Vande Bharat Train: ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್‌ ರೈಲು ಪರೀಕ್ಷೆ ಶುರು; 26 ಅಧಿಕೃತ ಸಂಚಾರ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Vande Bharat Train: ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್‌ ರೈಲು ಪರೀಕ್ಷೆ ಶುರು; 26 ಅಧಿಕೃತ ಸಂಚಾರ ಸಾಧ್ಯತೆ

Vande Bharat Train: ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್‌ ರೈಲು ಪರೀಕ್ಷೆ ಶುರು; 26 ಅಧಿಕೃತ ಸಂಚಾರ ಸಾಧ್ಯತೆ

ಕರ್ನಾಟಕದಲ್ಲಿ ಈಗಾಗಲೇ ಚೆನ್ನೈ- ಬೆಂಗಳೂರು- ಮೈಸೂರು ನಡುವೆ ಎಂಟು ತಿಂಗಳಿನಿಂದಲೇ ವಂದೇ ಭಾರತ್‌ ರೈಲು ಸಂಚಾರವಿದೆ. ವಾರದಲ್ಲಿ ಆರು ಈ ದಿನ ಈ ರೈಲು ಯಶಸ್ವಿಯಾಗಿ ಸಂಚರಿಸುತ್ತಿದೆ. ಬಳಿಕ ಕರ್ನಾಟಕದಲ್ಲಿ ಆರಂಭವಾಗುತ್ತಿರುವ ಎರಡನೇ ರೈಲು ಬೆಂಗಳೂರು-ಧಾರವಾಡ ನಡುವೆ. ಇದರ ಪರೀಕ್ಷಾರ್ಥ ಸಂಚಾರವೂ ಶುರುವಾಗಿದೆ.

ಬೆಂಗಳೂರು ಧಾರವಾಡ ನಡುವೆ ವಂದೇಭಾರತ್‌ ರೈಲು ಪರೀಕ್ಷಾರ್ಥ ಸಂಚಾರ ಸೋಮವಾರ ನಡೆಯಿತು.
ಬೆಂಗಳೂರು ಧಾರವಾಡ ನಡುವೆ ವಂದೇಭಾರತ್‌ ರೈಲು ಪರೀಕ್ಷಾರ್ಥ ಸಂಚಾರ ಸೋಮವಾರ ನಡೆಯಿತು.

ಬೆಂಗಳೂರು: ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜನರಿಗೊಂದು ಸಿಹಿಸುದ್ದಿ.

ಕರ್ನಾಟಕದ ಬೆಂಗಳೂರಿನಿಂದ ಮಲೆನಾಡು, ಮಧ್ಯಕರ್ನಾಟಕ ಹಾಗೂ ಉತ್ತರಕರ್ನಾಟಕ ಸಂಪರ್ಕಿಸುವ ಬೆಂಗಳೂರು-ಧಾರವಾಡ ವಂದೇಭಾರತ್‌ ರೈಲು ಆರಂಭದ ಪ್ರಕ್ರಿಯೆ ಶುರುವಾಗಿದೆ.

ಬೆಂಗಳೂರು ಹಾಗೂ ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್‌ ರೈಲಿನ ಪರೀಕ್ಷಾರ್ಥ ಸಂಚಾರ ಜೂನ್‌ 19ರ ಸೋಮವಾರ ನಡೆಯಲಿದೆ. ಇದಕ್ಕಾಗಿ ಬೆಂಗಳೂರು ಹಾಗೂ ಧಾರವಾಡ ರೈಲ್ವೇ ಮಾರ್ಗಗಳ ನಡುವೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಸಂಚಾರ ಪಟ್ಟಿ ಹೀಗಿದೆ

