ಬೆಂಗಳೂರು: ಪ್ರತಿದಿನ ಮನೆಯ ಬೀದಿ ಗುಡಿಸಿ ಸ್ವಚ್ಛಗೊಳಿಸುವ 83 ವರ್ಷದ ತಾತ; ಬಿಬಿಎಂಪಿಗೆ ತ್ಯಾಜ್ಯ ನಿರ್ವಹಣೆಯ ಪಾಠ
ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಬಿಬಿಎಂಪಿ ಮಾಡುತ್ತಿರುವ ಪ್ರಯತ್ನ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಸೂರ್ಯ ನಾರಾಯಣ್ ಎಂಬ 83 ವರ್ಷ ವಯಸ್ಸಿನ ಹಿರಿಯ ನಾಗರಿಕರೊಬ್ಬರು, ತಾವೇ ಖುದ್ದು ತಮ್ಮ ಮನೆಯ ಬೀದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ದಿನಕಳೆದಂತೆ ಉದ್ಯಾನ ನಗರಿ ಬೆಂಗಳೂರು ಬೆಳೆಯುತ್ತಿದೆ. ಅದರೊಂದಿಗೆ ಸ್ವಚ್ಛತೆಯ ಸವಾಲು ಕೂಡಾ ಹೆಚ್ಚುತ್ತಿದೆ. ಈ ನಡುವೆ ಬಿಬಿಎಂಪಿ ಸಿಬ್ಬಂದಿ ನಗರದ ಜನವಸತಿ ಪ್ರದೇಶಗಳಲ್ಲಿ ನಿತ್ಯ ಸ್ವಚ್ಛತೆ ಮಾಡುವುದು ಕಷ್ಟ ಎಂಬಂತಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನ ಹೃದಯಭಾಗದಲ್ಲಿ 83 ವರ್ಷದ ಸೂರ್ಯ ನಾರಾಯಣ್ ಎಂಬವರು, ಖುದ್ದು ಸ್ವಚ್ಛತೆ ಕೆಲಸಕ್ಕೆ ಇಳಿದಿದ್ದಾರೆ. ಬಿಬಿಎಂಪಿಯವರಿಗೆ ಕಾಯಲು ಆಗಲ್ಲ ಎನ್ನುವ ಅವರು, ಮಹಾನಗರ ಪಾಲಿಕೆ ಎಲ್ಲಿ ಎಡವುತ್ತಿದೆ ಎಂಬುದನ್ನು ತೋರಿಸಿದ್ದಾರೆ.
ಹಲವು ವರ್ಷಗಳಿಂದ ಸೂರ್ಯ ನಾರಾಯಣ್ ಮತ್ತು ಅವರ ಪತ್ನಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ಈ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಬಿಬಿಎಂಪಿ ಬೀದಿಗಳನ್ನು ಸ್ವಚ್ಛವಾಗಿಡಲು ವಿಫಲವಾಗಿರುವ ಕಾರಣ, ನಾರಾಯಣ್ ಅವರೇ ಬಿಬಿಎಂಪಿಯವರು ಮಾಡಬೇಕಿದ್ದ ಕೆಲಸವನ್ನು ತಮ್ಮ ಸ್ವಇಚ್ಛೆಯಿಂದ ಮಾಡುತ್ತಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳುವವರೆಗೆ ಕಾಯುವ ಬದಲು, ತಾವೇ ಖುದ್ದು ಬೀದಿ ಬದಿಯ ಕಸವನ್ನು ಗುಡಿಸಿ ಸ್ವಚ್ಛಗೊಳಿಸಲು ಆರಂಭಿಸಿದ್ದಾರೆ. ಅಲ್ಲದೆ ಕಸವನ್ನೆಲ್ಲಾ ಸಂಗ್ರಹಿಸಿ ಸರಿಯಾದ ಕ್ರಮದಲ್ಲಿ ಅದನ್ನು ವಿಲೇವಾರಿ ಮಾಡುತ್ತಿದ್ದಾರೆ. ಇದೇ ವೇಳೆ ನೆರೆಹೊರೆಯವರು ಕೂಡಾ ತಮ್ಮ ಮನೆ ಮುಂದಿನ ಬೀದಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರೇರಣೆಯಾಗಿದ್ದಾರೆ.
83 ವರ್ಷದ ನಾರಾಯಣ್ ಅವರು, ಶ್ರದ್ಧೆಯಿಂದ ರಸ್ತೆಯನ್ನು ಗುಡಿಸುವ ಜೊತೆಗೆ ಚರಂಡಿಗಳನ್ನು ಕಸದಿಂದ ಮುಕ್ತಗೊಳಿಸುತ್ತಿದ್ದಾರೆ. ಪ್ರತಿನಿತ್ಯ ಅವರು ಸ್ವಚ್ಛತೆ ಕಾರ್ಯ ಮಾಡುತ್ತಾರೆ ಎನ್ನುವ ಕುರಿತು ಬೆಂಗಳೂರು ಮಿರರ್ ವರದಿ ಮಾಡಿದೆ. ಹೀಗಾಗಿ ಅವರು ವಾಸಿಸುವ ಮನೆಯ ಬೀದಿ ತುಂಬಾ ಸ್ವಚ್ಛವಾಗಿದೆ.
ಇಲ್ಲಿದೆ ವಿಡಿಯೋ
ತಮ್ಮ ಸ್ವಚ್ಛತಾ ಕೆಲಸದ ಬಗ್ಗೆ ಪ್ರತಿಕ್ರಿಯಿಸಿರುವ ನಾರಾಯಣ್, “ಪ್ರತಿನಿತ್ಯ ನಾನೇ ಸ್ವಚ್ಛಗೊಳಿಸುತ್ತೇನೆ. ಬಿಬಿಎಂಪಿ ಕಾರ್ಮಿಕರು ಈ ಪ್ರದೇಶವನ್ನು ಸ್ವಚ್ಛಗೊಳಿಸಲು ಯಾವಾಗ ಬರುತ್ತಾರೆ ಎಂಬುದೇ ಗೊತ್ತಾಗಲ್ಲ. ಹೀಗಾಗಿ ನಾವೇ ಆಗಾಗಾ ಸ್ವಚ್ಛಗೊಳಿಸುವುದು ಅಗತ್ಯವಾಗುತ್ತದೆ. ನಾವು ಸುಮ್ಮನೆ ಬಿಬಿಎಂಪಿಗೆ ತೆರಿಗೆ ಪಾವತಿಸುತ್ತಿದ್ದೇವೆ,” ಎಂದು ಹೇಳಿದ್ದಾರೆ.
ಸೂರ್ಯ ನಾರಾಯಣ್ ಅವರ ವಯಸ್ಸು 83. ನಿವೃತ್ತಿ ಜೀವನವನ್ನು ಕುಳಿತು ಆನಂದಿಸಬಹುದಾದ ಸಮಯದಲ್ಲೂ ಅವರು, ಶ್ರದ್ಧೆಯಿಂದ ರಸ್ತೆ ಬದಿ ಸ್ವಚ್ಛತೆ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ವಿಶ್ರಾಂತಿ ಪಡೆಯಬೇಕೆಂದು ಅನೇಕರು ನಿರೀಕ್ಷಿಸುತ್ತಿದ್ದರೆ, ನಾರಾಯಣ್ ಅವರ ಬದ್ಧತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೀದಿಯಲ್ಲಿ ಕಸದ ರೂಪದಲ್ಲಿ ಸಂಗ್ರಹವಾಗುವ ಎಲೆಗಳನ್ನು ತಮ್ಮ ಕೈತೋಟಕ್ಕೆ ಗೊಬ್ಬರ ತಯಾರಿಸಲು ಬಳಸುತ್ತಾರೆ.
ನೆಟ್ಟಿಗರ ಪ್ರತಿಕ್ರಿಯೆ
ಸೂರ್ಯನಾರಾಯಣ್ ಅವರ ಸ್ವಚ್ಛತೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಬಿಬಿಎಂಪಿಯ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಹತಾಶೆ ವ್ಯಕ್ತಪಡಿಸಿದ್ದಾರೆ. “ಇದು ಹೆಮ್ಮೆಪಡುವ ವಿಷಯವಲ್ಲ. ಬೀದಿಗಳನ್ನು ಸ್ವಚ್ಛಗೊಳಿಸುವುದು ಈ ಹಿರಿಯ ತಾತನ ಕೆಲಸವಲ್ಲ” ಎಂದು ವ್ಯಕ್ತಿಯೊಬ್ಬರು ಸರ್ಕಾರದ ವೈಫಲ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.