ಕನ್ನಡ ಸುದ್ದಿ  /  Karnataka  /  Vijayapura News 14 Month Old By Fell Into Open Borewell In Lachyana Indi Taluk Rescue Operation In Progress Smu

ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ; ಪ್ರಗತಿಯಲ್ಲಿದೆ ರಕ್ಷಣಾ ಕಾರ್ಯ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕನ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಅಗ್ನಿಶಾಮಕ ಸಿಬ್ಬಂದಿ ಜೆಸಿಬಿ ಬಳಸಿ ಬಾಲಕನನ್ನು ರಕ್ಷಿಸುವ ಕೆಲಸ ಮುಂದುವರಿಸಿದ್ದಾರೆ. ವಿವರ ಈ ವರದಿಯಲ್ಲಿದೆ. (ವರದಿ - ಸಮೀವುಲ್ಲಾ ಉಸ್ತಾದ್, ವಿಜಯಪುರ)

ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ ಸಾತ್ವಿಕ್ ಮುಜಗೊಂಡ (ಎಡ ಚಿತ್ರ); ಕೊಳವೆ ಬಾವಿ ಸಮೀಪ ರಾತ್ರಿಯೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ (ಬಲ ಚಿತ್ರ)
ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ ಸಾತ್ವಿಕ್ ಮುಜಗೊಂಡ (ಎಡ ಚಿತ್ರ); ಕೊಳವೆ ಬಾವಿ ಸಮೀಪ ರಾತ್ರಿಯೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ (ಬಲ ಚಿತ್ರ) (SMU)

ವಿಜಯಪುರ: ಇಂಡಿ ತಾಲೂಕು ಲಚ್ಯಾಣ ಗ್ರಾಮದ ತೋಟದ ವಸ್ತಿಯಲ್ಲಿ ಆಟವಾಡಲು ಹೋದ ಪುಟ್ಟ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬುಧವಾರ ಜರುಗಿದೆ.

ಲಚ್ಯಾಣ ಗ್ರಾಮದ ಸತೀಶ ಜುನಗೊಂಡ ಅವರ ಪುತ್ರ ಸಾತ್ವಿಕ್ ಮುಜಗೊಂಡ (14 ತಿಂಗಳು) ಆಟವಾಡಲು ಹೋಗಿ ಆಯತಪ್ಪಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ಈಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಬಾಲಕನ ರಕ್ಷಣಾ ಕಾರ್ಯಕ್ಕೆ ಮುಂದಾಗಿರುವ ಅಗ್ನಿಶಾಮಕ ಹಾಗೂ ಪೋಲಿಸರು ಮುಂದಾಗಿದ್ದು, ಅಂದಾಜು 16 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ. ಮಗುವಿನ ಸ್ಥಿತಿಗತಿ ನೋಡಲು ಕೊಳವೆಬಾವಿಗೆ ಕ್ಯಾಮೆರಾ ಬಿಡಲಾಗಿದ್ದು, ಮಗು ಕೈ, ಕಾಲು ಅಲುಗಾಡಿಸುತ್ತಿರುವುದು ಕಂಡುಬಂದಿದೆ. ಮಗುವಿನ ಉಸಿರಾಟಕ್ಕೆ ತೊಂದರೆಯಾಗದಿರಲು ವೈದ್ಯರು ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ.

ಕತ್ತಲಾಗಿರುವ ಕಾರಣ ರಕ್ಷಣಾ ಕಾರ್ಯದಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ರಕ್ಷಣಾ ಸ್ಥಳಕ್ಕೆ ಜೆಸಿಬಿ ತರಲಾಗಿದ್ದು, ಕೊಳವೆಬಾವಿಗೆ ಸಮನಾಗಿ ಗುಂಡಿ ತೋಡಲಾಗುತ್ತಿದೆ.

ಸಚಿವರಿಂದ ಪೋನ್ ಮೂಲಕ ಸೂಚನೆ

ಪಾಳು ಕೊಳವೆ ಬಾವಿಗೆ ಮಗು ಬಿದ್ದಿರುವ ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾದಿಕಾರಿಗಳಿಗೆ ಕರೆ ಮಾಡಿ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ.

(ವರದಿ - ಸಮೀವುಲ್ಲಾ ಉಸ್ತಾದ್, ವಿಜಯಪುರ)