VV Sagar Reservoir: 118 ವರ್ಷ ಹಳೆಯದಾದ ಕರ್ನಾಟಕದ ಈ ಜಲಾಶಯ ಈವರೆಗೂ ತುಂಬಿದ್ದು ಮೂರೇ ಬಾರಿ; ವಾಣಿ ವಿಲಾಸ ಸಾಗರಕ್ಕೆ ಸಿಎಂ ಬಾಗಿನ 18ಕ್ಕೆ
VV Sagar Reservoir: ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿ ಹಳೆಯದಾದ ವಾಣಿ ವಿಲಾಸ ಸಾಗರ ಜಲಾಶಯ ಇತಿಹಾಸದಲ್ಲೇ ಮೂರನೇ ಬಾರಿ ಭರ್ತಿಯಾಗಿದ್ದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜನವರಿ 18ರಂದು ಬಾಗಿನ ಸಲ್ಲಿಸುವರು.

ಚಿತ್ರದುರ್ಗ: ಈ ಜಲಾಶಯ ನಿರ್ಮಾಣಗೊಂಡು ಶತಮಾನವೇ ಕಳೆದು ಹೋಗಿದೆ. ಅಂದರೆ 118 ವರ್ಷಗಳ ಹಿಂದೆ ಕಣಿವೆಯಲ್ಲಿ ನಿರ್ಮಿಸಿದ ಈ ಜಲಾಶಯ ತನ್ನ ಜೀವಮಾನದ ಅವಧಿಯಲ್ಲಿ ತುಂಬಿರುವುದು ಮೂರೇ ಬಾರಿ. ಅದು 2025 ರಲ್ಲಿ ಈ ಜಲಾಶಯ ತುಂಬಿ ನಿಂತಿದೆ. ಮಲೆನಾಡು ಭಾಗದಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದ್ದರಿಂದ ಜಲಾಶಯ ತುಂಬಿದ್ದು, ಕೋಡಿ ಬೀಳುವ ಸನ್ನಿವೇಶವೂ ಇದೆ. ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣಿವೆಯಲ್ಲಿರುವ ವಾಣಿ ವಿಲಾಸ ಸಾಗರ ಜಲಾಶಯ. ಮೂರು ವರ್ಷದ ಹಿಂದೆ ಈ ಜಲಾಶಯ ತುಂಬಿತ್ತು. ಮೂರು ವರ್ಷದಲ್ಲಿಯೇ ಮತ್ತೆ ತುಂಬಿರುವ ಕ್ಷಣಕ್ಕೆ ಸಾಕ್ಷಿಯಾಗಿದೆ. ತುಂಬಿರುವ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಾಗಿನ ಸಲ್ಲಿಸುವ ಕಾರ್ಯಕ್ರಮವೂ ಜನವರಿ 18ಕ್ಕೆ ನಿಗದಿಯಾಗಿದೆ.
ಶತಮಾನಕ್ಕೂ ಮಿಗಿಲಾದ ಇತಿಹಾಸ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯವಿದ್ದು, ಇದು ಜಲಸಂಪನ್ಮೂಲ ಇಲಾಖೆಯ ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ. ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ತಾಯಿಯಾದ ಕೆಂಪ ನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಇವರ ಹೆಸರಿನಲ್ಲಿ 1898 ರಿಂದ 1907 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಸಂಪೂರ್ಣ ಬರದನಾಡು ಆಗಿದ್ದು, ನೀರಾವರಿ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಸುಮಾರು 9 ವರ್ಷದ ಬಳಿಕ ಜಲಾಶಯ ನಿರ್ಮಾಣವಾಯಿತು.
ಭಾರತ ಭೂಪಟದ ಹೋಲಿಕೆ
ಚಿತ್ರದುರ್ಗ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ವಾಣಿವಿಲಾಸ ಸಾಗರ ಜಲಾಶಯವು ಸಹ ಒಂದಾಗಿದೆ. ವೇದಾವತಿ ನದಿಗೆ ಅಡ್ಡಲಾಗಿ ಮಾರಿಕಣಿವೆ ಎಂಬಲ್ಲಿಸ್ವಾತಂತ್ರ್ಯ ಪೂರ್ವದಲ್ಲಿ ಈ ಅಣೆಕಟ್ಟನ್ನು ನಿರ್ಮಿಸಿದರು. ಈ ಸಾಗರವು ಹಿರಿಯೂರಿನಿಂದ 20 ಕಿ.ಮೀ ಹಾಗೂ ಚಿತ್ರದುರ್ಗದಿಂದ 60 ಕಿ.ಮೀ. ದೂರದಲ್ಲಿದೆ.
