ಉತ್ತರ ಕನ್ನಡ ಗಂಗಾವಳಿ ನದಿ ಸೇತುವೆ ಕುಸಿದು 3 ವರ್ಷ ಕಳೆದರೂ ದುರಸ್ತಿ ಮಾತ್ರ ನಿಧಾನ, ಜನ ಹೈರಾಣ; ಹೇಗಿದೆ ಸದ್ಯದ ಸ್ಥಿತಿ ವೀಡಿಯೋ ನೋಡಿ
ಉತ್ತರ ಕನ್ನಡದ ಗಂಗಾವಳಿ ನದಿ ಸೇತುವೆ ಕುಸಿದು ಮೂರು ವರ್ಷವೇ ಆದರೂ ಕೆಲಸ ಮಾತ್ರ ಮುಗಿದಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರಾದ ನಾಗರಾಜ ವೈದ್ಯ ಎಂಬುವವರು ಡ್ರೋನ್ ಮೂಲಕ ಸೆರೆ ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.
ಮೂರು ವರ್ಷದ ಹಿಂದೆ ಭಾರೀ ಮಳೆಗೆ ಸೇತುವೆಯೊಂದು ಕುಸಿದು ಹೋಯಿತು. ಆ ಸೇತುವೆ ದುರಸ್ತಿ ಮಾಡಲು ಮೂರು ವರ್ಷವಾದರೂ ಆಗುತ್ತಿಲ್ಲ. ಮೂರು ಮಳೆಗಾಲಗಳು ಮುಗಿದರೂ ಜನ ಮಾತ್ರ ತಾಪತ್ರಯ ಅನುಭವಿಸುವುದು ತಪ್ಪಿಲ್ಲ. ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರಿಗೆ ಮನವಿ ನೀಡಿದರು. ಮಣ್ಣು ಹಾಕುವ ಕೆಲಸ ಆಗಿದ್ದು ಬಿಟ್ಟರೆ ಇನ್ನೂ ಸೇತುವೆ ಸ್ಥಳೀಯರಿಗೆ ಗಗನ ಕುಸುಮ. ಬದುಕು ಮಾತ್ರ ಅವ್ಯವಸ್ಥೆಯ ನಡುವೆಯೇ ಸಾಗಿದೆ. ದೂರು ಕೊಟ್ಟು ಸಾಕಾಗಿ ಸ್ಥಳೀಯರು ಈಗ ಡ್ರೋಣ್ ಮೂಲಕ ವಿಡಿಯೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಹೀಗಾದರೂ ಕೆಲಸ ಆಗಲಿ. ನಮ್ಮ ಕಷ್ಟ ಆಳುವವರಿಗೆ ಗೊತ್ತಾಗಲಿ ಎನ್ನುವ ಕಾಳಜಿ ಇದರ ಹಿಂದೆ ಇದೆ.
ಸ್ಥಳೀಯರಾಗಿರುವ ನಾಗರಾಜ ವೈದ್ಯ ಅವರು ಅಧಿಕಾರಸ್ಥರ ಭರವಸೆಗಳಿಂದ ರೋಸಿ ಹೋಗಿ ಕೊನೆಗೆ ಡ್ರೋನ್ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಇದಕ್ಕೆ ಅವರು ಬರೆದಿರುವ ಒಕ್ಕಣೆಯೂ ಖಾರವಾಗಿಯೇ ಇದೆ.
ನಮ್ಮೂರನ್ನು ಹೊರಜಗತ್ತಿಗೆ ಸಂಪರ್ಕಿಸುವ ಸೇತುವೆ ತುಂಡಾಗಿ ಹಲವು ವರ್ಷಗಳೇ ಕಳೆಯಿತು. ಭೇಡ್ತಿ - ಗಂಗಾವಳಿ ನದಿ ಹರಿಯುವ ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಸೇತುವೆಯದು. ಇನ್ನೂ ಕೂಡ ಸೇತುವೆಯ ಮರು ನಿರ್ಮಾಣ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳಾದಿಯಾಗಿ ಎಷ್ಟೋ ಜನ ಮಂತ್ರಿಗಳು, ಅದರಲ್ಲಿ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಶಿವರಾಮ ಹೆಬ್ಬಾರ್, ಸತೀಶ ಸೈಲ್, ಅಂದಿನ ಲೋಕೊಪಯೋಗಿ ಸಚಿವ ಸಿ.ಸಿ ಪಾಟೀಲ್, ಇತ್ತೀಚೆಗೆ 5 ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ನಾರಾಯಣ ಸ್ವಾಮಿ, ಜೆ.ಮಾಧುಸ್ವಾಮಿ ಸಹಿತ, ಅಧಿಕಾರಿಗಳು ಬಂದು, ನೋಡಿಕೊಂಡು, ಸ್ಥಳೀಯ ಮುಖಂಡರ ಜೊತೆ ಪೋಟೋ ತೆಗೆಸಿಕೊಂಡು ಹೋದರು. ಮರುದಿನ ಪತ್ರಿಕೆಯಲ್ಲಿ ಸುದ್ದಿಯೂ ಬಂತು. ಆದರೆ ಮುರಿದ ಸೇತುವೆ ಮಾತ್ರ ಇವರೆಲ್ಲರ ನಿಷ್ಕ್ರಿಯತೆಯನ್ನು ಸಾರುತ್ತಿದೆ ಅಂತಲೇ ಅನಿಸುತ್ತದೆ ಎಂದು ವೈದ್ಯ ಹೇಳುವ ಮಾತು.
