ವಿಜಯಪುರದಲ್ಲಿ ಈದ್-ಉಲ್-ಫಿತರ್‌ಗೆ ಕ್ಷಣಗಣನೆ; ರಂಜಾನ್ ಶಾಪಿಂಗ್ ಜೋರು, ಗಗನಕ್ಕೇರಿದ ಹಣ್ಣು ಇತರೆ ವಸ್ತುಗಳ ಬೆಲೆ
ಪವಿತ್ರ ರಂಜಾನ್ ಹಬ್ಬಕ್ಕೆ ಇನ್ನ ಕೆಲವೇ ದಿನಗಳು ಬಾಕಿ ಇರುವುದರಿಂದ ಮುಸ್ಲಿಂ ಬಾಂಧವರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ವಿಜಯಪುರದಲ್ಲಿ ಮಾರುಕಟ್ಟೆ ಹೇಗಿದೆ ಅನ್ನೋದರ ವಿವರ ಇಲ್ಲಿದೆ. (ವರದಿ: ಸಮೀವುಲ್ಲಾ ಉಸ್ತಾದ)

ವಿಜಯಪುರ: ಈದ್-ಉಲ್-ಫಿತರ್ (Eid Ul Fitr 2024) ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಬ್ಬದ ಸಂಭ್ರಮಕ್ಕೆ ಗುಮ್ಮಟ ನಗರಿ ಸಿಂಗಾರಗೊಳ್ಳುತ್ತಿದೆ. ಪವಿತ್ರ ಮಾಸ ರಂಜಾನ್ (Ramadan) ವೇಳೆ ಮುಸ್ಲಿಂ ಬಾಂಧವರು ಒಂದು ತಿಂಗಳ ಪರ್ಯಂತ ರೋಜಾ ಆಚರಿಸಿದ ನಂತರ ಈದ್ ಆಚರಿಸುತ್ತಾರೆ. ಹೀಗಾಗಿ ಹಬ್ಬಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಒಂದು ತಿಂಗಳ ಪವಿತ್ರ ರೋಜಾ (ಉಪವಾಸದ ಜೊತೆಗೆ) ದಲ್ಲಿ ಪ್ರತಿ ಮಸೀದಿಯಲ್ಲಿಯೂ ಪವಿತ್ರ ಕುರಾನ್ ವಾಣಿಗಳನ್ನು ಪಠಿಸುವ ತರಾವೀಹ್ ನಮಾಜ್ ಸಲ್ಲಿಸಲಾಗುತ್ತದೆ. ಪ್ರತಿ ಮಸೀದಿಯಲ್ಲಿ ಸೈರಿ (ಉಪವಾಸಕ್ಕೆ ಅಣಿಯಾಗುವ ಸಮಯ), ಇಫ್ತಿಯಾರ್ (ಉಪವಾಸ ಸಂಪನ್ನಗೊಳಿಸುವ ಸಮಯ) ನಡೆಯುತ್ತಿವೆ.
ವಿಜಯಪುರದ ಐತಿಹಾಸಿಕ ಜಾಮೀಯಾ ಮಸೀದಿ ರಸ್ತೆಯಲ್ಲಿ ರಂಜಾನ್ ಹಬ್ಬದ ವೈಭವ ಗೋಚರಿಸುತ್ತಿದೆ. ಜಾಮೀಯಾ ಮಸೀದಿ ವಿವಿಧ ವರ್ಣಗಳ ಬೆಳಕಿನಲ್ಲಿ ಕಂಗೊಳಿಸುತ್ತಿದೆ. ಇಡೀ ಜಾಮೀಯಾ ಮಸೀದಿ ರಸ್ತೆಯುದ್ದಕ್ಕೂ ಝಗಮಗಿಸುವ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ನಮಾಜ್‌ಗೆ ಬೇಕಾಗುವ ಟೋಪಿ, ಮಿಸ್ವಾಕ್, ಅತ್ತರ್ ಮಾರಾಟದ ಅಂಗಡಿಗಳು ತಲೆ ಎತ್ತಿವೆ.
ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಖರ್ಜೂರ ಮಾರಾಟ
ಅನೇಕ ಕಡೆಗಳಲ್ಲಿ ಇಫ್ತಿಯಾರ್ ಕೂಟಗಳು ನಡೆಯುತ್ತಿವೆ, ವಿವಿಧ ಪ್ರಗತಿಪರ ಸಂಘಟನೆಗಳು ಸಹ ಸೌಹಾರ್ದತೆ ಸಂದೇಶ ಸಾರಲು ಇಫ್ತಿಯಾರ್ ಕೂಟ ಆಯೋಜಿಸಿ ರೋಜಾ ಆಚರಿಸುವ ಮುಸ್ಲಿಂ ಬಾಂಧವರಿಗೆ ಆಹ್ವಾನ ನೀಡುತ್ತಿದ್ದಾರೆ. ಇಫ್ತಿಯಾರ್ ಸಮಯದಲ್ಲಿ ಖರ್ಜೂರ, ಕಲ್ಲಂಗಡಿ, ಗರಂ ಗರಂ ಭಜ್ಜಿ ಮೊದಲಾದ ತಿನಿಸುಗಳನ್ನು ಇರಿಸಲಾಗುತ್ತದೆ. ಹೀಗಾಗಿ ಈ ಎಲ್ಲ ಫಲ, ಖಾದ್ಯಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಇಫ್ತಿಯಾರ್ ಸಂದರ್ಭದಲ್ಲಿ ಖರ್ಜೂರ ಮೂಲಕವೇ ರೊಜಾ ಬಿಡುವುದು ಮುಸ್ಲಿಂ ಬಾಂಧವರಿಗೆ ಪವಿತ್ರ. ಹೀಗಾಗಿ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಖರ್ಜೂರಗಳಾದ ಅಜ್ವಾ, ಮೆಡ್ಝೋಲ್, ಸಫವಾಯಿ, ಕಿಮಿಯಾ, ಸುಕ್ಕಾರೀ ಮೊದಲಾದ ತಳಿಯ ಖರ್ಜೂರ ಮಾರಾಟ ಗಮನ ಸೆಳೆಯುತ್ತಿದೆ.
ಈದ್-ಉಲ್-ಫಿತರ್ ಹಬ್ಬದಲ್ಲಿ ವಿಶೇಷವಾಗಿ ತಯಾರಿಸುವ `ಸಿರಕುರಮಾ' ಎಲ್ಲರಿಗೂ ಅಚ್ಚುಮೆಚ್ಚು. ಹಬ್ಬದ ದಿನದಂದು ಹಾಲು, ಬಾದಾಮಿ, ಶ್ಯಾವಿಗೆ, ಖರ್ಜೂರ, ಗೋಡಂಬಿ ಮೊದಲಾದವುಗಳಿಂದ ಸಿದ್ಧಪಡಿಸಲಾಗುತ್ತದೆ, ಎಲ್ಲ ಧರ್ಮೀಯರನ್ನು ಮನೆಗೆ ಕರೆದು ಈ ವಿಶೇಷ ಸಿಹಿ ತಿನಿಸು ನೀಡುವುದು ಸಂಪ್ರದಾಯ. ಹಿಂದೂ ಬಾಂಧವರಿಗೂ ಸಹ ಶಿರಕುರಮಾ ಎಂದರೆ ಅಚ್ಚುಮೆಚ್ಚು, ಆ ಮಟ್ಟಿಗೆ ಹಬ್ಬದ ಸಂಭ್ರಮದಲ್ಲಿ ಸಿರಕುರಮಾ ಪ್ರಾಧಾನ್ಯತೆ ಪಡೆದುಕೊಂಡಿದೆ. ಹೀಗಾಗಿ ವಿಜಯಪುರದ ಕೆಸಿ ಮಾರುಕಟ್ಟೆಯಲ್ಲಿ ಸಿರಕುರಮಾ ಬೇಕಾಗುವ ಪೂರಕ ಸಾಮಗ್ರಿಗಳ ಮಾರಾಟ ಭರ್ಜರಿಯಾಗಿ ನಡೆದಿದೆ.
