Vijayapur News: ವಿಜಯಪುರ ಜಿಲ್ಲೆಯ ಗೋಲಗೇರಿ ಗೊಲ್ಲಾಳೇಶ್ವರ ಮಹಾ ರಥೋತ್ಸವ, ಉತ್ತರ ಕರ್ನಾಟಕದಲ್ಲೇ ಅತೀ ಎತ್ತರದ ರಥ ವಿಶೇಷ
Vijayapur News:ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿ ಗ್ರಾಮದ ಗೊಲ್ಲಾಳೇಶ್ವರ ಜಾತ್ರೆ ನಿಮಿತ್ತ ಏ.12ರ ಶನಿವಾರ ಸಂಜೆ 6ಕ್ಕೆ ಗೋಲಗೇರಿಯಲ್ಲಿ ಭವ್ಯ ರಥೋತ್ಸವ ನಡೆಯಲಿದೆ.ಚಿತ್ರ ಮಾಹಿತಿ: ಮಲ್ಲಿಕಾಜು೯ನ ಎನ್.ಕೆಂಭಾವಿ, ವರದಿಗಾರರು ಸಿಂದಗಿ

Vijayapur News: ವಿಜಯಪುರದಿಂದ ಸಿಂದಗಿ ದಾಟಿಕೊಂಡು ಕಲಬುರಗಿಗೆ ಹೋಗುವಾಗ ಜೇವರ್ಗಿಗೆ ಮುನ್ನ ಸಿಗುವ ಊರೇ ಗೋಲಗೇರಿ. ಶ್ರೀಶೈಲದ ಮಲ್ಲಯ್ಯನೇ ಒಂದು ರೂಪದಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬಂದು ನೆಲೆಸಿದ್ದರಿಂದ ಗೋಲಗೇರಿ ಭವ್ಯ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಚೈತ್ರ ಮಾಸದ ಹುಣ್ಣಿಮೆ ದಿನ (ಈ ಬಾರಿ ಏ.12ರ ಶನಿವಾರ) ಪ್ರತಿ ವರ್ಷ ಇಲ್ಲಿ ಭವ್ಯ ರಥೋತ್ಸವ ನಡೆಯುತ್ತದೆ. ಕ್ಷೇತ್ರದ ಮಹಿಮೆ : ಈ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಈ ಕ್ಷೇತ್ರ ಶ್ರೀಶೈಲ ಗಿರಿಯ ಪ್ರತಿರೂಪ ಎಂದೇ ಖ್ಯಾತವಾಗಿದೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಇಲ್ಲಿನ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.
ಗೊಲ್ಲಾಳೇಶ್ವರ ಮಹಿಮೆ
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುಟ್ಟ ಗ್ರಾಮ ಗೋಲಗೇರಿ. ಅಂದಾಜು 6 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ನೂರಾರು ವರ್ಷಗಳ ಹಿಂದೆ ಕುರಿ ದಡ್ಡಿಯಾಗಿತ್ತು. ಪಕ್ಕದ ಢವಳಾರ ಗ್ರಾಮದ ಬಲ್ಲುಗ-ದುಗ್ಗಳಾದೇವಿ ದಂಪತಿಗೆ 10ನೇ ಶತಮಾನದ ಕೊನೆಯಲ್ಲಿ ಗೊಲ್ಲಾಳೇಶ ಎಂಬ ಪುತ್ರ ಜನಿಸುತ್ತಾನೆ. ಮನೆತನದ ಕುರಿ ಕಾಯುವ ವೃತ್ತಿಯನ್ನೇ ಮುಂದುವರಿಸಿದ ಗೊಲ್ಲಾಳೇಶ ಜನ್ಮಾಂತರದ ಸುಕೃತದಿಂದ ನಿರಂತರ ಶಿವನ ಧ್ಯಾನದಲ್ಲೇ ತೊಡಗುತ್ತಾನೆ. ಒಮ್ಮೆ ನಾಮಸ್ಮರಣೆಯಲ್ಲಿ ಮೈಮರೆತ ಸಂದರ್ಭದಲ್ಲೇ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೊರಟಿದ್ದ ನಂದಯ್ಯಸ್ವಾಮಿ ಎಂಬುವರ ಭೇಟಿಯಾಗುತ್ತದೆ. ಅವರಿಗೆ ಗೊಲ್ಲಾಳೇಶ ಒಂದು ನಾಣ್ಯ ನೀಡಿ ಶ್ರೀಶೈಲದಿಂದ ಲಿಂಗ ತೆಗೆದುಕೊಂಡು ಬರಲು ಹೇಳುತ್ತಾನೆ.
