ಬೆಂಗಳೂರು: ಮಾಜಿ ಸಚಿವ ವರ್ತೂರ್ ಪ್ರಕಾಶ್ ಆಪ್ತೆಯೆಂದು ಪರಿಚಯಿಸಿಕೊಂಡು ವಂಚನೆ ಪ್ರಕರಣ; ಆರೋಪಿ ಶ್ವೇತಾ ವಿರುದ್ಧ ಮತ್ತೊಂದು ಎಫ್ಐಆರ್
ವರ್ತೂರು ಪ್ರಕಾಶ್ ಆಪ್ತೆ ಎಂದು ಹೇಳಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಪಡೆದು ವಂಚಿಸಿದ್ದ ಆರೋಪಿ ಶ್ವೇತಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇತರೆ ಅಪರಾಧ ಸುದ್ದಿಗಳನ್ನು ನೋಡುವುದಾದರೆ ಒಂಟಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ಪರಿಚಯಿಸಿಕೊಂಡು ಚಿನ್ನಾಭರಣ ಅಂಗಡಿ ಮಾಲೀಕರಿಗೆ ವಂಚಿಸಿ ಬಂಧನಕ್ಕೊಳಗಾಗಿರುವ ಶ್ವೇತಾ ಗೌಡ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಭಾಶ್ ನಗರದ ಪ್ರಗತಿ ಜ್ಯೂಯಲರ್ಸ್ ಮಾಲೀಕ ಬಾಲರಾಜ್ ಸೇಟ್ ಅವರು ಶ್ವೇತಾಗೌಡ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಂಗಳೂರಿನ ಜ್ಯೂಯಲ್ಲರಿ ಮಳಿಗೆಯೊಂದರ ಮಾಲೀಕ ಸಂಜಯ್ ಬಾಫ್ನಾ ಅವರ ಮೂಲಕ ಶ್ವೇತಾಗೌಡ 6 ತಿಂಗಳ ಹಿಂದೆ ಪರಿಚಯವಾಗಿದ್ದರು. ತಾನು ಸಂಜಯ್ ಅವರ ಬಳಿ ಕೋಟಿ ಕೋಟಿ ವ್ಯವಹಾರ ಮಾಡುತ್ತಿದ್ದೇನೆ. ಹಳೆಯ ಆಂಟಿಕ್ ಚಿನ್ನಾಭರಣ ಮತ್ತು ವಜ್ರದ ಆಭರಣಗಳನ್ನು ಖರೀದಿ ಮಾಡುವುದಾಗಿ ಹೇಳಿ 250 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ತಯಾರಿಸಿಕೊಡುವಂತೆ ಆರ್ಡರ್ ನೀಡಿದ್ದಳು. ಅದರಂತೆ ಆಭರಣ ಮಾಡಿಕೊಟ್ಟಿದ್ದು ಈಗ ಹಣ ನೀಡದೆ ವಂಚಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2024ರ ಡಿಸೆಂಬರ್ 11 ರಂದು 285 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ಈಕೆಗೆ ಮಾರಾಟ ಮಾಡಲು ಬೆಂಗಳೂರಿಗೆ ನನ್ನ ಸಹೋದರನನ್ನು ಕಳುಹಿಸಿದ್ದೆ. ನನ್ನ ತಮ್ಮನನ್ನು ಯುಬಿ ಸಿಟಿ ಬಳಿಯ ಕಾಫಿ ಡೇ ನಲ್ಲಿ ಭೇಟಿ ಮಾಡಿದ್ದ ಶ್ವೇತಾಗೌಡ, ಈ ಆಂಟಿಕ್ ಆಭರಣಗಳನ್ನು ಖರೀದಿಸಿದ್ದರು. 5 ಲಕ್ಷದ ಎರಡು ಚೆಕ್ ಮತ್ತು 6 ಲಕ್ಷದ ಒಂದು ಚೆಕ್ ನೀಡಿ ಉಳಿದ 4.75 ಲಕ್ಷ ರೂ. ಹಣವನ್ನು ಆರ್ ಟಿಜಿಎಸ್ ಮಾಡುವುದಾಗಿ ಭರವಸೆ ನೀಡಿದ್ದರು. ಆಕೆ ಹೇಳಿದಂತೆ ಚೆಕ್ ಗಳನ್ನು ಡಿ.13ರಂದು ಬ್ಯಾಂಕ್ ನಲ್ಲಿ ಹಾಜರುಮಾಡಿದಾಗ ಅವು ಬೌನ್ಸ್ ಆಗಿದ್ದವು. ಇತ್ತ ಬಾಕಿ ಮೊತ್ತಕ್ಕೆ ಆರ್ ಟಿ ಜಿಎಸ್ ಮಾಡಿರಲಿಲ್ಲ. ಈ ಸಂಬಂಧ ಆಕೆಯನ್ನು ಸಂಪರ್ಕಿಸಿದಾಗ ಬ್ಯಾಂಕ್ ನಲ್ಲಿ ಸಮಸ್ಯೆಯಾಗಿದೆ ಎಂದು ಸಮಜಾಯಿಷಿ ನೀಡಿದ್ದಳು. ನಂತರ ವಿಚಾರಿಸಿದಾಗ ಶ್ವೇತಾಗೌಡ ಬಂಧನವಾಗಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಒಂಟಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಇಬ್ಬರ ಬಂಧನ
