Uttara Kannada News: ಕೊನೆಗೂ ಟನಲ್ ಓಪನ್: ಸುರಂಗಮಾರ್ಗ ರಸ್ತೆ ಸಂಚಾರ ಖುಷಿಪಟ್ಟ ಪ್ರಯಾಣಿಕರು
ಸೋಮವಾರ ಶಾಸಕ ಸತೀಶ್ ಸೈಲ್, ಎಂಎಲ್ ಸಿ ಗಣಪತಿ ಉಳ್ವೇಕರ್, ನಗರಸಭೆಯ ಮಾಜಿ ಅಧ್ಯಕ್ಷ ನಿತಿನ್ ಪಿಕಳೆ, ಮಾಜಿ ಉಪಾಧ್ಯಕ್ಷ ಪಿ.ಪಿ.ನಾಯ್ಕ ಸತತ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಮಾತುಕತೆ ಫಲಪ್ರದವಾದ ಕಾರಣ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿದ ಶಾಸಕರು , ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಟನಲ್ ಸಂಚಾರ ಮುಕ್ತ ಮಾಡಲು ಸೂಚಿಸಿದ್ದಾರೆ.

ಕಾರವಾರ: ಕಳೆದ ಕೆಲ ದಿನಗಳಿಂದ ಕಾರವಾರದ ಫ್ಲೈಓವರ್ ಸನಿಹದ ಟನಲ್ ಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಹೋರಾಟಕ್ಕೆ ತಾರ್ಕಿಕ ಅಂತ್ಯ ದೊರಕಿದೆ. ಸೋಮವಾರ ಸಂಜೆ ಎಲ್ಲ ವಾಹನಗಳಿಗೂ ಈ ಸುರಂಗಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಯಿತು. ಇದರೊಂದಿಗೆ ಈ ಕುರಿತು ಎದ್ದಿದ್ದ ಗೊಂದಲಗಳಿಗೆ ತಾತ್ಕಾಲಿಕ ತೆರೆ ಬಿದ್ದಿದೆ.
ಸುರಂಗ ಮಾರ್ಗ ಸುರಕ್ಷಿತವೇ ಅಲ್ಲವೇ ಎಂಬ ಕುರಿತು ಜಿಜ್ಞಾಸೆಗಳು ಏರ್ಪಟ್ಟಿದ್ದವು. ಈ ಕುರಿತು ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪರಸ್ಪರ ಭಿನ್ನ ಅಭಿಪ್ರಾಯಗಳನ್ನು ತಳೆದಿದ್ದರು. ಆದರೆ ಸಾರ್ವಜನಿಕರಿಗೆ ಹಾಗೂ ಸ್ಥಳೀಯರಿಗೆ ಈ ಟನೆಲ್ ಓಪನ್ ಆಗುವುದು ಅಷ್ಟೇ ಮುಖ್ಯವಾಗಿತ್ತು. ಕಾರಣ, ಸುತ್ತು ಬಳಸಿ ಪ್ರಯಾಣ ಮಾಡುವುದರಿಂದ ಮುಕ್ತಿ ಬೇಕಾಗಿತ್ತು. ಟನಲ್ ಪ್ರಾರಂಭವಾದ ಮೇಲೆ ಸಾರ್ವಜನಿಕರು ಈ ರಸ್ತೆಯಲ್ಲಿ ಪ್ರಯಾಣಿಸುವ ಮೂಲಕ ಖುಷಿಪಟ್ಟರು.
ಸುರಂಗಮಾರ್ಗ ತೆರೆದುಕೊಂಡದ್ದು ಹೀಗೆ
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ನಗರಕ್ಕೆ ಹೊಂದಿಕೊಂಡಿರುವ ಪ್ಲೈಓವರ್ ಸನಿಹದ ಟನಲ್ ಗಳನ್ನು ವಾಹನ ಸಂಚಾರಕ್ಕೆ ಸೋಮವಾರ ಸಂಜೆ ಅನುವು ಮಾಡಿಕೊಡಲು ಏನು ಕಾರಣ?
ಸೋಮವಾರ ಮಧ್ಯಾಹ್ನ ಶಾಸಕ ಸತೀಶ್ ಸೈಲ್, ಎಂಎಲ್ ಸಿ ಗಣಪತಿ ಉಳ್ವೇಕರ್ ,ನಗರಸಭೆಯ ಮಾಜಿ ಅಧ್ಯಕ್ಷ ನಿತಿನ್ ಪಿಕಳೆ, ಮಾಜಿ ಉಪಾಧ್ಯಕ್ಷ ಪಿ.ಪಿ.ನಾಯ್ಕ ಸತತ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಮಾತುಕತೆ ಫಲಪ್ರದವಾದ ಕಾರಣ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿದ ಶಾಸಕರು , ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಟನಲ್ ಸಂಚಾರ ಮುಕ್ತ ಮಾಡಲು ಸೂಚಿಸಿದ್ದಾರೆ.