ಆದರೆ ಲಿಂಗ ತರುವುದನ್ನು ಮರೆತ ನಂದಯ್ಯಸ್ವಾಮಿ, ಹತ್ತಿರದಲ್ಲೇ ಇದ್ದ ಕುರಿ ಹಿಕ್ಕಿಯನ್ನು ಗೊಲ್ಲಾಳೇಶನಿಗೆ ನೀಡಿ, ‘ಇದೇ ಲಿಂಗ, ಗೊಬ್ಬರದ ಗುಂಡಿಯಲ್ಲಿ ಇಟ್ಟು ಪೂಜಿಸು’ ಎಂದು ಪೂಜೆಯ ವಿಧಿ ಬೋಧಿಸುತ್ತಾರೆ. ಗೊಲ್ಲಾಳೇಶ ಭಕ್ತಿಯಿಂದ ಅದನ್ನೇ ಪೂಜಿಸಲು ಆರಂಭಿಸುತ್ತಾನೆ. ಮನೆಯಲ್ಲಿದ್ದ ಹಾಲು, ಮೊಸರು, ತುಪ್ಪವನ್ನು ತಂದು ಪಂಚಾಮೃತ ಎಂದು ಗೊಬ್ಬರದ ಗುಂಡಿಗೆ ಹಾಕುತ್ತಾನೆ. ಜಿಪುಣನಾಗಿದ್ದ ಗೊಲ್ಲಾಳೇಶನ ತಂದೆ ಇದನ್ನು ಕಂಡು ಪಂಚಾಮೃತ ಮಾಡುತ್ತಿದ್ದ ಗೊಬ್ಬರದ ಗುಂಡಿಯನ್ನು ಕಾಲಿನಿಂದ ಚೆಲ್ಲಾಪಿಲ್ಲಿ ಮಾಡುತ್ತಾನೆ.
ಭಕ್ತಿಯಲ್ಲಿ ಮೈಮರೆತ ಗೊಲ್ಲಾಳೇಶ ಎಚ್ಚರಗೊಂಡು ತಂದೆಯ ಶಿರಚ್ಛೇದ ಮಾಡುತ್ತಾನೆ. ಕೂಡಲೇ ಪಾರ್ವತಿಯೊಂದಿಗೆ ಪ್ರತ್ಯಕ್ಷನಾದ ಶಿವ, ‘ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಒಂದು ರೂಪದಿಂದ ನಾನು ಇಲ್ಲಿ ಲಿಂಗದಲ್ಲಿ ನೆಲೆನಿಲ್ಲುವೆ’ ಎನ್ನುತ್ತಾನೆ. ಅಂದಿನಿಂದ ಗೊಲ್ಲಾಳೇಶನ ಭಕ್ತಿಗೆ ಮೆಚ್ಚಿ ಶಿವನೇ ಗಿರಿಯಿಂದ ಬಂದ ಈ ಕ್ಷೇತ್ರ ಗೊಲ್ಲಾಳಗಿರಿ, ಗೋಲಗಿರಿ ಎಂದು ಖ್ಯಾತಿ ಪಡೆಯುತ್ತದೆ.
