Vasishta co op bank latest news: ವಸಿಷ್ಠ ಸಹಕಾರಿ ಹಗರಣ; ಸಚಿವರ ಕಾಲಿಗೆ ಬೀಳ್ತೇನೆ ಸಿಬಿಐಗೆ ವಹಿಸಿ ಎಂದ ಯು.ಬಿ.ವೆಂಕಟೇಶ್
Vasishta co op bank latest news: ಬೆಂಗಳೂರಿನ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‌ನ ಹಗರಣವು 280 ಕೋಟಿ ರೂಪಾಯಿಯದ್ದು. ಇದನ್ನು ಯಾಕೆ ಸಿಬಿಐಗೆ ವಹಿಸುವುದಿಲ್ಲ ಎಂದು ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿಐಡಿ ತನಿಖೆ ವಿಫಲವಾದಲ್ಲಿ ಸಿಬಿಐ ತನಿಖೆಗೆ ಸರ್ಕಾರ ಸಿದ್ಧ ಎಂದರು.
ಬೆಳಗಾವಿ: ಬೆಂಗಳೂರಿನ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ನ ಹಗರಣ ಸಂಬಂಧ ಪ್ರಾಧಿಕಾರ ರಚನೆ ಜತೆಗೆ ಸಿಐಡಿ ತನಿಖೆ ನಡೆಯುತ್ತಿದೆ. ಒಂದೊಮ್ಮೆ ಅದು ವಿಫಲವಾದಲ್ಲಿ ಮಾತ್ರವೇ ಸಿಬಿಐ ತನಿಖೆಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಶೇಖರ್, ಈಗಾಗಲೇ ಸಾಲ ಪಡೆದವರು ಹಾಗೂ ಹಗರಣದ ಸಂಚುಕೋರರಿಗೆ ಸಂಬಂಧಿಸಿದ 10 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದನ್ನು ಪ್ರಾಧಿಕಾರದ ವ್ಯಾಪ್ತಿಗೆ ತಂದು ಪರಿಹಾರ ಒದಗಿಸುವ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ವಿವರಿಸಿದರು.
ಸಚಿವರ ಉತ್ತರಕ್ಕೆ ಯು.ಬಿ.ವೆಂಕಟೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಪ್ರತಿ ಬಾರಿ ಇದೇ ಮಾದರಿಯ ಉತ್ತರ ನೀಡುತ್ತಿದೆ. ಆದರೆ, ಪ್ರಭಾವಿಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಹೀಗಾಗಿ ಗಂಭೀರ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಪಟ್ಟು ಹಿಡಿದರು.
ವೆಂಕಟೇಶ್ ಮತ್ತು ಸೋಮಶೇಖರ್ ನಡುವೆ ವಾಕ್ಸಮರ
ಇದೇ ವಿಚಾರವಾಗಿ ಸದಸ್ಯ ಯು.ಬಿ.ವೆಂಕಟೇಶ್ ಮತ್ತು ಸಚಿವ ಸೋಮಶೇಖರ್ ನಡುವೆ ವಾಕ್ಸಮರ ನಡೆಯಿತು. ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಈ ಬಿರುಸಿನ ವಾಕ್ಸಮರ ಭಾಗವಾದರು.
ಸಚಿವ ಸೋಮಶೇಖರ್ ಅವರ ಸ್ಪಷ್ಟೀಕರಣದ ಮಾತುಗಳಿಂದ ತೀವ್ರ ಅಸಮಾಧಾನಗೊಂಡ ಯು.ಬಿ.ವೆಂಕಟೇಶ್, ಪ್ರಭಾವಿ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಸಚಿವರು ಮತ್ತು ಸರ್ಕಾರ ಮುಂದಾಗಿದೆ. ಸಚಿವರ ಕಾಲಿಗೆ ಬೀಳುತ್ತೇನೆ, ದಯವಿಟ್ಟು ಪ್ರಕರಣ ಸಿಬಿಐಗೆ ವಹಿಸಿ ಎಂದು ಹೇಳಿದರು.
ಕೂಡಲೇ ಮಾತಿಗಿಳಿದ ಬಿ.ಕೆ.ಹರಿಪ್ರಸಾದ್, ಅವರ ಕಾಲಿಗ್ಯಾಕೆ ಬೀಳುತ್ತೀರಿ? ಅದು ಸರ್ಕಾರದ ಜವಾಬ್ದಾರಿ. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಭಾವಿಗಳು ಹೊರಗಡೆ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಶರವಣ, ಇಂತಹ ಹಗರಣಗಳಿಂದ ಜನರು ಬೀದಿ ಪಾಲಾಗುತ್ತಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸಚಿವರು, ನಾವು ಕಾನೂನು ಪ್ರಕಾರವೇ ತನಿಖೆ ಮಾಡಬೇಕಾಗುತ್ತದೆ, ಸಿಓಡಿ ನೀಡಿದ್ದೇವೆ, ಏಕಾಏಕಿ ಹೋಗಿ ನೇಣಿಗೆ ಹಾಕಲು ಆಗತ್ತಾ ಎಂದು ಮರುಪ್ರಶ್ನಿಸಿದರು.
