ಕನ್ನಡ ಸುದ್ದಿ  /  Karnataka  /  Vijayapura News Bjp District Vice President Umesh Karajola Protest Against Congress Siddaramaia Government Rsm

Vijayapura News: ಅನ್ಯಾಯ ಪ್ರಶ್ನಿಸಿದರೆ ಜನರ ಕೈಗೆ ಕಾಂಗ್ರೆಸ್‌ ಬೇಡಿ ಹಾಕಿಸುತ್ತಿದೆ; ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಉಮೇಶ ಕಾರಜೋಳ ಗರಂ

ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗ ಕಾಂಗ್ರೆಸ್‌ ವಿರುದ್ಧ ನಡೆದ ಪ್ರತಿಭಟನೆಗೆ ಉಮೇಶ್‌ ಕಾರಜೋಳ ಸಾಥ್ ನೀಡಿದ ಅವರು, ವಿಶೇಷ ಪ್ರತಿಭಟನೆಯ ಗೆಟಪ್‌ನಲ್ಲಿ ಆಗಮಿಸಿ ಪ್ರತಿಭಟನೆಯ ಕೇಂದ್ರ ಬಿಂದುವಾದರು.

ಉಮೇಶ್‌ ಕಾರಜೋಳ ಪ್ರತಿಭಟನೆ
ಉಮೇಶ್‌ ಕಾರಜೋಳ ಪ್ರತಿಭಟನೆ

ವಿಜಯಪುರ: ಹಿಂದೂ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ ಪ್ರಶ್ನಿಸಿದರೆ ಬೇಡಿ ಹಾಕಿಸುವುದು ಗ್ಯಾರಂಟಿ, ಉಚಿತ ವಿದ್ಯುತ್ ಎಂದು ಹೇಳಿ ನಿರ್ಬಂಧನೆ ವಿಧಿಸಿ ಮೂರು ನಾಮ ಹಾಕುವುದು, ಜನರಿಗೆ ಸಾಲದ ಹೊರೆ ಹೊರೆಸುವುದು ಗ್ಯಾರಂಟಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಕಾರಜೋಳರ ಪುತ್ರ ಉಮೇಶ ಕಾರಜೋಳ ಕಾಂಗ್ರೆಸ್‌ ನಡೆಯನ್ನು ವಿರೋಧಿಸಿ ವಿನೂತನವಾಗಿ ಪ್ರತಿಭಟಿಸಿದರು.

ಕೈಗೆ ಬೇಡಿ ಹಾಕಿಕೊಂಡು, ಹಣೆಗೆ ಮೂರು ನಾಮ ಹಾಕಿಕೊಂಡು ಹಾಗೂ ಕೊರಳಲ್ಲಿ ಸಾಲ ಎಂಬ ಸಂದೇಶದ ಫಲಕ ಹಾಕಿಕೊಂಡು ಉಮೇಶ ಕಾರಜೋಳ ಕಾಂಗ್ರೆಸ್ ನಡೆಯನ್ನು ವಿನೂತನವಾಗಿ ಪ್ರತಿಭಟಿಸಿದರು. ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆದ ಪ್ರತಿಭಟನೆಗೆ ಸಾಥ್ ನೀಡಿದ ಅವರು, ವಿಶೇಷ ಪ್ರತಿಭಟನೆಯ ಗೆಟಪ್‌ನಲ್ಲಿ ಆಗಮಿಸಿ ಪ್ರತಿಭಟನೆಯ ಕೇಂದ್ರ ಬಿಂದುವಾದರು. ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾಗುವುದನ್ನು ಪ್ರಶ್ನಿಸಿದರೆ ಕೈಗೆ ಬೇಡಿ ಹಾಕುವ ಮೂಲಕ ಕಾಂಗ್ರೆಸ್‌ ಸರ್ವಾಧಿಕಾರಿ ನೀತಿ ಅನುಸರಿಸುತ್ತಿದೆ ಈ ಕಾರಣಕ್ಕೆ ನಾನು ಕೈಗೆ ಬೇಡಿ ಹಾಕೊಂಡಿದ್ದೇನೆ ಎಂದರು.

