ವಿಜಯಪುರದಲ್ಲಿ ಕುಡಿಯುವ ನೀರಿಗೂ ತತ್ವಾರ; ಬತ್ತಿದ ಭೀಮೆ, ಹೆಚ್ಚಿದ ಆತಂಕ-vijayapura drought news drinking water problem in vijaypur bhima river dried up in bijapura smu ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರದಲ್ಲಿ ಕುಡಿಯುವ ನೀರಿಗೂ ತತ್ವಾರ; ಬತ್ತಿದ ಭೀಮೆ, ಹೆಚ್ಚಿದ ಆತಂಕ

ವಿಜಯಪುರದಲ್ಲಿ ಕುಡಿಯುವ ನೀರಿಗೂ ತತ್ವಾರ; ಬತ್ತಿದ ಭೀಮೆ, ಹೆಚ್ಚಿದ ಆತಂಕ

Vijayapura Drought: ಬರ‌ದ‌ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದ ವಿಜಯಪುರ‌ ಕೆಲ ವರ್ಷಗಳಿಂದ ವರುಣನ ಕೃಪೆಯಿಂದಾಗಿ ಬರ ತಾಂಡವವಾಡಿರಲಿಲ್ಲ, ಆದರೆ ಈ ವರ್ಷ ಮತ್ತೆ ಬರ ಸಿಡಿಲಿನಂತೆ ಅಪ್ಪಳಿಸಿ ಬದುಕು ನಲುಗುವಂತೆ ಮಾಡಿದೆ. (ವರದಿ: ಸಮೀವುಲ್ಲಾ ಉಸ್ತಾದ)

ಭೂತನಾಳ ಕೆರೆ
ಭೂತನಾಳ ಕೆರೆ

ವಿಜಯಪುರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಸಾಮಾನ್ಯ ಸಮಸ್ಯೆ ಎನ್ನುವಂತೆ ಮಾತ್ರ ಕಾಡುತ್ತಿತ್ತು. ಕೆಲ‌ ವರ್ಷಗಳಿಂದ ಈ ಸಮಸ್ಯೆಗೆ ಕೂಡ ಬ್ರೇಕ್ ಬಿದ್ದಿತ್ತು. ಆದರೆ ಈಗ ಮತ್ತೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಈ ಹಿಂದಿನ ಪರಿಸ್ಥಿತಿ ಮರುಕಳಿಸಲಿದೆಯೇ ಎಂಬ ಆತಂಕ ಜನತೆಯಲ್ಲಿ ಮೂಡಿದೆ. ವಿಜಯಪುರಕ್ಕೆ ನೀರು ಪೂರೈಕೆಯಾಗುವ ಭೂತನಾಳ ಕೆರೆ ಬತ್ತಿ ಹೋಗಿ ವಿಜಯಪುರ ನಗರದ 5 ವಾರ್ಡ್​ನ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ ಬರೊಬ್ಬರಿ 10-15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಆದರೆ ಈ ಸಮಸ್ಯೆಗೆ‌ ನಾಂದಿ ಹಾಡುವ‌ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಜನತೆಯಲ್ಲಿ ಹೊಸ ಭರವಸೆ‌ ಮೂಡಿಸಿದೆ.

ಬೇಸಿಗೆ ಆರಂಭದ ಹಂತದಲ್ಲೇ ಭೂತನಾಳ ಕೆರೆ ಬತ್ತಿ ಹೋಗಿತ್ತು. ಈ ಕೆರೆಯ ನೀರೇ ವಿಜಯಪುರ ನಗರದ ಐದು ವಾರ್ಡಿನ ಜನರಿಗೆ ಕುಡಿಯುವ ನೀರಿನ ಮೂಲವಾಗಿತ್ತು. ಈ‌ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಈಗ ವಯಾಡಕ್ಟ್ ಮೂಲಕ ಕೆರೆಗೆ ನೀರನ್ನು ಬಿಟ್ಟಿದ್ದು ನಗರ ಜನತೆ ಸಂತಸಗೊಂಡಿದ್ದಾರೆ.

