Monkey Disease: ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿ; ಕೆಎಫ್​ಡಿ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  Monkey Disease: ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿ; ಕೆಎಫ್​ಡಿ ಬಗ್ಗೆ ಇಲ್ಲಿದೆ ಮಾಹಿತಿ

Monkey Disease: ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿ; ಕೆಎಫ್​ಡಿ ಬಗ್ಗೆ ಇಲ್ಲಿದೆ ಮಾಹಿತಿ

Kyasanur Forest Disease: ಶಿರಸಿ ತಾಲೂಕಿನ ನವಿಲಗಾರ ಗ್ರಾಮದ 68 ವರ್ಷದ ವ್ಯಕ್ತಿಯೋರ್ವನನ್ನು ಮಂಗನ ಕಾಯಿಲೆ ಬಲಿ ತೆಗೆದುಕೊಂಡಿದೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಮೂವರು ಸಾವನ್ನಪ್ಪಿದ್ದಂತಾಗಿದೆ. (ವರದಿ: ಹರೀಶ ಮಾಂಬಾಡಿ)

ಮಂಗನ ಕಾಯಿಲೆ (ಪ್ರಾತಿನಿಧಿಕ ಚಿತ್ರ)
ಮಂಗನ ಕಾಯಿಲೆ (ಪ್ರಾತಿನಿಧಿಕ ಚಿತ್ರ)

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿಗೆ ಮಂಗನ ಕಾಯಿಲೆ (ಕೆಎಫ್​ಡಿ) ಕಾಟ. ಇಲ್ಲಿನ ಹತ್ತರಗಿಯ ನವಿಲಗಾರ ಗ್ರಾಮದ 68 ವರ್ಷದ ವ್ಯಕ್ತಿಯೋರ್ವನನ್ನು ಮಂಗನ ಕಾಯಿಲೆ ಬಲಿ ತೆಗೆದುಕೊಂಡಿದೆ. ಫೆ.22ರಂದು ವಾಂತಿ-ಜ್ವರ ಕಾಣಿಸಿಕೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಇದ್ದಾಗ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದರು. ಸಿದ್ಧಾಪುರ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಮಂಗನಕಾಯಿಲೆ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು. ಈ ಮೂಲಕ ಈ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಮೃತಪಟ್ಟಂತಾಗಿದೆ.

ಈ ಮಂಗನ ಕಾಯಿಲೆಗೆ ಕೆ.ಎಫ್.ಡಿ. ಎಂದು ಹೆಸರಿಡಲಾಗಿದೆ. ಕೆಎಫ್​​ಡಿ ಅಂದರೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕ್ಯಾಸನೂರು ಅರಣ್ಯ ಕಾಯಿಲೆ). 1957ನೇ ಇಸವಿಯ ಬೇಸಿಗೆಯಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿಗೆ ಸೇರಿದ ಕ್ಯಾಸನೂರು ಎಂಬ ಗ್ರಾಮದಲ್ಲಿ ಹೊಸ ಕಾಯಿಲೆಯೊಂದು ಹುಟ್ಟಿಕೊಂಡಿತು. ಕಾಡಿನ ಮಂಗಗಳು ಸತ್ತು ಬೀಳುವುದರೊಂದಿಗೆ ಈ ಕಾಯಿಲೆ ಆರಂಭಗೊಳ್ಳುತ್ತಿದ್ದರಿಂದ ಹಳ್ಳಿಗರು ಈ ಕಾಯಿಲೆಗೆ ಮಂಗನ ಕಾಯಿಲೆ ಎಂದೇ ಕರೆದರು. ಜಗತ್ತಿನಲ್ಲೆಲ್ಲೂ ಕಾಣದ ಕಾಯಿಲೆ ಕ್ಯಾಸನೂರಿನಲ್ಲಿ ಮಾತ್ರ ಕಂಡಿರುವುದರಿಂದ ವೈದ್ಯ ವಿಜ್ಞಾನಿಗಳು ಈ ಕಾಯಿಲೆಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ನಾಮಕರಣ ಮಾಡಿದರು.

