ಕನ್ನಡ ಸುದ್ದಿ  /  Karnataka  /  Valentines Day 2023: Valentine's Day- Sri Ram Sena Eyes On Park, Parlor, Hotel Pramod Muthalik's Warning To Lovers

Valentines Day 2023: ಪ್ರೇಮಿಗಳ ದಿನ- ಪಾರ್ಕ್, ಪಾರ್ಲರ್, ಹೋಟೆಲ್ ಮೇಲೆ ಶ್ರೀರಾಮ ಸೇನೆ ನಿಗಾ; ಪ್ರೇಮಿಗಳಿಗೆ ಮುತಾಲಿಕ್‌ ಎಚ್ಚರಿಕೆ

Valentines Day 2023: ಪ್ರೇಮಿಗಳ‌ ದಿನಾಚರಣೆಯನ್ನು ವಿರೋಧಿಸುತ್ತ ಬಂದಿದ್ದೇವೆ. ಇದು ವರ್ಷಂಪ್ರತಿ ನಡೆಯುವ ಕಾರ್ಯ. ಈ ಬಾರಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯ ನಡೆಯಲಿದೆ. ರಾಜ್ಯಾದ್ಯಂತ ಶ್ರೀರಾಮ ಸೇನೆಯ ನಿಗಾ ಇರಲಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌ (HT / ANI)

ಮಂಗಳೂರು: ಪ್ರೇಮಿಗಳ ದಿನದ ವಾರ್ಷಿಕ ಆಚರಣೆ ಮತ್ತೊಮ್ಮೆ ಎದುರಾಗಿದೆ. ಹೌದು ಫೆ.14 ಮತ್ತೊಮ್ಮೆ ಬಂದಿದೆ. ರೂಢಿಯಂತೆ ಪ್ರೇಮಿಗಳ ದಿನಾಚರಣೆಗೆ ಶ್ರೀ ರಾಮ ಸೇನೆ ವಿರೋಧ ಮುಂದುವರಿದಿದೆ.

ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ, ಪಾರ್ಕ್, ಪಾರ್ಲರ್, ಹೋಟೆಲ್ ಮೇಲೆ ಶ್ರೀರಾಮ ಸೇನೆ ನಿಗಾ ಇರಿಸಲಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಅವರು ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಪ್ರೇಮಿಗಳ‌ ದಿನಾಚರಣೆಯನ್ನು ವಿರೋಧಿಸುತ್ತ ಬಂದಿದ್ದೇವೆ. ಇದು ವರ್ಷಂಪ್ರತಿ ನಡೆಯುವ ಕಾರ್ಯ. ಈ ಬಾರಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯ ನಡೆಯಲಿದೆ. ರಾಜ್ಯಾದ್ಯಂತ ಶ್ರೀರಾಮ ಸೇನೆಯ ನಿಗಾ ಇರಲಿದೆ ಎಂದು ಹೇಳಿದರು.

ಪಾರ್ಕ್, ಪಾರ್ಲರ್, ಹೋಟೆಲ್​ಗಳಲ್ಲಿ ಗಮನ‌ ಇಡುತ್ತೇವೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ನಡೆಯುವ ಡ್ರಗ್, ಸೆಕ್ಸ್ ಮಾಫಿಯಾವನ್ನು ತಡೆಯುವುದು ನಮ್ಮ ಉದ್ದೇಶ. ಕಾನೂನು ಬದ್ದವಾಗಿಯೇ ಈ ಕೆಲಸವನ್ನು ಶ್ರೀರಾಮ ಸೇನೆ ಮಾಡುತ್ತದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಏನಿದು ಪ್ರೇಮಿಗಳ ದಿನ? ಏನಿದರ ವಿಶೇಷತೆ?

ಪ್ರೇಮಿಗಳ ದಿನಾಚರಣೆ ಫೆ.14ಕ್ಕೆ.. ಪ್ರತಿ ವರ್ಷವೂ ಈ ದಿನಕ್ಕಾಗಿ ಪ್ರೇಮಿಗಳು ಕಾಯುತ್ತಿರುತ್ತಾರೆ. ಕೆಲವರಿಗೆ ಇದು ಬಹಳ ವಿಶೇಷ ದಿನ ಎಂದೇ ಹೇಳಬಹುದು. ಎಷ್ಟೋ ಮಂದಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಈ ವಿಶೇಷ ದಿನವನ್ನು ಎದುರು ನೋಡುತ್ತಿರುತ್ತಾರೆ.

ವ್ಯಾಲೆಂಟೈನ್‌ ಡೇ ಎಂಬ ಆಚರಣೆಗೆ ಜೋಡಿಕೊಂಡು ವ್ಯಾಲೆಂಟೈನ್‌ ವೀಕ್‌ ಎಂಬ ಆಚರಣೆಯೂ ಇದೆ. ಇದು ಫೆ.7ಕ್ಕೆ ಶುರುವಾಗಿದೆ. ಮೊದಲ ದಿನ ಅಂದರೆ ಫೆ.7ರಂದು ರೋಸ್‌ ಡೇ. ಆ ದಿನ ನಿಮ್ಮ ನಡುವಿನ ಬಾಂಧವ್ಯಕ್ಕೆ ಅನುಗುಣವಾಗಿ ಗುಲಾಬಿ ಹೂ ಕೊಟ್ಟು ಅದನ್ನು ನಿವೇದನೆ ಮಾಡಿಕೊಳ್ಳಬಹುದು.