ಆಗ ಸಚಿವ ಸೋಮಶೇಖರ್, ಈ ಸಂಬಂಧ ಸದನ ಮುಗಿದ ನಂತರ, ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಜತೆಗೆ, ಸಿಐಡಿ ತನಿಖೆ ಒಳ್ಳೆಯ ರೀತಿ ನಡೆಯುತ್ತಿದೆ. ಆರೋಪಿಗಳ ಚಲನವಲನ ಮೇಲೆ ನಿಗಾ ಇಡುವ ಜೊತೆಗೆ ಅವರ ಆಸ್ತಿ ಪಾಸ್ತಿ ಜಪ್ತಿ ಮಾಡಲಾಗಿದೆ. ಒಂದು ವೇಳೆ ವಿಫಲವಾದಲ್ಲಿ ಈ ತನಿಖೆಯನ್ನು ಸಿಬಿಐಗೆ ವಹಿಸಲು ಸರ್ಕಾರ ಸಿದ್ಧವಿದೆ ಎಂದು ಮತ್ತೊಮ್ಮೆ ಹೇಳಿದರು.
280 ಕೋಟಿ ರೂಪಾಯಿ ಹಗರಣ ಸಿಬಿಐಗೆ ಒಪ್ಪಿಸಲು ಮೀನ ಮೇಷ ಯಾಕೆ?
ಬೆಂಗಳೂರಿನ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‌ನ ಹಗರಣ ಸಿಐಡಿಗೆ ವಹಿಸಿ ಸೀಜ್ ಮಾಡಲು ಚಿಂತನೆ ಮಾಡಿದ್ದೇವೆ. ಈಗಾಗಲೇ 27 ಕೋಟಿ ರೂಪಾಯಿ ರಿಕವರಿ ಆಗಿದೆ. ಇದನ್ನು 729 ಗ್ರಾಹಕರಿಗೆ ಹಿಂದಿರುಗಿಸಲಾಗಿದೆ. ಸಕ್ಷಮ ಪ್ರಾಧಿಕಾರ ರಚನೆ ಮಾಡಿ, ಆಡಿಟ್ ಮರುಪರಿಶೀಲನೆ ಮಾಡಲು ಹೊರಟಿದ್ದೇವ ಎಂದು ಸಚಿವ ಸೋಮಶೇಖರ್ ಹೇಳಿದರು.
ಯು.ಬಿ.ವೆಂಕಟೇಶ್ ಇದಕ್ಕೆ ಪ್ರತಿಕ್ರಿಯಿಸಿ, ತಾತ್ಕಾಲಿಕ ಲೆಕ್ಕದ ಪ್ರಕಾರ, ವಸಿಷ್ಠ ಸೊಸೈಟಿಯಿಂದ 280 ಕೋಟಿ ರೂಪಾಯಿ ಅನ್ಯಾಯ ಆಗಿದೆ ಎನ್ನುವ ಮಾಹಿತಿ ಇದೆ. ಅಕ್ರಮದಲ್ಲಿ ಭಾಗಿಯಾದವರ ಸುಸ್ತಿದಾರರ ಲಿಸ್ಟ್ ಯಾಕೆ ಸರ್ಕಾರ ಘೋಷಣೆ ಮಾಡುತ್ತಿಲ್ಲ. 280 ಕೋಟಿ ಹಗರಣ ಯಾಕೆ ಸರ್ಕಾರ ಸಿಬಿಐಗೆ ಕೊಡುವುದಿಲ್ಲ? 12 ಕೋಟಿ ರೂಪಾಯಿ ಹಗರಣವನ್ನು ಸಿಬಿಐಗೆ ಕೊಡುತ್ತೀರಿ, ಇಷ್ಟು ದೊಡ್ಡ ಹಗರಣದ್ದು ಯಾಕೆ ಸಿಬಿಐಗೆ ಕೊಡಲ್ಲ? ಯಾವ ಪ್ರಭಾವಿಗಳು ಸರ್ಕಾರದ ಕೈ ಕಟ್ಟಿ ಹಾಕಿದ್ದಾರೆ ಎಂದು ಪ್ರಶ್ನಿಸಿದರು.