ಬೆಂಗಳೂರಿಗರ ಅಮೆರಿಕ ರಾಯಭಾರ ಕಚೇರಿ ಕನಸು ನನಸು; ಯುಎಸ್ ಕಾನ್ಸುಲೇಟ್ ಉದ್ಘಾಟನೆ, ವೀಸಾ ಅರ್ಜಿ ವಿಲೇವಾರಿ ಯಾವಾಗದಿಂದ?; 4 ಮುಖ್ಯ ಅಂಶಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗರ ಅಮೆರಿಕ ರಾಯಭಾರ ಕಚೇರಿ ಕನಸು ನನಸು; ಯುಎಸ್ ಕಾನ್ಸುಲೇಟ್ ಉದ್ಘಾಟನೆ, ವೀಸಾ ಅರ್ಜಿ ವಿಲೇವಾರಿ ಯಾವಾಗದಿಂದ?; 4 ಮುಖ್ಯ ಅಂಶಗಳಿವು

ಬೆಂಗಳೂರಿಗರ ಅಮೆರಿಕ ರಾಯಭಾರ ಕಚೇರಿ ಕನಸು ನನಸು; ಯುಎಸ್ ಕಾನ್ಸುಲೇಟ್ ಉದ್ಘಾಟನೆ, ವೀಸಾ ಅರ್ಜಿ ವಿಲೇವಾರಿ ಯಾವಾಗದಿಂದ?; 4 ಮುಖ್ಯ ಅಂಶಗಳಿವು

US Consulate in Bengaluru: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಚೊಚ್ಚಲ ಅಮೆರಿಕ ರಾಯಭಾರ ಕಚೇರಿ ಶುರುವಾಯಿತು. ಇಂದು (ಜನವರಿ 17) ಯುಎಸ್ ಕಾನ್ಸುಲೇಟ್ ಉದ್ಘಾಟನೆ ನಡೆದಿದ್ದು, ವೀಸಾ ಅರ್ಜಿ ವಿಲೇವಾರಿ ಯಾವಾಗದಿಂದ ಎಂಬಿತ್ಯಾದಿ ಪ್ರಶ್ನೆಗಳು ಸೇರಿ ಬೆಂಗಳೂರಿಗರ ಮುಖ್ಯ ನಿರೀಕ್ಷೆಗಳ ಕಡೆಗೊಂದು ನೋಟ ಇಲ್ಲಿದೆ.

ಬೆಂಗಳೂರಿಗರ ಅಮೆರಿಕ ರಾಯಭಾರ ಕಚೇರಿ ಕನಸು ನನಸಾಯಿತು. ಯುಎಸ್ ಕಾನ್ಸುಲೇಟ್ ಉದ್ಘಾಟನೆಗೊಂಡಿದ್ದು, ಬೆಂಗಳೂರಿಗರ 4 ಮುಖ್ಯ ನಿರೀಕ್ಷೆಗಳಿವು.
ಬೆಂಗಳೂರಿಗರ ಅಮೆರಿಕ ರಾಯಭಾರ ಕಚೇರಿ ಕನಸು ನನಸಾಯಿತು. ಯುಎಸ್ ಕಾನ್ಸುಲೇಟ್ ಉದ್ಘಾಟನೆಗೊಂಡಿದ್ದು, ಬೆಂಗಳೂರಿಗರ 4 ಮುಖ್ಯ ನಿರೀಕ್ಷೆಗಳಿವು. (@NMenonRao /‍X)

