ಲೋಕಸಭೆ ಚುನಾವಣೆ 2024; ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ತೆರೆಮರೆಯ ಕಸರತ್ತು ತೀವ್ರ
ಲೋಕಸಭೆ ಚುನಾವಣೆ 2024: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿವೆ. ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ತೆರೆಮರೆಯ ಕಸರತ್ತು ತೀವ್ರಗೊಳಿಸಿದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಈ ಬಾರಿ ವಿಜಯಪುರದಲ್ಲಿ ಯಾವ ತಂತ್ರ ಹಣೆಯಲಿದೆ? - ಇಲ್ಲಿದೆ ವಿವರ. (ವರದಿ- ಸಮೀವುಲ್ಲಾ ಉಸ್ತಾದ)
ವಿಜಯಪುರ: ಲೋಕಸಭಾ ಚುನಾವಣೆಗಳು ಸಮಿಪಿಸುತ್ತಿದ್ದಂತೆ ಎಲ್ಲ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಬಲದಲ್ಲಿ ಚುನಾವಣೆ ಎದುರಿಸಿತ್ತು. ಆ ಸಮಯದಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಿಗೆ ಒಲಿದಿತ್ತು.
ಈ ಬಾರಿ ಜೆಡಿಎಸ್ ಬಿಜೆಪಿಯೊಂದಿಗೆ ದೋಸ್ತಿ ಮಾಡಿಕೊಂಡಿದೆ. ಸೀಟು ಹಂಚಿಕೆ ವಿಷಯ ಇನ್ನೂ ಫೈನಲ್ ಆಗಿಲ್ಲ. ಹೀಗಾಗಿ ಜೆಡಿಎಸ್ ಕಳೆದ ಬಾರಿಯಂತೆ ಈ ಬಾರಿಯೂ ಡಿಮ್ಯಾಂಡ್ ಮಾಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಭರ್ಜರಿ ಅಂತರದಿಂದ ಗೆಲುವು ಸಾಧಿಸಿರುವ ಬಿಜೆಪಿ ಗೆದ್ದ ಕ್ಷೇತ್ರವನ್ನು ಮೈತ್ರಿ ಪಕ್ಷಕ್ಕೆ ಬಿಟ್ಟು ಕೊಡುವುದು ಅಸಾಧ್ಯ ಎನ್ನುವುದಾದರೂ ರಾಜಕೀಯದಲ್ಲಿ ಎಲ್ಲವೂ ಸಾಮಾನ್ಯ ಹೀಗಾಗಿ ಯಾವ ರಾಜಕೀಯ ಕ್ರಾಂತಿಯನ್ನು ಊಹಿಸಲು ಅಸಾಧ್ಯ.
ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿನ ಬಳಿಕ ರಾಜಕೀಯ ಅಸ್ತಿತ್ವಕ್ಕೆ ಹರಸಾಹಸ ಪಡುತ್ತಿರುವ ಜೆಡಿಎಸ್ ಮುಂಬರುವ ಚುನಾವಣೆಗೆ ವಿಜಯಪುರ ಜಿಲ್ಲೆಯಲ್ಲಿ ಹೊಸ ತಂಡ ರಚಿಸಲು ಮುಂದಾಗಿದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ವಿಜಯಪುರದಲ್ಲಿ ಒಂದು ಸ್ಥಾನ
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರದಲ್ಲಿ 19ರಲ್ಲಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿತ್ತು ಇನ್ನು ವಿಜಯಪುರ ಜಿಲ್ಲೆಯ ಬಗ್ಗೆ ನೋಡುವುದಾದರೆ ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್ ನ ಏಕೈಕ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಪಕ್ಷವನ್ನು ಮತ್ತೆ ಕಟ್ಟುವ ನಿಟ್ಟಿನಲ್ಲಿ ಮತ್ತು ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಉದ್ದೇಶದಿಂದ ಜಿಲ್ಲೆಯ ಮೂವರು ನಾಯಕರಿಗೆ ಪ್ರಮುಖ ಸ್ಥಾನಗಳನ್ನು ನೀಡಲು ಪಕ್ಷ ನಿರ್ಧರಿಸಿದೆ.
