ವರದಾನವಾಯ್ತು ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ; ಶೀಘ್ರವೇ ಬಡ ಹೆಣ್ಮಕ್ಕಳ ಖಾತೆ ಹಣ
ಕನ್ನಡ ಸುದ್ದಿ  /  ಕರ್ನಾಟಕ  /  ವರದಾನವಾಯ್ತು ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ; ಶೀಘ್ರವೇ ಬಡ ಹೆಣ್ಮಕ್ಕಳ ಖಾತೆ ಹಣ

ವರದಾನವಾಯ್ತು ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ; ಶೀಘ್ರವೇ ಬಡ ಹೆಣ್ಮಕ್ಕಳ ಖಾತೆ ಹಣ

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅತಿ ಶೀಘ್ರದಲ್ಲಿ ಹಣ ಸಿಗಲಿದೆ.

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಬಿಎಸ್ ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ
ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಬಿಎಸ್ ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ

ವಿಜಯಪುರ: ಭಾಗ್ಯದ ಲಕ್ಷ್ಮೀ ಬಾರಮ್ಮ.... ಎಂಬ ಹಾಡು ಪ್ರಸಿದ್ಧ. ಮನೆಗೆ ಬರುವ ಭಾಗ್ಯದ ಲಕ್ಷ್ಮೀಯನ್ನು ಹೃದಯಪೂರ್ವಕವಾಗಿ ಸ್ವಾಗತಿಸಲು 18 ವರ್ಷಗಳ ಹಿಂದೆ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಅಂದರೆ ಹೆಸರಿಗೆ ತಕ್ಕಂತೆ `ಭಾಗ್ಯ ಲಕ್ಷ್ಮೀ' ಯೋಜನೆ ರೂಪಿಸಿದ್ದರು. ಈಗ ಈ ಭಾಗ್ಯದ ಫಲಾನುಭವಿಗಳ ಮನೆಗೆ ಲಕ್ಷ್ಮೀ ಶೀಘ್ರದಲ್ಲಿಯೇ ಬರಲಿದ್ದಾಳೆ.

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಯೋಜನೆ ಭಾಗ್ಯಲಕ್ಷ್ಮಿ ಯೋಜನೆ ರೂಪಿಸಿದ್ದರು. 18 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಪ್ರತಿ ಹೆಣ್ಣು ಮಗುವಿಗೆ ಒಂದು ದೊಡ್ಡ ಮೊತ್ತದ ಹಣ ತಲುಪಿಸುವಂತೆ ಮಾಡಿದ್ದರು. ಈಗ ಈ ಯೋಜನೆ ಪ್ರಥಮ ಕಂತು ಪಾವತಿಯಾಗುವ ದಿನ ಸಮೀಪಿಸುತ್ತಿದ್ದು, ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಎದುರು ನೋಡುತ್ತಿದ್ದಾರೆ.

ಬಡ ಕುಟುಂಬಗಳ ಹಣ್ಣು ಮಕ್ಕಳಿಗಾಗಿ ರೂಪಿಸಿದ್ದ ಯೋಜನೆ

ಭಾಗ್ಯಲಕ್ಷ್ಮೀ ಯೋಜನೆಗೆ 18 ವರ್ಷ ಪೂರ್ಣಗೊಳ್ಳಲಿದ್ದು, ಈ ಯೋಜನೆಯ ಫಲಾನುಭವಿಗಳ ಖಾತೆಗೆ ಮೊದಲಬಾರಿಗೆ ಹಣ ಜಮಾವಣೆಯಾಗಲಿದೆ. ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸ್ಮಮಿಶ್ರ ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮಿ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದರು. ಈಗ 18 ವರ್ಷಗಳ ನಂತರ ಈ ಯೋಜನೆ ಫಲ ನೀಡುತ್ತಿದ್ದು, ಫಲಾನುಭವಿಗಳಲ್ಲಿ ಸಂತಸ ಮನೆ ಮಾಡಿದೆ.