ರಾಜ್ಯ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಕಾಂಗ್ರೆಸ್ ಜನ ವಿರೋಧಿ ನೀತಿ ಅನುಸರಿಸಿ ಕಪಟ ನೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದೆ, ಮೊದಲು ಎಲ್ಲರಿಗೂ ಉಚಿತ ವಿದ್ಯುತ್ ಎಂದು ಹೇಳಿ ಈಗ ಅದಕ್ಕೆ ಸಾಕಷ್ಟು ನಿಬಂಧನೆ ವಿಧಿಸಿ ಜನರು ಈ ಯೋಜನೆಯಿಂದ ವಂಚಿತರಾಗುವ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಪಶು ಸಂಗೋಪನೆ ಸಚಿವರು ರಾಜ್ಯದಲ್ಲಿ ವಯಸ್ಸಾದ ಹಸುಗಳನ್ನು ಸಾಕಲು ಕಷ್ಟವಾಗುತ್ತದೆ ಆದ್ದರಿಂದ ಗೋ ಹತ್ಯೆ ನಿಷೇಧ ಕಾನೂನನ್ನು ರದ್ದು ಮಾಡಿ ಗೋಹತ್ಯೆಗೆ ಅವಕಾಶ ನೀಡಲಾಗುವುದು ಎಂದು ಹೇಳಿಕೆ ನೀಡಿರುವುದು ಅತ್ಯಂತ ಖಂಡನಾರ್ಹ, ಗೋ ಹತ್ಯೆಗೆ ಅವಕಾಶ ನೀಡಿದರೆ ಕೋಟ್ಯಂತರ ಜನರ ಭಾವನೆಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ. ನಮ್ಮ ಮನೆಗಳಲ್ಲಿ ವಯಸ್ಸಾದ ತಂದೆ-ತಾಯಿಯರನ್ನು ಹೇಗೆ ನಾವು ರಕ್ಷಿಸುತ್ತೇವೆಯೋ ಹಾಗೆಯೇ ವಯಸ್ಸಾದ ಹಸುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದರು.

ನಗರ ಮಂಡಲಿ ಅಧ್ಯಕ್ಷ, ಪಾಲಿಕೆ ಸದಸ್ಯ ಮಳುಗೌಡ ಪಾಟೀಲ ಮಾತನಾಡಿ, ಸರಾಸರಿಗಿಂತ 10 ಯುನಿಟ್ ಹೆಚ್ಚು ಉಪಯೋಗಿಸಲು ಅನುಮತಿ ಕೊಡುತ್ತೇವೆ ಅದಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಉಪಯೋಗಿಸಿದರೆ ಅದಕ್ಕೆ ಹಣ ಪಾವತಿಸಬೇಕಾಗುತ್ತದೆ. 100 ಯೂನಿಟ್‌ಗಿಂತ ಹೆಚ್ಚಾದರೂ ಕೂಡಾ ಹೆಚ್ಚು ಹಣ ಸಂದಾಯ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿರುವುದು ಜನ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಎಸ್‌ಎ ಪಾಟೀಲ, ವಿಜಯಕುಮಾರ ಕುಡಿಗನೂರ, ಭೀಮಾಶಂಕರ ಹದನೂರ, ಗುರುಲಿಂಗಪ್ಪ ಅಂಗಡಿ, ರಾಹುಲ್ ಜಾಧವ, ರಾಜಶೇಖರ ಮಗಿಮಠ, ಡಾ ಸುರೇಶ ಬಿರಾದಾರ, ಗುರು ಗಚ್ಚಿನಮಠ, ಸಂದೀಪ ಪಾಟೀಲ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕೋಳಕೂರ, ಬಸವರಾಜ ಬೈಚಬಾಳ, ವಿಠ್ಠಲ ನಡುವಿನಕೇರಿ, ರಾಜೇಶ ತಾವಸೆ, ಸದಾಶಿವ ಬುಟಾಳೆ, ಪರಶು ರಾಮ ಹೊಸಪೇಟ, ಕಾಂತು ಶಿಂಧೆ, ವಿಕಾಸ ಪದಕಿ, ಪ್ರವೀಣ ಕೂಡಗಿ ಹಾಗೂ ಇನ್ನಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಸಮಿ ಉಸ್ತಾದ್‌, ವಿಜಯಪುರ

IPL_Entry_Point