ವರಮಹಾಲಕ್ಷ್ಮಿ ಹಬ್ಬಕ್ಕೆ ಹೂ-ಹಣ್ಣುಗಳ ಬೆಲೆ ಏರಿಕೆ; ಕನಕಾಂಬರ ದರ ಕೆಜಿಗೆ 2000, ಮಲ್ಲಿಗೆಗೆ 1000, ಬಾಳೆಹಣ್ಣಿಗೆ 150 ರೂ.
ಕನ್ನಡ ಸುದ್ದಿ  /  ಕರ್ನಾಟಕ  /  ವರಮಹಾಲಕ್ಷ್ಮಿ ಹಬ್ಬಕ್ಕೆ ಹೂ-ಹಣ್ಣುಗಳ ಬೆಲೆ ಏರಿಕೆ; ಕನಕಾಂಬರ ದರ ಕೆಜಿಗೆ 2000, ಮಲ್ಲಿಗೆಗೆ 1000, ಬಾಳೆಹಣ್ಣಿಗೆ 150 ರೂ.

ವರಮಹಾಲಕ್ಷ್ಮಿ ಹಬ್ಬಕ್ಕೆ ಹೂ-ಹಣ್ಣುಗಳ ಬೆಲೆ ಏರಿಕೆ; ಕನಕಾಂಬರ ದರ ಕೆಜಿಗೆ 2000, ಮಲ್ಲಿಗೆಗೆ 1000, ಬಾಳೆಹಣ್ಣಿಗೆ 150 ರೂ.

Varamahalaxmi Festival: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿರುವ ಜನರು ದುಪ್ಪಟ್ಟಾಗಿರುವ ಹೂ-ಹಣ್ಣುಗಳ ಬೆಲೆ ಕೇಳಿ ದಂಗಾಗಿದ್ದಾರೆ.

ಹೂ-ಹಣ್ಣುಗಳ ಬೆಲೆ ಏರಿಕೆ
ಹೂ-ಹಣ್ಣುಗಳ ಬೆಲೆ ಏರಿಕೆ

ಬೆಂಗಳೂರು: ಇಂದು ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಕರ್ನಾಟಕದ ಜನರಿದ್ದಾರೆ. ಹಬ್ಬದ ತಯಾರಿಗಾಗಿ ಸಿದ್ಧತೆ ನಡೆಸುತ್ತಿರುವ ನಾಗರಿಕರು ಮಾರುಕಟ್ಟೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಆದರೆ ಬಹುತೇಕ ಮಾರುಕಟ್ಟೆಗಳಲ್ಲಿ ಹೂವು ಮತ್ತು ಹಣ್ಣಿನ ದರ ರಾಕೆಟ್ ವೇಗದಲ್ಲಿ ಏರಿಕೆ ಕಾಣುತ್ತಿದೆ.

ಈಗಾಗಲೆ ಅಗತ್ಯ ವಸ್ತುಗಳು, ತರಕಾರಿಗಳ ದರ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನರು ಖರೀದಿಯ ಭಾರಕ್ಕೆ ಸುಸ್ತು ಹೊಡೆದಿದ್ದಾರೆ. ಲಕ್ಷ್ಮೀ ಪೂಜೆಯಿಂದ ಲಕ್ಷ್ಮೀ ಮನೆಗೆ ಬರುತ್ತಾಳೋ ಇಲ್ಲವೋ ತಿಳಿಯದು. ಆದರೆ ಸಂಪತ್ತಿನ ಅಧಿದೇವತೆಯ ಹಬ್ಬವು ಗ್ರಾಹಕರಿಗೆ ದುಬಾರಿಯಾಗಿರುವುದಂತೂ ಸತ್ಯ. ಎಲ್ಲ ಹಬ್ಬಗಳಲ್ಲೂ ಬೆಲೆ ಏರಿಕೆ ಸಾಮಾನ್ಯವಾಗಿ ಬಿಟ್ಟಿದೆ.

