Siddeshwara Swamiji: ಸಿದ್ದೇಶ್ವರ ಶ್ರೀಗೆ ಪ್ರಧಾನಿ ಮೋದಿ ನಮನ: ವಿಜಯಪುರದಲ್ಲಿ ಗುರುನಮನ ಸಲ್ಲಿಸಿದ ಸಿಎಂ, ಭಕ್ತಗಣದಿಂದ ತುಂಬಿದ ಆಶ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  Siddeshwara Swamiji: ಸಿದ್ದೇಶ್ವರ ಶ್ರೀಗೆ ಪ್ರಧಾನಿ ಮೋದಿ ನಮನ: ವಿಜಯಪುರದಲ್ಲಿ ಗುರುನಮನ ಸಲ್ಲಿಸಿದ ಸಿಎಂ, ಭಕ್ತಗಣದಿಂದ ತುಂಬಿದ ಆಶ್ರಮ

Siddeshwara Swamiji: ಸಿದ್ದೇಶ್ವರ ಶ್ರೀಗೆ ಪ್ರಧಾನಿ ಮೋದಿ ನಮನ: ವಿಜಯಪುರದಲ್ಲಿ ಗುರುನಮನ ಸಲ್ಲಿಸಿದ ಸಿಎಂ, ಭಕ್ತಗಣದಿಂದ ತುಂಬಿದ ಆಶ್ರಮ

ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ನಮನ ಎಂದು ವಿಜಯಪುರದಲ್ಲಿ ನಡೆದ ಗುರುನಮನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣನೆ ಮಾಡಿದ್ದಾರೆ.

ವಿಜಯಪುರದಲ್ಲಿ ನಡೆದ ಸಿದ್ದೇಶ್ವರ ಶ್ರೀ ಗುರುನಮನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ವಿಜಯಪುರದಲ್ಲಿ ನಡೆದ ಸಿದ್ದೇಶ್ವರ ಶ್ರೀ ಗುರುನಮನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ವಿಜಯಪುರ: ವೇದ, ಉಪನಿಷತ್ತು, ನಿಸರ್ಗ, ಬೌದ್ಧ ಸಾಹಿತ್ಯ, ಜಾಗತಿಕ ಶ್ರೇಷ್ಠ ‌ತತ್ವ, ವಚನ ಸಾಹಿತ್ಯ ಹೀಗೆ ಬದುಕು ‌ಆದರ್ಶಮಯವಾಗಿ ರೂಪುಗೊಳ್ಳಲು ಪ್ರವಚನದ ಮೂಲಕ ದಾರಿ ತೋರಿದ‌ ಗುರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಲಕ್ಷಾಂತರ ಭಕ್ತ ವರ್ಗ ಭಕ್ತಿಭಾವದಿಂದ ನುಡಿನಮನ ಅರ್ಪಿಸಿದರು.ಎತ್ತ ನೋಡಿದರೂ ಭಕ್ತರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ದೃಶ್ಯ ಗೋಚರಿಸಿತು.

ವರ್ಷದ ಹಿಂದೆ ನಿಧನರಾದ ನಿಜ ಸಂತ, ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರೆ ಸ್ವಾಮೀಜಿ ಅವರ ಗುರುನಮನ ಕಾರ್ಯಕ್ರಮ ವಿಜಯಪುರದಲ್ಲಿ ಮಂಗಳವಾರ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನಮನದ ಸಂದೇಶ ರವಾನಿಸಿದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುನಮನದಲ್ಲಿ ಭಾಗಿಯಾದರು. ಖ್ಯಾತ ಯೋಗಗುರು ಬಾಬಾ ರಾಮದೇವ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಗಳ ಆಧ್ಯಾತ್ಮಿಕ ಕೊಡುಗೆಗಳನ್ನು ಸ್ಮರಿಸಿದರು.

ಬಸವಾದಿ ಶರಣರ ಅನುಯಾಯಿ

ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದೇಶ್ವರ ಸ್ವಾಮೀಜಿಗಳಿಗೆ ಗುರುನಮನ ಸಲ್ಲಿಸಿದರು.

ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ ಸಲ್ಲಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ನನಗೆ ವಿಶೇಷ ಗೌರವ ಮತ್ತು ಪ್ರೀತಿ. ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು ಎಂದು ತಮ್ಮ ಒಳಹನ್ನು ತೆರೆದಿಟ್ಟರು.

ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು ಎಂದು ವಿವರಿಸಿದರು.

ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು ಎನ್ನುವುದು ಸಿದ್ದೇಶ್ವರ ಸ್ವಾಮಿಗಳ ಆಶಯವಾಗಿತ್ತು. ಸಮಾಜದ ಜಾತಿ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದ ದಾರ್ಶಕನಿಕರು. ಸಮಾಜದಲ್ಲಿ ದೂರದರ್ಶಿತ್ವ ಇಟ್ಟುಕೊಂಡು ಮನುಷ್ಯ ಸಮಾಜವನ್ನು ತಿದ್ದುವ ಗುರಿ ಹೊಂದಿದ್ದ ಕಾರಣಕ್ಕೇ ಇವರು ದಾರ್ಶನಿಕರಾಗಿದ್ದರು ಎಂದು ವಿವರಿಸಿದರು.

ಸ್ಮರಣಾರ್ಥ ಕಾರ್ಯ

ಜಿಲ್ಲೆಯ ಸಚಿವರು ಮತ್ತು ಸಂತರು ಹೇಳಿದ ರೀತಿಯಲ್ಲಿ ಸಿದ್ದೇಶ್ವರ ಶ್ರೀಗಳ ಬದುಕಿನ ಸಂದೇಶ ಮತ್ತು ಆದರ್ಶಗಳನ್ನು ಕಾಪಾಡುವ ಸ್ಮರಣಾರ್ಥ ಕಾರ್ಯ ಮಾಡಲು ಸರ್ಕಾರ ಸಿದ್ದವಿದೆ ಎಂದು ಸಿಎಂ ಭರವಸೆ ನೀಡಿದರು.

ಸಿದ್ದಗಿರಿ ಕನ್ನೇರಿಮಠ ಕೊಲ್ಲಾಪುರದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು, ಸಿರಿಗಿರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿಗಳು ಮತ್ತು ಹಲವು ಸಿದ್ದ ಸಂತರ ಸಾನ್ನಿಧ್ಯದಲ್ಲಿ ಲಕ್ಷಾಂತರ ಅನುಯಾಯಿಗಳ ಸಮ್ಮುಖದಲ್ಲಿ ಗುರುನಮನ ಕಾರ್ಯಕ್ರಮ ಉದ್ಘಾಟನೆಯಾಯಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮತ್ತು ಸಚಿವರಾದ ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಕೇಂದ್ರದ ಮಾಜಿ ಸಚಿವ ರಮೇಶ್‌ ಜಿಗಜಿಣಗಿ, ಮಾಜಿ ಸಚಿವರಾದ ಶಾಸಕ ವಿನಯ್ ಕುಲಕರ್ಣಿ ಮತ್ತು ಶಾಸಕರಾದ ಸಿ.ಎಸ್.ನಾಡಗೌಡ, ಅಶೋಕ್ ಮನಗೋಳಿ ಸೇರಿ ಹಲವು ಪ್ರಮುಖರು ಗುರುನಮನಕ್ಕೆ ಸಾಕ್ಷಿಯಾದರು.

ಬಾಬಾ ರಾಮದೇವ ನುಡಿನಮನ

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಕ್ತಿಯ ನುಡಿನಮನಗಳು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಖ್ಯಾತ ಯೋಗ ಗುರು ಬಾಬಾ ರಾಮದೇವ ಅವರು ಶ್ರೀಗಳಿಗೆ ನುಡಿನಮನ ಅರ್ಪಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ನುಡಿನಮನ ಸಲ್ಲಿಸಿದ ಅವರು, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಒಬ್ಬ ಶ್ರೇಷ್ಠ ಸಂತ, ಸಾಕ್ಷಾತ್ ಭಗವಂತನನ್ನು ಅವರಲ್ಲಿ ಕಾಣುತ್ತೇವೆ, ಶ್ರೇಷ್ಠ ಋಷಿ ಪರಂಪರೆಯ ಸಂತರಾದ ಶ್ರೀಗಳ ಜೀವನವನೇ ಒಂದು ಸಂದೇಶ, ಪರಮ ಸತ್ಯ ಸನಾತನ ಶಾಸ್ತ್ರದ ವಿಚಾರಧಾರೆಗಳನ್ನು ಸಾರಿದರು. ಅವರನ್ನು ಕಂಡ ನಾವೆಲ್ಲರೂ ಧನ್ಯರು. ಈ ಮಹಾಪುರುಷರ ಪ್ರಥಮ ಪುಣ್ಯ ಸ್ಮರಣೆಗೆ ನಾನೇ ಖುದ್ದು ಬರಬೇಕಿತ್ತು, ಅನಿವಾರ್ಯ ಕಾರಣದಿಂದ ಸಾಧ್ಯವಾಗಲಿಲ್ಲ, ಶ್ರೀಗಳು ಎಲ್ಲರಿಗೂ ಅನುಗ್ರಹಿಸಲಿ ಎಂದು ಸಂದೇಶ ನೀಡಿದರು.

ನುಡಿನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಗುರು ನಮನ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶದ ಮೂಲಕ ನುಡಿನಮನ ಸಮರ್ಪಿಸಿದರು.

ಪ್ರಧಾನಿಗಳ ಪರವಾಗಿ ಸಂದೇಶ ವಾಚಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ವಿಜಯಪುರದ ಜ್ಞಾನಯೋಗಾಶ್ರಮ, ಗುರು ನಮನ ಮಹೋತ್ಸವ ಸಮಿತಿ ಆಯೋಜಿಸಿದ್ದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಸ್ಮರಣಾರ್ಥ ‘ಗುರು ನಮನ ಮಹೋತ್ಸವ’ದ ಬಗ್ಗೆ ತಿಳಿದುಕೊಂಡಿರುವುದು ಹೃದಯಸ್ಪರ್ಶಿಯಾಗಿದೆ, ಭಾರತದ ಆಳವಾದ ಶಕ್ತಿ ಅದರ ಆಧ್ಯಾತ್ಮಿಕತೆಯಲ್ಲಿದೆ. ನಮ್ಮ ಅತ್ಯುನ್ನತ ಆಧ್ಯಾತ್ಮಿಕ. ಸಂತರು, ವಿದ್ವಾಂಸರು ಮತ್ತು ಶಿಕ್ಷಕರು ಸೇರಿದಂತೆ ವ್ಯಕ್ತಿಗಳು ನಮ್ಮ ಸಮಾಜವನ್ನು ಸದೃಢವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ನೋಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಈ ನಿರಂತರ ಸಂಪ್ರದಾಯವು ಯುಗಗಳಿಂದಲೂ ಬಂದಿದೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ನಮ್ಮ ಪರಂಪರೆಯ ಅಧ್ಯಾತ್ಮಿಕ ಪರಂಪರೆಗೆ ಉತ್ತಮ ಉದಾಹರಣೆಯಾಗಿದ್ದರು. ಅವರು ಜೀವನದುದ್ದಕ್ಕೂ ಸಹಜವಾದ ಸರಳತೆ ಮತ್ತು ಶ್ರೇಷ್ಠ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡಿದ್ದರು. ಶ್ರೀಗಳು ಅತ್ಯುನ್ನತ ತಾತ್ವಿಕ ಸತ್ಯಗಳನ್ನು ವಿವರಿಸಿದರು. ಅವರ ಜೀವನ ಮತ್ತು ಸಂದೇಶವು ದೈವಿಕ ಬುದ್ಧಿವಂತಿಕೆ ಮತ್ತು ದೈವಿಕತೆಯೊಂದಿಗಿನ ಆಳವಾದ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ವ್ಯಾಪಕವಾಗಿ ಪ್ರಯಾಣಿಸಿದ ಸ್ವಾಮೀಜಿಯವರು ದೇಶದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದರು ಎಂದು ಮೋದಿ ಸ್ಮರಿಸಿದ್ದಾರೆ.

ಅತ್ಯಂತ ಸಂಕೀರ್ಣವಾದ ಆಲೋಚನೆಗಳನ್ನು ಎಲ್ಲರಿಗೂ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ವ್ಯಕ್ತಪಡಿಸುವ ಅವರ ಗಮನಾರ್ಹ ಸಾಮರ್ಥ್ಯಕ್ಕಾಗಿ ಸ್ವಾಮೀಜಿಯವರನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಬಹು ಭಾಷೆಗಳಲ್ಲಿನ ಅವರ ಕೃತಿಗಳು ಅವರ ಬಹುಭಾಷಾ ಕೌಶಲ್ಯಗಳನ್ನು ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್‌ನ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಅವರು ಬರೆದ ಪುಸ್ತಕಗಳು ಮನುಕುಲದ ದೊಡ್ಡ ಪ್ರಯೋಜನಕ್ಕಾಗಿ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತವೆ. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಕ್ತರು ಮತ್ತು ಅನುಯಾಯಿಗಳು ಅವರು ತೋರಿದ ಮಾರ್ಗದಲ್ಲಿ ನಡೆಯಲು 'ಗುರು ನಮನ ಮಹೋತ್ಸವ' ನಿರಂತರವಾಗಿ ಪ್ರೇರೇಪಿಸಲಿ ಎಂದು ಪ್ರಧಾನಿ ಅವರು ಸಂದೇಶ ನೀಡಿದರು.

(ವರದಿ: ಸಮೀ ಉಸ್ತಾದ್‌, ವಿಜಯಪುರ)

Whats_app_banner