ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಒಡನಾಟ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ
ಕರ್ನಾಟಕದ ದಲಿತ ಸೂರ್ಯ ಖ್ಯಾತಿಯ ಚಾಮರಾಜನಗರ ಸಂಸದ ವಿ ಶ್ರೀನಿವಾಸ ಪ್ರಸಾದ್ ಏಪ್ರಿಲ್ 29ರಂದು ವಿಧಿವಶರಾದರು. ಈ ನಡುವೆ, ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್ ವಿಚಾರ ಗಮನಸೆಳೆದಿದ್ದು, ಆರ್‌ಎಸ್‌ಎಸ್ ಜೊತೆಗೆ ಅವರ ಸಂವತ್ಸರ ಮೀರಿದ ಒಡನಾಟವನ್ನು ಸ್ಮರಿಸುತ್ತ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ ಸಲ್ಲಿಸಿದ್ದಾರೆ.
ಬೆಂಗಳೂರು: ಕರ್ನಾಟಕದ ಪ್ರಮುಖ ದಲಿತ ನಾಯಕ, ಹಿರಿಯ ರಾಜಕಾರಣಿ ವಿ ಶ್ರೀನಿವಾಸ್ ಪ್ರಸಾದ್ ನಿನ್ನೆ (ಏಪ್ರಿಲ್ 29) ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಬರೋಬ್ಬರಿ 5 ದಶಕ ತನ್ನದೇ ಆದ ರೀತಿಯಲ್ಲಿ ರಾಜಕಾರಣ ಮಾಡಿ ವಿಶಿಷ್ಟ ಛಾಪು ಮೂಡಿಸಿದ್ದವರು ವಿ. ಶ್ರೀನಿವಾಸ ಪ್ರಸಾದ್. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಸ್ವಯಂಸೇವಕರಾಗಿ ಬೆಳೆದವರಾದರೂ ರಾಜಕಾರಣದ ವಿಚಾರದಲ್ಲಿ ತಮ್ಮದೇ ನಿಲುವು ಹೊಂದಿ, ಅದರಂತೆ ನಡೆದವರು.
ವಿ ಶ್ರೀನಿವಾಸ್ ಪ್ರಸಾದ್ ತಮ್ಮ ರಾಜಕಾರಣದ ಕೊನೆಯ ಘಟ್ಟದಲ್ಲಿ ಬಿಜೆಪಿಯಲ್ಲಿದ್ದರು ಎಂಬುದು ವಿಶೇಷ. ಸ್ವತಂತ್ರ ಅಭ್ಯರ್ಥಿಯಾಗಿ ರಾಜಕಾರಣ ಪ್ರವೇಶಿಸಿದ ಅವರು ಜನತಾ ಪಾರ್ಟಿ, ಜನತಾದಳ ಯು, ಜನತಾದಳ ಎಸ್, ಕಾಂಗ್ರೆಸ್, ಸಮತಾ ಪಾರ್ಟಿ, ಬಿಜೆಪಿ ಹೀಗೆ ಪ್ರಮುಖ ಪಕ್ಷಗಳಲ್ಲಿ ರಾಜಕೀಯ ನಡೆಸಿದವರು. ಇವೆಲ್ಲದರ ನಡುವೆಯೂ ಅವರು ಸಂಘದ ಗರಡಿಯಲ್ಲಿ ಬಾಲ್ಯ ಕಳೆದವರು ಎಂಬುದು ಗಮನ ಸೆಳೆದ ಅಂಶವಾಗಿತ್ತು.
ಹೀಗಾಗಿ, ವಿ. ಶ್ರೀನಿವಾಸ್ ಪ್ರಸಾದ್ ಮತ್ತು ಆರ್‌ಎಸ್‌ಎಸ್ ಎಂಬ ವಿಚಾರ ಬಂದಾಗ ಅನೇಕ ವಿಷಯಗಳು ಮುನ್ನೆಲೆಗೆ ಬರುತ್ತವೆ. ಇದೇ ವಿಚಾರ ಇಟ್ಟುಕೊಂಡು ಲೇಖಕ ವಾದಿರಾಜ ಸಾಮರಸ್ಯ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಅಗಲಿದ ನಾಯಕನಿಗೆ ಸುದೀರ್ಘ ಅಕ್ಷರ ನಮನ ಸಲ್ಲಿಸಿದ್ದಾರೆ. ಅದು ಹೀಗಿದೆ -
“ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಒಂದು ಸಂವತ್ಸರ ಮೀರಿದ ಒಡನಾಟ”
ಮೈಸೂರಿನ ಅಶೋಕಪುರಂ ದಲಿತ ಚಳವಳಿಯ ಶಕ್ತಿ ಕೇಂದ್ರ . ನಿನ್ನೆ ನಮ್ಮನ್ನು ಅಗಲಿದ ಹಿರಿಯ ರಾಜಕಾರಿಣಿ ವಿ ಶ್ರೀನಿವಾಸಪ್ರಸಾದ್ ಹುಟ್ಟಿ ಬೆಳದದ್ದು ಇದೇ ಅಶೋಕಪುರಂನಲ್ಲಿ .