ಕೇಂದ್ರ ಸಂಸದೀಯ ಸಮಿತಿ ನೌಕಾನೆಲೆಗೆ ಬಂದ ಕಾರಣ ಟನಲ್ ನ್ನು ಐಆರ್ ಬಿ ಅಧಿಕಾರಿಗಳು ಸುರಂಗಮಾರ್ಗವನ್ನು ತೆರೆದುಕೊಟ್ಟಿದ್ದರು. ಇದು ಮಾಧ್ಯಮಗಳ ಕಣ್ಣಿಗೆ ಬೀಳುತ್ತಿದ್ದಂತೆ, ಮಾಹಿತಿ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೂ ತಲುಪಿತ್ತು. ನಂತರ ವಿಧಾನಪರಿಷತ್ ಸದಸ್ಯ ಉಳ್ವೇಕರ್ ಅವರಿಗೂ ತಲುಪಿತು. ಆಗ ಸಂಸದರಿಗೆ ಒಂದು ನೀತಿ, ಸಾರ್ವಜನಿಕರಿಗೆ ಒಂದು ನೀತಿಯೇ ಎಂಬ ಪ್ರಶ್ನೆ ಉದ್ಭವಿಸಿತು. ತಕ್ಷಣ ಶಾಸಕರು ಜಿಲ್ಲಾಧಿಕಾರಿ, ಮಾಧ್ಯಮಗಳ ಜೊತೆ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಜೊತೆ ಮಾತುಕತೆಗೆ ಮುಂದಾದರು. ಮಾತುಕತೆ ಯಶಸ್ವಿಯಾದ ಕಾರಣ , ಅನಾಹುತದ ಹೊಣೆಯನ್ನು ಎನ್ ಎಚ್ ಎ ಐ ಮತ್ತು ಐಆರ್ ಬಿಗೆ ಜಿಲ್ಲಾಧಿಕಾರಿ ಯಿಂದ ಪತ್ರಬರೆಯಿಸಿ, ಸಾರ್ವಜನಿಕರಿಗೆ,ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡುವ ನಿರ್ಧಾರಕ್ಕೆ ಬರಲಾಯಿತು.
ಟನಲ್ ಪರಿಶೀಲನೆಗೆ ಅ.2 ರಂದು ಬರಬೇಕಾದ ಅಧಿಕಾರಿ ಅ. 8 ರಂದು ಬರುವರು. ಜೆ.ಪಿ.ನಡ್ಡಾ ಪುಣೆಗೆ ಬರುವ ಕಾರಣ ಟೆಕ್ನಾಲಜಿಕಲ್ ಯುನಿವರ್ಸಿಟಿ ವಿಜ್ಞಾನಿಗಳು ಕಾರವಾರಕ್ಕೆ ತತ್ ಕ್ಷಣ ಬರಲಾಗುತ್ತಿಲ್ಲ. ಅವರು ಅ. 8 ರಂದು ಬರಲಿದ್ದಾರೆಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮೇಲ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಐಆರ್ ಬಿ ಮತ್ತು ಎನ್ ಎಚ್ ಎ ಐಗೆ ಅ.2 ರೊಳಗೆ ಟನಲ್ ಸುರಕ್ಷತೆ ಬಗ್ಗೆ ಖಾತ್ರಿ ಪಡಿಸಲು ಗಡುವು ನೀಡಿದ್ದರು. ಅ.8 ರೊಳಗೆ ಟನಲ್ ಸುರಕ್ಷತೆ ಮತ್ತೊಮ್ಮೆ ಪರೀಕ್ಷಿಸಬೇಕು. ಅನಾಹುತವಾದರೆ ಅದರ ಹೊಣೆಯನ್ನು ಎನ್ ಎಚ್ ಎ ಐ ಹೊನ್ನಾವರದಲ್ಲಿನ ಕಚೇರಿಯ ಪ್ರೊಜೆಕ್ಟ್ ಡೈರೆಕ್ಟರ್ ಹೊರಬೇಕು ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಸಂಬಂಧಿಸಿದ ಕಂಪನಿ ಹಾಗೂ ಎನ್ ಎಚ್ ಎ ಐ ಹೊನ್ನಾವರ ಕಚೇರಿಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಿರ್ದೇಶಕರಿಗೆ, ಜಿಲ್ಲೆಯ ಕೆಎಸ್ ಆರ್ ಟಿಸಿ ಅಧಿಕಾರಿಗಳು, ತಹಶೀಲ್ದಾರರು, ಸಹಾಯಕ ಕಮಿಷನರ್ ಗಳಿಗೆ ಕಳುಹಿಸಲಾಗಿದೆ.
(ವರದಿ: ಹರೀಶ್)

ವಿಭಾಗ