ತಿಡಗುಂದಿ ವಯಾಡಕ್ಟ್ ಮೂಲಕ ಭೂತನಾಳ ಕೆರೆಗೆ ನೀರು ತುಂಬಿಸುವಂತೆ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದ್ದರು. ಇದರನ್ವಯ ಈಗಾಗಲೇ ಕೆರೆಗೆ ನೀರು ತುಂಬಿಸುವ ಕೆಲಸ ಕೂಡಾ ಆರಂಭವಾಗಿ ಭೂತನಾಳ ಕರೆಗೆ ನೀರು ಹರಿ ಬಿಡಲಾಗಿದೆ. ಸುಮಾರು 50 ಲಕ್ಷ ವೆಚ್ಚದಲ್ಲಿ ಕೆರೆ ತುಂಬಿಸುವ ಕೆಲಸ ಕೈಗೊಳ್ಳಲಾಗಿದ್ದು, ವಯಾಡಕ್ಟ್ ಒಡೆದು ಅದರಿಂದ ಪೈಪ್ ಮೂಲಕ ಕೆರೆಗೆ ನೀರು ತುಂಬಿಸಲಾಗಿದೆ. ಈ ಬಾರಿ ಕೆರೆ ತುಂಬಿಸಿದ್ದರಿಂದ ಮುಂಬರು‌ವ ಎರಡು ತಿಂಗಳುಗಳ ಕಾಲ ನಗರದ ಐದು ವಾರ್ಡಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುವದಿಲ್ಲ ಎಂದು ಪಾಲಿಕೆ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಪೂರೈಕೆಯಾಗುತ್ತಿರುವ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡುವಂತೆ ಪಾಲಿಕೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಈ ಕುರಿತಂತೆ ಹಲವು ವಾರ್ಡಗಳಲ್ಲಿ ಈಗಾಗಲೇ ಡಂಗೂರ ಸಹ ಸಾರಿದ್ದಾರೆ. ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳಬೇಕು, ವಾಹನ ತೊಳೆಯಲು ಅಥವಾ ಬೇರೆ ಯಾವುದೇ ಕಾರ್ಯಗಳಿಗೆ ಈ ನೀರನ್ನು ಬಳಕೆ ಮಾಡಬಾರದು, ಮಾಡಿದರೆ ಅಂಥವರ ನೀರಿನ ಕನೆಕ್ಷನ್ ಕಟ್ ಮಾಡಲಾಗುವುದು ಎಂದು ಪಾಲಿಕೆ ಅಧೀಕಾರಿಗಳು ಸೂಚನೆ ನೀಡಿದ್ದಾರೆ.

ಬರ ಸಿಡಿಲಿನಂತೆ ಅಪ್ಪಳಿಸಿದ ಬರ

ಬರ‌ದ‌ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದ ವಿಜಯಪುರ‌ ಕೆಲ ವರ್ಷಗಳಿಂದ ವರುಣನ ಕೃಪೆಯಿಂದಾಗಿ ಬರ ತಾಂಡವವಾಡಿರಲಿಲ್ಲ, ಆದರೆ ಈ ವರ್ಷ ಮತ್ತೆ ಬರ ಸಿಡಿಲಿನಂತೆ ಅಪ್ಪಳಿಸಿ ಬದುಕು ನಲುಗುವಂತೆ ಮಾಡಿದೆ. ಡೋಗಿ ಬರ ಮೊದಲಾದ ಭೀಕರ ಬರದ ದಿನ ನೋಡಿರುವ ವಿಜಯಪುರದಲ್ಲಿ ಬ್ರಿಟಿಷ್ ಕಾಲದಲ್ಲಿಯೇ ಬರಗಾಲ ನಿವಾರಣಾ ಕೇಂದ್ರ ಆರಂಭಿಸಲಾಗಿತ್ತು, ಈ ಕೇಂದ್ರ ಆರಂಭಿಸಿದ ಹಿನ್ನೆಲೆ ಆಧರಿಸಿ ಈ ಭಾಗದ ಬರದ ಭೀಕರತೆ ಅಂದಾಜಿಸಬಹುದಾಗಿದೆ. ದ್ರಾಕ್ಷಿ, ನಿಂಬೆ, ದಾಳಿಂಬೆ ಮೊದಲಾದ ಬೆಳೆಗಳಿಗೆ ಹೆಸರುವಾಸಿಯಾದ ಇಂಡಿಯಲ್ಲೂ ಬರ ಧಾಂಗುಡಿ ಇರಿಸಿದೆ.

ಬತ್ತಿದ ಭೀಮೆ : ಹೆಚ್ಚಿದ ಆತಂಕ

ಇಂಡಿ, ಸಿಂದಗಿ, ಆಲಮೇಲ, ಚಡಚಣ ಮೊದಲಾದ ತಾಲೂಕುಗಳಿಗೆ ಜೀವ ನದಿಯಾಗಿರುವ ಭೀಮೆ ಒಡಲು ಬರಿದಾಗುತ್ತಿದೆ. ಭೀಮಾ ನದಿಗೆ 8 ಬ್ಯಾರೇಜ್ ನಿರ್ಮಿಸಲಾಗಿದ್ದು, ಕರ್ನಾಟಕ ವ್ಯಾಪ್ತಿಯಲ್ಲಿ ನಾಲ್ಕು ಬ್ಯಾರೇಜ್ ಗಳಿವೆ. ಬಹುತೇಕ ಬ್ಯಾರೇಜ್ ನೀರು ಇಲ್ಲ‌ ಎನ್ನುವಷ್ಟು ಪ್ರಮಾಣದಲ್ಲಿ‌ ಉಳಿದಿದೆ. ಹೀಗಾಗಿ ಇಂಡಿ, ಸಿಂದಗಿ, ಚಡಚಣ ಭಾಗದಲ್ಲಿ ತೀವ್ರ ನೀರಿನ ಹಾಹಾಕಾರ‌ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ 55 ಟ್ಯಾಂಕರ್ ಮೂಲಕ 112 ಟ್ರಿಪ್ ಗಳಂತೆ ನೀರು ಪೂರೈಕೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈಗಾಗಲೇ 7 ಖಾಸಗಿ ಕೊಳವೆ ಬಾವಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ವರದಿ: ಸಮೀವುಲ್ಲಾ ಉಸ್ತಾದ