ಪ್ರಕ್ಷದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದ ಏಕೈಕ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ ಅವರನ್ನು ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ಅಪ್ಪುಗೌಡ ಪಾಟೀಲ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ ಹಾಗೂ ಜೆಡಿಎಸ್ ನ ಮಾಜಿ ಶಾಸಕ ದೇವಾನಂದ ಚವ್ಹಾಣ ಅವರ ಪತ್ನಿ ಸುನೀತಾ ಚವ್ಹಾಣ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದಲ್ಲಿ ಮಹತ್ವದ ಸ್ಥಾನಗಳನ್ನು ನೀಡಿದ್ದಾರೆ.
ಇನ್ನು ಜೆಡಿಎಸ್‌ನಲ್ಲಿ ವಿಜಯಪುರ ಜಿಲ್ಲೆಗೆ ಮೂರು ಪ್ರಮುಖ ಸ್ಥಾನಗಳನ್ನು ನೀಡಿರುವುದು ಇದೇ ಮೊದಲ ಬಾರಿ ಎಂದು ಪಕ್ಷದ ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಹಾಗೂ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಂದೇಶ ರವಾನೆಗೆ ಜೆಡಿಎಸ್ ಮುಂದಾಗಿದೆ.
ಲೋಕಸಭಾ ಚುನಾವಣೆಯಲ್ಲಿ 3 ಸ್ಥಾನದಲ್ಲಿ ಸ್ಪರ್ಧೆಗೆ ಜೆಡಿಎಸ್ ಚಿಂತನೆ
ಈಗ ಬಿಜೆಪಿಯೊಂದಿಗೆ ಚುನಾವಣಾ ಪೂರ್ವಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಸೀಟು ಹಂಚಿಕೆ ಸೂತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ಮೂರು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೈತ್ರಿಯಲ್ಲಿ ವಿಜಯಪುರ ಕ್ಷೇತ್ರವನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದೆಯಾದರೆ ಹಾಲಿ ಬಿಜೆಪಿ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರಿಗೆ ಬಿಜೆಪಿ ಟಿಕೇಟ್ ನೀಡದಿರಲು ನಿರ್ಧರಿಸಿದೆ ಮಾತ್ರ ಜೆಡಿಎಸ್ ವಿಜಯಪುರ ಕ್ಷೇತ್ರವನ್ನು ಪಡೆಯುವ ನಿರೀಕ್ಷೆಯಲ್ಲಿದೆ.
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಸುನೀತಾ ಚವ್ಹಾಣ ಅವರು ತಮ್ಮ ಚುನಾವಣಾ ಪೂರ್ವ ಮೈತ್ರಿಯ ಭಾಗವಾಗಿ ಕಾಂಗ್ರೆಸ್ – ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಇದು ಕೂಡ ಜೆಡಿಎಸ್‌ಗೆ ಸಧ್ಯದ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ವಿಜಯಪುರ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿರೀಕ್ಷೆಗೆ ಕಾರಣವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುನೀತಾ ಚವ್ಹಾಣ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದರು, ಆದರೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಈಗ ಮತ್ತೆ ಜೆಡಿಎಸ್ ವಿಜಯಪುರ ಕ್ಷೇತ್ರವನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ. ಇನ್ನು ಸುನೀತಾ ಚವ್ಹಾಣ ಅವರು ಈಗಾಗಲೇ ಮಾಜಿಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಕುಮಾರಸ್ವಾಮಿ ಅವರ ಹೊಸ ಸೂತ್ರ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಸಮೀವುಲ್ಲಾ ಉಸ್ತಾದ
(This copy first appeared in Hindustan Times Kannada website. To read more like this please logon to kannada.hindustantime.com)