Vijayapura Airport: ವಿಜಯಪುರ ವಿಮಾನ ನಿಲ್ದಾಣ ಬಹುತೇಕ ಮುಕ್ತಾಯ, ಕೇಂದ್ರ ಪರಿಸರ ಇಲಾಖೆ ಅನುಮತಿ ನಂತರ ಲೋಕಾರ್ಪಣೆ
ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದ್ದು ಉದ್ಘಾಟನೆಗಾಗಿ ಕಾಯುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಬಳಿಕ ಉದ್ಘಾಟನೆಯಾಗಲಿದೆ.

ವಿಜಯಪುರ: ಹುಬ್ಬಳ್ಳಿಗಿಂತಲೂ ಮೊದಲೇ ಭೂಸ್ವಾಧೀನಗೊಂಡು ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿಳಂಬವಾಗುತ್ತಲೇ ಬಂದರೂ ಈಗ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದೆ.ಸತತ ಆರು ವರ್ಷಗಳ ಕಾಲ ನಿರಂತರ ಕಾಮಗಾರಿ ನಡೆದು ಉದ್ಘಾಟನೆಗೆ ಸಿದ್ದಗೊಂಡಿದೆ. ಈ ಹಿಂದೆ ಸಚಿವರಾಗಿದ್ದ ಗೋವಿಂದಕಾರಜೋಳ, ಎಂ.ಸಿ.ಮನಗೂಳಿ ಅವರ ನಂತರ ಹಾಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸತತ ಪ್ರಯತ್ನದ ಫಲವಾಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಅಣಿಯಾಗಿದೆ.ಸದ್ಯಕ್ಕೆ, ಕೇಂದ್ರ ಪರಿಸರ ಇಲಾಖೆಯ ಅನುಮತಿಗಳು ಮಾತ್ರ ಬಾಕಿ ಉಳಿದಿದ್ದು, ಇದು ಒಂದೆರಡು ತಿಂಗಳಲ್ಲಿ ದೊರೆಯುವ ನಿರೀಕ್ಷೆ ಇದೆ. ಈ ಪ್ರಕ್ರಿಯೆ ಮುಗಿದ ಕೂಡಲೇ ಇಲ್ಲಿನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ವಿಜಯಪುರದಿಂದ ಸಿಂದಗಿಗೆ ಹೋಗುವ ಮಾರ್ಗದಲ್ಲಿನ ಹೊರ ವಲಯದ ಬುರಣಾಪೂರ ಮತ್ತು ಮದಭಾವಿ ಗ್ರಾಮ ವ್ಯಾಪ್ತಿಯ 727 ಎಕರೆ ಜಾಗದಲ್ಲಿ 348 ಕೋಟಿ ರೂ. ವೆಚ್ಚದಲ್ಲಿ ಏರ್‍ಬಸ್-320 ವಿಮಾನಗಳ ಹಗಲು ಹಾರಾಟಕ್ಕಾಗಿ ಅಗತ್ಯ ಕಟ್ಟಡೋಪಕರಣಗಳ ಸಮೇತ ವಿಮಾನ ನಿಲ್ದಾಣವು ಪೂರ್ಣಪ್ರಮಾಣದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ. ವಿಮಾನ ಕಾರ್ಯಾಚರಣೆಗೆ ಅಗತ್ಯವಿರುವ ವಿಮಾನ ಅಗ್ನಿ ಸುರಕ್ಷತಾ ವಾಹನಗಳ (Aircraft Rescue Fire Fighting -AARF) ಖರೀದಿಸುವ ಕಾರ್ಯ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎನ್ನುವುದು ಸಚಿವ ಎಂ.ಬಿ.ಪಾಟೀಲರು ನೀಡುವ ವಿವರಣೆ.
