ಕನ್ನಡ ಸುದ್ದಿ  /  Karnataka  /  Uttara Kannada Special Engagement In Yellapura Guruganesh Bhat Suma Kanchipala Contract Letter Viral News In Kannada Rst

Viral News: ಯಲ್ಲಾಪುರದಲ್ಲೊಂದು ಅಪರೂಪದ ನಿಶ್ಚಿತಾರ್ಥ; ಕರಾರು ಪತ್ರಕ್ಕೆ ಸಹಿ ಹಾಕುವ ಮೂಲಕ ಉಂಗುರ ಬದಲಿಸಿಕೊಂಡ ಜೋಡಿ; ವೈರಲ್‌ ಆಯ್ತು ಫೋಟೊ

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಭಿನ್ನ ನಿಶ್ಚಿತಾರ್ಥವೊಂದು ನಡೆದಿದೆ. ಮದುವೆ ನಿಶ್ಚಯದ ದಿನದಂದು ಕರಾರು ಪತ್ರಕ್ಕೆ ಸಹಿ ಹಾಕುವ ಮೂಲಕ ವಿಶೇಷ ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಿದ್ದಾರೆ ಗುರುಗಣೇಶ ಡಬ್ಗುಳಿ ಹಾಗೂ ಸುಮಾ ಕಂಚೀಪಾಲ್ ಜೋಡಿ. ಇವರ ನಿಶ್ಚಿತಾರ್ಥದ ಸುದ್ದಿ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಏನಿದು ಕಥೆ ತಿಳಿಯಬೇಕೆ, ಈ ಸುದ್ದಿ ನೋಡಿ.

ಕರಾರು ಪತ್ರದೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡ ಗುರುಗಣೇಶ ಡಬ್ಗುಳಿ ಹಾಗೂ ಸುಮಾ ಕಂಚೀಪಾಲ್  ಜೋಡಿ (ಎಡಚಿತ್ರ) ಸಾಂದರ್ಭಿಕ ಚಿತ್ರ (ಬಲಚಿತ್ರ)
ಕರಾರು ಪತ್ರದೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡ ಗುರುಗಣೇಶ ಡಬ್ಗುಳಿ ಹಾಗೂ ಸುಮಾ ಕಂಚೀಪಾಲ್ ಜೋಡಿ (ಎಡಚಿತ್ರ) ಸಾಂದರ್ಭಿಕ ಚಿತ್ರ (ಬಲಚಿತ್ರ)

ಮದುವೆಯಂದು ಗಿಡ ನೆಡುವುದು, ಅನಾಥಾಶ್ರಮದ ಮಕ್ಕಳಿಗೆ ಊಟ ಹಾಕಿಸುವುದು, ಸರಳವಾಗಿ ಮದುವೆಯಾಗುವ ಮೂಲಕ ಇತರರಿಗೆ ಆದರ್ಶಪ್ರಾಯರಾಗುವುದು ಇದನ್ನೆಲ್ಲಾ ಕೇಳಿದ್ದೇವೆ, ನೋಡಿದ್ದೇವೆ.

ಆದರೆ ಇಲ್ಲೊಂದು ನಿಶ್ಚಿತಾರ್ಥ ನಡೆದಿದೆ. ಈ ನಿಶ್ಚಿತಾರ್ಥ ನಿಜಕ್ಕೂ ಭಿನ್ನ. ಅಲ್ಲದೆ ಇಂತಹ ನಿಶ್ಚಿತಾರ್ಥ ಸುತ್ತೆಲ್ಲೂ ನಡೆದಿಲ್ಲ ಎನ್ನಬಹುದು. ಅದೇನೆಂದರೆ ನಿಶ್ಚಿತಾರ್ಥದಂದು ವಿಶೇಷ ಕರಾರು ಪತ್ರವೊಂದಕ್ಕೆ ಸಹಿ ಹಾಕುವ ಮೂಲಕ ಗಂಡು-ಹೆಣ್ಣು ವಿವಾಹ ನಿಶ್ಚಯ ಮಾಡಿಕೊಂಡಿದ್ದಾರೆ.

ಉತ್ತರಕನ್ನಡದ ಯಲ್ಲಾಪುರದ ಗುರುಗಣೇಶ ಡಬ್ಗುಳಿ ಹಾಗೂ ಸುಮಾ ಕಂಚೀಪಾಲ್ ಇಬ್ಬರು ಕರಾರು ಪತ್ರಕ್ಕೆ ಸಹಿ ಹಾಕುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.