ಫೆ.8ರಂದು ಪ್ರಪೋಸ್‌ ಡೇ- ಪ್ರೇಮಿಗೆ ಪ್ರಪೋಸ್‌ ಮಾಡುವ ದಿನ ಇದು. ಅವರಿಗೆ ಇಷ್ಟವಾದ ಗಿಫ್ಟ್‌ ಕೊಟ್ಟು ಮನಸ್ಸಿನ ಭಾವನೇಯನ್ನು ಹೇಳಿಕೊಳ್ಳಬಹುದು. ಮನೆಗೂ ಆಹ್ವಾನಿಸಿ, ಮನೆಮಂದಿಗೆ ಅವರನ್ನು ಪರಿಚಯಿಸಬಹುದು.

ಫೆ.9ರಂದು ಚಾಕೊಲೇಟ್‌ ದಿನ- ಪ್ರಿಯತಮೆಯನ್ನು ಇಂಪ್ರೆಸ್‌ ಮಾಡಲು ಚಾಕೊಲೇಟ್‌ ಕೊಡಬಹುದಾದ ದಿನ ಇದು.

ಫೆ.10ರಂದು ಟೆಡ್ಡಿ ಡೇ - ಬಹುತೇಕ ಹುಡುಗಿಯರಿಗೆ, ಯುವತಿಯರಿಗೆ ಟೆಡ್ಡಿ ಬೇರ್‌ ಎಂಬ ಸಾಫ್ಟ್‌ ಟಾಯ್‌ ಬಹಳ ಅಚ್ಚುಮೆಚ್ಚು. ಇದು ಮುಗ್ಧ ಪ್ರೀತಿಯ ಸಂಕೇತ ಕೂಡ. ಇದನ್ನು ಉಡುಗೊರೆಯಾಗಿ ಕೊಟ್ಟು ಸಂಭ್ರಮಿಸುವ ದಿನ.

ಫೆ.11ರಂದು ಪ್ರಾಮಿಸ್ ಡೇ- ಬಾಳ ಬಂಡಿಯಲ್ಲಿ ಕೊನೆಯ ನಿಲ್ದಾಣದ ತನಕವೂ ಜತೆಗಿರುತ್ತೇನೆ ಎಂದು ಪ್ರೇಮಿಗಳು ಪರಸ್ಪರ ವಚನ ನೀಡುವ ದಿನ ಇದು.

ಫೆ.12 ರಂದು ಹಗ್‌ ಡೇ - ಅಂದರೆ ಪ್ರೀತಿಯ ಅಪ್ಪುಗೆ ನೀಡುವ ದಿನ ಇದು. ಪ್ರೇಮಿಗಳು ಪರಸ್ಪರ ಅಪ್ಪಿಕೊಂಡು ಪ್ರೀತಿ ವ್ಯಕ್ತಪಡಿಸುವ ದಿನ.

ಫೆ.13 ರಂದು ಕಿಸ್‌ ಡೇ - ಚುಂಬಿಸುವ ಮೂಲಕ ಪ್ರೀತಿ ವ್ಯಕ್ತಪಡಿಸುವ ದಿನ.

ಫೆ.14 ರಂದು ಪ್ರೇಮಿಗಳ ದಿನ . ಇದು ಬಹಳ ವಿಶೇಷ. ಪ್ರೇಮಿಗಳು ಜತೆಯಾಗಿ ಸುತ್ತಾಡುವ ದಿನ.

ಶ್ರೀ ರಾಮ ಸೇನೆ ವಿರೋಧ ಯಾಕೆ?

ಈ ಆಚರಣೆ ಭಾರತದ ಮೂಲ ಆಚರಣೆ ಅಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಭಾಗವಾಗಿದ್ದು, ಅನೇಕ ಸಂದರ್ಭದಲ್ಲಿ ಸ್ವೇಚ್ಛಾ ಪ್ರವೃತ್ತಿ ಕಾಣಿಸುತ್ತದೆ. ಇನ್ನು ಹಲವು ಸಂದರ್ಭ ಗಳಲ್ಲಿ ಈ ಆಚರಣೆಗಳ ಮೂಲಕ ಹಿಂದು ಸಮುದಾಯದ ಯುವತಿಯ ಬದುಕು ಹಾಳಾಗುತ್ತದೆ. ಅದನ್ನು ತಡೆಯಬೇಕು ಎಂಬ ಕಾಳಜಿ ಎಂಬುದನ್ನು ‍ಶ್ರೀರಾಮ ಸೇನೆಯ ಕಾರ್ಯಕರ್ತರು, ನಾಯಕರು ಹೇಳುತ್ತಿರುತ್ತಾರೆ.

IPL_Entry_Point