ಅದು 1957 - 58 ರ ಸಂದರ್ಭ . ಅಶೋಕಪುರಂನಿಂದ ಅನತಿ ದೂರದಲ್ಲಿದ್ದ ಗಣೇಶ ಪಾರ್ಕಿನಲ್ಲಿ ಆರೆಸ್ಸೆಸಿನ ವಿಜಯ ಶಾಖೆ . ಮೊದಲು ಶಾಖೆಯ ಆಟೋಟಗಳಿಗೆ ಆಕರ್ಷಿತರಾದವರು ಅಶೋಕಪುರಂನ ರಾಮಕೃಷ್ಣ . ಅವರ ಹಿಂದೆಯೇ ಬಂದವರು ವೆಂಕಟರಾಮು , ಶ್ರೀನಿವಾಸ ಪ್ರಸಾದ್ . ಈ ಮೂವರು ಸದಾ ಜೋತೆಗೇ ಇರುತ್ತಿದ್ದ ಚಡ್ಡಿ ದೋಸ್ತರು . ಇವರೊಂದಿಗೆ ಜವರಯ್ಯ , ಮುದ್ದು ಚಲುವಯ್ಯ , ವುರ್ಗಿ ಜವರ , ರಘುನಾಥ , ಮಹದೇವ , ವೆಂಕಟರಾಜು , ರಾಮಸ್ವಾಮಿ , ಚಿಕ್ಕವೀರಯ್ಯ , ಚಾಮುಂಡಿ ಮಹಾಲಿಂಗು , ನಾರಾಯಣಸ್ವಾಮಿ , ಶ್ರೀಕಂಠ , ಸಿದ್ದಪ್ಪಾಜಿ , ಚನ್ನರಸು , ಗೋವಿಂದರಾಜು , ವಾಸು , ಗಂಗಾಧರ ... ಹೀಗೆ ದೊಡ್ಡ ಪಟಾಲಮ್ಮೆ ವಿಜಯ ಶಾಖೆಗೆ ಬಂದಿಳಿಯಿತು . ಕ್ರಮೇಣ ಆರೆಸ್ಸೆಸಿನ ಕಲಿಕೆಗಳು ಕರಗತವಾಗುತ್ತಲೇ ಅಶೋಕಪುರಂನಲ್ಲಿ ' ಹನುಮಾನ್ ಶಾಖೆ ' ತಲೆ ಎತ್ತಿತು . ಈಗಲೂ ಶ್ರೀನಿವಾಸ ಪ್ರಸಾದ್ ಆ ಕಾಲದ ಆರೆಸ್ಸೆಸ್ ಸಹಪಾಠಿಗಳೊಂದಿಗೆ ಮಾತಿಗೆ ಕೂತರೆ ' ವಿಜಯ ಶಾಖೆ - ಹನುಮಾನ್ ಶಾಖೆ ' ಪ್ರಸ್ತಾಪವಾಗದೆ ಮಾತು ಮುಗಿಯುವುದಿಲ್ಲ .
