Vijayanagara News: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಪತ್ನಿ ರುದ್ರಾಂಬ ನಿಧನ
ದಿವಂಗತ ಎಂ.ಪಿ. ಪ್ರಕಾಶ್ ಅವರ ಪತ್ನಿ ರುದ್ರಾಂಬ ಪ್ರಕಾಶ್ ಅವರು ಸೋಮವಾರ ಹೂವಿನ ಹಡಗಲಿಯಲ್ಲಿ ನಿಧನರಾದರು.
ಹೊಸಪೇಟೆ: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರಾಗಿದ್ದ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ರುದ್ರಾಂಬ ಪ್ರಕಾಶ್ ಅವರು ಸೋಮವಾರ ನಿಧನರಾದರು. ಹೂವಿನ ಹಡಗಲಿ ಪಟ್ಟಣದಲ್ಲಿ ನೆಲೆಸಿದ್ದ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ರುದ್ರಾಂಬ ಅವರಿಗೆ ಮೂವರು ಪುತ್ರಿಯರು ಇದ್ದಾರೆ. ಅವರಲ್ಲಿ ಲತಾ ಮಲ್ಲಿಕಾರ್ಜುನ ಅವರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕಿ. ಸುಮಾ ಹಾಗೂ ವೀಣಾ ಕೂಡ ಇನ್ನಿಬ್ಬರು ಪುತ್ರಿಯರು. ಅವರ ಪುತ್ರ, ಹರಪನಹಳ್ಳ ಕ್ಷೇತ್ರದ ಶಾಸಕರಾಗಿದ್ದ ಎಂ.ಪಿ.ರವೀಂದ್ರ ಕೆಲ ವರ್ಷದ ಹಿಂದೆಯೇ ತೀರಿಕೊಂಡಿದ್ದರು. ಎಂ.ಪಿ. ಪ್ರಕಾಶ್ ಅವರೂ ದಶಕಗಳ ಹಿಂದೆಯೇ ವಿಧಿವಶರಾಗಿದ್ದಾರೆ.
ಸಾಂಸ್ಕೃತಿಕ ಹಾಗೂ ಚಿಂತನ ಶೀಲ ರಾಜಕಾರಣಿ ಎಂದು ಹೆಸರು ಮಾಡಿದ್ದ ಎಂ.ಪಿ. ಪ್ರಕಾಶ್ ಅವರನ್ನು ಮದುವೆಯಾಗಿದ್ದ ರುದ್ರಾಂಬ ಅವರು ಕೂಡ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲ ತಮ್ಮನ್ನು ತೊಡಗಿಸಿಕೊಂಡಿದ್ದರು. ಇತ್ತೀಚಿಗೆ ಆರೋಗ್ಯದ ಕಾರಣದಿಂದ ಸಾರ್ವಜನಿಕ ಜೀವನದ ಒಡನಾಟ ಕಡಿಮೆಯಾಗಿತ್ತು.
ರುದ್ರಾಂಬ ಅವರ ಅಂತ್ಯಕ್ರಿಯೆ ಹೂವಿನ ಹಡಗಲಿಯಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಲಿದೆ. ಎಂ.ಪಿ.ಪ್ರಕಾಶ್ ಅವರ ಸಮಾಧಿ ಸಮೀಪದಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬ ಸಿದ್ದತೆ ಮಾಡಿಕೊಂಡಿದೆ.
ಸಿಎಂ ಸಂತಾಪ
ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy appeared in Hindustan Times Kannada website. To read more like this please logon to kannada.hindustantimes.com)
ವಿಭಾಗ