ಬೆಳಿಗ್ಗೆ 5.45ಕ್ಕೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ರೈಲು ಬೆಳಿಗ್ಗೆ 5.55 ಕ್ಕೆ ಯಶವಂತಪುರ ತಲುಪಿದೆ. ಎರಡು ನಿಮಿಷದ ನಿಲುಗಡೆ ನಂತರ ರೈಲು ದಾವಣಗೆರೆಗೆ ಬೆಳಿಗ್ಗೆ ತಲುಪಲಿದೆ. 9.58ಕ್ಕೆ ತಲುಪಲಿದೆ. ಅಲ್ಲಿ ಎರಡು ನಿಮಿಷದ ನಿಲುಗಡೆ ನಂತರ ಹೊರಟು 12.10ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಲ್ಲಿ ಐದು ನಿಮಿಷದ ನಿಲುಗಡೆಗೆ ಅವಕಾಶವಿದೆ. ಆನಂತರ 12.40ಕ್ಕೆ ಧಾರವಾಡ ತಲುಪಲಿದೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗಡೆ ತಿಳಿಸಿದ್ದಾರೆ.

ಧಾರವಾಡದಿಂದ ಮಧ್ಯಾಹ್ನ 1.15 ಕ್ಕೆ ಹೊರಡಲಿರುವ ವಂದೇ ಭಾರತ್‌ ರೈಲು 1.35 ಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಡೆ ಆಗಮಿಸಲಿದೆ. ಅಲ್ಲಿ ಐದು ನಿಮಿಷ ನಿಲುಗಡೆಗೆ ಅವಕಾಶ ನೀಡಲಾಗಿದೆ. ಹುಬ್ಬಳ್ಳಿಯಿಂದ ಹೊರಡುವ ರೈಲು ದಾವಣಗೆರೆ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 3.48ಕ್ಕೆ ಬಂದು ಸೇರಲಿದೆ. ಎರಡು ನಿಮಿಷ ನಿಲುಗಡೆ ನಂತರ ಹೊರಡಲಿದ್ದು, ಸಂಜೆ 7.45 ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬರಲಿದೆ. ಅಲ್ಲಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ರಾತ್ರಿ 8. 10ಕ್ಕೆ ತಲುಪಲಿದೆ.

ಮಾರ್ಗ ಸಿದ್ದ ಇದೆಯೇ?

ಪ್ರತಿ ಗಂಟೆಗೆ 110 ಕಿ.ಮಿ ವೇಗದಲ್ಲಿ ವಂದೇ ಭಾರತ್‌ ರೈಲು ಓಡಲಿದ್ದು, ಶೇ.90 ರಷ್ಟು ಮಾರ್ಗ ಸಿದ್ದವಿದೆ. ಬೆಂಗಳೂರು ಹಾಗೂ ಧಾರವಾಡ ನಗರಗಳ ನಡುವೆ ಇರುವ 489 ಕಿ.ಮಿ. ದೂರವನ್ನುಈ ರೈಲು ಸಂಚರಿಸಲಿದೆ. ಇದರಲ್ಲಿ 386 ಕಿ. ಮಿ ಮಾರ್ಗ ಗಂಟೆಗೆ 110 ಕಿ.ಮಿ ವೇಗದ ಸಂಚಾರಕ್ಕೆ ಅಣಿಯಾಗಿದೆ. ಉಳಿದ ಮಾರ್ಗದ ಕೆಲಸ ಜುಲೈ ಹೊತ್ತಿಗೆ ಪೂರ್ಣಗೊಳ್ಳಲಿದೆ ಎನ್ನುವುದು ನೈರುತ್ಯ ರೈಲ್ವೆ ಅಧಿಕಾರಿಗಳ ವಿವರಣೆ.

