Vijayapura News: ಎಂಬಿಪಾಟೀಲ್ ಕನಸಿನ ಯೋಜನೆ, ವಿಜಯಪುರದ ಗಡಿಯಂಚಿನ ಗ್ರಾಮದ ಕೆರೆ ತುಂಬಲು ಅನ್ನದಾತನ ಹಕ್ಕೊತ್ತಾಯ
ಬರದ ನಾಡು, ಪಂಚ ನದಿಗಳ ಬೀಡು ಎಂದೆಲ್ಲಾ ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಬರದ ಕಾರಣದಿಂದ ಕೆರೆಗಳಿಗೆ ನೀರು ತುಂಬಿಸುವ ಒತ್ತಾಯ ಕೇಳಿ ಬಂದಿದೆ.ವರದಿ: ಸಮೀವುಲ್ಲಾ ಉಸ್ತಾದ್, ವಿಜಯಪುರ

ವಿಜಯಪುರ: ರೈತರ ಜಮೀನುಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷೆಯ `ಕೆರೆಗಳಿಗೆ ನೀರು ತುಂಬಿಸುವ ಯೋಜನೆ'. ಅಸಾಧ್ಯ ಎನಿಸುವ ಈ ಯೋಜನೆ ಈಗಿನ ಸಚಿವ ಡಾ.ಎಂ.ಬಿ. ಪಾಟೀಲರ ಕನಸಿನ ಕೂಸು. ವಿಶಿಷ್ಟ ಪರಿಕಲ್ಪನೆಯ ಈ ಯೋಜನೆಗೆ ಅನೇಕ ರೀತಿಯಲ್ಲಿ ಶ್ರಮಿಸಿ ಹೊರರಾಜ್ಯಗಳಿಗೆ ತಂಡಗಳನ್ನು ಕಳುಹಿಸಿ ದೇಶದಲ್ಲಿಯೇ ಮಾದರಿಯಾದ ಈ ಯೋಜನೆ ವಿಜಯಪುರದಿಂದಲೇ ಬೀಜಾಂಕುರವಾಗಿದ್ದು ನೀರಾವರಿ ಇತಿಹಾಸದಲ್ಲಿ ಅಗ್ರಗಣ್ಯ. ಈ ಯೋಜನೆ ಫಲವಾಗಿಯೇ ಈಗಾಗಲೇ ಭೂತನಾಳ ಕೆರೆಗೆ ಕೃಷ್ಣೆಯ ಒಡಲಿನಿಂದ ನೀರು ಬರುತ್ತಿದೆ, ಬೃಹತ್ ಕೊಳವೆ ಮಾರ್ಗಗಳ ಮೂಲಕ ಕೃಷ್ಣೆಯ ನೀರು ಭೂತನಾಳ ಕೆರೆಗೆ ಹರಿದು ಬರುತ್ತಿದೆ, ಪರಿಣಾಮವಾಗಿ ನಗರದ ಅನೇಕ ವಾರ್ಡ್‌ಗಳ ಕುಡಿಯುವ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಿದಂತಾಗಿದ್ದು, ಈ ಯೋಜನೆ ಯಶಸ್ವಿ ಆದಂತಾಗಿದೆ.
ಅದೇ ತೆರನಾಗಿ ವಿಜಯಪುರ ಜಿಲ್ಲೆಯ 149 ಕೆರೆಗಳನ್ನು ತುಂಬುವ ಕಾರ್ಯ ಪ್ರಗತಿಯಲ್ಲಿರುವುದು ಅನ್ನದಾತನಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ಕೆಲವು ಅಂಚಿನಲ್ಲಿರುವ ಗ್ರಾಮಗಳ ಕೆರೆಗಳಿಗೆ ನೀರು ತುಂಬುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನ್ನದಾತ ಈ ಭಾಗದ ಕೆರೆಗಳಿಗೂ ನೀರು ತುಂಬಿಸುವಂತೆ ಹಕ್ಕೊತ್ತಾಯ ಮೊಳಗಿಸುತ್ತಿದ್ದಾನೆ.
