ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ದೀಪಗಳು, 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ದೀಪಗಳು, 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು

ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ದೀಪಗಳು, 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು

Eternal Lamp Extinguished: ಮುಂಡಗೋಡ ತಾಲೂಕು ಚಿಗಳ್ಳಿಯ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ದಶಕಗಳಿಂದ ಹೊತ್ತಿ ಉರಿಯುತ್ತಿದ್ದ ಮೂರು ನಂದಾದೀಪಗಳು ಬುಧವಾರ (ಫೆ 5) ಆರಿ ಹೋದವು. ಏನಿದು ವಿದ್ಯಮಾನ- ಇಲ್ಲಿದೆ ವಿವರ.

ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ನಂದಾದೀಪಗಳು, 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು.
ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ನಂದಾದೀಪಗಳು, 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು.

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಚಿಗಳ್ಳಿ ಗ್ರಾಮದ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ದಶಕಗಳಿಂದ ಹೊತ್ತಿ ಉರಿಯುತ್ತಿದ್ದ ಮೂರು ದೀಪಗಳು ಬುಧವಾರ (ಫೆ 5) ಆರಿ ಹೋದವು. ಸರಿ ಸುಮಾರು 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದ ಈ ದೀಪಗಳ ಭಕ್ತರ ಅಚ್ಚರಿಗೆ ಕಾರಣವಾಗಿದ್ದವು. ಈಗ ದೀಪಗಳು ಆರಿ ಹೋಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಎಣ್ಣೆ ಮತ್ತು ಬತ್ತಿ ಇಲ್ಲದೇ ಉರಿಯುತ್ತಿರುವ ದೀಪಗಳು ಎಂದು ಸುದ್ದಿ ಹರಡಿದ್ದ ಕಾರಣ ಈ ದೀಪಗಳ ದರ್ಶನಕ್ಕಾಗಿ ಸಾಕಷ್ಟು ಪ್ರವಾಸಿಗರು ನಿತ್ಯವೂ ದೀಪನಾಥೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.

ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ದೀಪಗಳು

ಸರಿ ಸುಮಾರು ನಾಲ್ಕೂವರೆ ದಶಕ ಕಾಲದಿಂದ ಹೊತ್ತಿ ಉರಿದು ಗ್ರಾಮಸ್ಥರಲ್ಲದೆ, ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿದ ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ ಮೂರು ದೀಪಗಳು ಆರಿ ಹೋದವು ಎಂಬ ಸುದ್ದಿ ಬುಧವಾರ (ಫೆ 5) ಕಾಡ್ಗಿಚ್ಚಿನಂತೆ ಹರಡಿತು. ವಿಷಯ ತಿಳಿದ ಕೂಡಲೆ ಗ್ರಾಮಸ್ಥರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಬಂದರು. ಅಕ್ಕಪಕ್ಕದ ಗ್ರಾಮದ ಜನರೂ ದೇಗುಲಕ್ಕೆ ದೌಡಾಯಿಸಿದರು. ಆರಿ ಹೋಗಿರುವ ದೀಪಗಳನ್ನು ನೋಡಿ ಆತಂಕಕ್ಕೆ ಒಳಗಾದರು. ದೀಪಗಳು ಆರಿ ಹೋಗುವುದಕ್ಕೆ ಕಾರಣ ತಿಳಿಯದೇ ಕಂಗಾಲಾದರು ಎಂದು ಕನ್ನಡ ಪ್ರಭ ವರದಿ ಮಾಡಿದೆ. ಈ ವಿದ್ಯಮಾನದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು ಕಳವಳ ಪಡಬೇಕಾಗಿಲ್ಲ ಎಂದು ಹೇಳಿದೆ.

ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ದೇವರ ಪೂಜಾ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟೇಶ ರಾಯ್ಕರ ಅವರು ಕಳೆದ ತಿಂಗಳು ಜನವರಿ 23 ರಂದು ವಿಧಿವಶರಾದರು. ಅವರ ಕುಟುಂಬಸ್ಥರು ಗೋಕರ್ಣಕ್ಕೆ ಹೋಗಿ ಅಂತ್ಯಸಂಸ್ಕಾರ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದಿದ್ದಾರೆ. ಹೀಗೆ ಬಂದ ನಂತರ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆದು ನೋಡಿದಾಗ, ಮೂರು ದೀಪಗಳು ಆರಿ ಹೋಗಿರುವುದು ಗಮನಸೆಳೆದಿದೆ ಎಂದು ಆಡಳಿತ ಸಮಿತಿ ಸದಸ್ಯ ಕೆ ಶೇಷಾದ್ರಿ ಹೇಳಿಕೆಯಲ್ಲಿ ತಿಳಿಸಿದ್ದಾಗಿ ವಿಜಯವಾಣಿ ವರದಿ ಹೇಳಿದೆ.

