Uttara Kannada Result: ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್‌ ವಿರುದ್ಧ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು
ಕನ್ನಡ ಸುದ್ದಿ  /  ಕರ್ನಾಟಕ  /  Uttara Kannada Result: ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್‌ ವಿರುದ್ಧ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು

Uttara Kannada Result: ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್‌ ವಿರುದ್ಧ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಬಿಜೆಪಿಯ ಭದ್ರಕೋಟೆಯಾದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಿರೀಕ್ಷೆಯಂತೆಯೇ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಸೋತಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಭರ್ಜರಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ (Anjali Nimbalkar) ವಿರುದ್ಧ ಕಾಗೇರಿ ದಾಖಲೆಯ 3,37,428 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಹಾಲಿ ಸಂಸದ ಅನಂತಕುಮಾರ್‌ ಹೆಗಡೆ ಅವರನ್ನು ಬದಿಗಿಟ್ಟು, ಈ ಬಾರಿ ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಉತ್ತರ ಕನ್ನಡದಿಂದ ಈ ಹಿಂದೆ ಆರು ಬಾರಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಅನಂತಕುಮಾರ್ ಹೆಗಡೆ, ಕ್ಷೇತ್ರದಲ್ಲಿ 2004ರಿಂದ ಸತತ ನಾಲ್ಕನೇ ಅವಧಿಗೆ ಸಂಸದರಾಗಿದ್ದರು. ಈ ಬಾರಿ ಅನಂತಕುಮಾರ್‌ ಬದಲಿಗೆ ಕಾಗೇರಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಕಾಗೇರಿ ಅವರಿಗೆ ವಿರುದ್ಧವಾಗಿ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ, ದಶಕಗಳ ನಂತರ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸಿತು. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಆನಂದ್‌ ಅಸ್ನೋಟಿಕರ್‌ ವಿರುದ್ಧ ಅನಂತಕುಮಾರ್‌ ಹೆಗಡೆ ದಾಖಲೆಯ 4 ಲಕ್ಷದ 79 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಈ ಬಾರಿ ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಮುದುವರೆಸಿದ್ದು, ಕಾಗೇರಿ ಸಂಸತ್‌ ಪ್ರವೇಶಕ್ಕೆ ಸಜ್ಜಾಗಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ರಿಸಲ್ಟ್‌ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

  • ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ): 782495 ಮತಗಳು
  • ಡಾ.ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್‌): 445067 ಮತಗಳು
  • ಗೆಲುವಿನ ಅಂತರ: 337428
  • ನೋಟಾ : 10176 ಮತಗಳು

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಚಯ

ಒಟ್ಟು 6 ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾಗುವ ಮೂಲಕ ಸುದೀರ್ಘ ಅವಧಿಗೆ ರಾಜಕೀಯದಲ್ಲಿ ಅನುಭವ ಹೊಂದಿರುವ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ. ಕೊನೆಯ ಬಾರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಹೀಗಾಗಿ ಈ ಬಾರಿಯ ಲೋಕಸಭಾ ಟೆಕೆಟ್‌ ನೀಡುವ ಮೂಲಕ, ಬಿಜೆಪಿ ಹೈಕಮಾಂಡ್‌ ಅವರಿಗೆ ಸಂಸದರಾಗುವ ಅವಕಾಶ ನೀಡಿದೆ.

