ತುಂಬಿದ ತುಂಗಭದ್ರೆಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ: ತಿಂಗಳ ಹಿಂದೆ ಕ್ರಸ್ಟ್ ಗೇಟ್ ಮುರಿದ ನಂತರ ಮತ್ತೆ ತುಂಬಿದ ಜಲಾಶಯ
ಮಲೆನಾಡಿನಲ್ಲಿ ಉತ್ತಮ ಮಳೆಯಾಗಿ ತುಂಬಿ ತುಳುಕುತ್ತಿರುವ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಬಾಗಿನ ಸಮರ್ಪಿಸಿದರು.
ವಿಜಯನಗರ/ ಕೊಪ್ಪಳ: ತಿಂಗಳ ಹಿಂದೆಯಷ್ಟೇ ಕ್ರಸ್ಟ್ ಗೇಟ್ ಮುರಿದು ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗಿ ಆತಂಕ ಹುಟ್ಟುಹಾಕಿದ್ದ ತುಂಗಭದ್ರಾ ಜಲಾಶಯ ಮತ್ತೆ ತುಂಬಿ ಜೀವ ಕಳೆ ಬಂದಿದೆ. ಹೊಸಪೇಟೆ ಸಮೀಪ ಇರುವ ಈ ಜಲಾಶಯದ ಆವರಣದಲ್ಲಿ ಸಂಭ್ರಮ. ಅದೂ ತುಂಬಿದ ಜಲಾಶಯಕ್ಕೆ ಕ್ರಸ್ಟ್‌ಗೇಟ್ ದುರಸ್ಥಿಗೊಳಿಸಿದ ನಂತರ ಬಾಗಿನ ಅರ್ಪಿಸುವ ಸಮಯ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿದ್ದರು. ವಿಶೇಷವಾಗಿ ಮುರಿದ ಕ್ರಸ್ಟ್ ಗೇಟ್ ಅನ್ನು ದುರಸ್ಥಿಗೊಳಿಸಿದ ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಕೂಡ ಈ ವೇಳೆ ಹಾಜರಿದ್ದು ಖುಷಿ ಹೆಚ್ಚಿಸಿದರು.
ನಿಗದಿತ ಸಮಯಕ್ಕಿಂತ ಎರಡು ತಾಸು ತಡವಾಗಿ ಬಂದ ಸಿಎಂ ಸಿದ್ದರಾಮಯ್ಯ ಅವರು ಜಲಾಶಯದಲ್ಲಿ ನಿರ್ಮಿಸಿಲಾಗಿದ್ದ ವಿಶೇಷ ವೇದಿಕೆಯಲ್ಲಿ ಬಾಗಿನ ಅರ್ಪಿಸಿ ಶುಭ ಕೋರಿದರು. ಈ ವೇಳೆ ಕನ್ನಯ್ಯನಾಯ್ಡು ಅವರೊಂದಿಗೆ ಗೇಟ್‌ಗಳ ಸ್ಥಿತಿಗತಿ ಕುರಿತು ವಿವರವನ್ನೂ ಸಿಎಂ ಪಡೆದುಕೊಂಡರು.
ಇದೇ ವೇಳೆ ಒಂದು ವಾರದ ಅವಧಿಯಲ್ಲಿಯೇ ಕ್ರಸ್ಟ್ ಗೇಟ್ ಅಳವಡಿಸಲು ಹಗಲಿರುಳು ಶ್ರಮಿಸಿದ ಅಧಿಕಾರಿಗಳು. ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿಯನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಕಳೆದ ತಿಂಗಳೇ ಜಲಾಶಯ ತುಂಬಿದ್ದರೂ ಕ್ರಸ್ಟ್ ಗೇಟ್ ಮುರಿದಿದ್ದರಿಂದ ಕಾರ್ಯಕ್ರಮ ಮುಂದೆ ಹೋಗಿತ್ತು. ಒಂದೇ ವಾರದಲ್ಲಿ ಜಲಾಶಯ ದುರಸ್ಥಿಗೊಂಡು ತಿಂಗಳೊಳಗೆ ತುಂಬಿತ್ತು. ನಾನಾ ಕಾರಣದಿಂದ ಬಾಗಿನ ಸಮರ್ಪಣೆ ಮುಂದೆ ಹೋಗಿ ಇಂದು ಕಾರ್ಯಕ್ರಮ ನಿಗದಿಯಾಗಿತ್ತು.
ಇದಕ್ಕೂ ಮುನ್ನ ಕೊಪ್ಪಳ ಜಿಲ್ಲೆ ಗಿಣಿಗೇರಾ ಏರ್‌ಸ್ಟ್ರಿಪ್‌ನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಸಿದ್ದರಾಮಯ್ಯ, ತಜ್ಞರ ವರದಿಯ ಆಧಾರದ ಮೇಲೆ ಗೇಟ್ ಗಳ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.
ಕ್ರಸ್ಟ್ ಗೇಟ್ ಗಳ ಕಾಲಕಾಲಕ್ಕೆ ದುರಸ್ತಿ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು 50 ವರ್ಷಕ್ಕೆ ಗೇಟ್ ಗಳನ್ನು ಬದಲಿಸಬೇಕು. 70 ವರ್ಷಗಳಿಂದ ಗೇಟ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಕೆಲಸ ಮಾಡಿದೆ. ಪ್ರಸ್ತುತ ತಜ್ಞರ ಸಮಿತಿ ರಚನೆಯಾಗಿದ್ದು ವರದಿ ನೀಡಬೇಕಿದೆ ಎಂದರು.
ಹಿಂಗಾರಿನ ಎರಡನೇ ಬೆಳೆಗೆ ನೀರು ಲಭ್ಯವಾಗಬಹುದು ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿ.ಎಂ.ಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ.ಕೊಚ್ಚಿಹೋಗಿದ್ದ 19 ನೇ ಕ್ರಸ್ಟ್ ಗೇಟ್ ನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ , ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ಗೇಟ್ ದುರಸ್ತಿ ಗೆ ಕ್ರಮ ವಹಿಸಿದರು. ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರ್ ಗಳು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. 20 ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಉಳಿಯಿತು. ಬೆಳೆ ಗೆ ನೀರು ಸಿಗುತ್ತದೋ ಇಲ್ಲವೋ ಎಂಬ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರಿನ ಬೆಳೆಗೆ ಯಾವುದೇ ತೊಂದರೆ ಇಲ್ಲ. ಎರಡನೇ ಬೆಳೆಗೆ ನೀರು ಒದಗಿಸಲು ಪ್ರಯತ್ನಿಸಲಾಗುವುದು.101 ಟಿಎಂಸಿ ಲಭ್ಯವಿರುವುದರಿಂದ ನೀರು ಲಭ್ಯವಾಗಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.