ಹದಿನೈದು ವರ್ಷಕ್ಕೂ ಮೀರಿದ ಆ ದಿನಗಳ ಆರೆಸ್ಸೆಸ್ ನಂಟನ್ನು ಶ್ರೀನಿವಾಸ ಪ್ರಸಾದ್ ತಮ್ಮ ' ಸ್ವಾಭಿಮಾನಿಯ ನೆನಪುಗಳು ' ಪುಸ್ತಕದಲ್ಲಿ ದಾಖಲಿಸಿದ್ದಾರೆ . ಯಾದವರಾವ್ ಜೋಷಿ , ಹೊ ವೆ ಶೇಷಾದ್ರಿ , ನಂ ಮಧ್ವರಾವ್ , ಹರಿಭಾವು ವಝೆ , ವೆಂಕಣ್ಣ - ಅಂದಿನ ಸಂಘಟನೆಯ ಪ್ರಮುಖರು ತೋರಿದ ಪ್ರೀತಿ , ಕಾಳಜಿ , ನೀಡಿದ ಪ್ರೋತ್ಸಾಹ , ತಿಂಗಳುದ್ದಕ್ಕೂ ನೆಡೆದ ಎರಡು ತರಬೇತಿ ಶಿಬಿರಗಳು , ಕೊಲ್ಕತ್ತಾದಲ್ಲಿ ನೆಡೆದ ಎಬಿವಿಪಿ ರಾಷ್ಟ್ರೀಯ ಸಮ್ಮೇಳನ , ಅಲ್ಲಿ ಕೇಳಿದ ವಿಚಾರಧಾರೆಗಳು ಹುಟ್ಟಿಸಿದ ರೋಮಾಂಚನ - ಎಲ್ಲವನ್ನು ಶ್ರೀನಿವಾಸಪ್ರಸಾದ್ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ .
ಆರೆಸ್ಸೆಸ್ ಜತೆಗಿನ ಆ 15 ವರ್ಷ ಎಂದೂ ಜಾತೀಯತೆ ಸೋಂಕು ಕಾಣಲಿಲ್ಲ- ಶ್ರೀನಿವಾಸ್ ಪ್ರಸಾದ್
ಬೇಸಿಗೆಯ ರಜೆಯಲ್ಲಿ ವೆಂಕಟರಾಮು ಜೊತೆ ಕಂಪಲಾಪುರ , ಚಿಲ್ಕುಂದ , ಕಂದೇಗಾಲ ಗ್ರಾಮಗಳಲ್ಲಿ ವಿಸ್ತಾರಕರಾಗಿ ಹೋಗಿ ಹದಿನೈದು ದಿನ ತಂಗಿ ಆರೆಸ್ಸೆಸ್ ಶಾಖೆಗಳನ್ನು ತೆರೆದಿದ್ದು , ಒಕ್ಕಲಿಗರು , ಲಿಂಗಾಯತರು , ದಲಿತರೆಲ್ಲ ಶಾಖೆಯಲ್ಲಿ ಬೆರೆಯುತ್ತಿದ್ದದ್ದು ಪ್ರಸಾದ್ ಅವರ ಸುಂದರ ನೆನಪುಗಳು . ಶಾಖೆಯ ಆಟೋಟಗಳು ನಮ್ಮೊಳಗಿನ ವಿಕಾರಗಳನ್ನು ಹದಗೊಳಿಸುವ ಬಗೆ ಅನನ್ಯ . ' ಆರೆಸ್ಸೆಸ್ ಜೊತೆಗಿನ ಆ ಹದಿನೈದು ವರ್ಷಗಳ ಅವಧಿಯಲ್ಲಿ ನಾನೆಂದು ಜಾತೀಯತೆಯ ಸೋಂಕನ್ನು ಕಾಣಲಿಲ್ಲ ' - ಇದು ಶ್ರೀನಿವಾಸ್ ಪ್ರಸಾದರ ಸ್ಪಷ್ಟ ಮಾತು . ( ಪುಟ 41)
ಶ್ರೀನಿವಾಸ ಪ್ರಸಾದ್ ಅವರು ಆರೆಸ್ಸೆಸ್ ಅಂಗಳದಲ್ಲಿ ಬೆಳಸಿಕೊಂಡ ನಾಯಕತ್ವದ ಗುಣ ಅವರನ್ನು ರಾಜಕೀಯಕ್ಕೆ ಸೆಳೆದದ್ದು ಸಹಜ . 1968 ರಲ್ಲಿ ಮೈಸೂರೂ ಸೇರಿದ ನೈಋತ್ಯ ಪದವಿಧರ ಕ್ಷೇತ್ರದಿಂದ ಜನಸಂಘದ ರಾಜ್ಯ ಕಾರ್ಯದರ್ಶಿಯಾಗಿದ್ದ ಎ ಕೆ ಸುಬ್ಬಯ್ಯ ಸ್ಪರ್ಧಿಸಿ , ಗೆದ್ದು ಮೇಲ್ಮನೆ ಪ್ರವೇಶಿಸಿದರು . ಆ ಚುನಾವಣೆಯಲ್ಲಿ ಪ್ರಸಾದ್ - ಸುಬ್ಬಯ್ಯನವರಿಗೆ ಕೌಂಟಿಂಗ್ ಎಜೆಂಟ್ ಆಗಿದ್ದರು .