ವಿಮಾನಗಳ ರಾತ್ರಿ ಹಾರಾಟಕ್ಕಾಗಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮತ್ತಿತರ ಸೌಲಭ್ಯಕ್ಕಾಗಿ ಅಂದಾಜು 317 ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದ್ದು, ಮಂಜೂರಿಗಾಗಿ ಡಿ.ಪಿ.ಆರ್ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆ ದೊರೆತ ನಂತರ ಎರಡನೇ ಹಂತದ ಕಾಮಗಾರಿಯೂ ಇಲ್ಲಿ ಆರಂಭವಾಗಲಿದೆ. ಇದರಿಂದ ಸುಸಜ್ಜಿತ ವಿಮಾನ ನಿಲ್ದಾಣ ಇದಾಗಲಿದೆ. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಳಗಾವಿ ಹಾಗೂ ಕಲಬುರಗಿಯಲ್ಲಿ ವಿಮಾನ ನಿಲ್ದಾಣಗಳಿದ್ದು. ಬಳಕೆಯಲ್ಲಿವೆ. ಇವುಗಳ ನಂತರ ನಾಲ್ಕನೇ ವಿಮಾನ ನಿಲ್ದಾಣ ಇದಾಗಲಿದೆ. ಬಳ್ಳಾರಿಯಲ್ಲಿ ಜಿಂದಾಲ್ ಹಾಗೂ ಬೀದರ್‌ನಲ್ಲಿ ವಾಯು ನೆಲೆಯ ನಿಲ್ದಾಣವಿದೆ.
ವಿಜಯಪುರ ಜಿಲ್ಲೆ ಉದ್ಯಮ ವಿಸ್ತರಣೆ
ವಿಮಾನ ನಿಲ್ದಾಣಕ್ಕೆ ಪೂರಕವಾಗಿ ವಿಜಯಪುರದಲ್ಲಿ ಕೈಗಾರಿಕಾ ವಲಯದ ಪ್ರಗತಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಉದ್ಯಮಗಳು ಹಾಗೂ ಉದ್ಯಮಿಗಳು ವಿಜಯಪುರದತ್ತ ಮುಖ ಮಾಡಲು ಸಹಕಾರಿಯಾಗಲಿದೆ ಎನ್ನುವುದು ನಂಬಿಕೆ.
ಜನವರಿ-2024 ರಿಂದ ಜನವರಿ-2025 ರವರೆಗಿನ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3721 ಕೈಗಾರಿಕೆಗಳು ಸ್ಥಾಪನೆಯಾಗಿದ್ದು, 7,392 ಲಕ್ಷ ರೂಪಾಯಿಗಳ ಹೂಡಿಕೆಯೊಂದಿಗೆ 21547 ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ. * ಜಿಲ್ಲೆಯಲ್ಲಿ ಒಟ್ಟು 3239 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಈಗಾಗಲೇ ಕೊಲ್ಹಾರ ತಾಲೂಕಿನಲ್ಲಿ ಅಭಿವೃದ್ಧಿಪಡಿಸಲಾಗಿರುವ 614 ಎಕರೆ ಕೈಗಾರಿಕಾ ಪ್ರದೇಶದಲ್ಲಿ 245 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಲಾಗಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಇಚ್ಛೆವುಳ್ಳವರಿಗೆ ಹಂಚಿಕೆ ಮಾಡಲು 411 ನಿವೇಶನಗಳು ಲಭ್ಯವಿರುತ್ತವೆ. ಇಂಡಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಕ್ರಮವಾಗಿ 19 ಮತ್ತು 6 ಎಕರೆ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿ ಹಂತದಲ್ಲಿವೆ ಎನ್ನುವುದು ಸಚಿವ ಎಂ.ಬಿ.ಪಾಟೀಲರ ಹೇಳಿಕೆ.
ಕೆ.ಐ.ಎ.ಡಿ.ಬಿ ಅಲಿಯಾಬಾದ ಹಂತ-3 ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ 1870 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಮುಳವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ 300 ಎಕರೆ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಉತ್ಪಾದನಾ ಕ್ಲಸ್ಟರನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ.