ಕನಕಾಂಬರ ದರ ಕೆ.ಜಿ.ಗೆ 2000 ರೂಪಾಯಿ, ಮಲ್ಲಿಗೆ 1000 ರೂಪಾಯಿ , ಬಾಳೆಹಣ್ಣು ಕೆಜಿಗೆ ರೂ.150 ಇದೆ. ಹೂವುಗಳ ಪೈಕಿ ಕನಕಾಂಬರ ದರ ಕೆ.ಜಿ.ಗೆ ಮೂರು ದಿನಗಳ ಹಿಂದೆ ರೂ. 1,500 ಇದ್ದದ್ದು ಇಂದು ರೂ. 2000ದ ಗಡಿ ದಾಟಿದೆ. ಉಳಿದ ಹೂವುಗಳ ಬೆಲೆ ದುಪ್ಪಟ್ಟು ಆಗಿದೆ. ಮಲ್ಲಿಗೆ ರೂ. 500 ಇದ್ದದ್ದು 800-1000 ರೂ. ಗಡಿ ತಲುಪಿದೆ. ಸೇವಂತಿಗೆ ಹೂವಿಗೆ ಕೆಜಿಗೆ 400-500 ರೂಪಾಯಿ ತೆರಬೇಕು. ದವನ ಮತ್ತು ಇತರ ತರೇಹವಾರಿ ಬಣ್ಣ ಬಣ್ಣದ ಹೂವುಗಳ ಬೆಲೆ ಏರಿಕೆ ಕಂಡಿದೆ.

ಹಾರಗಳ ದರವೂ ಹೆಚ್ಚಳವಾಗಿದೆ. ಚಿಕ್ಕ ಹಾರದ ದರ 250-300 ರೂಪಾಯಿ ತಲುಪಿದೆ. ದೊಡ್ಡ ಹಾರದ ಬೆಲೆ ದೊಡ್ಡದಾಗಿದ್ದು 500ರಿಂದ ರೂ. 800ಕ್ಕೆ ಏರಿಕೆಯಾಗಿದೆ. ಹಬ್ಬಕ್ಕೆ ಒಂದೆರಡು ರೀತಿಯ ಹೂವು ಸಾಕಾಗುವುದಿಲ್ಲ. ಬಣ್ಣ ಬಣ್ಣದ ಹೂವುಗಳು ಬೇಕೆ ಬೇಕು. ಕಮಲದ ಹೂ ಬೆಲೆ ಕಡಿಮೆ ಇಲ್ಲ. ಜೋಡಿಗೆ 100-150 ರೂಪಾಯಿವರೆಗೆ ಏರಿಕೆ ಕಂಡಿದೆ. ಆಷಾಢ ಮಾಸ ಕಳೆದು ಅಧಿಕ ಮಾಸ ಬಂದಿದ್ದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಎರಡು ತಿಂಗಳಿಂದ ಹೂವಿಗೆ ಬೇಡಿಕೆ ಇರಲಿಲ್ಲ. ದರವೂ ಕೈಗೆಟಕುವಂತಿತ್ತು. ಹಬ್ಬದ ವಾರ ಆರಂಭವಾಗುತ್ತಿದ್ದಂತೆ, ಎರಡು ಮೂರು ದಿನಗಳಲ್ಲಿ ಬೆಲೆಯು ದುಪ್ಪಟ್ಟಾಗಿದೆ.

ಹಣ್ಣುಗಳ ಬೆಲೆ

ಇದರ ಜೊತೆಗೆ, ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಹಬ್ಬಗಳಲ್ಲಿ ಹೂವಿಗೆ ಇರುವಷ್ಟೇ ಮಹತ್ವ ಹಣ್ಣುಗಳಿಗೂ ಇದೆ. ಹಾಗಾಗಿ ಹಣ್ಣುಗಳಿಗೂ ಬೇಡಿಕೆ ಹೆಚ್ಚು. ಏಲಕ್ಕಿ ಬಾಳೆಹಣ್ಣು ರೂ. 120ರಿಂದ ರೂಪಾಯಿ 160ಕ್ಕೆ ಏರಿದೆ. ಪ್ರತಿ ಕೆ.ಜಿ.ಗೆ ರೂ.180 ಇದ್ದ ಸೇಬಿನ ದರ ರೂಪಾಯಿ 250ಕ್ಕೆ ಜಿಗಿದಿದೆ. ಎರಡು ಪೈನಾಪಲ್ ಹಣ್ಣಿನ ದರ 60ರಿಂದ 100 ರೂಪಾಯಿ ಆಗಿದೆ. ಸೀಬೇಹಣ್ಣು ಕೆಜಿಗೆ 100-120 ರೂ. ನಿಗದಿ ಮಾಡಲಾಗಿದೆ. ಹಬ್ಬಕ್ಕೂ ಮುನ್ನ ಕೆಜಿಗೆ 60 ರೂಪಾಯಿ ಮಾತ್ರವಿತ್ತು.

