Monsoon Rain: ಮುಂಗಾರು ಮಳೆ ಪ್ರವೇಶ ಸನಿಹ, ಬಿತ್ತನೆ ಕಾರ್ಯಕ್ಕೆ ಸಜ್ಜಾದ ಅನ್ನದಾತ, ವಿಜಯಪುರದಲ್ಲಿ 70,132 ಹೆಕ್ಟೇರ್ ಬಿತ್ತನೆ ಗುರಿ
ಕೃಷಿ ಪ್ರಧಾನ ಭಾರತದಲ್ಲಿ ಮುಂಗಾರು ಮಳೆಯ (Mansoon Rain) ನಿರೀಕ್ಷೆಯಲ್ಲಿ ರೈತರು ಪುಳಕಗೊಂಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿಯೂ (Vijayapura District) ಮುಂಗಾರು ಹಂಗಾಮದಲ್ಲಿ 70,132 ಹೆಕ್ಟೇರ್ ಬಿತ್ತನೆ ಗುರಿ ಗುರಿ ಹಾಕಿಕೊಳ್ಳಲಾಗಿದೆ.
ವಿಜಯಪುರ: ಮುಂಗಾರು ಮಳೆ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 70,132 ಹೆಕ್ಟೇರ್ ಬಿತ್ತನೆ ಗುರಿ ಇದೆ. ಅನ್ನದಾತ ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದು ಭೂತಾಯಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆಯ ಸಿಂಚನದೊಂದಿಗೆ ಬಿತ್ತನೆ ಆರಂಭವಾಗಲಿದೆ.
ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಬಿತ್ತನೆ ಬೀಜ ಗೊಬ್ಬರ ವಿತರಣೆಯಾಗಬೇಕು. ಗೊಬ್ಬರ ಮಾರಾಟ ಅಂಗಡಿಗಳಲ್ಲಿ ಕಡ್ಡಾಯವಾಗಿ ದಾಸ್ತಾನು, ದರ ವಿವರ ನಮೂದಿಸುವಂತೆ ಸೂಚನೆ ನೀಡಲಾಗಿದ್ದು. ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಲು ಹಾಗೂ ಹೆಚ್ಚಿನ ಬೆಲೆಗೆ ಮಾರಾಟವಾಗದಂತೆ ನೋಡಿಕೊಳ್ಳ ಸೂಚಿಸಲಾಗಿದೆ. ಇನ್ನು ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ ಮತ್ತು ರೈತರಿಂದ ಯಾವುದೇ ದೂರುಗಳು ಬಾರದ ಹಾಗೆ ನೋಡಿಕೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ -ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದ್ದಾರೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 70,132 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹೊಂದಲಾಗಿದ್ದು, ಮುಂಗಾರು ಹಂಗಾಮಿನಲ್ಲಿ ಹೆಸರು, ತೊಗರಿ, ಉದ್ದು, ಮುಸುಕಿನ ಜೋಳ, ಸೂರ್ಯಕಾಂತಿ, ಸಜ್ಜೆ ಹಾಗೂ ಕಬ್ಬು ಬಹುಮುಖ್ಯವಾಗಿ ಬೆಳೆಯಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 13265.5 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಜಿಲ್ಲಾಡಳಿತ ದಾಸ್ತಾನು ಮಾಡಿಕೊಂಡಿದ್ದು, ಈ ಎಲ್ಲ ಬಿತ್ತನೆ ಬೀಜಗಳನ್ನು ರಿಯಾಯ್ತಿ ದರದಲ್ಲಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.
ಕೃಷಿ ಇಲಾಖೆ ಅಧಿಕಾರಿಗಳು ಈ ಎಲ್ಲ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರದ ಮೂಲಕ ವಿತರಿಸುವ ನಿಟ್ಟಿನಲ್ಲಿ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ 79,158 ಮೆಟ್ರಿಕ್ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.
ರೈತರ ಜೊತೆಗೆ ಮುಂಗಾರು ಹಂಗಾಮು ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಪಾತ್ರ ಸಹ ದೊಡ್ಡದಿದ್ದು, ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಕಾರ್ಯಪ್ರವೃತ್ತರಾಗಿದ್ದು, ಕಚೇರಿಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸುತ್ತಿದ್ದಾರೆ.
242.50 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ
ಕಳೆದ ಮಾರ್ಚ್ ತಿಂಗಳಿನಿಂದ ಮೇ.23 ರವರೆಗೆ ಸುರಿದ ವಿವಿಧ ಹಂತದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 242.50 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ದ್ರಾಕ್ಷಿ, ದಾಳಿಂಬೆ ಮೊದಲಾದ ತೋಟಗಾರಿಕಾ ಬೆಳೆಗಳು ಅಕಾಲಿಕ ಮಳೆಗೆ ಸಿಲುಕಿ ಹಾಳಾಗಿದ್ದವು, ಸರಿಸುಮಾರು 110.80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ, 36.50 ಹೆಕ್ಟೇರ್‌ನಷ್ಟು ಲಿಂಬೆ, 38 ಹೆಕ್ಟೇರನಷ್ಟು ತರಕಾರಿ ಬೆಳೆಗಳು, 11.80 ಹೆಕ್ಟೇರ್ ಬಾಳೆ, 15 ಹೆಕ್ಟೇರ್ ಪಪ್ಪಾಯಿ ಬೆಳೆಗೆ ನಾಶವಾಗಿತ್ತು. ತಾಲೂಕಾವಾರು ವಿಶ್ಲೇಷಿಸಿದಾಗ ಬಸವನ ಬಾಗೇವಾಡಿಯಲ್ಲಿ 180.60 ಹೆಕ್ಟೇರ್, ಸಿಂದಗಿ ತಾಲೂಕಿನಲ್ಲಿ 50.80, ವಿಜಯಪುರ ತಾಲೂಕಿನಲ್ಲಿ 4.80, ಚಡಚಣ ತಾಲೂಕಿನಲ್ಲಿ 3.90, ದೇವರಹಿಪ್ಪರಗಿಯಲ್ಲಿ 1.60, ಮುದ್ದೇಬಿಹಾಳದಲ್ಲಿ 0.80 ಹೆಕ್ಟೇರ್ ಬೆಳೆಹಾನಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ 366 ರೈತರಿಗೆ 49.04 ಲಕ್ಷ ರೂ. ಪರಿಹಾರ ವಿತರಣೆ ಮಾಡಬೇಕಾಗಿದೆ.