Vijayapura News: ಮಳೆಗಾಗಿ ಸ್ಮಶಾನದ ಮೊರೆ ಹೋದ ವಿಜಯಪುರ ಜನರು; ಶವದ ಬಾಯಿಗೆ ನೀರು ಬಿಟ್ಟು ಪ್ರಾರ್ಥನೆ
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಮಳೆಗಾಗಿ ಸ್ಮಶಾನದ ಮೊರೆ ಹೋದ ವಿಜಯಪುರ ಜನರು; ಶವದ ಬಾಯಿಗೆ ನೀರು ಬಿಟ್ಟು ಪ್ರಾರ್ಥನೆ

Vijayapura News: ಮಳೆಗಾಗಿ ಸ್ಮಶಾನದ ಮೊರೆ ಹೋದ ವಿಜಯಪುರ ಜನರು; ಶವದ ಬಾಯಿಗೆ ನೀರು ಬಿಟ್ಟು ಪ್ರಾರ್ಥನೆ

Vijayapura Rain News: ಸತ್ತವರ ಶವ ಹೂತಾಗ ಅದು ಬಾಯಿ ತೆಗೆದೇ ಇದ್ದರೆ ಮಳೆಯಾಗಲ್ಲ, ಹೀಗಾಗಿ ಹೂತಿರುವ ಶವದ ಬಾಯಿಗೆ ನೀರನ್ನು ಹಾಕಿ ಅದನ್ನು ತೃಪ್ತಿ ಪಡೆಸಬೇಕು, ಆಗ ಮತ್ತೆ ಮಳೆ ಬರುತ್ತದೆ ಎಂಬ ನಂಬಿಕೆ ಹಿನ್ನೆಲೆ ಕಲಕೇರಿ ಗ್ರಾಮದ ವಾಗೀಶ್ ಹಿರೇಮಠ ಅವರ ನೇತೃತ್ವದಲ್ಲಿ ಸ್ಮಶಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಶವದ ಬಾಯಿಗೆ ನೀರು ಬಿಟ್ಟು ಮಳೆಗಾಗಿ ಪ್ರಾರ್ಥನೆ
ಶವದ ಬಾಯಿಗೆ ನೀರು ಬಿಟ್ಟು ಮಳೆಗಾಗಿ ಪ್ರಾರ್ಥನೆ

ವಿಜಯಪುರ: ಜಿಲ್ಲೆಯಲ್ಲಿ ವರುಣ ಇನ್ನೂ ಕೃಪೆ ತೋರಿಲ್ಲ, ಕೃಷಿ ಚಟುವಟಿಕೆಗಳು ಹಿನ್ನಡೆಗೊಂಡಿವೆ. ಹೀಗಾಗಿ ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳ‌ ಮದುವೆ ಸಾಮಾನ್ಯ. ಆದರೆ ವಿಜಯಪುರ ಜಿಲ್ಲೆಯ ತಾಳಿಕೋಟ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶವದ ಬಾಯಿಗೆ ನೀರು ಬಿಟ್ಟು ಮಳೆಗಾಗಿ ಪ್ರಾರ್ಥನೆ ‌ಮಾಡುವ ಪರಂಪರೆ ಈ ವರ್ಷವೂ ಮುಂದುವರೆದಿದೆ.

ಮಳೆಗಾಗಿ ಜನರು ಪೂಜೆ ಹೋಮ, ಹವನ ಮಾಡಿದಂತೆ ಜನರು‌‌ ಈ ‌ಕಾರ್ಯಕ್ಕೆ ಅಣಿಯಾಗಿದ್ದಾರೆ. ರಾಜ್ಯದ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಮಳೆ ಸುರಿಯುತ್ತಿರುವುದು ಅಷ್ಟಕಷ್ಟೆ. ಜಿಲ್ಲೆಯ ಕೆಲ ಭಾಗಗಳಲ್ಲಂತೂ ಮಳೆಗಾಲದಲ್ಲೂ ಸಹ ಬೇಸಿಗೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿನ ಜನ ಮಳೆಗಾಗಿ ಬೇರೆ ಬೇರೆ ರೀತಿಯ ಪ್ರಯತ್ನದಲ್ಲಿ ಸಕ್ರೀಯವಾಗಿದ್ದಾರೆ.