ಚಿಗಳ್ಳಿ ಶ್ರೀ ದೀಪನಾಥೇಶ್ವರ ದೇವಸ್ಥಾನವು ದೇವರ ಅನುಗ್ರಹವಿರುವ ಸಿದ್ಧಿ ಸ್ಥಳವಾಗಿದೆ. ಶೀಘ್ರವೇ ಇಲ್ಲಿ ಈಶ್ವರ, ಬಸವಣ್ಣ, ಮಹಾಗಣಪತಿ, ಜ್ಞಾನೇಶ್ವರಿ, ಐದು ತಲೆ ನಾಗದೇವರು ಹಾಗೂ ದತ್ತಾತ್ರೇಯ, ಚೌಡೇಶ್ವರಿ, ಭೂಚಿತರಾಯ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅಡಳಿತ ಮಂಡಳಿ ನಿರ್ಧರಿಸಿದೆ ಎಂದು ವರದಿ ವಿವರಿಸಿದೆ.

4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು

ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬುವವರು 1979ರಲ್ಲಿ ಸೀಮೆ ಎಣ್ಣೆ ಹಾಕಿ ಒಂದು ಪುಟ್ಟ ದೀಪ ಉರಿಸಿದ್ದರು. ಅದು ನಿರಂತರ ಉರಿಯತೊಡಗಿತು. ಇದನ್ನು ಕಂಡು ಅಚ್ಚರಿಗೊಂಡ ಶಾರದಮ್ಮ ಅವರು 1980ರಲ್ಲಿ ಮತ್ತೊಂದು ದೀಪ ಹಚ್ಚಿದರು. ಅದು ಕೂಡ ನಿರಂತರ ಉರಿಯಲಾರಂಭಿಸಿತು. ಇದರಿಂದ ಅಚ್ಚರಿಗೊಂಡ ಅವರು, 15 ದಿನ ಬಿಟ್ಟು ಮತ್ತೊಂದು ದೀಪವನ್ನು ಉರಿಸಿದರು. ಅದು ಕೂಡ ಉರಿಯತೊಡಗಿದೆ. ಇವೆಲ್ಲ ಪವಾಡದಂತೆ ನಡೆದಿದ್ದು, ಆ ದೀಪಗಳು ನಿರಂತರ 45 ವರ್ಷ ಕಾಲ ಉರಿದಿವೆ. ಈ ದೀಪ ಹಚ್ಚಿದ್ದ ಶಾರದಮ್ಮ ದೈವಜ್ಞ ಅವರು ಕೆಲವು ವರ್ಷಗಳ ಬಳಿಕ ವಿಧಿವಶರಾದರು. ಅವರ ಸಂಬಂಧಿಕರು ಈ ದೀಪಗಳನ್ನು ಪೂಜಿಸುತ್ತ ಬಂದಿದ್ದರು. ಈಗ ಅವರು ಹೊಸ ದೇಗುಲ ನಿರ್ಮಿಸಿದ್ದಾರೆ. ದೇವರ ಪ್ರತಿಷ್ಠಾಪನೆ ನಡೆಯಬೇಕಷ್ಟೆ.

ಭಕ್ತರು ಯಾವುದೇ ರೀತಿ ಆತಂಕಕ್ಕೊಳಗಾಗಬಾರದು. ಈಗ ದೀಪ ಆರಿಹೋಗಿರುವ ಹಿನ್ನೆಲೆ ಮುಂದೇನು ಮಾಡಬೇಕು ಎಂದು ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ. ತುರ್ತು ಹೋಮ- ಹವನಾದಿಗಳನ್ನು ನಡೆಸಲು ತೀರ್ಮಾನಿಸಿರುವುದಾಗಿ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಚಿಗಳ್ಳಿ ಶ್ರೀ ದೀಪನಾಥೇಶ್ವರ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಶೇಷಾದ್ರಿ ಕೆ. ಹಾಗೂ ಕಾರ್ಯದರ್ಶಿ ಚಂದ್ರಮೋಹನ ಮನವಿ ಮಾಡಿದ್ದಾಗಿ ವರದಿ ಹೇಳಿದೆ.

Whats_app_banner