Uttara Kannada News: ಕಾಳಿ ನದಿಯಲ್ಲಿ ಮುಳುಗಿ ಮಕ್ಕಳೂ ಸೇರಿ 6 ಮಂದಿ ದುರ್ಮರಣ
ಕನ್ನಡ ಸುದ್ದಿ  /  ಕರ್ನಾಟಕ  /  Uttara Kannada News: ಕಾಳಿ ನದಿಯಲ್ಲಿ ಮುಳುಗಿ ಮಕ್ಕಳೂ ಸೇರಿ 6 ಮಂದಿ ದುರ್ಮರಣ

Uttara Kannada News: ಕಾಳಿ ನದಿಯಲ್ಲಿ ಮುಳುಗಿ ಮಕ್ಕಳೂ ಸೇರಿ 6 ಮಂದಿ ದುರ್ಮರಣ

ಪ್ರವಾಸಕ್ಕೆಂದು ಬಂದವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ದಾಂಡೇಲಿ ಸಮೀಪದ ಕಾಳಿ ನದಿಯಲ್ಲಿ ನಡೆದಿದೆ.

ದಾಂಡೇಲಿ ಸಮೀಪ ಹರಿಯುವ ಕಾಳಿ ನದಿ
ದಾಂಡೇಲಿ ಸಮೀಪ ಹರಿಯುವ ಕಾಳಿ ನದಿ

ದಾಂಡೇಲಿ: ಬೇಸಿಗೆ ರಜೆ ಕಾರಣಕ್ಕೆ ಕುಟುಂಬದವರು ಪ್ರವಾಸ ಬಂದಾಗ ನಡೆದಿರುವ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮಕ್ಕಳೂ ಸೇರಿದ್ದಾರೆ. ಅಣ್ಣ- ತಂಗಿ ಹಾಗೂ ಅವರ ಕುಟುಂಬದ ಸದಸ್ಯರು ಜೀವ ಕಳೆದುಕೊಂಡು ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಇರುವ ಕಾಳಿ ನದಿಯಲ್ಲಿ. ನದಿಯಲ್ಲಿ ಸಿಲುಕಿದ್ದ ಆರು ಮಂದಿಯ ದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನೂ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಅವರು ನೀರಿಗೆ ಇಳಿಯದ ಸಾಹಸಕ್ಕೆ ಹೋಗದೇ ಇದ್ದುದರಿಂದ ಬದುಕುಳಿದಿದಾರೆ ಎನ್ನಲಾಗುತ್ತಿದೆ.

ಪರೀಕ್ಷೆಗಳು ಮುಗಿದು ಮಕ್ಕಳಿಗೆ ರಜೆ ಇರುವ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ನೆಲೆಸಿರುವ ನಜೀರ್‌ ಅಹಮ್ಮದ್‌(40) ಹಾಗೂ ಬೆಂಗಳೂರಿಲ್ಲಿರುವ ಅವರ ಸಹೋದರಿ ರೇಷ್ಮಾ ಉನ್ನೀಸಾ(38) ಅವರ ಕುಟುಂಬದವರು ಒಟ್ಟಾಗಿ ಭಾನುವಾರ ಬೆಳಿಗ್ಗೆಯೇ ಹೊರಟಿದ್ದರು.

ದಾಂಡೇಲಿಯಿಂದ 12 ಕಿ.ಮಿ. ದೂರದಲ್ಲಿರುವ ಜೋಯಿಡಾ ತಾಲ್ಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ಕಳೆಯಲು ಆಗಮಿಸಿದ್ದಾರೆ. ನೀರಿನಲ್ಲಿ ಮಕ್ಕಳು ಹಾಗೂ ಹಿರಿಯರು ಆಟವಾಡಿಕೊಂಡಿದ್ದು. ಈ ವೇಳೆ ಬಾಲಕಿಯೊಬ್ಬಳು ನೀರಿನಲ್ಲಿ ಮುಳುಗಿದ್ದಾಳೆ.

ಆಕೆ ಕೊಚ್ಚಿಕೊಂಡು ಹೋಗುವುದನ್ನು ಗಮನಿಸಿದ ನಜೀರ್‌ ಅವರು ಕೂಡಲೇ ನೀರಿಗೆ ಇಳಿದಿದ್ದು ರಕ್ಷಿಸಲು ಪ್ರಯತ್ನಿಸಿದ್ದಾರೆ. ಒಬ್ಬರಂತೆ ಒಬ್ಬರು ನೀರಿಗೆ ಇಳಿದು ಜೀವ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ನಜೀರ್‌ ಅವರ ಪುತ್ರ ಅಲ್ಲೀಯಾ ಅಹ್ಮದ್(10), ಮೋಹಿನ್(6), ರೇಷ್ಮಾ ಮಕ್ಕಳಾದ ಇಫ್ರಾ ಅಹ್ಮದ್(15), ಅಬೀದ್ ಅಹ್ಮದ್(12) ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರು ಮಹಿಳೆಯರು ನೀರಿಗೆ ಇಳಿಯದೇ ಕೂಗಿಕೊಂಡಿದ್ದರಿಂದ ಸ್ಥಳೀಯರು ಧಾವಿಸಿದರೂ ಉಳಿಸಿಕೊಳ್ಳಲು ಆಗಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಈಜು ತಜ್ಞರು ನೀರಿನಲ್ಲಿ ಮುಳುಗಿದ್ದ ದೇಹಗಳನ್ನು ಹೊರ ತೆಗೆದರು. ಎಲ್ಲಾ ದೇಹಗಳನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಕುಟುಂದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಂಡೇಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

( To read more like this please logon to kannada.hindustantimes.com)

Whats_app_banner