ಕಲಕೇರಿ ಗ್ರಾಮದಲ್ಲಿ ಮಳೆ ಬರಲಿ ಎಂದು ಗ್ರಾಮಸ್ಥರೆಲ್ಲ ಶವದ ಮೊರೆ ಹೋಗಿದ್ದಾರೆ. ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಶವದ ಬಾಯಿಗೆ ನೀರು ಬಿಟ್ಟು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಯಾರಾದರೂ ನಿಧನರಾದರೆ ಅವರ ಸಂಬಂಧಿಕರು, ದೂರದ ಬಂಧುಗಳು, ಗ್ರಾಮಸ್ಥರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ. ಅಂತ್ಯಕ್ರಿಯೆಯ ಬಳಿಕ ಇತರ ಕ್ರಿಯಾ ಕರ್ಮಗಳಿಗಾಗಿ ಮೃತರ ಸಂಬಂಧಿಕರು ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ತೆರಳಿ ಪೂಜೆ ಮತ್ತಿತರ ಸಂಪ್ರದಾಯಗಳನ್ನು ಪೂರೈಸುವುದು ವಾಡಿಕೆ.

ಆದರೆ, ಇಲ್ಲಿ ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿ ವರುಣನ ಕೃಪೆಗಾಗಿ ಪ್ರಾರ್ಥಿಸಿದ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ. ಬಸವನಾಡು ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ಮಳೆಗಾಗಿ ನಡೆದ ಈ ವಿಚಿತ್ರ ಆಚರಣೆ ಅಚ್ಚರಿ ತಂದಿದೆ.

ಏನಕ್ಕೆ ಈ ಆಚರಣೆ?

ಇನ್ನೂ ಸತ್ತವರ ಶವ ಹೂತಾಗ ಅದು ಬಾಯಿ ತೆಗೆದೇ ಇದ್ದರೆ ಮಳೆಯಾಗಲ್ಲ, ಹೀಗಾಗಿ ಹೂತಿರುವ ಶವದ ಬಾಯಿಗೆ ನೀರನ್ನು ಹಾಕಿ ಅದನ್ನು ತೃಪ್ತಿ ಪಡೆಸಬೇಕು, ಆಗ ಮತ್ತೆ ಮಳೆ ಬರುತ್ತದೆ ಎಂಬ ನಂಬಿಕೆ ಹಿನ್ನೆಲೆ ಕಲಕೇರಿ ಗ್ರಾಮದ ವಾಗೀಶ್ ಹಿರೇಮಠ ಅವರ ನೇತೃತ್ವದಲ್ಲಿ ಸ್ಮಶಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಇನ್ನೂ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಆತಂಕಗೊಂಡಿದ್ದಾರೆ. ಅದಕ್ಕಾಗಿ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತೇ ಅನ್ನೋ ನಂಬಿಕೆ ಗ್ರಾಮಸ್ಥರಲ್ಲಿ ಇದೆ. ಹೀಗಾಗಿ ಟ್ಯಾಂಕರ್​ನಲ್ಲಿ ನೀರು ತಂದು ಪೈಪ್​ ಮೂಲಕ ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಹಾಕಿದ್ದಾರೆ.

ಕಳೆದ ‌ವರ್ಷ ಸಹ‌‌ ಈ ರೀತಿ ಆಚರಣೆ ನಡೆದಾಗಲೂ ಮಳೆ ಸುರಿದಿತ್ತು. ಈಗ ಕಾಕತಾಳೀಯ ಎಂಬಂತೆ ‌ಈ ವರ್ಷ ಸಹ ಪೂಜೆಯ ನಂತರ ಮಳೆ ಸುರಿಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಹೀಗಾಗಿ ‌ಮತ್ತಷ್ಟು ಭಕ್ತಿಭಾವದಿಂದ ಕಲಕೇರಿ ಜನತೆ ಪೂಜೆಯಲ್ಲಿ ತೊಡಗಿಸಿಕೊಂಡರು.

ವರದಿ: ಸಮೀವುಲ್ಲಾ ಉಸ್ತಾದ

Whats_app_banner