ಹೊಸ ಬಟ್ಟೆ, ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ವಸ್ತುಗಳ ಮಾರಾಟ ಜೋರು
ರಮಜಾನ್ ಹಬ್ಬದಲ್ಲಿ ಹೊಸ ಬಟ್ಟೆ ಇರಲೇಬೇಕಲ್ಲ, ಹೀಗಾಗಿ ಪ್ರತಿಯೊಬ್ಬರು ತಮಗಿಷ್ಟದ ಕುರ್ತಾ, ಜುಬ್ಬಾ, ಪೈಜಾಮ, ಟಿ-ಶರ್ಟ್, ಫಾರ್ಮಲ್ಸ್, ಸೀರೆ, ಚೂಡಿದಾರ ಖರೀದಿಯಲ್ಲಿ ತೊಡಗಿದ್ದಾರೆ. ಸಂಜೆಯಾದರೆ ಸಾಕು ಇಡೀ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಯಲ್ಲಿ ತೊಡಗಿಸಿಕೊಂಡ ಜನರೇ ಜನರು ಗೋಚಿರುಸತ್ತಾರೆ. ಇಡೀ ಗಾಂಧಿವೃತ್ತ, ಶ್ರೀ ಸಿದ್ದೇಶ್ವರ ಗುಡಿ ರಸ್ತೆ, ರಾಮಮಂದಿರ ರಸ್ತೆ ಹೀಗೆ ಅನೇಕ ಕಡೆಗಳಲ್ಲಿ ಬಟ್ಟೆ ಅಂಗಡಿಗಳಲ್ಲಿ ಜನರ ದಂಡೇ ಕಾಣಿಸಿಗುತ್ತಿದೆ. ಇನ್ನ ಹಬ್ಬದ ಹಿನ್ನೆಲೆಯಲ್ಲಿವಸ್ತುಗಳ ಬೆಲೆಗಳು ಕೊಂಚ ಜಾಸ್ತಿಯೇ ಇದೆ.
ರೋಜಾ ಆಚರಿಸುವ ಮುಸ್ಲಿಂ ಬಾಂಧವರು ಮಧ್ಯಾಹ್ನ ಮಾರುಕಟ್ಟೆಗೆ ಲಗ್ಗೆ ಇಡುವುದು ಅಪರೂಪ, ಅದರಲ್ಲೂ ಈಗ ರಣಬಿಸಿಲಿನ ಪ್ರಖರತೆಯೂ ಅಧಿಕವಾಗಿರುವುದರಿಂದ ರೋಜಾ ಬಿಟ್ಟು ರಾತ್ರಿ ಸಮಯದಲ್ಲಿಯೇ ಖರೀದಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಧ್ಯರಾತ್ರಿಯಲ್ಲೂ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ಅನೇಕ ಉತ್ಸಾಹಿ ಯುವಕರು ತಮ್ಮ ಸ್ನೇಹಿತರ ಒಡಗೂಡಿ ಶಾಪಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ, ಇನ್ನೂ ಹೆಚ್ಚಿನ ಉತ್ಸಾಹ ಇರುವ ಯುವಕರು ನೆರೆಯ ಮುಂಬಯಿ, ಸೊಲ್ಲಾಪುರ, ಹೈದರಾಬಾದ್‌ಗೂ ಬಟ್ಟೆ ಖರೀದಿಗಾಗಿಯೇ ಪ್ರಯಾಣ ಬೆಳೆಸಿದ್ದಾರೆ.
ಅದೇ ತೆರನಾಗಿ ಹಬ್ಬಕ್ಕೆ ಸುಂಗಧದ ಸ್ಪರ್ಶ ನೀಡುವ ಅತ್ತರ್ ಮಾರಾಟ ಸಹ ಭರ್ಜರಿ ನಡೆಯುತ್ತಿದೆ, ಊದ್, ಅಂಬರ್, ಕೇಸರ, ಜಾಸ್ಮಿನ್ ಮೊದಲಾದ ಬಗೆಯ ಅತ್ತರ ಮಾರಾಟ ಭರ್ಜರಿಯಾಗಿ ನಡೆದಿದೆ. ಈದ್ ನಮಾಜ್‌ಗಾಗಿ ಮಸೀದಿಗಳಿಗೆ ಲೈಟಿಂಗ್ ಅಳವಡಿಸಲಾಗುತ್ತಿದೆ, ರಾತ್ರಿ ವೇಳೆ ದೀಪಾಲಂಕಾರದಲ್ಲಿ ಮಸೀದಿಗಳು ಕಂಗೊಳಿಸುತ್ತಿವೆ. (ವರದಿ: ಸಮೀವುಲ್ಲಾ ಉಸ್ತಾದ)