ಇವರ ಕರಾರು ಪತ್ರ ಹಾಗೂ ನಿಶ್ಚಿತಾರ್ಥದ ಫೋಟೊಗಳು ಸಾಕಷ್ಟು ವೈರಲ್‌ ಆಗಿವೆ. ಅಲ್ಲದೆ ಈ ಕರಾರು ಪತ್ರದ ಒಕ್ಕಣೆಗೆ ಹಲವರು ಶಹಭಾಶ್‌ ಎಂದಿದ್ದಾರೆ.

ಕರಾರು ಪತ್ರದಲ್ಲಿ ಏನಿದೆ?

ಕರಾರು ಪತ್ರದಲ್ಲಿ ಇವರಿಬ್ಬರ ಮದುವೆ ಹಾಗೂ ಮುಂದಿನ ಜೀವನದ ಕುರಿತು ಒಂದಿಷ್ಟು ಕರಾರುಗಳಿವೆ. ಹಿಂದೂ ಸಂಪ್ರದಾಯದಂತೆ ಕಾನೂನು ಬದ್ಧವಾಗಿ ಮದುವೆಯಾಗುತ್ತೇವೆ, ಇಬ್ಬರು ಕಾನೂನಿನ ಪ್ರಕಾರ ಮದುವೆಯಾಗಲು ಅರ್ಹ ವಯಸ್ಸಿಗೆ ಬಂದಿದ್ದೇವೆ, ಯಾವುದೇ ವಧುದಕ್ಷಿಣ ಹಾಗೂ ವರದಕ್ಷಿಣೆ ಸ್ವೀಕರಿಸಿದೇ ಮದುವೆಯಾಗುತ್ತೇವೆ, ಮದುವೆಯಾದ ಮೇಲೆ ನಮ್ಮಿಬ್ಬರು ಸಂಪೂರ್ಣ ಜವಾಬ್ದಾರಿ ನಮ್ಮದೇ ಎಂದು ಹೇಳಿರುವುದು ಹೀಗೆ ಹಲವು ಅಂಶಗಳು ಈ ಕರಾರು ಪತ್ರದಲ್ಲಿದೆ. ನಿಶ್ಚಿತಾರ್ಥದಲ್ಲಿ ಉಂಗುರ ತೊಡಿಸುವ ಮೊದಲು ಈ ಇಬ್ಬರು ಕರಾರು ಪತ್ರಕ್ಕೆ ಸಹಿ ಹಾಕಿ ನಂತರ ಮನೆಯವರೆಲ್ಲ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ.

ಐಡಿಯಾ ಹುಟ್ಟಿದ್ದು..

ಕರಾರು ಪತ್ರದ ಐಡಿಯಾ ಗುರು ಹಾಗೂ ಸುಮಾ ಇಬ್ಬರದ್ದೂ ಅಲ್ಲ, ಬದಲಾಗಿ ಇವರ ಸ್ನೇಹಿತರು ಈ ಐಡಿಯಾ ನೀಡುತ್ತಾರೆ. ನಿಶ್ಚಿತಾರ್ಥದ ಹಿಂದಿನ ದಿನ ಸ್ನೇಹಿತರಾದ ಅಚ್ಯುತ್ ಕುಮಾರ್ ಯಲ್ಲಾಪುರ, ಸ್ಕಂದ ಆಗುಂಬೆ, ಪ್ರಸನ್ನ, ಗಣಪತಿ ದಿವಾನ ಹಾಗೂ ಶರತ್ ಕುಮಾರ ಎಂಬುವವರು ಗುರುಗಣೇಶ್‌ಗೆ ಈ ಐಡಿಯಾದ ಬಗ್ಗೆ ಹೇಳುತ್ತಾರೆ. ಭಿನ್ನವಾಗಿದೆ ಎನ್ನಿಸಿ ಗುರುಗಣೇಶ್‌ ಅವರಿಗೂ ಈ ಐಡಿಯಾ ಇಷ್ಟವಾಗುತ್ತದೆ. ಹೀಗೆ ಬಿಳಿ ಹಾಳೆಯ ಮೇಲೆ ಕರಾರುಗಳನ್ನು ಬರೆದು ಹುಡುಗ ಹಾಗೂ ಹುಡುಗಿ ಸಹಿ ಮಾಡುವಂತೆ ಐಡಿಯಾ ಕೊಟ್ಟಿದ್ದು ಸ್ನೇಹಿತರ ಬಳಗ.