ಇದು ಮಾನವರು ಮತ್ತು ಇತರ ಸಸ್ತನಿಗಳಿಗೆ ಮಾರಕವಾಗುವ ಕಾಯಿಲೆ. ಸೈಬೀರಿಯದಿಂದ ವಲಸೆ ಬಂದ ಹಕ್ಕಿಗಳು ಈ ವೈರಸ್ ಅನ್ನು ಇಲ್ಲಿಗೆ ತಂದಿದೆ. ಬಹುತೇಕ ಈ ವೈರಸ್‍ಗಳನ್ನೇ ಹೋಲುವ ವೈರಸ್‍ಗಳು ನಮ್ಮ ದೇಶದ ಇತರೆ ಭಾಗಗಳಲ್ಲೂ ಕಂಡಿವೆ. ಕಾಡಿನಲ್ಲಿ ವಾಸಿಸುವ ಇಲಿ, ಅಳಿಲು, ಬಾವಲಿಗಳೇ ಈ ವೈರಸ್‍ಗಳ ಮೂಲ. ಆದರೆ ಪಕ್ಷಿಗಳಲ್ಲಿಗೂ ಈ ವೈರಸ್ ಸೋಂಕು ಇದೆ.

ಸೊರಬ, ಸಾಗರ, ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಹೀಗೆ ಮಲೆನಾಡಿನ ಕೆಲವೇ ಪ್ರದೇಶಕ್ಕೆ ಸೀಮಿತಗೊಂಡಿದ್ದ ಕಾಯಿಲೆ, ಮಾನವನ ಅರಣ್ಯ ನಾಶ ಕೃತ್ಯದಿಂದಾಗಿ, ರೋಗಪೀಡಿತ ಕೋತಿಗಳು ಹೊಸ ಹೊಸ ಕಾಡನ್ನು ಹುಡುಕುತ್ತಾ ಹೋದಂತೆ ರೋಗಪೀಡಿತ ಪ್ರದೇಶವೂ ವಿಸ್ತರಿಸುತ್ತಾ ಹೋಯಿತು. ಈಗ ಕ್ಯಾಸನೂರು ಕಾಡಿನ ಕಾಯಿಲೆ ಶಿವಮೊಗ್ಗದ ಇತರ ಭಾಗಗಳಿಗೆ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ವ್ಯಾಪಿಸಿದೆ. ಆರು ಸಾವಿರ ಚದರ ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿರುವ ಕಾಯಿಲೆ ಪ್ರತಿವರ್ಷದ ಬೇಸಗೆಯಲ್ಲಿ ಮರುಕಳಿಸುತ್ತಿದೆ.

ಕಾಡಿನ ರಕ್ತಹೀರುವ ಉಣ್ಣೆಗಳು ರೋಗಕಾರಕ ವೈರಸ್‍ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಅಂಟಿಸುತ್ತವೆ. ಕಾಡಿನಲ್ಲಿ ವಾಸಿಸುವ ಕಪ್ಪು ಮೂತಿಯ ಲಾಂಗರ್ (ಮುಸ್ಯ) ಹಾಗೂ ಬಾನೆಟ್ ಜಾತಿಯ ಮಂಗಗಳು ಸೋಂಕಿಗೆ ಬಲಿಯಾಗುತ್ತವೆ. ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ.

ಜನವರಿಯಲ್ಲಿ ರೋಗವಾಹಕ ಶೀಘ್ರ ಹರಡುತ್ತದೆ

ರೋಗಗ್ರಸ್ತ ಪ್ರಾಣಿಯ ರಕ್ತ ಹೀರಿದ ಉಣ್ಣೆಗಳು ರೋಗವಾಹಕಗಳಾಗಿ ಪ್ರಾಣಿಯಿಂದ ಪ್ರಾಣಿಗೆ ರೋಗ ತಗಲಿಸುವ ಕಾರ್ಯ ನಿರ್ವಹಿಸುತ್ತವೆ. ಅಷ್ಟೇ ಅಲ್ಲ. ರೋಗಾಣುಯುಕ್ತ ಉಣ್ಣೆಗಳು ಇಡುವ ಮೊಟ್ಟೆ ಮತ್ತು ಮರಿಗಳೂ ಸಹ ವೈರಸ್ ಸಂತತಿಯನ್ನು ಮುಂದುವರೆಸುತ್ತವೆ. ಜನವರಿಯಿಂದ ಜೂನ್ ತಿಂಗಳವರೆಗೆ ಉಣ್ಣೆಗಳ ಸಂತತಿ ವಿಪರೀತವಾಗಿ ಹೆಚ್ಚಾಗಿರುತ್ತದೆ. ಮಂಗಗಳು ಸತ್ತುಬೀಳಲಾರಂಭಿಸಿದಾಗ ಮಂಗನ ಮೈಮೇಲೆ ನೆಲಸಿದ್ದ ಉಣ್ಣೆಗಳು ಹೊರಬಿದ್ದು ಕಾಡಿಗೆ ಬಂದ ಮಾನವನನ್ನು ಕಚ್ಚುವ ಸಂಭವ ಬೇಸಿಗೆಯಲ್ಲಿ ಹೆಚ್ಚಾಗಿರುತ್ತದೆ. ಅರಣ್ಯಕ್ಕೆ ಭೇಟಿ ನೀಡುವ ಕೃಷಿಕ ಗಂಡಸರೇ ಹೆಚ್ಚಾಗಿ ಈ ಕಾಯಿಲೆಗೆ ತುತ್ತಾಗುತ್ತಾರೆ. ಕಾಡಿಗೆ ಹೋದ ಜಾನುವಾರುಗಳ ಮೇಲೆ ಸವಾರಿ ಮಾಡಿಕೊಂಡ ಊರಿಗೆ ಬಂದ ಉಣ್ಣೆಗಳಿಂದ ಊರಿನ ಇತರರಿಗೂ (ಕಾಡಿಗೆ ಹೋಗದವರಿಗೆ) ಕಾಯಿಲೆ ತಗಲುವ ಸಾಧ್ಯತೆ ಉಂಟು.