ಪ್ರತೀ ವರ್ಷ ಜನಸಾಮಾನ್ಯರೇ ಸೇರಿ ಮಣ್ಣಿನ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುವ ಪರಿಸ್ಥಿತಿ. ಮತ್ತೆ ಹೊಳೆ ತುಂಬಿದರೆ ಅದೂ ಕೊಚ್ಚಿಕೊಂಡು ಹೋಗುತ್ತದೆ.
ಹಾಗೆ ನೋಡಿದರೆ, ಇದು ಶಾಸಕ ಶಿವರಾಮ ಹೆಬ್ಬಾರರ ಹುಟ್ಟಿದೂರು. ಇಚ್ಛಾಶಕ್ತಿ ಇದ್ದರೆ ಒಂದೇ ವರ್ಷದಲ್ಲಿ ಕಟ್ಟಿ ನಿಲ್ಲಿಸಬೇಕಾದ ಸೇತುವೆ. ಆದರೆ ಈ ಪಕ್ಷದಲ್ಲಿರಲೋ.. ಆ ಪಕ್ಷಕ್ಕೆ ಹೋಗಲೋ ಎಂಬ ಯೋಚನೆಯಲ್ಲೇ ಕಾಲಹರಣವಾಗುತ್ತಿದೆ! ಜನರು ಅನುಭವಿಸುವ ಕಷ್ಟ ಜನರಿಗಷ್ಟೇ ಗೊತ್ತು. ಹೆಚ್ಚೂ ಅಂದರೆ ವರ್ಷಕ್ಕೆ ಇನ್ ನಾಕು ಮನವಿ ಕೊಟ್ಟಾರು. ಇಲ್ಲಿನ ಜನ ಸಭ್ಯರು. ಶಾಂತ ಸ್ವಭಾವದವರು. ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಿಕೊಳ್ಳಲು ಇದಾಗಿಬಾರದು ಅನಿಸುತ್ತದೆ!
ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎ ಸಿದ್ದರಾಮಯ್ಯ ಅವರೇ ಏನು ಮಾಡ್ತೀರಿ ನೋಡಿ. ನಿಮ್ಮ ಮರ್ಯಾದೆ ಮತ್ತು ಯೋಗ್ಯತೆಯ ಪ್ರಶ್ನೆ ಇದು ಎನ್ನುವುದು ನಾಗರಾಜ ವೈದ್ಯ ಅವರ ನೇರ ನುಡಿ.
ನಾಗರಾಜ ವೈದ್ಯ ಅವರ ಪೋಸ್ಟ್ ಗೆ, ಮಾಡೋಕೆ ಆಗದಿರುವಂತ ದೊಡ್ಡ ಕೆಲಸವಂತೂ ಅಲ್ಲ.. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ . .. ಯಾರದೋ ವಯ್ಯಕ್ತಿಕ ಲಾಭಕ್ಕಾ ಅಥವಾ ಅಹಂಕಾರಕ್ಕಾ ಗೊತ್ತಿಲ್ಲ , ಕೆಲಸವಂತೂ ಆಗುತ್ತಿಲ್ಲ ಎಂದು ಪ್ರಶಾಂತ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಏನೇ ಆಗಲಿ ನಿಮ್ಮ ಹೊಸ ಡ್ರೋನ್ ನ ಕ್ಯಾಮೆರಾ ಕ್ಲಾರಿಟಿ ತುಂಬಾ ಚೆನ್ನಾಗಿದೆ ಎಂದು ಅವಿನಾಶ್ ರಾವ್ ಹೇಳಿದ್ದರೆ, ನಮ್ ಕ್ಲಾರಿಟಿಯೂ ಚೆನ್ನಾಗಿದೆ. ತಾವೇನು ಮಾಡ್ತಿದ್ದೀವಿ.. ಏನ್ ಮಾಡ್ಬೇಕಿತ್ತು ಅನ್ನೋ ಕ್ಲಾರಿಟಿ ಇಲ್ದಿರೋದು ನಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳಿಗೆ ಇಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಅವರನ್ನು ಕಾಲೆಳೆದಿದ್ದಾರೆ ನಾಗರಾಜ ವೈದ್ಯ .