Vijayapura News: ಸಚಿವದ್ವಯರ ಮೇಲೆ ಮೂಡಿದ ಭರವಸೆ; ವಿಜಯಪುರ ಜಿಲ್ಲೆಗೆ ಇನ್ನಾದರೂ ದೊರೆಯಲಿದ್ಯಾ ಕೈಗಾರಿಕೆ ಭಾಗ್ಯ?
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಸಚಿವದ್ವಯರ ಮೇಲೆ ಮೂಡಿದ ಭರವಸೆ; ವಿಜಯಪುರ ಜಿಲ್ಲೆಗೆ ಇನ್ನಾದರೂ ದೊರೆಯಲಿದ್ಯಾ ಕೈಗಾರಿಕೆ ಭಾಗ್ಯ?

Vijayapura News: ಸಚಿವದ್ವಯರ ಮೇಲೆ ಮೂಡಿದ ಭರವಸೆ; ವಿಜಯಪುರ ಜಿಲ್ಲೆಗೆ ಇನ್ನಾದರೂ ದೊರೆಯಲಿದ್ಯಾ ಕೈಗಾರಿಕೆ ಭಾಗ್ಯ?

ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡುವವರೆಗೂ ವಿರಮಿಸದ ಎಂಬಿ ಪಾಟೀಲ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿ ‌ಮಾಡಿದವರು. ಈಗ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕೈಗಾರಿಕಾ ಸ್ಥಾಪನೆಯ ಸಿಂಗಲ್ ವಿಂಡೋ ಪದ್ದತಿಗೆ ಬಲ ತುಂಬಲು ಕಾರ್ಯ ಯೋಜನೆ ರೂಪಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಸಂಬಂಧ ಸಚಿವದ್ವಯರ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ಜಿಲ್ಲೆಯ ಜನರು.
ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಸಂಬಂಧ ಸಚಿವದ್ವಯರ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ಜಿಲ್ಲೆಯ ಜನರು. (PC: Facebook)

ವಿಜಯಪುರ: ಆಲಮಟ್ಟಿ ಜಲಾಶಯ, ಡಬಲ್ ಲೈನ್ ರೈಲ್ವೆ ಹಳಿ, ಅಂತಿಮ ಹಂತಕ್ಕೆ ತಲುಪಿರುವ ವಿಮಾನ ನಿಲ್ದಾಣ ‌ಕಾಮಗಾರಿ, ಯುವ ಸಂಪನ್ಮೂಲ ಲಭ್ಯತೆ ಹೀಗೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ವಿಜಯಪುರದಲ್ಲಿದೆ. ಆದರೂ ಸಹ ವಿಜಯಪುರಕ್ಕೆ ಕೈಗಾರಿಕೆಗಳು ಮುಖ ಮಾಡುವುದು ಅಪರೂಪ.

ಹೆಲಿಕಾಪ್ಟರ್‌ ಬಿಡಿಭಾಗಗಳ ಕಾರ್ಖಾನೆ, ರಸಗೊಬ್ಬರ ಕಾರ್ಖಾನೆ ಸಹ ವಿಜಯಪುರಕ್ಕೆ ಕೈ ತಪ್ಪಿರುವುದು ಇತಿಹಾಸ. ನಿಡಗುಂದಿಯಲ್ಲಿ ರಸಗೊಬ್ಬರ ಉತ್ಪಾದನಾ ಘಟಕ ಆರಂಭವಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ದಾವಣಗೆರೆಗೆ ಸ್ಥಳಾಂತರವಾಯಿತು.ಕೆಲವು ವರ್ಷಗಳ ಹಿಂದೆ ಮುರುಗೇಶ ನಿರಾಣಿ ಬೃಹತ್ ‌ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದರು. ಜಿಲ್ಲೆಯ ಸರ್ವತೋಮುಖ ಪ್ರಗತಿಯ ದೂರದೃಷ್ಟಿಕೋನ ಇರಿಸಿಕೊಂಡು 'ವಿಷನ್ 2020' ರೂಪಿಸಿದ್ದರು. ಅದರ ಭಾಗವಾಗಿ ವಿಜಯಪುರದ ಹೊರ ವಲಯದಲ್ಲಿ ಇಟ್ಕೊ ಡೆನಿಮ್ ಉತ್ಪಾದನೆ ‌ಘಟಕ ಆರಂಭವಾಯಿತು. ಜೀನ್ಸ್ ಪ್ಯಾಂಟ್ ಉತ್ಪಾದನೆಯಲ್ಲಿ ಹೆಸರು‌ ಮಾಡಿರುವ ಕಂಪನಿ ವಿಜಯಪುರಕ್ಕೆ ಪ್ರವೇಶಿಸಿತು.

