Vegetable Price: ತರಕಾರಿ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಹರ್ಷ, ರೈತನಿಗೆ ಬರೆ; ಏಪ್ರಿಲ್‌ನಲ್ಲಿ ಮತ್ತೆ ಬೆಲೆ ಏರಿಕೆ ಸಂಭವ
Vegetable Prices: ಯುಗಾದಿ ಹಬ್ಬವೂ ಹತ್ತಿರವಾಗುತ್ತಿದ್ದು, ತರಕಾರಿ ಬೆಲೆ ಇಳಿದಿರುವುದು ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದೆ. ಜತೆಗೆ ಬೇಳೆ ಮತ್ತು ಅಡುಗೆ ಎಣ್ಣೆಯ ಬೆಲೆಯೂ ಇಳಿದಿದೆ. ತರಕಾರಿ ಬೆಲೆ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಕಡಿಮೆಯಾಗಿದೆ.

ಬೆಂಗಳೂರು: ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ತರಕಾರಿಗಳ ಬೆಲೆ ಇಳಿದಿರುವುದು ಒಂದಿಷ್ಟು ಖುಷಿ ನೀಡಿದೆ. ಯುಗಾದಿ ಹಬ್ಬವೂ ಹತ್ತಿರವಾಗುತ್ತಿದ್ದು, ತರಕಾರಿ ಬೆಲೆ ಇಳಿದಿರುವುದು ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದೆ. ಜತೆಗೆ ಬೇಳೆ ಮತ್ತು ಅಡುಗೆ ಎಣ್ಣೆಯ ಬೆಲೆಯೂ ಇಳಿದಿದೆ. ತರಕಾರಿ ಬೆಲೆ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಕಡಿಮೆಯಾಗಿದೆ. ಅದರಲ್ಲೂ ಈರುಳ್ಳಿ ಮತ್ತು ಟೊಮೆಟೊ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಬೆಲೆ ಕುಸಿತಕ್ಕೆ ಕಾರಣಗಳನ್ನು ಹುಡುಕಿ ಹೊರಟಾಗ ತೋಟಗಾರಿಕೆ ತಜ್ಞರ ಪ್ರಕಾರ ಬೇಡಿಕೆಗಿಂತಲೂ ಹೆಚ್ಚಾಗಿ ತರಕಾರಿ ಭಾರಿ ಪ್ರಮಾಣದಲ್ಲಿ ಸರಬರಾಜಾಗುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣ ಎನ್ನುತ್ತಾರೆ.
ಉತ್ತಮ ಮಳೆಯಿಂದ ಹೆಚ್ಚಿನ ಇಳುವರಿ
ಸಗಟು ಮತ್ತು ಚಿಲ್ಲರೆ ಬೆಲೆ ಇಳಿದಿದೆ. ಉದಾಹರಣೆಗೆ ಕೆಲವು ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆಜಿಗೆ ಶತಕದ ಗಡಿ ಸಮೀಪಿಸಿದ್ದು ಈಗ 30-40 ರೂ.ಗೆ ಕುಸಿದಿದೆ. ಟೊಮೆಟೊ ಬೆಲೆ 14-16 ರೂಗಳಿಗೆ ಕುಸಿದಿರುವುದನ್ನು ಕಾಣಬಹುದಾಗಿದೆ. ಹಾಗಾದರೆ ಮಾರುಕಟ್ಟೆಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗಲು ಕಾರಣಗಳಿವೆ. ಈ ವರ್ಷ ಉತ್ತಮ ಇಳುವರಿ ಬಂದಿದೆ. ಉತ್ತಮ ಮಳೆಯಾಗಿದ್ದರಿಂದ ನವಂಬರ್ ವೇಳೆಗೆ ನೀರಿನ ಎಲ್ಲ ಮೂಲಗಳು ಭರ್ತಿಯಾಗಿದ್ದವು. ಆಗ ಮಾಡಿದ್ದ ಬಿತ್ತನೆಗೆ ಈಗ ಫಸಲು ಬಂದಿದೆ.