ಬೂಸಾ ಪ್ರಕರಣದ ಹಿನ್ನೆಲೆಯಲ್ಲಿ ದಲಿತ ಚಳವಳಿಗೆ ಪ್ರಸಾದ್ ಬಂದರೂ ಆರೆಸ್ಸೆಸ್ ನಂಟು ಇದ್ದೇ ಇತ್ತು . 1989 - ಆರೆಸ್ಸೆಸ್ ಸ್ಥಾಪಕ ಡಾ ಹೆಡಗೇವಾರ ಅವರ ಜನ್ಮ ಶತಮಾನೋತ್ಸದ ಸಂಭ್ರಮ . ಆಗ ಕಾಂಗ್ರೆಸ್ಸಿನ ಸಂಸದರಾಗಿದ್ದರೂ ಶ್ರೀನಿವಾಸ ಪ್ರಸಾದ ಮೈಸೂರಿನ ಟೌನ್ ಹಾಲ್ ಮೈದಾನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಬಾಳಾಸಾಹೇಬ್ ದೇವರಸರೊಡನೆ ವೇದಿಕೆ ಹಂಚಿಕೊಂಡಿದ್ದರು .
ಜಾತೀಯತೆ , ಅಸ್ಪೃಶ್ಯತೆಯ ಬಗ್ಗೆ ಶ್ರೀನಿವಾಸ ಪ್ರಸಾದ್ ಅವರದ್ದು ಎಣೆಯಿಲ್ಲದ ತುಡಿತ . ಅವರಲ್ಲಿದ್ದ ಈ ತುಡಿತ ಮತ್ತು ಅವರಿಗಿದ್ದ ಅನುಭವದ ಆಳ - ಹಲವು ಸಲ ಅವರೊಂದಿಗೆ ತಾಸುಗಟ್ಟಲೆ ಮಾತಿಗೆ ಕೂರುವಂತೆ ಮಾಡಿತು . ' ಸಂಘ ಮಾತ್ರ ಹಿಂದುಗಳಲ್ಲಿ ಸಾಮರಸ್ಯ ತರಬಲ್ಲದು . ಆ ಶಕ್ತಿ ಇರೋದು ಸಂಘಕ್ಕೆ ಮಾತ್ರ . ಉಳಿದವರದ್ದು ಬರಿ ಮಾತಷ್ಟೆ . ಆದರೆ ಸಂಘದ್ದು ನಿಧಾನಗತಿ . ಹೀಗಾಗಿ ಅಸ್ಪ್ಬಶ್ಯತೆಯ ನೋವಿನಲ್ಲಿರುವ ದಲಿತರು ಈ ನಿಧಾನಗತಿಗೆ ಒಗ್ಗಲಾರರು , ಒಪ್ಪಲಾರರು . ನನ್ನ ತಕರಾರು ಇದೇ . ಎಲ್ಲರನ್ನು ಬೆಸೆಯುವ ಸಾಮರಸ್ಯದ ಕೆಲಸ symbolic ಆಗಿ ನೆಡೆದರೆ ಸಾಲದು . ' ಎಲೆ ತುದಿಯ ಪಾಯಸ ' ಹೊಟ್ಟೆ ತುಂಬಿಸುವುದಿಲ್ಲ - ಪ್ರಸಾದ್ ಅವರು ವಿವರಿಸುವ ಬಗೆ ಕಣ್ಣಿಗೆ ಕಟ್ಟಿದಂತಿದೆ .
ವೆಂಕಟರಾಮು ಅವರು ಜೊತೆಗಿದ್ದರೆ ಶ್ರೀನಿವಾಸ್ ಪ್ರಸಾದ್ ಅವರಿಗೆ ಹಳೆಯ ಒಡನಾಟದ ನೆನಪುಗಳು ಒತ್ತರಿಸಿ ಭಾವುಕರಾಗುವುದೂ ಇತ್ತು . ಅದೊಂದು ದಿನ ಪ್ರಸಾದರು ಹಂಚಿಕೊಂಡ ನೆನಪು ಹೃದಯವನ್ನು ಕಲುಕಿತ್ತು .