ಜಂಬಗಿ, ತಿಡಗುಂದಿ ಭಾಗದ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ರೈತರಿಂದ ಸರಣಿ ಹೋರಾಟ, ಧರಣಿಗಳು ನಡೆಯುತ್ತಿದ್ದು, ಕೆರೆಗಳ ತುಂಬಿಸುವ ನಿಟ್ಟಿನಲ್ಲಿ ಪ್ರಬಲವಾದ ಹಕ್ಕೊತ್ತಾಯ ಮೊಳಗುತ್ತಲೇ ಇದೆ.
ಈಗಾಗಲೇ ಹಲವಾರು ಗ್ರಾಮಗಳ ರೈತರು ಬರದ ಕಾರಣದಿಂದ ಬೇಗನೇ ಆಲಮಟ್ಟಿಯಿಂದ ಕೆರೆಗಳಿಗೆ ನೀರು ತುಂಬಿಸಿಕೊಡಬೇಕು. ಜನ ಜಾನೂವಾರುಗಳ ನೆರವಿಗೆ ಅಧಿಕಾರಿಗಳು ಬರಬೇಕು ಎಂದು ಹೇಳುತ್ತಲೇ ಇದ್ದಾರೆ. ಚುನಾವಣೆ ಗಡಿಬಿಡಿಯಲ್ಲಿದ್ದ ಅಧಿಕಾರಿಗಳು ಈಗ ಮತದಾನ ಮುಗಿಸಿ ನಿರುಮ್ಮಳವೇನೋ ಆಗಿದ್ದಾರೆ. ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಮೌನಕ್ಕೆ ಶರಣಾಗಿದ್ದಾರೆ.
ತುಂಬುವುದೇ ಜಂಬಗಿ ಕೆರೆ
ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಜಂಬಗಿ ಕೆರೆ ತುಂಬಲಿದೆಯೇ ಎಂಬುದನ್ನು ರೈತರು ಆಶೆಗಣ್ಣಿನಿಂದ ಕಾಯುತ್ತಿದ್ದಾರೆ. ಆದರೆ ಜಂಬಗಿ ನೀರು ತುಂಬಿಸಲು ಈಗಿರುವ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಧೀಡಿರ್ ಪ್ರತಿಭಟನೆ ಸಹ ನಡೆಸಿರುವ ಜಂಬಗಿ, ಹುಣಶ್ಯಾಳ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನೀರು ತುಂಬದೇ ಹೋದರೆ ಕೆರೆ ಅಂಗಳದಲ್ಲಿಯೇ ಹೋರಾಟಕ್ಕೆ ಅಣಿಯಾಗುವ ಎಚ್ಚರಿಕೆ ಸಹ ರವಾನಿಸಿದ್ದಾರೆ.
ಜಂಬಗಿ ಕೆರೆಯೂ ಜಿಲ್ಲೆಯಲ್ಲಿಯೇ 2ನೇ ಅತೀದೊಡ್ಡ ಕೆರೆಯಾಗಿದ್ದು, ಹಾಗೂ ಹುಣಶ್ಯಾಳ (ಮಾದಾಳ) ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ 5-6 ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ.
ಇದರಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗಲಿದೆ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರು, ಜಂಬಗಿ ಹಾಗೂ ಹುಣಶ್ಯಾಳ ಕೆರೆ ಮಾತ್ರ ತುಂಬದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೆ ಕೆರೆ ನೀರು ತುಂಬದೇ ಪುರಾಣ ಹೇಳುತ್ತಿದ್ದಾರೆ, ಕೇಳಿದರೆ ನಿಮಗೆ ನೀರು ಬರುವುದಿಲ್ಲ, ನೀವೂ ಮೇಲಿನ ಅಧಿಕಾರಿಗಳಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ನೆಪ ಹೇಳಿಯೂ ಸಾಗ ಹಾಕುತ್ತಿದ್ದಾರೆ. ಈಗ ಬಗ್ಗ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಂ.ಬಿ.ಪಾಟೀಲ್ ಅವರೇ ಗಮನ ಹರಿಸಿ ನೆರವಿಗೆ ಬರಬೇಕು ಎನ್ನುವುದು ರೈತರ ಆಗ್ರಹ.
ವರದಿ: ಸಮೀವುಲ್ಲಾ ಉಸ್ತಾದ್, ವಿಜಯಪುರ

ವಿಭಾಗ