ಹಲವು ರಾಜ್ಯಗಳ ಭಕ್ತರು
ತಂದೆಯ ಮೇಲೆ ಕ್ರೋಧಗೊಂಡ ಗೊಲ್ಲಾಳೇಶ ಶಿವನಲ್ಲಿ ಕ್ಷಮೆ ಯಾಚಿಸಿ ‘ನನ್ನ ತಂದೆ ತಾಯಿಗೆ ಮೋಕ್ಷ ನೀಡು’ ಎಂದು ಪ್ರಾರ್ಥಿಸುತ್ತಾನೆ. ಆಗ ಶಿವ, ‘ನಿನ್ನ ತಾಯಿಗೆ ಮೋಕ್ಷವಾಗುತ್ತದೆ. ಲೋಭದಿಂದಿದ್ದ ತಂದೆ ಇನ್ನೊಂದು ಜನ್ಮ ಎತ್ತಿದ ನಂತರ ಮುಕ್ತಿಯಾಗುತ್ತದೆ’ ಎನ್ನುತ್ತಾನೆ. ಗೊಲ್ಲಾಳೇಶನ ತಂದೆ ಪಕ್ಕದ ಯಾದಗಿರಿ ಜಿಲ್ಲೆಯ ಹಳೆಸಾಗರ ಎಂಬ ಗ್ರಾಮದಲ್ಲಿ ಮುತ್ತು ರತ್ನಗಳ ವ್ಯಾಪಾರಿ ಮನೆಯಲ್ಲಿ ಮರಿಯಪ್ಪನಾಗಿ ಜನಿಸುತ್ತಾರೆ. ಒಮ್ಮೆ ಮುತ್ತ ರತ್ನಗಳ ವ್ಯಾಪಾರಕ್ಕಾಗಿ ಸೊಲ್ಲಾಪುರಕ್ಕೆ ತೆರಳಿದ್ದ ಮರಿಯಪ್ಪ ಎತ್ತುಗಳ ಮೇಲೆ ಅಮೂಲ್ಯ ವಸ್ತುಗಳನ್ನು ಹೇರಿಕೊಂಡು ಗೋಲಗೇರಿ ಬಳಿ ಬಂದಾಗ ಆಯಾಸವಾಗಿ ನೆಲದಲ್ಲಿ ಒಂದು ಕಟ್ಟಿಗೆ ಗೂಟ ನೆಟ್ಟು ಎತ್ತುಗಳನ್ನು ಅದಕ್ಕೆ ಕಟ್ಟಿ ಮಲಗುತ್ತಾರೆ. ಲಿಂಗದ ಮೇಲೆ ನೆಟ್ಟ ಗೂಟವನ್ನು ತೆಗೆಯುವಂತೆ ಸ್ವಪ್ನವಾಗುತ್ತದೆ. ಆದರೆ ಮರಿಯಪ್ಪ ಇದನ್ನು ಗಮನಿಸದೆ ಮುಂದೆ ಊರಿಗೆ ತೆರಳುತ್ತಾರೆ. ಊರು ತಲುಪುತ್ತಿದ್ದಂತೆ ಎತ್ತುಗಳ ಕಣ್ಣು ಕಾಣದಂತಾಗಿ ಅದರ ಮೇಲಿದ್ದ ಸಂಪತ್ತೆಲ್ಲ ಅರಳಿಕಾಯಿ ಆಗಿರುತ್ತವೆ. ಸ್ವಪ್ನದ ವೃತ್ತಾಂತ ತಿಳಿದು ಗೋಲಗೇರಿಗೆ ಮರಳಿದ ಹಿರಿಯರೆಲ್ಲ ಗೂಟ ನೆಟ್ಟಿದ್ದ ಜಾಗದಲ್ಲಿ ತಗ್ಗು ತೆಗೆಸಿ ನೋಡಿದಾಗ ಲಿಂಗ ಉದ್ಭವವಾಗುತ್ತದೆ. ಅದನ್ನು ಇದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸಲಾಗುತ್ತದೆ. ಇದೇ ದೇವಸ್ಥಾನ ಇಂದು ಲಕ್ಷಾಂತರ ಭಕ್ತರ ಇಷ್ಟಾರ್ಥ ಕರುಣಿಸುವ ಗೊಲ್ಲಾಳೇಶ್ವರ ದೇವಸ್ಥಾನವಾಗಿದೆ. ಮರಿಯಪ್ಪನ ವಂಶಸ್ಥರೇ ಪೂಜೆ, ಉತ್ಸವಗಳನ್ನು ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಇತಿಹಾಸ ನೆನಪಿಸಿಕೊಳ್ಳುತ್ತಾರೆ.