********
ಅಸ್ಪೃಶ್ಯತೆಯ ಸಂಕೀರ್ಣತೆ
1980 - ಶ್ರೀನಿವಾಸ್ ಪ್ರಸಾದ್ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು . ತಮ್ಮನ್ನು ಬೆಂಬಲಿಸಿದ ಚಾಮರಾಜನಗರ ಮೀಸಲು ಕ್ಷೇತ್ರದ ಜನತೆಗೆ ಕೃತಜ್ಞತೆ ತಿಳಿಸಲು ಪ್ರಸಾದ್ ಹಳ್ಳಿ - ಹಳ್ಳಿಗೆ ಸಂಚರಿಸುತ್ತಿದ್ದರು . ಅದೊಂದು ಹಳ್ಳಿಯಲ್ಲಿ ಇದ್ದದ್ದು ಎರಡೇ ಸಮುದಾಯದವರು . ಉಪ್ಪಾರರು ಮತ್ತು ದಲಿತರು . ಪ್ರಸಾದ್ ಆ ಹಳ್ಳಿಗೆ ಹೋದಾಗ ಊರ ಮುಖಂಡರದ್ದು ಒಂದೇ ಒತ್ತಾಯ .' ಮುಂದಿನ ತಿಂಗಳಲ್ಲಿ ಬರುವ ಊರಮ್ಮನ ಜಾತ್ರೆಯಲ್ಲಿ ಕೆಂಡ ಹಾಯಬೇಕು . ಕಿರಿಕಿರಿ ಮಾಡುವ ಅರಣ್ಯ ಇಲಾಖೆಗೆ ಹೇಳಿ ಸೌದೆ ಕೊಡ್ಸಿ ' . ಪ್ರಸಾದ್ ಸೌದೆಯ ವ್ಯವಸ್ಥೆಯನ್ನೂ ಮಾಡಿದರು , ಆ ದಿನ ಜಾತ್ರೆಗೂ ಹೋದರು . ನೋಡಿದರೆ ಕೆಂಡ ಹಾಯಲು ಎರಡೆರಡು ವ್ಯವಸ್ಥೆ . ಉಪ್ಪಾರರಿಗೆ ಒಂದು , ದಲಿತರಿಗೆ ಇನ್ನೊಂದು . ಶ್ರೀನಿವಾಸ್ ಪ್ರಸಾದ್ ಗೆ ತಡೆಯಲಾಗಲಿಲ್ಲ . ಊರ ಪ್ರಮುಖರನ್ನು ಮೆಲುದನಿಯಲ್ಲೇ ತರಾಟೆ ತೆಗೆದುಕೊಂಡರು . ಕೊನೆಗೆ ಊರ ಪ್ರಮುಖನೊಬ್ಬ ಸ್ಪಷ್ಟವಾಗಿ ಹೇಳಿದ - ' ನೀವ್ ಹೇಳಿದಂಗೆ ಒಂದೇ ತಾವ್ ಕೆಂಡ ಹಾಯಕ್ಕೆ ಆಗಲ್ಲ ಸ್ವಾಮಿ , ಕಾಲು ಸೋಕಿ ಬಿಟ್ಟರೆ ? '
ಇವರಿಗೆ ಹಾಯುವಾಗ ಕೆಂಡವೇ ಸೋಕುತ್ತಿಲ್ಲ ! ಆದರೆ ತನ್ನೂರಿನ ದಲಿತನ ಕಾಲು ಸೋಕುತ್ತದೆಂಬ ಭಯ !
ಅಸ್ಪೃಶ್ಯತೆಯ ಈ ಸಂಕೀರ್ಣತೆಯನ್ನು ಹಳ್ಳಿಗಾಡಿನ ಮುಗ್ಧರಿಗೆ ಮಾನಗಾಣಿಸುವುದು ಹೇಗೆ ?
