ವಿಜಯಪುರ: ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆಗೆ ವ್ಯಾಪಕ ಖಂಡನೆ; ಇಬ್ಬರ ಬಂಧನ
ಕೆಲಸ ಮಾಡುವ ವಿಚಾರವಾಗಿ ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಸದ್ಯ ಹಲ್ಲೆಗೊಳಗಾದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಹಲ್ಲೆ ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯಪುರ: ಮೂವರು ಕಾರ್ಮಿಕರ ಮೇಲೆ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಹೊರವಲಯದ ಗಾಂಧಿನಗರದ ಸ್ಟಾರ್ ಚೌಕ್ ಬಳಿ ಇರುವ ಇಟ್ಟಿಗೆ ಭಟ್ಟಿಯಲ್ಲಿ ನಡೆದ ಅಮಾನುಷ ಹಲ್ಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆ ಕುರಿತು ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಹಾಗೂ ಖಂಡನೆ ವ್ಯಕ್ತವಾಗದೆ. ಇದೀಗ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಇಟ್ಟಿಗೆ ಭಟ್ಟಿಯ ಮಾಲೀಕ ಹಾಗೂ ಇತರರು, ಮೂವರು ಕಾರ್ಮಿಕರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಕೆಲಸ ಮಾಡುವ ವಿಚಾರವಾಗಿ ಮುಂಗಡ ಹಣ ನೀಡಿದ ಕುರಿತು ಹಲ್ಲೆ ನಡೆಸಲಾಗಿದೆ. ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಲಾಗಿದೆ. ಇದೇ ವೇಳೆ ಒಬ್ಬರು ಅವರನ್ನು ಕಾಲಿನಿಂದ ಬಿಗಿಯಾಗಿ ತುಳಿದು ಹಿಡಿದಿದ್ದಾರೆ. ಮತ್ತೊಬ್ಬರು ಪೈಪ್‌ಗಳಿಂದ ಪಾದಗಳಿಗೆ ಬಲವಾಗಿ ಹೊಡೆದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಟ್ಟಿಗೆ ಭಟ್ಟಿಯ ಕೆಲಸಕ್ಕೆ ಬಂದಿದ್ದ ಜಮಖಂಡಿ ಮೂಲದ ಕಾರ್ಮಿಕರು, ಹಬ್ಬಕ್ಕೆಂದು ಊರಿಗೆ ಹೋಗಿ ಮರಳಿ ಬರುವಾಗ ತಡವಾಗಿತ್ತು. ಇದೇ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಮಾಲೀಕ ಖೇಮು ರಾಥೋಡ್ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಇಟ್ಟಿಗೆ ಭಟ್ಟಿಯ ಮಾಲೀಕನಾದ ಖೇಮು ರಾಥೋಡ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹೀಗಾಗಿ ಪ್ರಮುಖ ಆರೋಪಿ ಖೇಮು ರಾಥೋಡ್ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಹಲ್ಲೆಗೆ ಕೈಜೋಡಿಸಿದ ಮತ್ತೆ ಮೂವರು ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಎಸ್‌ಪಿ ಪ್ರತಿಕ್ರಿಯೆ
ಪ್ರಕರಣ ಸಂಬಂಧ ವಿಜಯಪುರ ಜಿಲ್ಲಾ ಎಸ್‌ಪಿ ಲಕ್ಷ್ಮಣ ನಿಂಬರಗಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. "ಹಲ್ಲೆಯ ವಿಡಿಯೋ ವೈರಲ್ ಆಗಿತ್ತು. ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆಹಚ್ಚಿ ದೂರು ದಾಖಲಿಸಿಲಾಗಿದೆ. ಆರೋಪಿ ಖೇಮು ರಾಥೋಡ್ ಹಾಗೂ ಮತ್ತೊಬ್ಬನನ್ನು ಬಂಧಿಸಲಾಗಿದೆ. ಇತರ ಮೂವರು ಆರೋಪಿಗಳನ್ನು ಬಂಧಿಸಲು ಜಾಲ ಬೀಸಲಾಗಿದೆ" ಎಂದು ಹೇಳಿದ್ದಾರೆ.
