ಕನ್ನಡ ಸುದ್ದಿ  /  Karnataka  /  Vijayapura News 14 Month Old Child Rescued Who Fell Into Borewell Rmy

ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗು ಕೊನೆಗೂ ರಕ್ಷಣೆ; 21 ಗಂಟೆಗಳ ಕಾರ್ಯಾಚರಣೆ ಯಶಸ್ಸು

ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗುವನ್ನು ಜೀವಂತವಾಗಿ ರಕ್ಷಿಸುವಲ್ಲಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್‌ನನ್ನು 21 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಜೀವಂತವಾಗಿ ರಕ್ಷಿಸಿಸಲಾಗಿದೆ.
ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್‌ನನ್ನು 21 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಜೀವಂತವಾಗಿ ರಕ್ಷಿಸಿಸಲಾಗಿದೆ.

ವಿಜಯಪುರ: ಆಟವಾಡುತ್ತಿದ್ದಾಗ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗುವನ್ನು ಸತತ 21 ಗಂಟೆಗಳ ಕಾರ್ಯಾಚರಣೆಯ ಬಳಿಕ ಜೀವಂತವಾಗಿ ರಕ್ಷಿಸಲಾಗಿದೆ. ಸಾತ್ವಿಕ್‌ನನ್ನು ಕೊಳವೆಬಾವಿಯಿಂದ ಹೊರ ತೆಗೆದು ಕೂಡಲೇ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣದ ತೋಟದ ವಸ್ತಿಯಲ್ಲಿ ನಿನ್ನೆ (ಏಪ್ರಿಲ್ 3, ಬುಧವಾರ) ಸಂಜೆ 14 ತಿಂಗಳ ಮಗು ಸಾತ್ವಿಕ್ ಮುಜುಗೊಂಡ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಘಟನೆ ನಡೆದಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. 21 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮಗುವನ್ನು ಜೀವಂತವಾಗಿ ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಗು ಕೊಳವೆಬಾವಿಯಲ್ಲಿ 16 ಅಡಿಗಳಷ್ಟು ಆಳದಲ್ಲಿ ಸಿಲುಕಿಕೊಂಡಿದ್ದ. ಎರಡು ಹಿಟಾಚಿಗಳು, ಮೂರು ಜೆಸಿಬಿಗಳ ಸಹಾಯದಿಂದ ಮೊದಲು ಬೋರ್‌ವೆಲ್‌ನ ಸುತ್ತ ಮಣ್ಣು ತೆಗೆಯಲಾಗಿತ್ತು. ಆದರೆ ಕಲ್ಲುಗಳು ಆವರಿಸಿದ್ದರಿಗೆ ಡ್ರಿಲ್ ಮಾಡುವ ಯಂತ್ರಗಳನ್ನು ಬಳಸಿ ಮಗು ಸಿಲುಕಿಕೊಂಡಿದ್ದ ಸ್ಥಳದವರೆಗೆ ವರೆಗೆ ತಲುಪಲಾಗಿತ್ತು. ಇದಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಂಡಿದೆ. ಬಿಸಿಲನ್ನು ಲೆಕ್ಕಿಸದೆ ಅಂತಿಮವಾಗಿ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಗಿದೆ.

ಬಾಲಕನ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊದಲು ಸಿಬ್ಬಂದಿ ಕ್ಯಾಮೆರಾ ಮೂಲಕ ನೋಡಿ ಆತ ಎಷ್ಟು ಅಡಿಗಳ ಆಳದಲ್ಲಿ ಸಿಲುಕಿದ್ದಾನೆ ಅನ್ನೋದನ್ನು ಮೊದಲು ಪತ್ತೆ ಹಚ್ಚಿದ್ದಾರೆ. ಆ ಬಳಿಕ ಸುಮಾರು 21 ಅಡಿ ಆಳದ ಸಮಾನಾಂತರ ಗುಂಡಿಯನ್ನು ಅಗೆದು ರಕ್ಷಣೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಘಟನಾ ಸ್ಥಳದ ಬಳಿ ಬೀಡುಬಿಟ್ಟಿದ್ದ ವೈದ್ಯಕೀಯ ತಂಡ ಮಗುವನ್ನು ಹೊರ ತೆಗೆಯುತ್ತಿದ್ದಂತೆ ಪ್ರಾಥಮಿಕ ಚಿಕಿತ್ಸೆಯ ನಂತರ ತಾಲೂಕು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಶಿಫ್ಟ್ ಮಾಡಲಾಯಿತು. ಬೋರ್‌ವೆಲ್‌ನಿಂದ ಹೊರ ತೆಗೆದಿರುವ 2 ವರ್ಷದ ಸಾತ್ವಿಕ್ ಆರೋಗ್ಯವಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೀರಾವರಿ ಉದ್ದೇಶಕ್ಕಾಗಿ ಸಾತ್ವಿಕ್ ಅವರ ಅಜ್ಜ ಮಂಗಳವಾರ (ಏಪ್ರಿಲ್ 2) ಕೊಳವೆಬಾವಿ ಕೊರೆಸಿದ್ದಾರೆ. ದಾರಿಹೋಕರೊಬ್ಬರು ಮಗುವಿನ ಕಿರುಚಾಟವನ್ನು ಕೇಳಿ ತಕ್ಷಣ ಕುಟುಂಬಕ್ಕೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತ್ತು.