**********
ಭೀಮಸದನಕ್ಕೆ ಪೇಜಾವರ ಶ್ರೀ
ಜಯಲಕ್ಷ್ಮಿ ಪುರಂನ ಶ್ರೀನಿವಾಸ್ ಪ್ರಸಾದ್ ಅವರ ಮನೆ ' ಭೀಮಸದನ ' . ಎರಡು ರಸ್ತೆಗಳಾಚೆ ರಾಘವೇಂದ್ರ ಸ್ವಾಮಿಗಳ ಮಠ . ಅದೊಂದು ದಿನ ಅಂದಿನ ಪೇಜಾವರ ಸ್ವಾಮೀಜಿ ಮಠದಲ್ಲಿ ತಂಗಿದ್ದರು . ಗೋಡೆಗೆ ಹಾಕಿದ - ಮಠದ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರ ಪಟ್ಟಿ - ನೋಡಿದ ಪೇಜಾವರ ಸ್ವಾಮೀಜಿ 'ಇದ್ಯಾರು ಭಾಗ್ಯಲಕ್ಷ್ಮಿ ಶ್ರೀನಿವಾಸ್ ಪ್ರಸಾದ್ ? ' - ಎಂದು ಜೊತೆಗಿದ್ದವರನ್ನು ಕೇಳಿದರು . ' ಅವರು ಸಂಸದ ಶ್ರೀನಿವಾಸ್ ಪ್ರಸಾದ ಅವರ ಮನೆಯವರು . ಮಠಕ್ಕೆ ಆಗಾಗೆ ಬರುತ್ತಾರೆ . ಹತ್ತಿರದಲ್ಲೇ ಮನೆಯಿದೆ ' .
' ಹತ್ತಿರದಲ್ಲೇ ಮನೆಯಿದ್ದರೆ ಹೋಗಿ ಶ್ರೀನಿವಾಸಪ್ರಸಾದರನ್ನು ನೋಡೋಣ ' ಎಂದು ಸ್ವಾಮೀಜಿ ಹೊರಟರು .
ಯಾವ ಪೂರ್ವ ಸೂಚನೆಯೂ ಇಲ್ಲದೆ ಮನೆಗೆ ಬಂದು ಅಸ್ಪ್ರಶ್ಯತೆ ತೊಲಗಬೇಕು ಎಂದು ಗಟ್ಟಿಯಾಗಿ ಪೇಜಾವರ ಸ್ವಾಮಿಗಳು ಹೇಳಿದ್ದು ಒಂದು ಸಣ್ಣ ಭರವಸೆ ಮೂಡಿಸಿತು . ಉಳಿದೆಲ್ಲ ಸ್ವಾಮೀಜಿಗಳೂ ಹೀಗೆ ಆದರೆ ಏನಾದರು ಸರಿ ಆಗಬಹುದೇನೊ? - ಎಂದು ಅನುಭವ ಬಿಚ್ಚಿಟ್ಟ ಪ್ರಸಾದ್ - ಇದನ್ನೆಲ್ಲ ಸಂಘವೇ ಮಾಡಬೇಕು ಎಂದು ಆಗ್ರಹದಿಂದ ಹೇಳಿದ್ದರು .
**********
1959 ರಲ್ಲಿ ಅಂದಿನ ರೈಲ್ವೆ ಸಚಿವ ಬಾಬು ಜಗಜೀವನ್ ರಾಮ್ ಅಶೋಕಪುರಂಗೆ ಬಂದು ಸಿದ್ಧಾರ್ಥ ವಸತಿ ಶಾಲೆಗೆ ಶಿಲಾನ್ಯಾಸ ನೆರವೇರಿಸಿದ್ದರು . ಅವತ್ತಿನ ಕಾರ್ಯಕ್ರಮದಲ್ಲಿ ವೇದಿಕೆಯ ಮುಂದೆ ನೆಲದ ಮೇಲೆ ಕೂತು ಭಾಷಣ ಕೇಳಿದ ಹುಡುಗ 20 ವರ್ಷದ ತರುವಾಯ ಸಂಸತ್ತು ಪ್ರವೇಶಿಸಿದ . ಬಾಬೂಜಿ ಜೊತೆಗೆ ಕಲಾಪದಲ್ಲಿ ಭಾಗವಹಿಸಿದ. ಇದು ಭಾರತದ ಜನತಂತ್ರದ ಹಿರಿಮೆ ! ಬಾಬಾಸಾಹೇಬರ ಸಂವಿಧಾನದ ಗರಿಮೆ !! ಶ್ರೀನಿವಾಸ್ ಪ್ರಸಾದ್ ನಮ್ಮ ಜೊತೆಗಿಲ್ಲ , ಆದರೆ ಸಾಮರಸ್ಯದ ಕುರಿತಾದ ಅವರ ತುಡಿತ , ಅನುಭವದ ಮಾತುಗಳು ಸದಾ ದಾರಿದೀಪವಾಗಿರುತ್ತದೆ .
ವಾದಿರಾಜ್ ಸಾಮರಸ್ಯ ಅವರ ಫೇಸ್‌ಬುಕ್ ಪೋಸ್ಟ್ ಇಲ್ಲಿದೆ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.