ಕನ್ನಡ ಸುದ್ದಿ  /  Karnataka  /  Vijayapura News Indi Child Trapped In Open Borewell Another Incident After A Decade 3rd Case In 16 Years Smu

ಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗು; ದಶಕದ ಬಳಿಕ ಮತ್ತೊಂದು ಘಟನೆ, 16 ವರ್ಷದಲ್ಲಿ3ನೇ ಪ್ರಕರಣ

ಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗುವನ್ನು ರಕ್ಷಿಸುವ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ದಶಕದ ಬಳಿಕ ಮತ್ತೊಂದು ಘಟನೆ ನಡೆದಿದ್ದು, 16 ವರ್ಷದಲ್ಲಿ3ನೇ ಪ್ರಕರಣ ಇದಾಗಿದೆ. ಹಳೆಯ ಪ್ರಕರಣಗಳನ್ನು ನೆನಪಿಸುವ ವಿವರ ಇಲ್ಲಿದೆ. (ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ)

ಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗು ಸಾತ್ವಿಕ್ ಮುಜಗೊಂಡ (ಎಡ ಚಿತ್ರ); ನಿನ್ನೆ ಹಗಲು ಹೊತ್ತಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದ ಸಂದರ್ಭ (ಬಲ ಚಿತ್ರ)
ಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗು ಸಾತ್ವಿಕ್ ಮುಜಗೊಂಡ (ಎಡ ಚಿತ್ರ); ನಿನ್ನೆ ಹಗಲು ಹೊತ್ತಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದ ಸಂದರ್ಭ (ಬಲ ಚಿತ್ರ)

ವಿಜಯಪುರ: ವಿಫಲ ಕೊಳವೆ ಬಾವಿಗಳನ್ನು ಮುಚ್ಚಲು ಸರ್ಕಾರ ಕಟ್ಟುನಿಟ್ಟಿನ ಕ್ರಮ, ಜಾಗೃತಿ, ದಂಡ ಪ್ರಯೋಗ ಮುಂತಾದ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ವಿಜಯಪುರ ಜಿಲ್ಲೆಯಲ್ಲಿ 10 ವರ್ಷಗಳ ನಂತರ ಮತ್ತೊಂದು ಮಗು ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡ ಘಟನೆ ನಡೆದಿರುವುದು ದುರ್ದೈವ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಈ ರೀತಿಯ ಮೂರು ಪ್ರಕರಣಗಳು ಸಂಭವಿಸಿವೆ.

ದ್ಯಾಬೇರಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಈ ರೀತಿ ಘಟನೆ ನಡೆದಿತ್ತು. ಅದಕ್ಕೂ ಮುನ್ನ 2008 ರಲ್ಲಿ ದೇವರ ನಿಂಬರಗಿ ಗ್ರಾಮದಲ್ಲಿ ಸಹ ಈ ರೀತಿ ಘಟನೆ ಸಂಭವಿಸಿತ್ತು. ಇವೆಲ್ಲವೂ ಈಗ ಆತಂಕ, ಕಳವಳವನ್ನು ಹೆಚ್ಚಿಸಿದೆ.

2014ರಲ್ಲಿ ಮೂರು ವರ್ಷದ ಅಕ್ಷತಾ

ಯಾದಗಿರಿ ಜಿಲ್ಲೆಯಿಂದ ಕೂಲಿಗಾಗಿ ಬಂದಿದ್ದ ಹನುಮಂತ ಪಾಟೀಲ ಅವರ ಮಗಳು ಮೂರು ವರ್ಷದ ಅಕ್ಷತಾ ಆಟವಾಡುತ್ತಾ ವಿಫಲ ಕೊಳವೆಬಾವಿಯಲ್ಲಿ ಸಿಲುಕಿದ ಪ್ರಕರಣ 2014 ರಲ್ಲಿ ನಡೆದಿತ್ತು. ಪಾಲಕರು ತೋಟದ ವಸ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ, ಪಕ್ಕದ ಜಮೀನನಲ್ಲಿ ಆಟವಾಡಲು ಹೋಗಿದ್ದ ಅಕ್ಷತಾ ವಿಫಲವಾಗಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು.

ಅಂದು ಬಾಲಕಿ ಅಕ್ಷತಾಳ ರಕ್ಷಣೆಗಾಗಿ ಹೈದಾರಾಬಾದ್‍ನಿಂದ ಎನ್‍ಡಿಆರ್‌ಎಫ್, ಬೆಳಗಾವಿಯಿಂದ ಎಸ್‍ಡಿಆರ್‌ಎಫ್ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ರಕ್ಷಣಾ ತಂಡಗಳು ವಾರ ಪೂರ್ತಿ ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ಸಫಲವಾಯಿತಾದರೂ, ಅಕ್ಷತಾ ಜೀವ ಉಳಿಸುವುದು ಸಾಧ್ಯವಾಗಿರಲಿಲ್ಲ.