ವಾರದ ಹಿಂದೆ ಎಂಟತ್ತು ವಿಧದ ತರಕಾರಿ ಪ್ರತಿ ಕೆಜಿಗೆ 20-30 ರೂಗಳಿಗೆ ಮಾರಾಟವಾಗುತ್ತಿತ್ತು. ಇದರಲ್ಲಿ ಕ್ಯಾರಟ್, ಕೋಸು, ಬದನೆಕಾಯಿ ಕುಂಬಳಕಾಯಿ, ಮೂಲಂಗಿ, ಸೋರೆಕಾಯಿ ಸೇರಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಬೆಲೆ ಏರಿಕೆ ತುಸು ಏರಿಕೆ ಕಂಡಿದೆ. ಬೇಸಿಗೆ ಆರಂಭವಾಗುವುದರಿಂದ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ತರಕಾರಿ ಬೆಲೆ ಏರಿಕೆಯಾಗುತ್ತದೆ. ಆದರೆ ಈ ವರ್ಷ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ಏಪ್ರಿಲ್‌ನಲ್ಲಿ ಏರಿಕೆ ಬಿಸಿ
ಬೆಲೆ ಕುಸಿತದಿಂದ ಗ್ರಾಹಕರೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಮೊದಲೆಲ್ಲಾ 1000 ರೂ ಬೇಕಾಗಿತ್ತು. ಈಗ ಅಷ್ಟೇ ತರಕಾರಿಯನ್ನು ರೂ. 500ಕ್ಕೆ ಕೊಂಡೊಯ್ಯುತ್ತಿರುವುದಾಗಿ ಯಮುನಾಬಾಯಿ ಹೇಳುತ್ತಾರೆ. ತೋಟಗಾರಿಕೆ ತಜ್ಞರು ಈ ಬೆಲೆ ಇಳಿಕೆ ತಾತ್ಕಾಲಿಕ ಎನ್ನುತ್ತಾರೆ. ಕೆರೆಕುಂಟೆ ಬಾವಿಗಳು ಬತ್ತುತ್ತಿದ್ದು, ಏಪ್ರಿಲ್ ನಲ್ಲಿ ಬೆಲೆ ಗಗನಕ್ಕೇರುವುದು ಖಚಿತ ಎನ್ನುತ್ತಾರೆ.
ಹಾಗೆಂದು ರೈತರು ಕೈತುಂಬಾ ಸಂಪಾದಿಸುತ್ತಿದ್ದಾರೆ ಎಂದು ಅಂದುಕೊಳ್ಳಬೇಕಿಲ್ಲ. ಯಾವುದೇ ಬಂಡವಾಳ ಹೂಡದೇ ಮಧ್ಯವರ್ತಿಗಳು ಮಾತ್ರ ಕೈತುಂಬ ಸಂಪಾದಿಸುತ್ತಿದ್ದಾರೆ. ಕೂಲಿ ಸಾಗಣೆ ವೆಚ್ಚವೂ ದಕ್ಕುವುದಿಲ್ಲ ಎಂದು ರೈತರು ಟೊಮೆಟೊ ಬಿಡಿಸದೆ ಹೊಲದಲ್ಲೇ ಬಿಡುತ್ತಿದ್ದಾರೆ. ಆದರೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಟೊಮೆಟೊ 14-16 ರೂಗಳಿಗೆ ಮಾರಾಟವಾಗುತ್ತಿದೆ. ಇದರಲ್ಲಿ ಅರ್ಧ ಬೆಲೆಯೂ ರೈತನಿಗೆ ದಕ್ಕುತ್ತಿಲ್ಲ ಎನ್ನುವುದು ವಿಪರ್ಯಾವೇ ಸರಿ!
ತಮಿಳುನಾಡು, ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಂದ ತರಕಾರಿ ಪೂರೈಕೆಯಾಗುತ್ತಿರುವುದೂ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಯುಗಾದಿ ನಂತರ ತರಕಾರಿ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ದಾಸನಪುರ ಉಪ ಮಾರುಕಟ್ಟೆಯ ಸಗಟು ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಹಾಪ್‌ಕಾಮ್ಸ್‌ನಲ್ಲಿ ತರಕಾರಿ ದರಗಳು
ಬೀನ್ಸ್-120 ರೂ. ಬದನೆಕಾಯಿ- 33 ರೂ. ಬದನೆಕಾಯಿ (ಗುಂಡು) - 25 ರೂ. ದಪ್ಪ ಮೆಣಸಿನಕಾಯಿ-80 ರೂ. ಗೋರಿಕಾಯಿ-50 ರೂ. ಮೂಲಂಗಿ-24 ರೂ. ಬೀಟ್‌ರೂಟ್ - 45 ರೂ, ಹಾಗಲಕಾಯಿ-65 ರೂ, ಸೋರೆಕಾಯಿ-30 ರೂ, ಕೋಸು-40 ರೂ, ಕಾಲಿಫ್ಲವರ್-30ರೂ, ಸೌತೆಕಾಯಿ-32ರೂ, ನುಗ್ಗೆಕಾಯಿ-60ರೂ, ಶುಂಠಿ-45ರೂ, ಬೆಂಡೆಕಾಯಿ-60ರೂ, ಗೆಡ್ಡೆಕೋಸು-25 ರೂ. ಕ್ಯಾರೆಟ್-35 ರೂ. ಟೊಮೆಟೊ-16 ರೂ. ಸೋರೆಕಾಯಿ– 26ರೂ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ವರದಿ: ಮಾರುತಿ ಎಚ್