ಉತ್ಸವಕ್ಕೆ ಭಕ್ತಸಾಗರ
ಚೈತ್ರ ಮಾಸದ ಹುಣ್ಣಿಮೆ ದಿನ ಗೋಲಗೇರಿಯಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಲಕ್ಷಾಂತರ ಜನ ಆಗಮಿಸುತ್ತಾರೆ. ಚೈತ್ರದಲ್ಲಿ ನಡೆಯುವ ರಥೋತ್ಸವದ ಹಿಂದಿನ ದಿನ ಸಾವಿರಾರು ಜನ ತಮ್ಮ ಮನೆಗಳಿಂದ ದೀಡ ನಮಸ್ಕಾರ ಹಾಕುತ್ತಾರೆ. ಮರಿಯಪ್ಪನವರು ಜನಿಸಿದ ಶ್ರಾವಣ ಮಾಸದ ಹುಣ್ಣಿಮೆ ನಂತರದ ದಶಮಿ ದಿನವೂ (ಇದನ್ನು ಲಿಂಗ ದಶಮಿ ಎನ್ನುತ್ತಾರೆ) ಇಲ್ಲಿ ಭವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.ಈ ಉತ್ಸವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ. ಪ್ರತಿ ಅಮಾವಾಸ್ಯೆ ಸುತ್ತಲಿನ 40 ಹಳ್ಳಿಗಳ 5 ಸಾವಿರಕ್ಕೂ ಹೆಚ್ಚು ಜನ ದೇವರ ದರ್ಶನಕ್ಕೆ ಆಗಮಿಸುತ್ತಾರೆ.
ಭವ್ಯ ರಥೋತ್ಸವ
ಚೈತ್ರ ಮಾಸದ ಹುಣ್ಣಿಮೆ ದಿನ ಇಲ್ಲಿ ಎಳೆಯಲಾಗುವ ರಥ ಉತ್ತರ ಕರ್ನಾಟಕದಲ್ಲೇ ಅತೀ ಎತ್ತರದ ರಥ ಎನ್ನಲಾಗಿದೆ. ಈ ರಥ 70 ಅಡಿ ಎತ್ತರವಿದ್ದು, 10 ಅಡಿಯ ಬೃಹತ್ ಚಕ್ರಗಳಿವೆ. ನೂರಾರು ವರ್ಷಗಳಿಂದ ರಥೋತ್ಸವ ನಡೆಯುತ್ತಿದೆ. 1916ರಲ್ಲಿ ಪ್ರಾಚೀನ ಕಾಲದ ರಥ ಶಿಥಿಲಗೊಂಡಾಗ ಅಂದಿನಿಂದ 1932ರವರೆಗೆ ಇಂದಿನ ಬೃಹತ್ ರಥ ನಿರ್ಮಿಸಲಾಯಿತು. ಅಂದಿನಿಂದ ಇದೇ ರಥ ಎಳೆಯಲಾಗುತ್ತಿದೆ. ಮೊದಲು ರಥೋತ್ಸವ ಶ್ರಾವಣದಲ್ಲೇ ನಡೆಯುತ್ತಿತ್ತು. ಶ್ರಾವಣ ಮಳೆಗಾಲವಾದ್ದರಿಂದ ಬೃಹತ್ ರಥೋತ್ಸವವನ್ನು ಚೈತ್ರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