2006-07ರಲ್ಲಿ ಎಲ್‌ಐಸಿಯೊಂದಿಗೆ ಒಪ್ಪಂದ ಮಾಡಿಕೊಂಡು ಹೆಣ್ಣು ಮಗುವಿನ ಹೆಸರಿನಲ್ಲಿ 10 ಸಾವಿರ ರೂ. ಗಳನ್ನು ಠೇವಣಿ ಮಾಡಿ ಮಗುವಿಗೆ 18 ವರ್ಷತುಂಬಿದಾಗ ಮೆಚ್ಯೂರಿಟಿ ಹಣ ನೀಡುವುದು ಒಪ್ಪಂದವಾಗಿತ್ತು, ನಂತರ 2020ರ ಎಪ್ರಿಲ್ ನಲ್ಲಿ ಈ ಯೋಜನೆಯನ್ನು ಜೀವ ವಿಮಾ ನಿಗಮದಿಂದ ಅಂಚೆ ಇಲಾಖೆಗೆ ವರ್ಗಾವಣೆ ಮಾಡಿ ಅದನ್ನು ‘ಸುಕನ್ಯಾ ಸಮೃದ್ಧಿ ಖಾತೆ ಯೋಜನೆ’ ಎಂದು ಮರುನಾಮಕರಣ ಮಾಡಿ ಲಿಂಕ್ ಮಾಡಲಾಗಿತ್ತು. ಈ ವರ್ಷ ಒಟ್ಟಾರೆಯಾಗಿ ವಿಜಯಪುರ ಜಿಲ್ಲೆಯಲ್ಲಿ 12,280 ಫಲಾನುಭವಿಗಳ ಬಾಂಡ್ ಗಳು ಮೆಚ್ಯೂರಿಟಿ ಹಂತಕ್ಕೆ ತಲುಪಿವೆ. ಇದರಲ್ಲಿ ಇಂಡಿ ತಾಲೂಕಿನ 2,172, ಚಡಚಣ 721, ಸಿಂದಗಿ 2,268, ವಿಜಯಪುರ ಗ್ರಾಮಾಂತರ 2,132, ವಿಜಯಪುರ ನಗರ 1,584, ಬಸವನ ಬಾಗೇವಾಡಿ 1,780, ಮುದ್ದೇಬಿಹಾಳ 1,623 ಫಲಾನುಭವಿ ಮಕ್ಕಳಿಗೆ ಅವರ ಹಣ ದೊರೆಯಲಿದೆ.

ಫಲಾನುಭವಿಗಳಿಗೆ ಸಿಗುವ ಮೊತ್ತ ಎಷ್ಟು?

18 ವರ್ಷ ತುಂಬಿರುವ ಹೆಣ್ಣು ಮಕ್ಕಳಿಗೆ ಈ ಹಣದಿಂದ ಆರ್ಥಿಕವಾಗಿ ಅನುಕೂಲವಾಗಲಿದ್ದು, ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇದರಿಂದ ಪೋಷಕರ ಮತ್ತು ಫಲಾನುಭವಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಇನ್ನು 2008ರ ಜುಲೈ ಒಳಗೆ ಜನಸಿದ ಹೆಣ್ಣು ಮಗುವಿನ ಹೆಸರಿನಲ್ಲಿ 10 ಸಾವಿರ ರೂ. ಗಳ ನಿಶ್ಚಿತ ಠೇವಣಿಯನ್ನು ಸರ್ಕಾರ ಪಾಲುದಾರ ಸಂಸ್ಥೆಯಲ್ಲಿ ಇಟ್ಟಿದೆ. ಆ ಸಂಸ್ಥೆಯು ಬಡ್ಡಿ ಸಮೇತವಾಗಿ 18 ವರ್ಷ ಪೂರ್ಣಗೊಂಡ ಮೊದಲ ಮಗುವಿಗೆ 34,751 ರೂಪಾಯಿ ಹಾಗೂ 2ನೇ ಮಗುವಿಗೆ 40,619 ರೂಪಾಯಿಗಳನ್ನು ಜಮೆ ಮಾಡಲಿದೆ.

ಆಗಸ್ಟ್ 2008ರ ನಂತರ ಜನಿಸಿದ ಮೊದಲ ಮಗುವಿನ ಹೆಸರಿನಲ್ಲಿ ಸರ್ಕಾರವು 19,300 ರೂಪಾಯಿಗಳನ್ನು ನಿಶ್ಚಿತ ಠೇವಣಿ ಇಟ್ಟಿದೆ. ಇದಕ್ಕೆ ಪಾಲುದಾರ ಸಂಸ್ಥೆಯು ಬಡ್ಡಿ ಸಮೇತವಾಗಿ 1,00,052 ರೂಪಾಯಿಗಳನ್ನು ನೀಡಲಿದ್ದು ಮತ್ತು 2ನೇ ಮಗುವಿನ ಹೆಸರಿನಲ್ಲಿ ಸರ್ಕಾರವು 18,350 ರೂಪಾಯಿಗಳನ್ನು ಠೇವಣಿ ಮಾಡಿದೆ. ಇದಕ್ಕೆ 1,00,097 ರೂಪಾಯಿ ಪಾಲುದಾರ ಸಂಸ್ಥೆಯಿಂದ ಫಲಾನುಭವಿಗಳಿಗೆ ದೊರೆಯುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com)

Whats_app_banner