Vijayapura Drought: ವಿಜಯಪುರದಲ್ಲಿ ಬೇಸಿಗೆ ಮುನ್ನವೇ ಬರ ದರ್ಶನ: ಅಳಲು ತೋಡಿಕೊಂಡ ಅನ್ನದಾತರು
ಕನ್ನಡ ಸುದ್ದಿ  /  ಕರ್ನಾಟಕ  /  Vijayapura Drought: ವಿಜಯಪುರದಲ್ಲಿ ಬೇಸಿಗೆ ಮುನ್ನವೇ ಬರ ದರ್ಶನ: ಅಳಲು ತೋಡಿಕೊಂಡ ಅನ್ನದಾತರು

Vijayapura Drought: ವಿಜಯಪುರದಲ್ಲಿ ಬೇಸಿಗೆ ಮುನ್ನವೇ ಬರ ದರ್ಶನ: ಅಳಲು ತೋಡಿಕೊಂಡ ಅನ್ನದಾತರು

vijayapur Drought ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಈಗಲೇ ಬರದ ಸನ್ನಿವೇಶ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಬರಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ವಿಜಯಪುರ ಜಿಲ್ಲೆಯಲ್ಲಿ ಬರಪೀಡಿತ ಸ್ಥಳಗಳಿಗೆ ಸಚಿವ ಡಾ.ಎಂ.ಬಿ.ಪಾಟೀಲ ಅವರು ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿದರು.
ವಿಜಯಪುರ ಜಿಲ್ಲೆಯಲ್ಲಿ ಬರಪೀಡಿತ ಸ್ಥಳಗಳಿಗೆ ಸಚಿವ ಡಾ.ಎಂ.ಬಿ.ಪಾಟೀಲ ಅವರು ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿದರು.

ವಿಜಯಪುರ: ಒಣಗಿ ಹೋಗಿರುವ ಬೆಳೆಗಳು, ಪರಿಹಾರಕ್ಕಾಗಿ ರೈತರ ಅಳಲು, ನೀರಿಲ್ಲದೇ ಸೊರಗಿರುವ ಕೆರೆಗಳು.

ವಿಜಯಪುರ ಜಿಲ್ಲೆಯ ಭೀಕರ ಪರಿಸ್ಥಿತಿಯ ದೃಶ್ಯಾವಳಿಗಳಿವು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಬರ ವೀಕ್ಷಣೆ ಸಂದರ್ಭದಲ್ಲಿ ಈ ಎಲ್ಲ ದೃಶ್ಯಗಳು ಜಿಲ್ಲೆಯ ಭೀಕರ ಬರ ಪರಿಸ್ಥಿತಿಯನ್ನು ತೆರೆದಿಟ್ಟವು.

ಇಂಡಿ ತಾಲೂಕು ಸೇರಿದಂತೆ ವಿವಿಧ ಬರಪೀಡಿತ ತಾಲೂಕುಗಳ ವ್ಯಾಪ್ತಿಯ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು. ಇಂಡಿ ಶಾಸಕ ಯಶವಂತರಾಯಗೌಡ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಸಚಿವರೊಂದಿಗೆ ಭಾಗಿಯದರು.

ಸಾವಿರಾರು ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಎಕರೆಗೆ 12 ಸಾವಿರ ರೂ. ಖರ್ಚು ಮಾಡಿ ಸೂರ್ಯಕಾಂತಿ ಬೆಳೆದಿದ್ದೇವೆ. ಆದರೆ ಒಂದೇ ಒಂದು ರೂ. ಮರಳಿ ಬರುತ್ತದೆ ಎಂಬ ನಿರೀಕ್ಷೆ ಇಲ್ಲ, ಎಲ್ಲವೂ ಹಾಳಾಗಿದೆ. ಪಡೆದ ಸಾಲ ಹೇಗೆ ತೀರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಸಾವಳಸಂಗ ಗ್ರಾಮದ ಅನೇಕ ರೈತರು ಜಿಲ್ಲಾ ಉಸ್ತುವಾರಿ ಸಚಿವರ ಎದುರು ಅಳಲು ತೋಡಿಕೊಂಡರು.

ನಮ್ಮ ಬದುಕು ಹಾಳಾಗಿದೆ, ರಾಜ್ಯವಾಗಲಿ, ಕೇಂದ್ರ ಸರ್ಕಾರವಾಗಲಿ ನಮಗೆ ಪರಿಹಾರ ನೀಡುತ್ತಿಲ್ಲ, ಎರಡು ಸರ್ಕಾರಗಳಿಂದಲೂ ನಮಗೆ ಸ್ಪಂದನೆ ದೊರಕುತ್ತಿಲ್ಲ, ಜಾನುವಾರುಗಳು ಸಹ ತೊಂದರೆ ಎದುರಿಸುತ್ತಿವೆ ಎಂದರು.