ʼಸ್ನೇಹಿತರು ಹಾಗೂ ಹಿತೈಷಿಗಳು ನಮಗೆ ಈ ಐಡಿಯಾ ನೀಡಿದ್ದು. ಐಡಿಯಾ ಕೇಳಿದಾಗ ಇದು ಒಂಥರಾ ಭಿನ್ನವಾಗಿದೆ ಅನ್ನಿಸಿ ಖುಷಿಯಾಗಿತ್ತು, ಆ ಕಾರಣಕ್ಕೆ ಬಾಂಡ್‌ ಪೇಪರ್‌ನಂತೆ ಬಿಳಿ ಹಾಳೆಯ ಮೇಲೆ ಕರಾರು ಒಕ್ಕಣೆ ಬರೆದು ತುಂಬು ಮನಸ್ಸಿನಿಂದ ಒಪ್ಪಿಗೆ ಸೂಚಿಸಿ, ಪತ್ರಕ್ಕೆ ಸಹಿ ಹಾಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ, ಕರಾರಿನಂತೆ ನಡೆಯುತ್ತೇವೆʼ ಎಂದು ಗುರುಗಣೇಶ್‌ ಹೇಳುತ್ತಾರೆ.

ʼಸದಾ ಏನಾದರೂ ಹೊಸತನ್ನು ಮಾಡುತ್ತಿರಬೇಕು ಎಂಬುದು ನನ್ನ ಅಭಿಲಾಷೆ. ಆದರೆ ನನಗೆ ಈ ಕರಾರು ಪತ್ರದ ಐಡಿಯಾದ ಬಗ್ಗೆ ಗೊತ್ತಿರಲಿಲ್ಲ. ನಿಶ್ಚಿತಾರ್ಥದ ದಿನ ಬೆಳಿಗ್ಗೆ ನನಗೆ ಇದರ ಬಗ್ಗೆ ತಿಳಿದಿದ್ದು. ಆದರೆ ಅದು ಇಷ್ಟರ ಮಟ್ಟಿಗೆ ವೈರಲ್‌ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಸ್ನೇಹಿತರೆಲ್ಲಾ ಅದನ್ನು ಕಳುಹಿಸುತ್ತಿರುವುದು ನೋಡಿ ಖುಷಿಯಾಗುತ್ತಿದೆʼ ಎನ್ನುತ್ತಾರೆ ಸುಮಾ ಕಂಚೀಪಾಲ್.

ಮದುವೆಯಂದು ಪುಸ್ತಕ ಬಿಡುಗಡೆ ಮಾಡುವ ಕನಸು

ಮದುವೆಯಲ್ಲೂ ಇಂತಹ ಭಿನ್ನವಾದದ್ದನ್ನು ನಿರೀಕ್ಷೆ ಮಾಡಬಹುದಾ ಎಂಬ ಪ್ರಶ್ನೆಗೆ ಈಗಲೇ ಆ ಬಗ್ಗೆ ಯೋಚಿಸಿಲ್ಲ ಎನ್ನುತ್ತಾರೆ ಗುರುಗಣೇಶ್‌. ಆದರೆ ಸುಮಾ, ಮದುವೆಯಂದು ತಾನೇ ಬರೆದ ಸಣ್ಣಕಥೆಗಳ ಪುಸ್ತಕ ಬಿಡುಗಡೆ ಮಾಡುವ ಕನಸು ಹೊಂದಿದ್ದಾರೆ. ಈಗಾಗಲೇ ಕಥೆಗಳು ಸಿದ್ಧವಿದ್ದು, ಪ್ರೂಫ್‌ ರೀಡಿಂಗ್‌, ಪುಟ ವಿನ್ಯಾಸದ ಕೆಲಸಗಳಿಗೆ ಸಮಯ ಹೊಂದಿಸಲು ಆಗುತ್ತಿಲ್ಲ ಎನ್ನುವುದು ಸುಮಾ ಅವರ ಮಾತು.

ಸುಮ ಹಾಗೂ ಗುರುಗಣೇಶ್‌ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಮಾದ್ಯಮ ಕ್ಷೇತ್ರದಲ್ಲಿದ್ದಾರೆ.

ಚಾರಣ, ತಿರುಗಾಟ, ಓದು, ಬರವಣಿಗೆ, ಫೋಟೋಗ್ರಾಫಿ, ಪರಿಸರ ಅಧ್ಯಯನ ಈ ಇಬ್ಬರ ನೆಚ್ಚಿನ ಹವ್ಯಾಸ. ಗುರುಗಣೇಶ ಅವರ ʼಇದುವರೆಗಿನ ಪ್ರಾಯʼ ಎಂಬ ಕವಿತಾ ಸಂಕಲನ ಬಿಡುಗಡೆಯಾಗಿದೆ.

IPL_Entry_Point