ಒಂಟಿ ಮಹಿಳೆಯರನ್ನು ಮಾತ್ರ ಗುರಿಯಾಗಿಸಿಕೊಂಡು ಚಿನ್ನದ ಸರ ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಂಪಿಗೆಹಳ್ಳಿ ಠಾಣೆ ಪೊಲೀಸರು, ಬಂಧಿತರಿಂದ 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಡಿ.ಜೆ ಹಳ್ಳಿ ನಿವಾಸಿಗಳಾದ ಆರೀಫ್ ಖಾನ್ ಮತ್ತು ಮುಷ್ತಾಕೀಬ್ ಪಾಷಾ ಬಂಧಿತ ಆರೋಪಿಗಳು. ಇವರಿಂದ 47 ಗ್ರಾಂ ತೂಕದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ನ.22ರಂದು ಅಗ್ರಹಾರ ಬಡಾವಣೆ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ್ದ ಆರೋಪಿಗಳು ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸಾರಾಯಿಪಾಳ್ಯದಲ್ಲಿ ಇವರನ್ನು ಬಂಧಿಸಲಾಗಿದೆ. ಸರ ಕಿತ್ತುಕೊಂಡು ಪರಾರಿಯಾಗಿದ್ದು ತಾವೇ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಡ್ರಗ್ ಗೆ ದಾಸರಾಗಿದ್ದು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸರಗಳ್ಳತನಕ್ಕೆ ಇಳಿದಿದ್ದರು. ಇವರ ಬಂಧನದಿಂದ ಸಂಪಿಗೆಹಳ್ಳಿ ಮತ್ತು ಸಂಜಯ ನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಸರಗಳ್ಳತನದ ಪ್ರಕರಣಗಳು ಪತ್ತೆಯಾಗಿವೆ.
ಮಹಿಳೆಯನ್ನು ಬೆದರಿಸಿ ಮಾಂಗಲ್ಯಸರ ಕಳವು ಮಾಡಿದ್ದ ಇಬ್ಬರು ಬಾಲಕರು ಸೇರಿ ಮೂವರು ಅರೆಸ್ಟ್
ಮಹಿಳೆಯೊಬ್ಬರನ್ನು ಚಾಕುವಿನಿಂದ ಬೆದರಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಬಾಲಕರು ಸೇರಿದಂತೆ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಾರಾಯಣಹಳ್ಳಿಯ ಬಾಲಾಜಿ ಬಂಧಿತ ಆರೋಪಿ. ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಸರ್ಕಾರಿ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ 9.50 ಲಕ್ಷ ಮೌಲ್ಯದ 120 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತರಬನಹಳ್ಳಿಯ ತನ್ನ ಮನೆಯ ಆವರಣದಲ್ಲಿ ಮಹಿಳೆ ಚೀಲಕ್ಕೆ ರಾಗಿ ತುಂಬುತ್ತಿದ್ದರು. ಆಗ ಆರೋಪಿಗಳು ಬಲವಂತವಾಗಿ ಆಕೆಯನ್ನು ಮನೆಯೊಳಗೆ ಎಳೆದೊಯ್ದು ಬೆದರಿಸಿ, ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈಗಾಗಲೇ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಾಲಾಜಿ ತನ್ನ ಸಂಬಂಧಿಕರಾದ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರನ್ನು ಜತೆಯಲ್ಲಿ ಸೇರಿಸಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.