ಸರ್ಕಾರಿ ಕಚೇರಿಗಳಿಗೆ ಜನರನ್ನು ಅಲೆದಾಡಿಸದಿರಿ; ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಖಡಕ್ ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಸರ್ಕಾರಿ ಕಚೇರಿಗಳಿಗೆ ಜನರನ್ನು ಅಲೆದಾಡಿಸದಿರಿ; ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಖಡಕ್ ಸೂಚನೆ

ಸರ್ಕಾರಿ ಕಚೇರಿಗಳಿಗೆ ಜನರನ್ನು ಅಲೆದಾಡಿಸದಿರಿ; ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಖಡಕ್ ಸೂಚನೆ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಜನಸ್ಪಂದನ ಸಭೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಜನಸ್ಪಂದನ ಸಭೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ದಾವಣಗೆರೆ:ಸರ್ಕಾರಿ ಕಚೇರಿಗಳಿಗೆ ಗ್ರಾಮೀಣ ಭಾಗದ ಜನರನ್ನು ಅಲೆದಾಡಿಸದಂತೆ ಹರಪನಹಳ್ಳಿ ಅಧಿಕಾರಿಗಳು ಆಡಳಿತ ಸೇವೆ ನೀಡಬೇಕು ಎಂದು ದಾವಣಗೆರೆ ಕ್ಷೇತ್ರದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚಿಸಿದರು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರ‍್ರಾಮದಲ್ಲಿರುವ ಕೋಲಶಾಂತೇಶ್ವರ ಮಠದಲ್ಲಿ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.

ಜನಸ್ಪಂದನ ಕಾರ್ಯಕ್ರಮದ ಮೂಲಕ ಸರ್ಕಾರವೇ ಜನರ ಬಳಿಗೆ ಬರುವಂತಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಪ್ರಯತ್ನ ಇದಾಗಿದೆ. ಅರಸೀಕೆರೆ ಹೋಬಳಿಯಲ್ಲಿ ತುರ್ತಾಗಿ ಬಸ್ ನಿಲ್ದಾಣ, ಶೌಚಾಲಯ ನಿರ್ಮಾಣ, ಕುಡಿಯುವ ನೀರು, ಸೇರಿ ವಿದ್ಯಾರ್ಥಿಗಳಿಗೆ ನಿಗದಿತ ವೇಳೆಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಕೇಂದ್ರ ಪುರಾತತ್ವ ಇಲಾಖೆಯಿಂದ ತಾಲೂಕಿನಲ್ಲಿನ ಐತಿಹಾಸಿಕ ದೇಗುಲಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ನೀಡಬೇಕಿದೆ ಎಂದರು.

ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಅರಸೀಕೆರೆ ಗ್ರಾಮದ ಗ್ರಂಥಾಲಯಕ್ಕೆ ಪುಸ್ತಕಗಳು ಸೇರಿ ಅಗತ್ಯ ಪರಿಕರಗಳನ್ನು ಒದಗಿಸಬೇಕು. ಬಸ್ ನಿಲ್ದಾಣ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು. ಶೀಘ್ರವೇ ಜನಸಂಪರ್ಕ ಕಚೇರಿ ತೆರೆದು ಕನಿಷ್ಠ ವಾರಕ್ಕೊಮ್ಮೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಉಚ್ಚಂಗಿದುರ್ಗದಲ್ಲಿ ವೈದ್ಯರ ಕೊರತೆಗೆ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರತ ವೈದ್ಯರನ್ನು ಅಗೌರವ ತೋರುವ ಪ್ರವೃತ್ತಿ ಕೈಬಿಡಬೇಕಿದೆ. ಅದ್ದರಿಂದಲೇ ವೈದ್ಯರ ಕೊರತೆ ಸಮಸ್ಯೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಅರಸೀಕೆರೆ ಗ್ರಾಮದ ಬಸ್ ನಿಲ್ದಾಣ ಕಾಮಗಾರಿ 30 ತಿಂಗಳಿನಿಂದ ಸ್ಥಗಿತಗೊಂಡಿದೆ. 47 ಲಕ್ಷರೂ ಅಗತ್ಯ ಅನುದಾನ ನೀಡುವ ಮೂಲಕ 60 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಅರಸೀಕೆರೆ ಹೋಬಳಿ ವಿವಿಧ ಗ್ರಾಪಂಗಳಿಂದ ಅನೇಕ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಮುಖ್ಯವಾಗಿ ಅರಸೀಕೆರೆ ಬಸ್ ನಿಲ್ದಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಶೀಘ್ರವೇ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಲಾಗುವುದು. ಗ್ರಾಪಂಗಳಿಂದ ಇ-ಸ್ವತ್ತು ಮೂಲಕ ಹಕ್ಕು ಪತ್ರಗಳನ್ನು ಮನೆ ಬಾಗಿಲಿಗೆ ವಿತರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ಎಲ್ಲಾ ಹಕ್ಕುಪತ್ರಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುವುದು. ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ನೀಗಿಸುವಂತೆ ಡಿಎಚ್‌ಓ ಶಂಕರನಾಯ್ಕರಿಗೆ ಸೂಚಿಸಲಾಯಿತು. ಹೆರಿಗೆ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ನೀಡಲು ಮುಂದಾಗುತ್ತಿಲ್ಲ. ಸಂಸದರು ದಾವಣಗೆರೆಯಿಂದ ಓರ್ವ ವೈದ್ಯರನ್ನು ಸೂಚಿಸಿದರೇ 1.40 ಲಕ್ಷರೂ ಮಾಸಿಕ ವೇತನ ನೀಡಲು ಸಿದ್ದರಿದ್ದೇವೆ. ಜಿಲ್ಲೆಯಲ್ಲಿ ತಿಂಗಳಿಗೆ ಒಟ್ಟು 15,630 ಹೆರಿಗೆ ಆಗಿವೆ. ಅದರಲ್ಲಿ 11,700 ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಲಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬಾಣಂತಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕಾರಣಕ್ಕೆ ಔಷಧಗಳನ್ನು ಹೊರಗಡೆ ಬರೆಯದಂತೆ ಕ್ರಮವಹಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ವಿವಿಧ ಸಮಸ್ಯೆಗಳಿಗೆ ಅಹವಾಲು ಸ್ವೀಕಾರ : ಸಾರ್ವಜನಿಕರು ಅನೇಕ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಪ್ರಮುಖವಾಗಿ ಅರಸೀಕೆರೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಟ್ಕಾ ಹಾವಳಿ ಹೆಚ್ಚಾಗಿದೆ. ಶಿಸ್ತು ಕ್ರಮಕ್ಕೆ ಆಗ್ರಹಿಸಿದರು. ನಂದಿಬೇವೂರು ಗ್ರಾಮದ ಕೆರೆ ವ್ಯಾಪ್ತಿಯಲ್ಲಿ ಅಕ್ರಮ ಒತ್ತುವರಿಯಾಗಿದೆ ಎಂದು ಸ್ಥಳೀಯರು ಬೇಡಿಕೆ ಸಲ್ಲಿಸಿದ ಹಿನ್ನಲೆಯಲ್ಲಿ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳಿಗೆ 15 ದಿನಗಳಲ್ಲಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದರು. ಉಚ್ಚಂಗಿದುರ್ಗ ಗ್ರಾಪಂ ವ್ಯಾಪ್ತಿಯಲ್ಲಿ ನಾಡಕಚೇರಿ ವಿಸ್ತರಣೆ ಮಾಡುವಂತೆ ಹಾಗೂ ಅಧಾರ್ ಕಾರ್ಡ ಸೇವೆ ಲಭ್ಯವಿಲ್ಲ ಎಂದು ಸ್ಥಳೀಯರು ಮನವಿ ಸಲ್ಲಿಸಿದರು. ಉಚ್ಚಂಗಿದುರ್ಗದಿಂದ ದಾವಣಗೆರೆಗೆ ಸಂಚರಿಸಲು ಶಾಲಾ ಕಾಲೇಜು ವೇಳೆಗೆ ವಿದ್ಯಾರ್ಥಿಗಳಿಗೆ ಬಸ್ ಕೊರತೆಯಿದೆ. ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಲು ಮನವಿ ಸಲ್ಲಿಸಿದರು. ದಾವಣಗೆರೆಯಿಂದ ಕಂಚಿಕೆರೆ ಮಾರ್ಗವಾಗಿ ಅರಸೀಕೆರೆ ಹಾಗೂ ಅರಸೀಕೆರೆಯಿಂದ ಉಚ್ಚಂಗಿದುರ್ಗ ಮಾರ್ಗವಾಗಿ ದಾವಣಗೆರೆ ಮತ್ತು ಅರಸೀಕೆರೆಯಿಂದ ಹೊಸಪೇಟೆಗೆ ಬಸ್ ಸಂಪರ್ಕ ಕಲ್ಪಿಸಲು ಸಾರ್ವಜನಿಕರಿಂದ ಮನವಿ ಸಲ್ಲಿಸಿದರು. ತೌಡೂರು ಗ್ರಾಮದಲ್ಲಿ ಸ್ಮಶಾನ ಜಾಗ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸ್ಮಶಾನ ಜಾಗ ಒತ್ತುವರಿ ಆಗಿರುವ ಮಾಹಿತಿ ಪಡೆದ ಡಿಸಿ ಶೀಘ್ರವೇ ಒತ್ತುವರಿಗೊಳಿಸಿ ಸ್ಮಶಾನ ಅಭಿವೃದ್ದಿಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಅರಸೀಕೆರೆಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯ ತೆರೆಯುವಂತೆ ಹಾಗೂ ಶಾಲಾ ಕಾಲೇಜು ವೇಳೆಗೆ ನಿಗದಿತ ವೇಳೆಗೆ ಬಸ್ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸಿದರು. ಕೆ.ಆರ್.ಕಟ್ಟೆ ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಹದ್ದುಬಸ್ತುಗೊಳಿಸುವಂತೆ ಆಗ್ರಹಿಸಿದರು.

ಇದೇ ವೇಳೆ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ವಿ.ಗಿರೀಶ್ ಬಾಬು, ಗ್ರಾಪಂ ಅಧ್ಯಕ್ಷರಾದ ಕೆ.ಹಾಲಮ್ಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.