ಉತ್ತರ ಕನ್ನಡ: ಫೆಬ್ರವರಿ 5 ರಿಂದ 3 ದಿನ ಗೋಕರ್ಣದ ಕಾಲಭೈರವ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ
ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರ ಕನ್ನಡ: ಫೆಬ್ರವರಿ 5 ರಿಂದ 3 ದಿನ ಗೋಕರ್ಣದ ಕಾಲಭೈರವ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ

ಉತ್ತರ ಕನ್ನಡ: ಫೆಬ್ರವರಿ 5 ರಿಂದ 3 ದಿನ ಗೋಕರ್ಣದ ಕಾಲಭೈರವ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಕಾಲಭೈರವ ದೇವಾಲಯದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವವನ್ನು ಫೆಬ್ರವರಿ 5 ರಿಂದ 7 ರವರೆಗೆ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. 3 ದಿನಗಳ ಕಾಲ ನಡೆಯುವ ಸುವರ್ಣ ಮಹೋತ್ಸದಲ್ಲಿನ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

 ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣದಲ್ಲಿರುವ ಕಾಲಭೈರವ ದೇವಸ್ಥಾನದಲ್ಲಿ ಫೆಬ್ರವರಿ 5 ರಿಂದ 3 ದಿನ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣದಲ್ಲಿರುವ ಕಾಲಭೈರವ ದೇವಸ್ಥಾನದಲ್ಲಿ ಫೆಬ್ರವರಿ 5 ರಿಂದ 3 ದಿನ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ

ಗೋಕರ್ಣ/ಕಾರವಾರ (ಉತ್ತರ ಕನ್ನಡ): ಶ್ರೀಕ್ಷೇತ್ರ ಗೋಕರ್ಣದ ಕೋಟಿತೀರ್ಥದ ನೈಋತ್ಯ ದಿಕ್ಕಿನಲ್ಲಿರುವ ಕಾಲಭೈರವ ದೇವರ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ ಫೆಬ್ರವರಿ 5 ರಿಂದ 7 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. 3 ದಿನಗಳ ಕಾಲ ನಾರಾಯಣ ಗಣಪತಿ ಉಪ್ಪುಂದ ಹಾಗೂ ಮಹಾಬಲೇಶ್ವರ ಅವಧಾನಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಮೊದಲ ದಿನದ ಕಾರ್ಯಕ್ರಮಗಳು
ಮೂರು ದಿನಗಳ ಕಾರ್ಯಕ್ರಮಗಳನ್ನು ವಿವರವಾಗಿ ನೋಡುವುದಾದರೆ ಫೆಬ್ರವರಿ 5 ರ ಬುಧವಾರ ಬೆಳಿಗ್ಗೆ ಗಣಪತಿ ಪೂಜೆ, ಧ್ವಜಾರೋಹಣ, ಶುದ್ದಿ ಪುಣ್ಯಾಹ, ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ, ಗಣಹವನ, ಪೂರ್ಣಾಹುತಿ ಜರುಗಲಿದೆ. ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಇರುವುದು. ಅದೇ ದಿನ ಸಂಜೆ 4.30 ಗಂಟೆಯಿಂದ ವಾಸ್ತು-ರಾಕ್ಷೋಘ್ನ ಪಾರಾಯಣ, ರಾಕ್ಷೋಘ್ನ ಹವನ, ವಾಸ್ತು ಹವನ, ಕಲಶ ಸ್ಥಾಪನೆ, ಶತರುದ್ರ ಇತ್ಯಾದಿ ಜರುಗಲಿದೆ. ರಾತ್ರಿ 8 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ಹಾಗೂ ನಿಗದಿತ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಎರಡನೇ ದಿನದ ಕಾರ್ಯಕ್ರಮಗಳು
ಫೆಬ್ರವರಿ 6 ರಂದು ಗುರುವಾರ ಬೆಳಿಗ್ಗೆ ಮೂಲಮಂತ್ರಹವನ, ಗಂಗಾಪೂಜೆ, ಕುಂಭಾಭಿಷೇಕ ಇತ್ಯಾದಿ ಇರುತ್ತದೆ. ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ. ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಂತರ ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಇರುತ್ತದೆ. ಸಂಜೆ 4.30 ಗಂಟೆಯಿಂದ ಶಾಂತಿಪಾಠ ಇರುವುದು. ಸಂಜೆ 5 ಗಂಟೆಗೆ ಕೋಟಿತೀರ್ಥ ವೆಂಕಟರಮಣ ದೇವಸ್ಥಾನ ಮಾರ್ಗದಿಂದ ಭದ್ರಕಾಳಿ ದೇವಸ್ಥಾನದ ತನಕ ಶ್ರೀ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ರಾತ್ರಿ 8 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ಹಾಗೂ ನಿಗದಿತ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮೂರನೇ ದಿನದ ಕಾರ್ಯಕ್ರಮಗಳು
ಫೆಬ್ರವರಿ 7ರ ಶುಕ್ರವಾರ ಬೆಳಿಗ್ಗೆ ವರ್ಧಂತಿ ಹವನ, ಪೂರ್ಣಾಹುತಿ ಜರುಗಲಿದೆ. ಪೂರ್ವಾಹ್ನ 11 ಗಂಟೆಗೆ ಅಂಕೋಲಾದ ಮಹಿಳಾ ಸಂಘದಿಂದ ಅರಿಶಿನ ಕುಂಕುಮ ಮತ್ತು ಭಜನಾ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭ ಲಲಿತ ಸಹಸ್ರನಾಮ, ಭಗವದ್ಗೀತೆ ಪಠಣ ಇರಲಿದೆ. ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಇರಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಫಲಾವಳಿಗಳ ಸವಾಲು ನಡೆಯಲಿದೆ. ಮಧ್ಯಾಹ್ನ 2.30 ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕೊನೆಯ ದಿನವಾದ ಫೆಬ್ರವರಿ 7ರ ಶುಕ್ರವಾರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಸಮಾಜದ ಸಾಧಕರಿಗೆ ಹಾಗೂ ತಾಲೂಕು ಸಂಘದ ಅಧ್ಯಕ್ಷರುಗಳಿಗೆ ಪ್ರಸಾದ ಗೌರವ ಅರ್ಪಣೆ ಇರಲಿದೆ. ಸಂಜೆ 5 ಗಂಟೆಗೆ ಮಹಾಸಭೆ ನಡೆಯಲಿದ್ದು, ನಂತರ ಶ್ರೀ ಕಾಲಭೈರವ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಕೋಟಿತೀರ್ಥ-ನಾಗಬೀದಿ, ಮಹಾಗಣಪತಿ, ಮಹಾಬಲೇಶ್ವರ ದೇವಾಲಯ ಮಾರ್ಗದಿಂದ ಕೋಟಿತೀರ್ಥ ಪ್ರದಕ್ಷಿಣೆ ಹಾಕಿ ಅಂತ್ಯಗೊಳ್ಳಲಿದೆ. ರಾತ್ರಿ 9 ಗಂಟೆಗೆ ಭಜನೆ, ಅಷ್ಟಾವಧಾನ ಸೇವೆ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಜರುಗಲಿದೆ. ಇದಾದ ನಂತರ ಸಭಾ ಕಾರ್ಯಕ್ರಮ ಮತ್ತು ನಿಗದಿತ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ನುರಿತ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಏರ್ಪಡಿಸಲಾಗಿದೆ.

ಮನರಂಜನಾ ಕಾರ್ಯಕ್ರಮಗಳು
ಫೆ.5 ರಂದು ಸಂಜೆ 5.30ಕ್ಕೆ ಶ್ರೀ ಅಳವಿ ಆಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಇರುತ್ತದೆ. ರಾತ್ರಿ 8 ಗಂಟೆಗೆ ಬಂಗ್ಲೆಗುಡ್ಡ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಫೆ. 6ರಂದು ರಾತ್ರಿ 9 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ನೃತ್ಯ ತಂಡದಿಂದ ನೃತ್ಯ ವೈಭವ ಏರ್ಪಡಿಸಲಾಗಿದೆ. ಫೆ.7ರಂದು ರಾತ್ರಿ 9 ಗಂಟೆಗೆ ಬಡಗೇರಿಯ ಶ್ರೀ ಮಹಾಗಣಪತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನ ಜರುಗುತ್ತದೆ ಮಾಹಿತಿ ನೀಡಲಾಗಿದೆ. (ವರದಿ: ಹರೀಶ್ ಮಾಂಬಾಡಿ)

Whats_app_banner