ವಿಜಯಪುರ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿ ವಿಶಾಲವಾದ ಸ್ಥಳದಲ್ಲಿ ಕಂಪನಿ ಆರಂಭವಾಯ್ತು. ದೊಡ್ಡ ಬೃಹತ್ ಯಂತ್ರಗಳು, ಉತ್ಪಾದನೆ ಘಟಕ, ಸಂಗ್ರಹ ಕೋಣೆಗಳು ನಿರ್ಮಾಣಗೊಂಡವು. ಸ್ಥಳೀಯವಾಗಿ ಅನೇಕ ಯುವಕರು ಉದ್ಯೋಗ‌ ಗಿಟ್ಟಿಸಿಕೊಂಡರು. ‌ಆದರೆ ಈಗಂತೂ ಅಲ್ಲಿ ಯಾವ ಪ್ರಕ್ರಿಯೆ ನಡೆಯುತ್ತಿಲ್ಲ. ಅದೇ ರೀತಿ ಜವಳಿ ಗಿರಣಿಗಳು ಸದ್ದು ಮಾಡುತ್ತಿದ್ದವು. ರೈಲ್ವೆ ನಿಲ್ದಾಣದ ಬ್ರಿಡ್ಜ್ ಕೆಳಗಿಳಿದು ನೋಡಿದಾಗ ನೂರಾರು ಕಾರ್ಮಿಕರು ಜವಳಿ ಗಿರಣಿಗಳಲ್ಲಿ ಹತ್ತಿ ವಿಂಗಡಿಸುವ, ಸಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.‌ ಕಾಲ ಕ್ರಮೇಣ ಈ ಘಟಕಗಳು ಕೂಡಾ ಬಂದ್ ಆದವು. ಈ ಕಾರಣದಿಂದ ಕೈಗಾರಿಕಾ ವಲಯ ಚೇತರಿಕೆ ಕಾಣಲೇ ಇಲ್ಲ.

ಪೈಪ್ ಫ್ಯಾಕ್ಟರಿ, ಬ್ಯಾಟರಿ ಫ್ಯಾಕ್ಟರಿ ಹೊರತುಪಡಿಸಿ ಜಿಲ್ಲೆಯಲ್ಲಿ ಉತ್ಪಾದನಾ ವಲಯ ಇಂದಿಗೂ ಸಹ ಸದ್ದು ಮಾಡುತ್ತಿಲ್ಲ. 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೂಡಗಿಯಲ್ಲಿ ಸ್ಥಾಪನೆಯಾಗಿರುವ ಎನ್‌ಟಿಪಿಸಿ ಹೊರತುಪಡಿಸಿ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಉತ್ಪಾದನೆ ಉದ್ಯಮಗಳು ಇಲ್ಲ. ಮುಳವಾಡ, ವಿಜಯಪುರ ನಗರ, ಉದ್ದೇಶಿತ ಅಲಿಯಬಾದ್‌ ಬಳಿ ಕೈಗಾರಿಕಾ ಪ್ರದೇಶದ ಲಭ್ಯತೆಯೂ ಇದೆ. ಎಲ್ಲವೂ ಇದ್ದೂ ಏನೂ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಆಲಮಟ್ಟಿ ಜಲಾಶಯದಿಂದ ನೀರು, ಕೂಡಗಿ ಎನ್‌ಟಿಪಿಸಿಯಿಂದ ವಿದ್ಯುತ್ ಹೀಗೆ ಕೈಗಾರಿಕೆಗಳಿಗೆ ಪೂರಕವಾದ ಎಲ್ಲಾ ಸೌಲಭ್ಯಗಳು ಜಿಲ್ಲೆಯಲ್ಲಿವೆ. ಕಂಪನಿ ಪ್ರತಿನಿಧಿಗಳು ಇಲ್ಲಿಗೆ ಆಗಮಿಸಲು ವಿಮಾನ, ರಫ್ತಿಗಾಗಿ ಕಾರ್ಗೋ ಸೇವೆ ಆರಂಭಗೊಳ್ಳುವ ದಿನಗಳು ದೂರವಿಲ್ಲ.

