ಮಂಗಳೂರು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ 10,000 ಸಾವಯವ ಗಿಡ ಪ್ರಸಾದ
Vaikunta Ekadashi 2025: ಮಂಗಳೂರು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ತನ್ನಿಮಿತ್ತವಾಗಿ ದೇಗುಲದಲ್ಲಿ ವೈಕುಂಠ ಏಕಾದಶಿಗೆ 10,000 ಸಾವಯವ ಗಿಡ ಪ್ರಸಾದ ರೂಪದಲ್ಲಿ ನೀಡಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.
Vaikunta Ekadashi 2025: ಮಂಗಳೂರು ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ (ಜನವರಿ 10) ವೈಕುಂಠ ಏಕಾದಶಿ ಕಾರ್ಯಕ್ರಮ ನಡೆಯಲಿದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ಸಾವಯವ ಗಿಡ ಸಿಗಲಿದೆ. ಇದಕ್ಕಾಗಿ 10 ಸಾವಿರದಷ್ಟು ಗಿಡಗಳನ್ನು ಬೆಳೆಸಿ ದೇವಸ್ಥಾನದ ಸುತ್ತ ಅಲಂಕಾರಕ್ಕೆ ಬಳಸಲಾಗಿದೆ. ಪಾಲಕ್ ಗಿಡ ಹೆಚ್ಚಾಗಿದ್ದು, ಉಳಿದಂತೆ, ಹರಿವೆ, ಪಾಲಕ್, ಬೆಂಡೆ, ಕೆಂಪು ತುಳಸಿ ಕೂಡ ಪ್ರಸಾದವಾಗಿ ಭಕ್ತರಿಗೆ ಸಿಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಡೊಂಗರಕೇರಿ ವೆಂಕಟರಮಣ ದೇವಸ್ಥಾನ ಅಲಂಕಾರಕ್ಕೆ 10000 ಗಿಡ
ವೈಷ್ಣವರಿಗೆ ವೈಕುಂಠ ಏಕಾದಶಿ ವಿಶೇಷ. ಮಂಗಳೂರು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಅಲಂಕಾರಕ್ಕೆ ಹಸಿರು ಗಿಡಗಳನ್ನು ಬಳಸಲಾಗಿದೆ. ಇವೆಲ್ಲವೂ ಸೊಪ್ಪು, ತರಕಾರಿ ಗಿಡಗಳು ಎಂಬುದು ವಿಶೇಷ. ಹರಿವೆ, ಪಾಲಕ್, ಬೆಂಡೆ, ಕೆಂಪು ತುಳಸಿ ಸಹಿತ ವಿವಿಧ ಸಸಿಗಳನ್ನು ನೈಸರ್ಗಿಕವಾಗಿ ಬೆಳೆಸಿ ಅಲಂಕಾರಕ್ಕೆ ಬಳಕೆ ಮಾಡಲಾಗಿದೆ. ಆಗಮಿಸುವ ಭಕ್ತರಿಗೆ ಸಸಿಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು. ಸೂರಜ್ ರಾವ್ ಅವರ ನೇತೃತ್ವದಲ್ಲಿ ಈ ಸಸಿಗಳನ್ನು ಸಿದ್ದಪಡಿಸಿ ಅಲಂಕಾರಕ್ಕೆ ಬಳಸಲಾಗಿದೆ ಎಂದು ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಡೊಂಗರಕೇರಿ ವೆಂಕಟರಮಣ ದೇವಸ್ಥಾನ- ವೈಕುಂಠ ಏಕಾದಶಿ ಕಾರ್ಯಕ್ರಮ ವಿವರ
ವೈಕುಂಠ ಏಕಾದಶಿ ನಿಮಿತ್ತ ಜ.10ರಂದು ಶ್ರೀ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕ ಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನೆರವೇರಲಿದೆ. ಸಮಸ್ತ ಜನತೆ ಭಾಗವಹಿಸಬೇಕು ಎಂದು ಕಾರ್ಯಕ್ರಮದ ಉಸ್ತುವಾರಿ ಗಣೇಶ್ ಪಿ. ನಾಗ್ವೇಕರ್ ಹೇಳಿದರು.
ಮಂಗಳೂರು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10 ರಂದು ಮುಂಜಾನೆ 5.30ಕ್ಕೆ ಸುಪ್ರಭಾತ ಸೇವೆ, 6ಕ್ಕೆ ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃಪೂಜೆ, 7ರಿಂದ 8ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಬೆಳಗ್ಗೆ 8 ರಿಂದ 10 ರವರೆಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1ರಿಂದ 3ರವರೆಗೆ ಭಜನಾ ಕಾರ್ಯಕ್ರಮ, 3ರಿಂದ 4ರವರೆಗೆ ವೈದಿಕರಿಂದ ವೇದ ಪಾರಾಯಣ, ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ, ಸಂಜೆ 4.30ರಿಂದ ಪುಷ್ಪಯಾಗ ಆರಂಭ, ಅಷ್ಟಾವಧಾನ ಸೇವೆ, ರಾತ್ರಿ 9ಕ್ಕೆ ದೀಪಾರಾಧನೆ, ಮಹಾಪೂಜೆ, 10 ಗಂಟೆಗೆ ವಿಠೋಬ ದೇವರ ಸನ್ನಿಧಿಯಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಗಣೇಶ್ ಪಿ. ನಾಗ್ವೇಕರ್ ವಿವರಿಸಿದರು.