ಪರೀಕ್ಷಾರ್ಥ ಸಂಚಾರದ ದಿನ ಎಂಟು ಕೋಚ್‌ಗಳು ಇರಲಿವೆ. ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆಗೆ ಅವಕಾಶವಿದೆ. ತಿಂಗಳ ಅಂತ್ಯಕ್ಕೆ ರೈಲು ಆರಂಭವಾಗಲಿದ್ದು, ಆಗ ತುಮಕೂರು, ಅರಸೀಕೆರೆಯಲ್ಲಿ ನಿಲುಗಡೆಗೆ ಅವಕಾಶ ನೀಡಬಹುದು. ಇದರಿಂದ ಬೆಂಗಳೂರು ಹಾಗೂ ಧಾರವಾಡ ನಡುವೆ ಸಂಚಾರ ಅವಧಿ ಏಳು ಗಂಟೆ ಆಗಲಿದ್ದು, ದಾವಣಗೆರೆ ನಾಲ್ಕೂವರೆ ಗಂಟೆಯಲ್ಲೇ ತಲುಪಬಹುದು.

ಇದೇ ರೈಲು ಬೆಂಗಳೂರು ಹಾಗೂ ಅರಸಿಕೆರೆ ನಡುವೆ ಶನಿವಾರ ಪರೀಕ್ಷಾರ್ಥ ಸಂಚಾರ ಮುಗಿಸಿತ್ತು.195 ಕಿ. ಮಿ. ದೂರವನ್ನು ಬರೀ ಎರಡು ಗಂಟೆಯಲ್ಲಿ ಈ ರೈಲು ಕ್ರಮಿಸಿತ್ತು.ಅಷ್ಟೇ ಅವಧಿಯಲ್ಲಿ ಬೆಂಗಳೂರಿಗೆ ಹಿಂದಿರುಗಿತ್ತು. ಸೋಮವಾರ ಇದೇ ರೈಲಿನ ಅಧಿಕೃತ ಪರೀಕ್ಷಾರ್ಥ ಸಂಚಾರ ಆರಂಭಗೊಂಡಿತು.

ಪ್ರಧಾನಿ ಉದ್ಘಾಟನೆ

ಸೋಮವಾರದ ಪರೀಕ್ಷಾರ್ಥ ಸಂಚಾರ ನೋಡಿಕೊಂಡು ವರದಿ ನೀಡಿದ ನಂತರ ರೈಲು ಅಧಿಕೃತ ಆರಂಭದ ದಿನ ಘೋಷಿಸಲಾಗುತ್ತದೆ. ಬಹುತೇಕ ಜೂನ್‌ 26ಕ್ಕೆ ಆರಂಭ ಆಗಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್‌ ಆಗಿ ಇದನ್ನು ಉದ್ಘಾಟಿಸುವ ಸಾಧ್ಯತೆಯಿದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.

ಈಗಾಗಲೇ ರೈಲು ಬೆಂಗಳೂರಿಗೆ ಆಗಮಿಸಿರುವುದನ್ನು ಎರಡು ದಿನದ ಹಿಂದೆಯೇ ಟ್ವೀಟ್‌ ಮಾಡಿ ಬೆಂಗಳೂರು ಸಂಸದ ಪಿ.ಸಿ.ಮೋಹನ್‌ ಖಚಿತಪಡಿಸಿದ್ದರು.

ಕರ್ನಾಟಕದಲ್ಲಿ ಈಗಾಗಲೇ ಚೆನ್ನೈ- ಬೆಂಗಳೂರು- ಮೈಸೂರು ನಡುವೆ ಎಂಟು ತಿಂಗಳಿನಿಂದಲೇ ವಂದೇ ಭಾರತ್‌ ರೈಲು ಸಂಚಾರವಿದೆ. ವಾರದಲ್ಲಿ ಆರು ಈ ದಿನ ಈ ರೈಲು ಯಶಸ್ವಿಯಾಗಿ ಸಂಚರಿಸುತ್ತಿದೆ. ಬಳಿಕ ಕರ್ನಾಟಕದಲ್ಲಿ ಆರಂಭವಾಗುತ್ತಿರುವ ಎರಡನೇ ರೈಲು ಇದು.

ಇದನ್ನೂ ಓದಿರಿ

Whats_app_banner