ಹಬ್ಬ ಅನಿವಾರ್ಯ. ಉಳ್ಳವರಿಗೆ ಸುಲಭ. ಆದರೆ ಮಧ್ಯಮ ಮತ್ತು ಬಡವರ್ಗದ ಜನರಿಗೆ ಕಷ್ಟವಾಗಿ ಪರಿಣಮಿಸಿದೆ. ಆದರೂ, ಹಬ್ಬದ ಅನಿವಾರ್ಯತೆಯಿಂದಾಗಿ ಖರೀದಿಯಿಂದ ಹಿಂದೆ ಸರಿಯವಂತಿಲ್ಲ. ವರ್ಷಕ್ಕೊಮ್ಮೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿ, ಸಂಪತ್ತಿಗಾಗಿ ಪ್ರಾರ್ಥಿಸುವುದನ್ನು ತಪ್ಪಿಸುವುದಿಲ್ಲ. ಯಾವಾಗಲೂ ಹೂವುಗಳಿಗೆ ಇದೇ ದರ ಇರುವುದಿಲ್ಲವಲ್ಲ. ಹಾಗಾಗಿ ಜನರೂ ಗೊಣಗಾಟ ನಡೆಸದೆ ಬೆಲೆ ಏರಿಕೆಗೆ ಒಗ್ಗಿಕೊಂಡಿದ್ದಾರೆ. ಹಬ್ಬದ ಸಂದರ್ಭಗಳಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂಬ ಕಾರಣಕ್ಕಾಗಿ ರೈತರು ಕೀಳದೆ ಹಾಗೆಯೇ ಬಿಟ್ಟಿರುತ್ತಾರೆ. ಕನಕಾಂಬರ, ಸೇವಂತಿಗೆ ಹಾಗೂ ಗುಲಾಬಿಯನ್ನು ಸರಿಯಾಗಿ ಹಬ್ಬದ ವೇಳೆಗೆ ಕುಯ್ಲಿಗೆ ಬರುವ ಹಾಗೆ ನಾಟಿ ಮಾಡುತ್ತಾರೆ.ಇದರಿಂದ ಬೇಡಿಕೆ ಹೆಚ್ಚಳದ ಜೊತೆಗೆ ದರವು ಏರಿಕೆಯಾಗುತ್ತದೆ. ಸ್ವಲ್ಪ ಹೊರೆ ಅನ್ನಿಸಿದರೂ, ಹಬ್ಬದ ನೆಪದಲ್ಲಿ ಗ್ರಾಹಕರು ಖರೀದಿಸುತ್ತಾರೆ.

ಇನ್ನು ರೈತರ ದೃಷ್ಟಿಯಿಂದ ನೋಡಿದರೆ ಒಮ್ಮೊಮ್ಮೆ ಅವರು ಕೇಳಿದಷ್ಟು ಕೊಡೋಣ ಎಂಬ ಭಾವನೆ ಮೂಡುವುದು ಸಹಜ. ಕೃಷಿ ಎನ್ನುವುದು ಸದಾ ಲಾಭವನ್ನೇ ತರುವುದಿಲ್ಲ. ನಷ್ಟವೂ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಮಾತ್ರ ನಿಶ್ಚಿತ ಲಾಭ ಕಾಣುತ್ತಾರೆ. ಮಾಗಡಿ ರಸ್ತೆ, ಮೈಸೂರು ರಸ್ತೆ, ದಾಸರಹಳ್ಳಿ ಹೀಗೆ ಬೆಂಗಳೂರಿನ ಹೊರ ವಲಯಗಳಲ್ಲಿ ರೈತರು ನೇರ ಮಾರಾಟ ಮಾಡುತ್ತಾರೆ. ಹಬ್ಬದ ದಿನಗಳಲ್ಲಿ ಮಾತ್ರ ಗ್ರಾಹಕರು ಕೊಂಡು ಕೊಳ್ಳುತ್ತಾರೆ. ಉಳಿದ ದಿನಗಳಲ್ಲಿ ಬೆಲೆ ಕೇಳಿ ಮುಂದಕ್ಕೆ ಹೋಗುತ್ತಾರೆ ಸರ್, ಹೂವು ಹೆಚ್ಚು ದಿನ ಇರುವುದಿಲ್ಲ. ಆದ್ದರಿಂದ ಪ್ರತಿದಿನ ಸಂಜೆಯಾದರೆ ಗ್ರಾಹಕರು ಕೇಳಿದಷ್ಟು ಬೆಲೆಗೆ ಕೊಟ್ಟು ಬಿಡುತ್ತೇವೆ. ಹಬ್ಬದ ದಿನಗಳಲ್ಲಿ ಈ ನಷ್ಟ ವನ್ನು ಸರಿದೂಗಿಸಿಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ.

ವರದಿ: ಎಚ್​ ಮಾರುತಿ

Whats_app_banner