ದೇವರನಿಂಬರಗಿಯಲ್ಲೂ ಕಹಿ ಘಟನೆ

2008 ರಲ್ಲಿ ಇಂಡಿ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದದ್ದ ಕೊಳವೆ ಬಾವಿಯಲ್ಲಿ ಕಾಂಚನಾ ಎಂಬ ಬಾಲಕಿ ಬಿದ್ದಿದ್ದಳು. ಕರ್ನಾಟಕದಲ್ಲಿ ಮಗು ಕೊಳವೆ ಬಾವಿಗೆ ಬಿದ್ದ ಎರಡನೇ ಪ್ರಕರಣ ಇದಾಗಿತ್ತು. ದೇವರನಿಂಬರಗಿ ಗ್ರಾಮದ ಕೊಳವೆ ಬಾವಿಗೆ ಬಿದ್ದಿದ್ದ ಕಾಂಚನಾ ಉರುಫ್‌ ಏಗವ್ವ ಎಂಬ ಬಾಲೆಯನ್ನು ರಕ್ಷಿಸುವುದಕ್ಕೆ ರಕ್ಷಣಾ ತಂಡಗಳು ಬಹಳ ಹೊತ್ತು ಕಾರ್ಯಾಚರಣೆ ನಡೆಸಿದ್ದವು. ಮಗುವನ್ನು ಕೊಳವೆ ಬಾವಿಯಿಂದ ಮೇಲೆತ್ತುವುದಕ್ಕೆ ಹಿಟಾಚಿ, ಜೆಸಿಬಿ ಬಳಸಿ ನಡೆಸಿದ ನಿರಂತರ ಕಾರ್ಯಾರಣೆ ನಡೆಸಲಾಗಿತ್ತು. ಹೀಗಿದ್ದರೂ, ಕಾಂಚನಾಳ ಜೀವ ಉಳಿಸುವುದು ಆಗಿರಲಿಲ್ಲ.

ಇದಾದ ಬಳಿಕ 2014 ರಲ್ಲಿ ಯಾದಗಿರಿ ಜಿಲ್ಲೆಯಿಂದ ಕೂಲಿಗಾಗಿ ಬಂದಿದ್ದ ಹನುಮಂತ ಪಾಟೀಲ ಎಂಬುವವರ ಮಗಳು ಮೂರು ವರ್ಷದ ಅಕ್ಷತಾ ಎಂಬ ಬಾಲೆ ಕೂಡ ವಿಜಯಪುರ ತಾಲೂಕಿನಲ್ಲಿ ಇಂಥದ್ದೇ ದುರಂತದಲ್ಲಿ ಸಿಲುಕಿ ಸಾವಿಗೀಡಾಗಿದ್ದಳು. ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಜಮೀನಿನಲ್ಲಿ ಅಕ್ಷತಾ ಪ್ರಕರಣ ನಡೆದಿತ್ತು.

ದೇವರ ನಿಂಬರಗಿ ಮತ್ತು ಯಾದಗಿರಿಯ ಮಗು ಬೋರ್‌ವೆಲ್‌ಗೆ ಬಿದ್ದ ಎರಡು ಕಹಿ ಪ್ರಕರಣಗಳ ನೆನಪು ಮಾಸುವ ಮೊದಲೇ ಇಂಡಿ ತಾಲೂಕಿನಲ್ಲೇ ಸಾತ್ವಿಕ್ ಮುಜುಗೊಂಡ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಪುಟ್ಟ ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯಲ್ಲಿ ಮೊದಲ ದುರಂತ ಘಟನೆ: ಕೊಳವೆ ಬಾವಿಗೆ ಬಿದ್ದು ಮಗು ಮೃತಪಟ್ಟ ಮೊದಲ ದುರಂತ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿತ್ತು. 2005 ರಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಯಲ್ಲಮ್ಮದೇವಿ ಗುಡ್ಡದ ಪರಿಸರದಲ್ಲಿ ಸಂದೀಪ ಎಂಬ ಬಾಲಕ ಇದೇ ರೀತಿ ಕೊಳವೆ ಬಾವಿಗೆ ಬಿದ್ದು ದುರಂತ ಸಾವು ಕಂಡಿದ್ದ.

ಮಾನವಿ ತಾಲೂಕಿನ ನೀರಮಾನವಿಯಲ್ಲಿ ಸಣ್ಣವೆಂಟಕೇಶ ಎಂಬುವವರ ಜಮೀನಿನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ್ತೊಬ್ಬ ಸಂದೀಪ ವಿಫಲ ಕೊಳವೆ ಬಾವಿಗೆ ಬಿದಿದ್ದ. ಅಂದು ಆತನ ರಕ್ಷಣೆಗಾಗಿ ಐದಾರು ದಿನಗಳ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಆತನೂ ಬದುಕಿ ಬಂದಿರಲಿಲ್ಲ. ಸಾತ್ವಿಕ್ ಮುಜುಗೊಂಡ ಬದುಕಿ ಬರಲಿ ಎಂಬುದು ಎಲ್ಲರ ಹಾರೈಕೆ.

(ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ)

IPL_Entry_Point