ಸಾರ್ವಜನಿಕ ವಲಯದ ಪ್ರತಿಷ್ಠಿತ ಉದ್ಯಮವಾದ ಕರ್ನಾಟಕ ಸೋಪ್ಸ್ & ಡಿಟಜೆರ್ಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯ ಒಂದು ಕಾರ್ಖಾನೆಯನ್ನು ನಾವು ವಿಜಯಪುರದಲ್ಲೂ ಪ್ರಾರಂಭಿಸಲಿದ್ದೇವೆ. ಕೆ.ಎಸ್.ಡಿ.ಎಲ್ ಸಾಬೂನು ಮೇಳದಲ್ಲಿ ಘೋಷಿಸಿರುವಂತೆ, ಈ ಯೋಜನೆಗಾಗಿ ಇಟ್ಟಂಗಿಹಾಳ ರಸ್ತೆಯಲ್ಲಿ ಕನಿಷ್ಠ 10 ಎಕರೆ ಜಮೀನನ್ನು ಕೊಡಲಾಗುವುದು. ಇದರಿಂದ 400 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ ಕೆ.ಎಸ್.ಡಿ.ಎಲ್ ಉತ್ಪನ್ನಗಳಿಗೆ ನೆರೆಯ ಮಹಾರಾಷ್ಟ್ರದಲ್ಲೂ ಮಾರುಕಟ್ಟೆ ಲಭ್ಯವಾಗಲಿದೆ. ಇತ್ತಿಚೆಗೆ ವಿಜಯಪುರದಲ್ಲಿ ನಡೆದ ಸಾಬೂನು ಮೇಳದಲ್ಲಿ 42 ಲಕ್ಷ ರೂಪಾಯಿ ವಹಿವಾಟು ನಡೆಸಿದ್ದು, ಇದುವರೆಗೆ ಎಲ್ಲ ಮೇಳಗಳಲ್ಲಿಯೇ ಹೆಚ್ಚಿನ ವಹಿವಾಟು ನಡೆದಿದ್ದು ದಾಖಲೆಯಾಗಿದೆ.
ಸೌರವಿದ್ಯುತ್ ಘಟಕಗಳು
ವಿಜಯಪುರ ಈಗ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧವಾಗಿದೆ. ಇದನ್ನು ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿಯೂ ಮಾಡಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ.
ಇದಕ್ಕಾಗಿ ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಯಂತ್ರಗಳು & ಉಪಕರಣಗಳು, ನಾನ್-ಮೆಟಾಲಿಕ್ ಖನಿಜೋತ್ಪನ್ನಗಳು, ಕೃಷಿ & ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸುಟಿಕಲ್ಸ್ ಮೆಡಿಸಿನಲ್ & ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ & ಲೋಹೋತ್ಪನ್ನಗಳು- ಹೀಗೆ 6 ವಲಯಗಳ ಕೈಗಾರಿಕಾ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು.
ಜೊತೆಗೆ ಮುಳವಾಡ ಗ್ರಾಮದಲ್ಲಿ ಕೆಐಎಡಿಬಿ ವ್ಯಾಪ್ತಿಯಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಮುಖ್ಯವಾಗಿ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ ಸೂಕ್ತವಾಗಿರುವ ನಮ್ಮ ಜಿಲ್ಲೆಯನ್ನು ಇವೆರಡೂ ವಲಯಗಳ ಉದಯೋನ್ಮುಖ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಸುಜ್ಲಾನ್ ಪವನ ವಿದ್ಯುತ್ ಘಟಕ ನಮ್ಮ ಜಿಲ್ಲೆಯಲ್ಲಿ 5,000 ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಪ್ರಾರಂಭಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 100 ಎಕರೆ ಭೂಮಿಯನ್ನು ಕೊಡಲಾಗುವುದು. ಇದೇ ರೀತಿಯಲ್ಲಿ ರೆನೈಸಾನ್ಸ್ ಕಂಪನಿಯು ಸೋಲಾರ್ ಪ್ಯಾನಲ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ವಿಜಯಪುರ ಜಿಲ್ಲೆಯಲ್ಲಿ 6,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ, ಸ್ಥಾಪಿಸಲಿದೆ. ಇದು ಮುಂದಿನ ದಿನಗಳಲ್ಲಿ 20,000 ಮೆಗಾವ್ಯಾಟ್ ಮಟ್ಟವನ್ನು ಮುಟ್ಟಲಿದ್ದು, ಇದರಿಂದ ಗರಿಷ್ಠ 3,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎಂಬಿ ಪಾಟೀಲ ಹೇಳುತ್ತಾರೆ.

ವಿಭಾಗ