ಇಂಚಗೇರಿ ಕೆರೆಯನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿ ಬಂದಿತು. ಇಂಚಗೇರಿ ಕೆರೆಗೆ ನೀರು ಬಂದಿಲ್ಲ, ಅಂತರ್ಜಲ ಮಟ್ಟ ಹೆಚ್ಚುತ್ತಿಲ್ಲ, ಹೀಗಾಗಿ ನೀರಿಗೆ ಹಾಹಾಕಾರ ಉಂಟಾಗಿದೆ. ಹೀಗಾಗಿ ಮೊದಲು ಇಂಚಗೇರಿ ಕೆರೆಯನ್ನು ತುಂಬಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.

ಸರ್ಕಾರಿ ಮಟ್ಟದಲ್ಲಿ ಯಾವ ರೀತಿ ಅನುಕೂಲ ಕಲ್ಪಿಸಬೇಕು ಅದಕ್ಕೆ ನಾವು ಸಂಪೂರ್ಣವಾಗಿ ಬದ್ಧರಿದ್ದೇವೆ, ನಿಮ್ಮ ಜೊತೆ ನಾವಿದ್ದೇವೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕದೊಂಡ ಅಭಯ ನೀಡಿದರು.

ಇಂಡಿ ಮತ ಕ್ಷೇತ್ರದ ಹೊರ್ತಿ, ಸಾವಳಸಂಗ, ಹಂಜಗಿ ಗ್ರಾಮಗಳಿಗೆ ತೆರಳಿ, ಅಲ್ಲಿನ ಕೆರೆಗಳ ವೀಕ್ಷಣೆ ಹಾಗೂ ತೊಗರಿ, ಸೂರ್ಯಕಾಂತಿ, ಕಬ್ಬು ಇತರೆ ಬೆಳೆಗಳ ಬೆಳೆ ಹಾನಿ ಸಮೀಕ್ಷೆ ನಡೆಸಲಾಯಿತು.

ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದ ಬಳಿ ಮುಳವಾಡ ಏತ ನೀರಾವರಿ ಯೋಜನೆಯಡಿ ಕಾಲುವೆಯನ್ನು ಸಹ ಇದೇ ಸಂದರ್ಭದಲ್ಲಿ ಸಚಿವ, ಶಾಸಕರು ವೀಕ್ಷಿಸಿದರು.

ಬೆಳೆಹಾನಿಗೊಳಗಾದ ರೈತರಿಗೆ ಪರಿಹಾರ ಕಲ್ಪಿಸಿಕೊಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಅಗತ್ಯದ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕುಡಿಯುವ ನೀರಿಗೆ ಕೊರತೆ ಯಾಗದಂತೆ ಮುನ್ನಚ್ಚರಿಕೆ ವಹಿಸುವಂತೆ ಜಿಲ್ಲಾ ಆಡಳಿತಕ್ಕೆ ಈಗಾಗಲೇ ಸೂಚಿಸಿರುವೆ. ಈದಿನ ಪಶು ಪಾಲನೆ ಇಲಾಖೆ ವತಿಯಿಂದ ಮೇವಿನ ಕಿಟ್ ಗಳನ್ನು ವಿತರಿಸಲಾಯಿತು ಎಂದು ಸಚಿವ ಎಂ.ಬಿ.ಪಾಟೀಲ ಈ ವೇಳೆ ತಿಳಿಸಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿ.ಪಂ. ಸಿಇಒ ರಾಹುಲ್ ಶಿಂಧೆ, ಪೋಲಿಸ್ ವರಿಷ್ಠಾಧಿಕಾರಿ ರಿಷಿಖೇಶ ಸೋನಾವಣೆ, ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಜೊತೆಗಿದ್ದರು.

ಇದಾದ ಬಳಿಕ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ಮತ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಸಚಿವ ಶಿವಾನಂದ ಪಾಟೀಲ್‌ ಅವರೊಂದಿಗೆ ಸಮೀಕ್ಷೆ ನಡೆಸಲಾಯಿತು. ಈ ಬಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಎಲ್ಲೆಡೆ ಬರದ ಛಾಯೆ ಆವರಿಸಿದೆ. ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಾನಿಗೊಳಗಾದ ತೊಗರಿ, ಈರುಳ್ಳಿ ಇತರೆ ಬೆಳೆಗಳನ್ನು ವೀಕ್ಷಣೆ ಮಾಡಲಾಯಿತು.

(ವರದಿ: ಸಮೀವುಲ್ಲಾ ಉಸ್ತಾದ್‌. ವಿಜಯಪುರ)

Whats_app_banner