ಹೊಸಪೇಟೆ ಕೋರ್ಟ್ ಆವರಣಕ್ಕೆ ಬಂದು ನಿಂತಿತು ಕೆಕೆಎಸ್‌ಆರ್‌ಟಿಸಿ ಬಸ್; ಜನರ ಕುತೂಹಲ ಕೆರಳಿಸಿದ ಜಪ್ತಿ ಪ್ರಕರಣ
ಹೊಸಪೇಟೆಯ ಜೆಎಂಎಫ್‌ಸಿ ಕೋರ್ಟ್ ಆವರಣದಲ್ಲಿ ಶುಕ್ರವಾರ (ಮಾ.1) ಕೆಕೆಎಸ್‌ಆರ್‌ಟಿಸಿ ಬಸ್ ಬಂದು ನಿಂತುಕೊಂಡ ಕೂಡಲೇ ಅದು ಜನಾಕರ್ಷಣೆಯ ಕೇಂದ್ರ ಬಿಂದುವಾಯಿತು. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಇಲ್ಲೇಕೆ ಬಂತು, ಇದ್ಯಾವ ಪ್ರಕರಣ ಎಂಬ ಕುತೂಹಲ ಕೆರಳಿಸಿತು.

ವಿಜಯನಗರ: ಹೊಸಪೇಟೆಯ ಜೆಎಂಎಫ್‌ಸಿ ನ್ಯಾಯಾಲಯದ ಆವರಣಕ್ಕೆ ಶುಕ್ರವಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (ಕೆಕೆಎಸ್‌ಆರ್‌ಟಿಸಿ ) ಬಸ್ ಬಂದು ನಿಂತುಕೊಂಡಿತು. ನ್ಯಾಯಾಲಯದ ಒಂದಷ್ಟು ಅಧಿಕಾರಿಗಳು, ಪೊಲೀಸರೂ ಜತೆಗಿದ್ದ ಕಾರಣ, ಆ ಬಸ್ ನಂತರ ಮುಂದಕ್ಕೆ ಚಲಿಸಲಿಲ್ಲ. ಅಪಘಾತ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಆ ಬಸ್ ಅನ್ನು ಜಪ್ತಿ ಮಾಡಲಾಗಿತ್ತು.
ಹೌದು, ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕಾರಣ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಅನ್ನು ಹೊಸಪೇಟೆ ಜೆಎಂಎಫ್‌ಸಿ ಕೋರ್ಟ್ ಶುಕ್ರವಾರ ಜಪ್ತಿ ಮಾಡಿದೆ. ನಾಲ್ಕು ವರ್ಷ ಹಿಂದಿನ ಅಪಘಾತ ಪ್ರಕರಣ ಇದು. ಕೇಸ್ ವಿಚಾರಣೆ ಬಳಿಕ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಆದರೆ ಅದನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಕಡೆಗಣಿಸುತ್ತ ಬಂದಿತ್ತು. ಹೀಗಾಗಿ ಕೋರ್ಟ್ ಸಾರಿಗೆ ಸಂಸ್ಥೆಯ ಬಸ್ ಅನ್ನು ಜಪ್ತಿ ಮಾಡಿತು.
ಕೆಕೆಎಸ್‌ಆರ್‌ಟಿಸಿ ಬಸ್ ಜಪ್ತಿ; ಏನಿದು ಪ್ರಕರಣ
ಹೊಸಪೇಟೆ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ 2020ರಲ್ಲಿ ಅಪಘಾತಕ್ಕೆ ಈಡಾಗಿತ್ತು. ಆ ಅಪಘಾತದಲ್ಲಿ ಟಿಬಿ ಡ್ಯಾಂ ನಿವಾಸಿಗಳಾದ ವಸಂತ ಕುಮಾರ್ ಮತ್ತು ವಿಜಯಾ ಎಂಬುವವರು ಮೃತಪಟ್ಟಿದ್ದರು. ಈ ಕುರಿತು ಕೇಸ್ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2023ರಲ್ಲಿ ಮೃತರ ಕುಟುಂಬದವರಿಗೆ ಅನುಕ್ರಮವಾಗಿ 15 ಲಕ್ಷ ರೂಪಾಯಿ ಮತ್ತು 21 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶವನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪಾಲಿಸಲಿಲ್ಲ. ಈ ವಿಚಾರವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಮನಸೆಳೆದರೂ ನಿರ್ಲಕ್ಷಿಸಿತ್ತು.
ಇದನ್ನು ಸಂತ್ರಸ್ತರ ಕುಟುಂಬದವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಕೋರ್ಟ್ ಕೂಡ ಅನೇಕ ಬಾರಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಮನಸೆಳೆದು, ಆದೇಶ ಪಾಲಿಸುವಂತೆ ಸೂಚಿಸಿತ್ತು. ಕೋರ್ಟ್ ಆದೇಶವನ್ನೂ ನಿರ್ಲಕ್ಷಿಸುತ್ತಿದ್ದ ಕಾರಣ, ಶುಕ್ರವಾರ ಪೊಲೀಸರಿಗೆ ನಿರ್ದೇಶನ ನೀಡಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಅನ್ನು ಜಪ್ತಿ ಮಾಡುವಂತೆ ಸೂಚಿಸಿತು ಎಂದು ಹೊಸದಿಗಂತ ವರದಿ ಹೇಳಿದೆ.
ಬಸ್ ಜಪ್ತಿ ಆಗುತ್ತಿದ್ದಂತೆ ಎಚ್ಚೆತ್ತ ಕೆಕೆಎಸ್ಆರ್‌ಟಿಸಿ
ಹೊಸಪೇಟೆ ಜೆಎಂಎಫ್‌ಸಿ ಕೋರ್ಟ್ ಆದೇಶ ಪ್ರಕಾರ, ಪೊಲೀಸರು ಕೆಕೆಎಸ್ಆರ್‌ಟಿಸಿ ಬಸ್ ಅನ್ನು ಜಪ್ತಿ ಮಾಡಿ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸಿದರು. ಈ ಮಾಹಿತಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ಬರುತ್ತಲೇ, ಕೊಪ್ಪಳ ಸಾರಿಗೆ ವಿಭಾಗದ ವಕೀಲರು ಕೋರ್ಟ್‌ಗೆ ಹಾಜರಾಗಿದ್ದರು.
ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಅಪೀಲು ಹೋಗಿರುವುದಾಗಿ ಸಮಜಾಯಿಷಿ ನೀಡಿದರು. ಕೋರ್ಟ್ ಆದೇಶಕ್ಕೂ ಸ್ಪಂದಿಸದೇ ಇರುವುದಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಬಳಿಕ ಬಸ್ ಅನ್ನು ಬಿಟ್ಟುಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿತು ಎಂದು ವರದಿ ಹೇಳಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)