ಕಾಲೇಜು ದಿನಗಳಿಂದ ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ದ ಕಾಗೇರಿ, ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು. ಆರಂಭದ ರಾಜಕೀಯ ಜೀವನದಲ್ಲಿ 1994ರಿಂದ 2008ರವರೆಗೆ ಮೊದಲ ಮೂರು ಅವಧಿಗೆ ಅಂಕೋಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ, ನೂತನವಾಗಿ ರಚನೆಯಾದ ಶಿರಸಿ ಕ್ಷೇತ್ರದಿಂದ ಕಣಕ್ಕಿಳಿದರು. ಇಲ್ಲೂ ಸತತ ಮೂರು ಬಾರಿಗೆ, ಅಂದರೆ 2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದು ಶಾಸಕರಾಗಿ ಆಯ್ಕೆಗೊಂಡರು. 2008ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಾಗೇರಿ, 2013ರವರೆಗೆ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸರ್ಕಾರದಲ್ಲಿಯೂ ಸಚಿವರಾಗಿ ಮುಂದುವರೆದರು. ಆದರೆ, ಸತತ ಗೆಲುವಿನಿಂದ ಬೀಗುತ್ತಿದ್ದ ಕಾಗೇರಿ 2023ರ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಸೋಲು ಕಂಡಿದ್ದರು. ಈ ಬಾರಿ ಸಂಸತ್‌ ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಪ್ರವೇಶಿಸುತ್ತಿದ್ದಾರೆ.

ಚುನಾವಣಾ ಕಣ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪರಿಚಯ

ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಅವುಗಳೆಂದರೆ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಮತ್ತು ಯಲ್ಲಾಪುರ. ನೆರೆಯ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಕ್ಷೇತ್ರಗಳು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತವೆ. ಹೀಗಾಗಿ ಖಾನಾಪುರದ ಮಾಜಿ ಶಾಸಕಿಯನ್ನು ಕಾಂಗ್ರೆಸ್‌ ಇಲ್ಲಿ ನಿಲ್ಲಿಸಿತ್ತು. ಬಿಜೆಪಿ ಫೈರ್‌ಬ್ರಾಂಡ್‌, ಹಿಂದುತ್ವದ ನಾಯಕ ಅನಂತಕುಮಾರ್ ಹೆಗಡೆ 2004ರಿಂದಲೂ ಸತತ ನಾಲ್ಕು ಅವಧಿಗೆ ಇಲ್ಲಿಂದ ಗೆದ್ದು ಬೀಗಿದ್ದಾರೆ. ಆರ್‌ಎಸ್‌ಎಸ್ ಬೆಂಬಲದೊಂದಿಗೆ ಸತತ 27 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಅನಂತ್‌ಕುಮಾರ್‌ಗೆ ಈ ಬಾರಿ ಟಿಕೆಟ್‌ ತಪ್ಪಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಅಸ್ನೋಟಿಕರ್ ವಿರುದ್ಧ ಅನಂತ್‌ ಕುಮಾರ್‌ ದಾಖಲೆಯ 4,79,649 ಮತಗಳ ಅಂತರದಿಂದ ಗೆದ್ದಿದ್ದರು. ಕಾಂಗ್ರೆಸ್ ನಾಯಕರಾದ ದೇವರಾಯ ನಾಯ್ಕ್ (1980-1991) ಮತ್ತು ಮಾರ್ಗರೇಟ್ ಆಳ್ವಾ (1999) ಲೋಕಸಭೆಯಲ್ಲಿ ಉತ್ತರ ಕನ್ನಡವನ್ನು ಪ್ರತಿನಿಧಿಸಿ ಗೆದ್ದಿದ್ದರು. ಮಾರ್ಗರೇಟ್ ಅವರ ಮಾವ ಜೋಕಿಮ್ ಆಳ್ವ ಅವರು 1952ರಿಂದ 1962ರವರೆಗೆ 3 ಅವಧಿಗೆ ಉತ್ತರ ಕನ್ನಡದಿಂದ ಗೆದ್ದಿದ್ದರು. 1991ರವರೆಗೂ ಕ್ಷೇತ್ರದಲ್ಲಿ ಕೈ ಪ್ರಾಬಲ್ಯವಿತ್ತು. ಆದರೆ, 2024ರ ನಂತರ ಇಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷ,

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಲೋಕಸಭಾ ಚುನಾವಣೆ 2024ರ ಕುರಿತ ಎಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner