Vijaya Pura News: ವಿಜಯಪುರ ಮೇಯರ್‌ಗೆ ಸರ್ಕಾರಿ ವಾಹನವಿಲ್ಲ. ಟಾಂಗಾದಲ್ಲಿ ಕಚೇರಿಗೆ ಬಂದು ಪ್ರತಿಭಟನೆ ದಾಖಲಿಸಿದರು !
ವಿಜಯಪುರ ನಗರಪಾಲಿಕೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗಿಂತ ಇತರೆ ವಿಷಯಗಳೇ ಸಾಮಾನ್ಯ ಸಭೆಯಲ್ಲಿ ಹೆಚ್ಚ ಚರ್ಚೆಗೆ ಬಂದವು.( ವರದಿ: ಸಮೀವುಲ್ಲಾ ಉಸ್ತಾದ್, ವಿಜಯಪುರ)

ವಿಜಯಪುರ: ವಿಜಯಪುರ ನಗರಪಾಲಿಕೆ ಮೇಯರ್ ಅವರಿಗೆ ಓಡಾಡಲು ಸರ್ಕಾರಿ ವಾಹನವಿಲ್ಲ. ಸಾರ್ವಜನಿಕ ಕೆಲಸಕ್ಕೂ ವಾಹನವಿಲ್ಲದೇ ಪರದಾಡುವ ಸನ್ನಿವೇಶ. ತಮ್ಮದೇ ಪಕ್ಷದ ಸರ್ಕಾರವಿದ್ದರೂ ವಾಹನ ನೀಡದೇ ಸತಾಯಿಸಲಾಗುತ್ತಿದೆ ಎನ್ನುವ ಆರೋಪವನ್ನು ವಿಜಯಪುರ ಮೇಯರ್ ಮೆಹಜಬೀನ್ ಹೋರ್ತಿ ಮಾಡಿದ್ದಾರೆ. ಇದಕ್ಕಾಗಿ ಅವರು ಗುರುವಾರ ನಡೆದ ವಿಜಯಪುರ ನಗರಪಾಲಿಕೆ ಸಾಮಾನ್ಯ ಸಭೆಗೆ ಟಾಂಗಾದಲ್ಲಿ ಮನೆಯಿಂದ ಬಂದು ಪ್ರತಿಭಟನೆಯನ್ನೂ ದಾಖಲಿಸಿದ್ದಾರೆ.
ಹಳೆಯ ವಾಹನ ನೀಡಿದ್ದಕ್ಕೆ ಹಾಗೂ ವಾಹನ ಚಾಲಕ ನೇಮಕ ಮಾಡದ ಕಾರಣ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮೆಹಜಬೀನ್ ಹೊರ್ತಿ ಅವರು ಟಾಂಗಾ ಸವಾರಿ ಮೂಲಕ ಸಭೆಗೆ ಆಗಮಿಸಿ ಎಲ್ಲರ ಗಮನ ಸೆಳೆದರು.
ಪಾಲಿಕೆಯಿಂದ ಹಳೆಯ ವಾಹನ ನೀಡಲಾಗಿದೆ. ಚಾಲಕನನ್ನೂ ನೀಡಿಲ್ಲ. ಹಳೆಯ ವಾಹನದಲ್ಲಿ ಓಡಾಡಲು ಆಗುತ್ತಿಲ್ಲ. ಚಾಲಕನೂ ಇಲ್ಲದೇ ಹೇಗೆ ಉಪಯೋಗಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮದೇ ಸರ್ಕಾರ ಇದ್ದರು ಪಾಲಿಕೆ ಮೇಯರ್ ರನ್ನು ಉದಾಸೀನ ಮಾಡಲಾಗುತ್ತಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಮೇಯರ್ ಮೆಹಜಬೀನ್ ಹೋರ್ತಿ ಆರೋಪಿಸಿದರು.
ಮಹಾನಗರ ಪಾಲಿಕೆ ಮೇಯರ್ ಆಯ್ಕೆಯಾಗಿ ಎರಡು ತಿಂಗಳು ಗತಿಸಿದರು ಇದು ವರೆಗೂ ಮಹಾಪೌರರಿಗೆ ಯಾಕೆ ವಾಹನ ನೀಡಿಲ್ಲ ಎಂದು ಸದಸ್ಯೆ ಆರತಿ ಶಹಾಪುರ ಸಭೆಯಲ್ಲಿ ಪ್ರಶ್ನಿಸಿದರು ಇದಕ್ಕೆ ಧ್ವನಿಗೂಡಿಸಿದ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಹಾಪೌರರಿಗೆ ವಾಹನ ನೀಡಬೇಕು ಇನ್ನು ವರೆಗೆ ಏಕೆ ನೀಡಿಲ್ಲವೆಂಬುದನ್ನು ಆಯುಕ್ತರು ಸ್ಪಷ್ಟಪಡಿಸಬೇಕು. ಮಹಾಪೌರರಿಗೆ ತುರ್ತಾಗಿ ವಾಹನ ನೀಡಲು ಆಗ್ರಹಿಸಿದರು.
ಆಗ ಸ್ಪಷ್ಟೀಕರಣ ನೀಡಿದ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಮಹಾಪೌರರಿಗೆ ಈಗಾಗಲೇ ವಾಹನ ಒದಗಿಸಿದ್ದೇವೆ. ಆದರೆ ಸಮಸ್ಯೆ ಏನಾಗಿದೆ ಗೊತ್ತಾಗಿಲ್ಲ ಎಂದರು ಆಗ ಮಧ್ಯಪ್ರವೇಶಿಸಿದ ಸದಸ್ಯ ಪ್ರೇಮಾನಂದ ಬಿರಾದಾರ ಹಾಗದರೆ ಇಂದು ಸಭೆಗೆ ಮಹಾಪೌರರು ಟಾಂಗಾದಲ್ಲಿ ಬರಲು ಕಾರಣ ಏನು? ಎಂದು ಪ್ರಶ್ನಿಸಿದರು. ಆಗ ಆಯುಕ್ತರು ಪ್ರತಿಕ್ರಿಯಿಸಿ ಇವತ್ತು ಏನಾಗಿದೆ ಎಂಬುದು ಗೊತ್ತಿಲ್ಲ ಅದನ್ನು ನೋಡಿ ಶೀಘ್ರಲ್ಲೇ ಅವರ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಸಮಸ್ಯೆಗಳ ಅನಾವರಣ
ಕುಡಿಯುವ ನೀರು, ಬರ ಸೇರಿದಂತೆ ವಿಜಯಪುರ ನಗರದ ಹಲವಾರು ಸಮಸ್ಯೆಗಳ ಧ್ವನಿಯಾಗಬೇಕಿದ್ದ ಪಾಲಿಕೆ ಸಾಮಾನ್ಯ ಸಭೆ. ಆದರೆ ಪಾಲಿಕೆಯಲ್ಲಿ ಪ್ರತಿಧ್ವನಿಸಿದ್ದು ಕುರ್ಚಿ ಅವ್ಯವಸ್ಥೆ, ಪಾಲಿಕೆ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ, ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಮಹಾಪೌರರ ವಾಹನದ ಬಗ್ಗೆಯೆ ಚರ್ಚೆಗಳು ನಡೆದವು.
ಕುರ್ಚಿಗಳು ಅತ್ಯಂತ ಅವ್ಯವಸ್ಥೆಯಿಂದ ಕೂಡಿವೆ. ಕೂರಲು ಸಹ ಸಾಧ್ಯವಾಗದ ಪರಿಸ್ಥಿತಿ ಇದೆ. ಮೊದಲು ಕುರ್ಚಿಗಳನ್ನು ಬದಲಿಸುವಂತೆ ಪಾಲಿಕೆ ಸದಸ್ಯರು ಪಟ್ಟು ಹಿಡಿದರು.
ಗಣಪತಿ ಪ್ರತಿಮೆ
ಪಾಲಿಕೆ ಸದಸ್ಯ ರಾಹುಲ್ ಜಾಧವ, ಪಾಲಿಕೆ ಆವರಣದಲ್ಲಿ ಗಣಪತಿ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಈ ಹಿಂದೆಯೇ ನಿರ್ಣಯ ಸ್ವೀಕರಿಸಲಾಗಿದ್ದು, ಈ ಬಗ್ಗೆ ಕೂಡಲೇ ನಿರ್ಧಾರ ಪ್ರಕಟಿಸಿ ಎಂದರು. ಇದಕ್ಕೆ ಸದಸ್ಯ ಪ್ರೇಮಾನಂದ ಬಿರಾದಾರ, ರಾಜಶೇಖರ ಮಗಿಮಠ ಮೊದಲಾದವರು ದನಿಗೂಡಿಸಿದರು. ಹಳೆಯ ಕಟ್ಟಡದಲ್ಲಿ ಗಣಪತಿ ಪ್ರತಿಮೆ ಇತ್ತು, ಈಗ ಪ್ರತಿಷ್ಠಾಪನೆಗೆ ವಿಳಂಬವೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಸಮಜಾಯಿಶಿ ನೀಡಿದ ಮೇಯರ್ ಮೆಹಜಬೀನ ಹೋರ್ತಿ ಈಗ ಸಭೆಯ ಅಜೆಂಡಾಗಳ ಬಗ್ಗೆ ಚರ್ಚೆ ಮಾಡೋಣ ಸಭೆಯ ನಂತರ ಎಲ್ಲರೂ ಸೇರಿ ಚರ್ಚೆ ಮಾಡಿ. ಅದರ ಬಗ್ಗೆ ನಿರ್ಣಯ ಮಾಡೋಣ ಎಂದರು.
ಆದರೆ ಇದಕ್ಕೆ ಕೇಳದ ಪಾಲಿಕೆ ಸದಸ್ಯರು ಈ ಕೂಡಲೇ ಇದರ ಬಗ್ಗೆ ನಿರ್ಧಾರ ಪ್ರಕಟಿಸಿ ಎಂದು ಪಟ್ಟು ಹಿಡಿದರು. ಆಗ ಉಪಮಹಾಪೌರ ದಿನೇಶ ಹಳ್ಳಿ, ಈ ಕುರಿತು ಚರ್ಚಿಸೋಣ. ಆದರೆ ಈಗ ಸಭೆಯ ಅಜೆಂಡಾಗಳನ್ನು ಮೊದಲು ಚರ್ಚೆಗೆ ತೆಗೆದುಕೊಳ್ಳೋಣ ಎಂದು ಸದಸ್ಯರಿಗೆ ಸಮಾಧಾನ ಮಾಡಿದರು. ಅಲ್ಲಿಗೆ ಪಾಲಿಕೆ ಸದಸ್ಯರು ಈ ವಿಷಯವನ್ನು ಕೈ ಬಿಟ್ಟರು.
ಪಾಕ್ ಪರ ಘೋಷಣೆಗೆ ವಿರೋಧ
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ವಿಧಾನಸೌಧ ದಲ್ಲಿ ಪಾಕಿಸ್ತಾನಪರ ಘೋಷಣೆ ಕೂಗಿರುವುದು ಖಂಡನಾರ್ಹ ಇಂದು ಈ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಸಭೆಯ ಗಮನಸೆಳೆದರು.
ಆಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪಾಲಿಕೆ ಸದಸ್ಯೆ ಆರತಿ ಶಹಾಪುರ, ದೇಶದ ದ್ರೋಹ ಘೋಷಣೆಗೆ ಖಂಡನೆ. ಆದರೆ ನೆನ್ನೆ ಗೃಹ ಸಚಿವರು ಇದಕ್ಕೆ ಪ್ರತಿಕ್ರಿಯಿಸಿ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೊ ಇಲ್ಲವೋ ಎಂಬುದೆ ಮಾಹಿತಿ ಇಲ್ಲ. ಎಫ್.ಎಸ್.ಎಲ್ ವರದಿ ಬರಲಿ ಬಂದ ನಂತರ ಬೇಕಾದರೆ ಮಾಡೋಣ. ಹೀಗಾಗಿ ಖಂಡನಾ ನಿರ್ಣಯ ಈಗ ಮಾಡುವುದು ಸಂಮಂಜಸವಲ್ಲ ಎಂದರು.
ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಜಶೇಖರ ಮಗಿಮಠ ನಾವು ಖಂಡನಾ ನಿರ್ಣಯ ತೆಗೆದುಕೊಳ್ಳಲು ಹೇಳುತ್ತಿದ್ದೇವೆ. ತಪ್ಪಿತಸ್ಥರು ಯಾರೆ ಇದ್ದರು ತನಿಖೆಯಾದ ನಂತರ ಶಿಕ್ಷೆಯಾಗಲಿ. ಅದಕ್ಕೆ ವಿರೋಧ ಇಲ್ಲ ಎಂದರು.
ಕಾಂಗ್ರೆಸ್ ಪಾಲಿಕೆ ಸದಸ್ಯರು ದೇಶ ದ್ರೋಹ ಘೋಷಣೆಗೆ ಖಂಡಿಸಿದ ಬೆನ್ನಲ್ಲೆ ಖಂಡನಾ ನಿರ್ಣಯವನ್ನು ಬಿಜೆಪಿ ಪಾಲಿಕೆ ಸದಸ್ಯರು ಕೈಬಿಟ್ಟರು.
( ವರದಿ: ಸಮೀವುಲ್ಲಾ ಉಸ್ತಾದ್, ವಿಜಯಪುರ)

ವಿಭಾಗ