಮಾಜಿ ಸಿಎಂ ಹೆಚ್ಡಿಕೆ ಕೇಸರಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ.

ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡ ಹೆಸರುಗಳನ್ನು ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ, ಜೀವಂತ ಇರುವ ಉರಿಗೌಡ, ನಂಜೇಗೌಡ ಅವರನ್ನು ಕೋಮು ದಳ್ಳುರಿಯಲ್ಲಿ ಬೆಯಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ಉರಿಗೌಡ, ನಂಜೇಗೌಡ ಇದ್ದರೋ ಇಲ್ಲವೋ ಗೊತ್ತಿಲ್ಲ. ಜೀವಂತ ಬದುಕಿರುವ ಉರಿಗೌಡ, ನಂಜೇಗೌಡರ ಬಗ್ಗೆ ಯೋಚಿಸಬೇಕು ಎಂದು ರೈತರ ಕುರಿತಾಗಿ ಅವರು ಹೇಳಿದ್ದಾರೆ.

ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಇದನ್ನು ಎತ್ತಿಕಟ್ಟುತ್ತಿದೆ

ಈ ವಿಚಾರ ಈಗ ಅಪ್ರಸ್ತುತ. ಒಂದು ಸಮಾಜ, ಇನ್ನೊಂದು ಸಮಾಜ ಅನುಮಾನದಿಂದ ನೋಡುವಂತಾಗಿದೆ. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಇದನ್ನು ಎತ್ತಿಕಟ್ಟುತ್ತಿದೆ. ಇವರಿಗೆ ನೈತಿಕತೆ ಇಲ್ಲ. ಇದನ್ನು ಅವರಿಗೆ ಕೇಳಿದ್ದು ಯಾರು? ಅದರಿಂದ ಯಾರಿಗೆ ಏನಾಗಬೇಕಿದೆ? ಬಾಲಗಂಗಾಧರ ಸ್ವಾಮೀಜಿ ಹೆಸರಿದ್ದ ಜಾಗದಲ್ಲಿ ಇವರಿಬ್ಬರ ಹೆಸರನ್ನ ದ್ವಾರಕ್ಕೆ ಹಾಕಿದ್ದು ಅಕ್ಷಮ್ಯ ಅಪರಾಧ. ಯಾರೋ ಉಗಿದರು ಅಂತ ಬಳಿಕ ತೆಗೆದಿದ್ದಾರೆ. ಈ ಘಟನೆಯಿಂದ ಒಕ್ಕಲಿಗರ ಮತಗಳು ಬದಲಾಗಲ್ಲ. ಒಕ್ಕಲಿಗ ಮತ ಭದ್ರವಾಗಿದೆ ಎಂದರು ಕುಮಾರಸ್ವಾಮಿ ಅವರು.

ಉರಿಗೌಡ, ನಂಜೇಗೌಡ ಹೆಸರುಗಳು ಕಾಲ್ಪನಿಕ

ಇವೆರೆಡೂ ಹೆಸರುಗಳು ಕಾಲ್ಪನಿಕ ಅಷ್ಟೇ. ಈ ಇಬ್ಬರ ಹೆಸರಲ್ಲಿ ಸಿನಿಮಾ ಮಾಡಬಹುದು, ಹಣ ಮಾಡಬಹುದು ಅಷ್ಟೇ. ಬೇರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಸಚಿವ ಅಶ್ವತ್ಥ್‌ ನಾರಾಯಣ ಹೇಳಿದ್ದೇನು?

ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮವೊಂದರಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ನಿಮಗೆ ಟಿಪ್ಪು ಬೇಕಾ ಅಥವಾ ಸಾವರ್ಕರ್ ಬೇಕಾ? ಟಿಪ್ಪು ಸುಲ್ತಾನ್ ಅನ್ನು ಎಲ್ಲಿಗೆ ಕಳುಹಿಸಬೇಕು? ಉರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದು ಅಶ್ವತ್ಥ್‌ ನಾರಾಯಣ ಹೇಳಿದ್ದರು.

ರಾಜ್ಯದ ಉನ್ನತ ಶಿಕ್ಷಣ ಸಚಿವರ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನನ್ನು ಫಿನಿಶ್‌ ಮಾಡಿ ಅಂದರೆ ಏನರ್ಥ? ಜನರನ್ನು ರಕ್ಷಣೆ ಮಾಡಬೇಕಾದ ಸಚಿವರೊಬ್ಬರು ಹೇಳುವ ಮಾತೇನ್ರಿ ಇದು? ಅಶ್ವತ್ಥ್‌ ನಾರಾಯಣರು ಹೇಳಿದ್ದು ಸರಿಯೇ? ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಏನು ಹೇಳುತ್ತಾರೆ? ದಾಳಿ ಮಾಡುವುದು, ಕೊಲೆ ಮಾಡುವುದು, ಹತ್ಯೆ ಮಾಡುವುದು ಬಿಜೆಪಿಯ ಸಂಸ್ಕೃತಿ ಎಂದಿದ್ದರು.

ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು ಎಂದು ಅವರ ಹತ್ಯೆಗೆ ಕರೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ ಅವರ ವಿರುದ್ದ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದ್ದರು. ಅಲ್ಲದೆ, ಡಿಜಿಪಿ ಪ್ರವೀಣ್ ಸೂದ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

IPL_Entry_Point