ಈ ಕಾಯಿಲೆಯ ಮೊದಲ ಲಕ್ಷಣವೇ ತೀವ್ರ ಜ್ವರ. ಒಂದು ಬಾರಿ ವೈರಸ್‌ ದೇಹವನ್ನು ಸೇರಿದರೆ ಸತತ 10 ರಿಂದ 12 ದಿನಗಳವರೆಗೆ ಜ್ವರ ಕಾಡುತ್ತದೆ. ಇದರ ಜೊತೆಗೆ ತಲೆನೋವು, ಕೆಮ್ಮು, ವಾಂತಿ, ಅತಿಸಾರ ಕಾಣಿಸಿಕೊಳ್ಳುತ್ತದೆ. ಜ್ವರ ಹೆಚ್ಚಾದಂತೆ ದೇಹದಲ್ಲಿ ಅತಿಯಾದ ನಡುಕ, ತಲೆಸುತ್ತುವಿಕೆ, ಮಾನಸಿಕ ಅಸ್ವಸ್ಥೆಯೂ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಒಂದು ವೇಳೆ ವೈರಸ್‌ ದೇಹ ಹೊಕ್ಕಿದರೆ ಮೊದಲು ಮಾಡಬೇಕಾದ ಕೆಲಸವೇ ವೈದ್ಯರ ಭೇಟಿ. ನಂತರ ಚೆನ್ನಾಗಿ ವಿಶ್ರಾಂತಿ ಪಡೆಯಬೇಕು. ತೀವ್ರವಾದ ಜ್ವರ ಇರುವ ಕಾರಣ ದೇಹ ಹೆಚ್ಚು ಸುಸ್ತಾಗಿರುತ್ತದೆ. ಹೀಗಾಗಿ ರೆಸ್ಟ್‌ ಮಾಡಬೇಕು. ಪ್ರೋಟೀನ್‌ಯುಕ್ತ ಆಹಾರ ಸೇವನೆ ಮಾಡಬೇಕು. ಹಣ್ಣು ತರಕಾರಿಗಳ ಜೊತೆಗೆ ಬಿಸಿ ಪದಾರ್ಥಗಳನ್ನು ಸೇವಿಸಿ, ಸೊಳ್ಳೆ, ನೊಣಗಳಿಂದ ದೂರವಿರಿ. ಸ್ವಚ್ಛತೆಗೆ ಆದ್ಯತೆ ನೀಡುವುದು ರೋಗ ತಡೆದಂತೆ. ಹೀಗಾಗಿ ಮಂಗನ ಕಾಯಿಲೆ ಕುರಿತು ಎಚ್ಚರ ವಹಿಸುವಂತೆ ಈಗಾಗಲೇ ಉತ್ತರ ಕನ್ನಡ ಜಿಲ್ಲಾಡಳಿತ ಎಚ್ಚರಿಕೆಯಿಂದಿರಲು ಸೂಚಿಸಿದೆ. ಯಾವುದಾದರೂ ಜ್ವರದ ಲಕ್ಷಣಗಳು ಕಂಡುಬಂದರೆ ಕೂಡಲೇ ಸಮೀಪದ ದವಾಖಾನೆಗೆ ತೆರಳಲು ಸೂಚನೆ ನೀಡಿದೆ.

ವರದಿ: ಹರೀಶ ಮಾಂಬಾಡಿ

Whats_app_banner