US Consulate in Bengaluru: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 17) ಯುಎಸ್ ಕಾನ್ಸುಲೇಟ್ ಕಚೇರಿ ಉದ್ಘಾಟನೆ ನೆರವೇರಿತು. ಹಾಗೆ ಬೆಂಗಳೂರಿಗರ ಅಮೆರಿಕ ರಾಯಭಾರ ಕಚೇರಿಯ ಕನಸು ನನಸಾಗಿದೆ. ಭಾರತದಲ್ಲಿ ಅಮೆರಿಕದ ಐದನೇ ರಾಯಭಾರ ಕಚೇರಿ ಇದಾಗಿದೆ. ಬೆಂಗಳೂರಿನ ಜೆಡಬ್ಲ್ಯು ಮಾರಿಯೆಟ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿರುವ ಅಮರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ರಾಯಭಾರ ಕಚೇರಿ ಆರಂಭವಾಗಿರುವ ಘೋಷಣೆಯನ್ನು ಕನ್ನಡದಲ್ಲೇ ಮಾಡಿ ಗಮನಸೆಳೆದರು. ಈ ಸಂದರ್ಭದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್‌ ಮತ್ತು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಾಗೂ ಇತರೆ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಯುಎಸ್ ಕಾನ್ಸುಲೇಟ್‌ ಕಚೇರಿ‌ಯು ವಿಠಲ್ ಮಲ್ಯ ರಸ್ತೆಯ ಜೆಡಬ್ಲ್ಯು ಮಾರಿಯೆಟ್ ಹೋಟೆಲ್‌ನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಕಚೇರಿಯೊಂದಿಗೆ ಕೆಲಸ ಶುರುಮಾಡಲಿದೆ. ಶೀಘ್ರವೇ ವೀಸಾ ಅರ್ಜಿ ವಿಲೇವಾರಿ ಕೂಡ ಶುರುವಾಗಲಿದೆ ಎಂದು ರಾಯಭಾರಿ ಎರಿಕ್ ಗಾರ್ಸೆಟ್ಟಿ ತಿಳಿಸಿದರು.

ಕರ್ನಾಟಕ- ಅಮೆರಿಕ ವ್ಯಾಪಾರ ಸಂಬಂಧ ವೃದ್ಧಿಗೆ ಪೂರಕ

ಹೊಸ ದೂತಾವಾಸವು ಮುಖ್ಯವಾಗಿ ಭಾರತದ ಜತೆಗೆ ಕರ್ನಾಟಕದೊಂದಿಗಿನ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ಬಲಪಡಿಸಲು ನೆರವಾಗಲಿದೆ. ಅಮೆರಿಕ ಮತ್ತು ಭಾರತದ ನಡುವಿನ ಹೂಡಿಕೆ ಮತ್ತು ವ್ಯಾಪಾರದ ಅಭಿವೃದ್ಧಿಶೀಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಬೆಂಗಳೂರಿನ ಯುಎಸ್ ಕಾನ್ಸುಲೇಟ್‌ ಬಳಕೆಯಾಗಲಿದೆ. ಆದಾಗ್ಯೂ, ಹೊಸ ದೂತಾವಾಸದ ಮೂಲಕ ಈ ಕೂಡಲೇ ವೀಸಾ ಅರ್ಜಿಗಳ ವಿಲೇವಾರಿ ಶುರುವಾಗುವ ನಿರೀಕ್ಷೆ ಇಲ್ಲ. ಭಾರತದ ಐಟಿ ರಾಜಧಾನಿ ಬೆಂಗಳೂರು ನಿವಾಸಿಗಳ ಬಹುವರ್ಷಗಳ ಕನಸು ಇಂದು (ಜನವರಿ 17) ನನಸಾಗಿದೆ. ಇದಕ್ಕೂ ಮೊದಲು ಬೆಂಗಳೂರಿಗರು ಅಮೆರಿಕಕ್ಕೆ ಸಂಬಂಧಿಸಿದ ವ್ಯವಹಾರಕ್ಕೆ ಚೆನ್ನೈ, ಹೈದರಾಬಾದ್‌, ಕೋಲ್ಕತಾ ಮತ್ತು ಮುಂಬಯಿ ಕಚೇರಿಗಳಿಗೆ ತೆರಳಬೇಕಿತ್ತು. ಇನ್ನು ಮುಂದೆ ಈ ಸೌಲಭ್ಯ ಬೆಂಗಳೂರಲ್ಲೇ ಬೆಂಗಳೂರಿಗರಿಗೆ ಸಿಗಲಿದೆ.