ಸಚಿವದ್ವಯರ ಮೇಲೆ ಹೊಸ ಭರವಸೆ

ವಿಜಯಪುರ ಜಿಲ್ಲೆಯವರೇ ಆದ ಎಂಬಿ ಪಾಟೀಲರು ಕೈಗಾರಿಕಾ ಸಚಿವರಾಗಿರುವುದು ಜಿಲ್ಲೆಯ ಕೈಗಾರಿಕಾ ವಲಯ ಸಮೃದ್ಧವಾಗಿ ಅರಳುವ ಎಲ್ಲಾ ಲಕ್ಷಣಗಳು ಗೋಚರವಾಗಿವೆ. ಏತನ್ಮಧ್ಯೆ ಸಕ್ಕರೆ ಹಾಗೂ ಜವಳಿ ಖಾತೆಯ ಸಚಿವ ಸ್ಥಾನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಒಲಿದಿದೆ. ಹೀಗಾಗಿ ಸಕ್ಕರೆಯ ಜೊತೆಗೆ ಜವಳಿ ಉದ್ಯಮ ಚೇತರಿಕೆ ಕಾಣುವ ಭರವಸೆ ಮೂಡಿದೆ.

ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡುವವರೆಗೂ ವಿರಮಿಸದ ಎಂಬಿ ಪಾಟೀಲ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿ ‌ಮಾಡಿದವರು. ಈಗ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕೈಗಾರಿಕಾ ಸ್ಥಾಪನೆಯ ಸಿಂಗಲ್ ವಿಂಡೋ ಪದ್ದತಿಗೆ ಬಲ ತುಂಬಲು ಕಾರ್ಯ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಅವರಯ ಮನಸ್ಸು ಮಾಡಿದರೆ ಬೃಹತ್ ಕಾರ್ಖಾನೆ ವಿಜಯಪುರದಲ್ಲಿ ನೆಲೆಯೂರುವುದು ಕಷ್ಟವೇನಲ್ಲ.

ಸಹಕಾರಿ ಧುರೀಣರಾಗಿರುವ ಸಚಿವ ಶಿವಾನಂದ ಪಾಟೀಲ ರೈತರ ಒಡನಾಡಿ. ಹತ್ತಿ ಬೆಳೆ ಪ್ರೋತ್ಸಾಹ ನೀಡಲು‌ ಮುತುವರ್ಜಿ ವಹಿಸಿದ ನಾಯಕ. ಈಗ ಜವಳಿ ಖಾತೆಯ ಸಾರಥ್ಯವನ್ನು ಅವರೇ ವಹಿಸಿಕೊಂಡಿರುವುದರಿಂದ ಜವಳಿ ಉದ್ಯಮಕ್ಕೆ ಪುನಶ್ಚೇತನ ದೊರಕಿಸುವರೇ, ಮತ್ತೆ ಗಿರಣಿ ಸದ್ದು ಆರಂಭಿಸುವರೇ ಎಂಬ ಕುತೂಹಲ, ಆಸೆ ಜನರಲ್ಲಿ‌ ಮೂಡಿದೆ. ಕೈಗಾರಿಕಾ ಸ್ಥಾಪನೆಯಿಂದ ಉದ್ಯೋಗ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಯುವ ಉದ್ಯೋಗಿಗಳು ಕನಸು ಕಾಣುವಂತಾಗಿದೆ.

ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

Whats_app_banner