Vijayapura News: ವಿಜಯಪುರದಲ್ಲಿ ಶೂಟೌಟ್; ದರೋಡೆಕೋರರ ಮೇಲೆ ಪೊಲೀಸರ ಗುಂಡಿನ ದಾಳಿ, ಓರ್ವ ವಶ
ವಿಜಯಪುರದಲ್ಲಿ ಪೊಲೀಸರು ದರೋಡೆಕೋರರ ವಿರುದ್ಧ ಗುಂಡಿನ ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶ ಮೂಲದ ಒಬ್ಬ ದರೋಡೆಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಸಂದರ್ಭದಲ್ಲಿ ನಾಲ್ವರು ದರೋಡೆಕೋರರು ಪರಾರಿಯಾಗಿದ್ದಾರೆ.

ವಿಜಯಪುರ: ವಿಜಯಪುರದಲ್ಲಿ ಕಳ್ಳರು, ದರೋಡೆಕೋರರ ಹಾವಳಿ ಹೆಚ್ಚಾಗಿದೆ. ದರೋಡೆಕೋರರ ಹೆಡೆಮೂರಿ ಕಟ್ಟಲು ಪೊಲೀಸರು ಪಣ ತೊಟ್ಟಿದ್ದಾರೆ. ಇಂದು ನಸುಕಿನ ಜಾವ ವಿಜಯಪುರದಲ್ಲಿ ಪೊಲೀಸರು ದರೋಡೆಕೋರರ ವಿರುದ್ಧ ಗುಂಡಿನ ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶ ಮೂಲದ ಒಬ್ಬ ದರೋಡೆಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಸಂದರ್ಭದಲ್ಲಿ ನಾಲ್ವರು ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಜಯಪುರದ ಸಂತೋಷ ಕನ್ನಾಳ ಎಂಬುವರ ಮನೆಗೆ ದರೋಡೆಕೋರರು ನುಗ್ಗಿದ್ದರು. ಈ ಸಂದರ್ಭದಲ್ಲಿ ದರೋಡೆಕೋರರು ಸಂತೊಷ್‌ಗೆ ಚಾಕುವಿನಿಂದ ಇರಿದು ಮೊದಲ ಮಹಡಿಯಿಂದ ಕೆಳಗೆ ತಳ್ಳಿದ್ದರು. ಸಂತೋಷ ಕನ್ನಾಳ ಅವರ ಪತ್ನಿಯ ತಾಳಿ ಕಿತ್ತುಕೊಂಡು ಪರಾರಿಯಾಗಿದ್ದರು. ಗಾಯಗೊಂಡ ಸಂತೋಷ ಕನ್ನಾಳ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಗಂಭೀರವಾಗಿ ತೆಗೆದುಕೊಂಡ ಪೊಲೀಸರು ದರೋಡೆಕೋರರ ಹೆಡೆಮೂರಿ ಕಟ್ಟಲು ನಿರ್ಧರಿಸಿದರು. ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತನಿಖೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು.
ಈ ದರೋಡೆಕೋರರು ಅಂತರ್‌ರಾಜ್ಯದ ತಂಡ, ವಿಜಯನಗರದ ಹೊರಭಾಗದಲ್ಲಿ ಬೀಡುಬಿಟ್ಟಿದೆ ಎಂಬ ಖಚಿತ ಮಾಹಿತಿ ದೊರಕಿದ ಬಳಿಕ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗ್ಗಿನ ಜಾವ ಈ ದರೋಡೆಕೋರರು ಟೋಲ್ ಪ್ಲಾಜಾ ಬಳಿ ಎನ್ ಎಚ್ 50 ಹತ್ತಿರ ಬೈಕ್‌ನಲ್ಲಿ ತೆರಳುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ. ಪೊಲೀಸರನ್ನು ನೋಡಿದ ತಕ್ಷಣ ದರೋಡೆಕೋರರು ಬೈಕನ್ನು ಅಲ್ಲೇ ಬಿಟ್ಟು ಪಕ್ಕದ ಜಮೀನು ಪ್ರವೇಶಿಸಿ ಓಡಿದ್ದಾರೆ.
ಈ ಸಮಯದಲ್ಲಿ ಪೊಲೀಸರು ಐದು ಸುತ್ತಿನ ಗುಂಡು ಹಾರಿಸಿದ್ದಾರೆ. ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್ಐ ಘೋರಿ ಐದು ಸುತ್ತು ಗುಂಡು ಹಾರಿಸಿದರೂ ದರೋಡೆಕೋರರು ಕತ್ತಲೆಯಲ್ಲಿ ಕಣ್ಮರೆಯಾಗಿದ್ದಾರೆ. ಇದಾದ ಬಳಿಕ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಪೊಲೀಸರ ಗುಂಡು ಬಡಿದು ಜಮೀನಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಓರ್ವ ದರೋಡೆಕೋರನಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತ ಮಧ್ಯಪ್ರದೇಶ ಮೂಲದವನು. ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟೌಟ್ ನಡೆದಿರುವ ಸ್ಥಳಕ್ಕೆ ಎಸ್‌ಪಿ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಇತರ ಅಧಿಕಾರಿಗಳ ಭೇಟಿ ನೀಡಿದ್ದಾರೆ.