ಬೆಂಗಳೂರಲ್ಲಿ ಯುಎಸ್ ಕಾನ್ಸುಲೇಟ್; ಗಮನಿಸಬೇಕಾದ 4 ಮುಖ್ಯ ಅಂಶ

1) ಅಮೆರಿಕಕ್ಕೆ ಹೋಗಲು ಬಯಸುವ ಕನ್ನಡಿಗರಿಗೆ (ಬೆಂಗಳೂರಿಗರು, ಕರ್ನಾಟಕದ ಇತರೆ ಭಾಗದವರು) ಹತ್ತಿರದ ಯುಎಸ್ ಕಾನ್ಸುಲೇಟ್ ಇದ್ದದ್‌ದು 300 ಕಿಮೀ ದೂರದ ಚೆನ್ನೈನಲ್ಲಿ. ವೀಸಾ ಸಂದರ್ಶನ, ವೀಸಾ ನವೀಕರಣಕ್ಕೆ ಚೆನ್ನೈಗೇ ಹೋಗಬೇಕು. ದಕ್ಷಿಣ ಕರ್ನಾಟಕದಿಂದ ಚೆನ್ನೈನ ಅಮೆರಿಕ ದೂತಾವಾಸಕ್ಕೆ ದಿನಕ್ಕೆ ಕನಿಷ್ಠ 450 ವೀಸಾ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ದೂತಾವಾಸ ಶುರುವಾದ ಕಾರಣ ಇನ್ನು ಈ ಪ್ರಕ್ರಿಯೆಗೆ ವೇಗ ಸಿಗಲಿದೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಅಮೆರಿಕ ದೂತಾವಾಸ ಕಚೇರಿಗಳ ಮೇಲಿನ ಹೊರೆ ಕಡಿಮೆಯಾಗಲಿದೆ.

2) ಬೆಂಗಳೂರು ಕೇಂದ್ರಿತವಾಗಿ 750ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ತಮ್ಮ ವ್ಯವಹಾರ ನಡೆಸುತ್ತಿವೆ. ಈ ಪೈಕಿ 370 ಕಂಪನಿಗಳ ಕೇಂದ್ರ ಕಚೇರಿ ಇರುವಂಥದ್ದು ಅಮೆರಿಕದಲ್ಲಿ ಎಂಬುದು ಗಮನಿಸಬೇಕಾದ ವಿಚಾರ. ಕರ್ನಾಟಕದಿಂದ ವಿಶೇಷವಾಗಿ ಬೆಂಗಳೂರು ಮೂಲಕ ಅಮೆರಿಕಕ್ಕೆ ಪ್ರಯಾಣಿಸುವವರ ಸಂಖ್ಯೆ ಬಹುದೊಡ್ಡದಿದೆ. ಈ ಎಲ್ಲ ಕಾರಣಕ್ಕೆ ಬೆಂಗಳೂರಲ್ಲಿ ಅಮೆರಿಕ ದೂತಾವಾಸ ಕಚೇರಿ ಬೇಕು ಎಂಬ ಬೇಡಿಕೆ ಇದ್ದದ್ದು.

3) ಕರ್ನಾಟಕವು ರಾಜಧಾನಿ ಬೆಂಗಳೂರು ಕೇಂದ್ರಿತವಾಗಿ ಭಾರತದ ಐಟಿ ಕೇಂದ್ರವಾಗಿದೆ. ಅಲ್ಲದೆ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಿಂದ ರಫ್ತು ಮೌಲ್ಯವನ್ನು ಪ್ರತಿ ವರ್ಷ 51 ಶತಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದ್ದು, ಇದು ಭಾರತದ ರಫ್ತಿನಲ್ಲಿ ಶೇಕಡ 13 ಪಾಲು ಹೊಂದಿದೆ.

4) ಬೆಂಗಳೂರು ಯುಎಸ್ ಕಾನ್ಸುಲೇಟ್ ಮೂಲಕ ಅಮೆರಿಕದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕದ ಎಲ್ಲ ಕಂಪನಿಗಳ ಪ್ರತಿನಿಧಿಗಳು, ವ್ಯಾಪಾರ ಪ್ರತಿನಿಧಿಗಳು, ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

ಬೆಂಗಳೂರು ಯುಎಸ್ ಕಾನ್ಸುಲೇಟ್ ತೆರೆಯುವ ವಿಚಾರವನ್ನು 2023ರ ಜೂನ್ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘೋಷಿಸಲಾಗಿತ್ತು. ಬೆಂಗಳೂರು ಮಾತ್ರವಲ್ಲದೇ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಯುಎಸ್ ಹೊಸ ಕಾನ್ಸುಲೇಟ್‌ಗಳನ್ನು ತೆರೆಯುವುದಾಗಿ ಅಮೆರಿಕ ಪ್ರಕಟಿಸಿತ್ತು.

Whats_app_banner