ಜಲಾಶಯದ ಒಂದು ಬದಿಯಿಂದ ನೋಡಿದಾಗ ಭಾರತದ ಭೂಪಟದ ಚಿತ್ರಣವನ್ನು ನೆನಪಾಗಲಿದೆ. ಈ ಅಣೆಕಟ್ಟನ್ನು ಅತ್ಯಾಧುನಿಕ ತಂತ್ರಜ್ಞಾನಗಳಿಂದ ನಿರ್ಮಿಸಲಾಗಿದೆ. ಇದು ವಿಶಿಷ್ಟ ಜಲಾಶಯವೂ ಹೌದು.
ಏಕೆಂದರೆ ಈ ಜಲಾಶಯಕ್ಕೆ ಕ್ರಸ್ಟ್ ಗೇಟ್‌ಗಳಿಲ್ಲ. ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಹರಿಯುತ್ತದೆ. ಕೋಡಿ ಬಿದ್ದ ಬಳಿಕ ನೀರು ಚಿತ್ರದುರ್ಗದ ಚಳ್ಳಕೆರೆ ಕಡೆಯಿಂದ ಸಾಗಿ ವಿಜಯನಗರ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಜಲಾಶಯವನ್ನು ಸೇರುತ್ತದೆ.
ಮೂರನೇ ಬಾರಿ ಭರ್ತಿ ಸಂತಸ
1907ರಲ್ಲಿ ವಾಣಿವಿಲಾಸ ಸಾಗರ ಜಲಾಶಯ ನಿರ್ಮಿಸಿದ ನಂತರ 1933 ರಲ್ಲಿ ಮೊದಲ ಬಾರಿಗೆ ಗರಿಷ್ಟ ಮಟ್ಟ 130 ಅಡಿ ತಲುಪಿ 30 ಟಿಸಿಎಂ ನೀರು ಸಂಗ್ರಹವಾಗಿತ್ತು. ಇದಾದ ನಂತರ 2022ರಲ್ಲಿ ವಿವಿ ಸಾಗರ ಡ್ಯಾಂ ಭರ್ತಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಡ್ಯಾಂಗೆ ಬಾಗಿನ ಅರ್ಪಿಸಿದ್ದರು. ಈಗ ಮೂರನೇ ಬಾರಿ ಭರ್ತಿಯಾಗಿದೆ. ಸದ್ಯವೇ ಬಾಗಿನ ಸಲ್ಲಿಕೆಯೂ ಆಗಬಹುದು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗಿದ್ದರಿಂದ, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿ ನಂತರ ಜಲಾಶಯದ ಗರಿಷ್ಟ ಮಟ್ಟ 130 ಅಡಿ ತಲುಪಿ ಕೋಡಿಯ ಮುಖಾಂತರ ಹೆಚ್ಚುವರಿ ನೀರು ನದಿ ಪಾತ್ರಕ್ಕೆ ಹರಿಯಲು ಪ್ರಾರಂಭವಾಗುವ ಸನ್ನಿವೇಶವಿದೆ. ಇಲ್ಲಿಯವರೆಗೆ ಸತತವಾಗಿ ಕೋಡಿಯ ಮುಖಾಂತರ ಹೆಚ್ಚುವರಿ ನೀರು ಹರಿದು ಸುಮಾರು 32.129 ಟಿಎಂಸಿಯಷ್ಟು ನೀರು ವೇದಾವತಿ ನದಿ ಪಾತ್ರ ಸೇರಿದೆ.
ವಾಣಿವಿಲಾಸ ಸಾಗರ ಜಲಾಶಯದ 12135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ 5.25 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದು, ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ 2.00 ಟಿ.ಎಂ.ಸಿ ನೀರಿನ ಹಂಚಿಕೆಯಾಗಿರುತ್ತದೆ. 2019-20ನೇ ಸಾಲಿನಲ್ಲಿ 3.44 ಟಿ.ಎಂ.ಸಿ, 2020-21ನೇ ಸಾಲಿನಲ್ಲಿ 6.61 ಟಿ.ಎಂ.ಸಿ ಹಾಗೂ 2021-22ನೇ ಸಾಲಿನಲ್ಲಿ 6.82 ಟಿ.ಎಂ.ಸಿ ನೀರನ್ನು ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲಾಗಿದೆ. ಈ ಬಾರಿಯೂ 6 ಟಿಎಂಸಿಗೂ ಹೆಚ್ಚಿನ ನೀರು ಭದ್ರಾ ಜಲಾಶಯದಿಂದ ಹರಿದು ಬಂದಿದೆ. ಇದರಿಂದ ಜಲಾಶಯ ಭರ್ತಿಯಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ವಿಭಾಗ