ಅಂದು ಕುರುಕ್ಷೇತ್ರ, ಇಂದು ಸುಕ್ಷೇತ್ರ ಲಚ್ಯಾಣದಲ್ಲಿ ಪವಾಡ; ಮೃತ್ಯುಂಜಯನಾದ ಸಾತ್ವಿಕ, ರಕ್ಷಣಾ ಪಡೆಗಳಿಗೆ ಸಿಕ್ಕ ಫಲ
21 ಗಂಟೆಗಳ ಕಾರ್ಯಾಚರಣೆ ನಡೆಸಿ 14 ತಿಂಗಳ ಮಗುವನ್ನ ಮೃತ್ಯುಕೂಪವಾಗಿದ್ದ ಕೊಳವೆಬಾವಿಯಿಂದ ಹೊರ ತೆಗೆಯಲಾಗಿದೆ. ರಕ್ಷಣಾ ಪಡೆಗಳ ನಿರಂತರ ಕಾರ್ಯಾಚರಣೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. (ವರದಿ: ಸಮೀವುಲ್ಲಾ ಉಸ್ತಾದ)
ವಿಜಯಪುರ: ಅಂದು ಹರಿಯಾಣಾದ ಕುರುಕ್ಷೇತ್ರದಲ್ಲಿ 2006 ರಲ್ಲಿ 60 ಅಡಿ ಆಳದಲ್ಲಿ ವಿಫಲವಾದ ಕೊಳವೆಬಾವಿಯಲ್ಲಿ ಐದು ವರ್ಷದ ಬಾಲಕ ಪ್ರೀನ್ಸ್ ಸಿಲುಕಿಕೊಂಡಿದ್ದ. ಸೇನಾಪಡೆಯ ಅವಿರತ ಶ್ರಮದ ಫಲವಾಗಿ ಮೃತ್ಯುಂಜಯನಾಗಿ ಹೊರಗೆ ಬಂದಿದ್ದ. ಈಗ ಲಚ್ಯಾಣದ ಪ್ರೀನ್ಸ್ ಸಾತ್ವಿಕ ಸಹ ಮೃತ್ಯುಂಜಯನಾಗಿ ಹೊರಬಂದಿದ್ದು, ಲಕ್ಷಾಂತರ ಜನರ ಪ್ರಾರ್ಥನೆ ಫಲಿಸಿದೆ. ಅಂದು ಕುರುಕ್ಷೇತ್ರದಲ್ಲಿ ನಡೆದಿದ್ದ ಪವಾಡ ಇಂದು ಸುಕ್ಷೇತ್ರ ಶ್ರೀ ಸಿದ್ಧಲಿಂಗ ಮಹಾರಾಜರ ಪಾವನ ನೆಲ ಲಚ್ಯಾಣದಲ್ಲಿ ನಡೆದಿದೆ. 21 ಗಂಟೆಗಳ ಸತತ ಕಾರ್ಯಾಚರಣೆಯ ಮೂಲಕ 14 ತಿಂಗಳ ಹಸುಳೆ ಮೃತ್ಯುಕೂಪವಾಗಿದ್ದ ಕೊಳವೆಬಾವಿಯಲ್ಲಿ ಸಿಲುಕಿ ಮೃತ್ಯುವನ್ನು ಗೆದ್ದು ಹೊರ ಬಂದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ, ರಾಜ್ಯ ವಿಪತ್ತು ನಿರ್ವಹಣೆ, ಅಗ್ನಿಶಾಮಕ, ಪೊಲೀಸ್, ಕಂದಾಯ, ಜಿಲ್ಲಾಡಳಿತ ಹೀಗೆ ಎಲ್ಲರ ಅವಿರತ ಶ್ರಮ, ಲಕ್ಷಾಂತರ ಜನರ ಪ್ರಾರ್ಥನೆ ಫಲಿಸಿದೆ. 21 ಗಂಟೆಗಳ ಕಾಲ ನಡೆದ ಅವಿರತ ಕಾರ್ಯಾಚರಣೆಯಲ್ಲಿ ಜೆಸಿಬಿ, ಹಿಟಾಚಿಗಳು ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿದ್ದವು. 37 ಜನ ಎನ್‌ಡಿಆರ್‌ಎಫ್, 40 ಜನರ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಯ ಭಾಗವಾಯಿತು.
ಕೊಳವೆ ಬಾವಿಯತ್ತ ಆಡಲು ಹೋಗಿದ್ದ ಸಾತ್ವಿಕ್ ಸಂಜೆ 5-25 ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸುಮಾರು ಅರ್ಧ-ಮುಕ್ಕಾಲು ಗಂಟೆಯಲ್ಲೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುದ್ದಿ ತಿಳಿದು ಜಿಲ್ಲಾಡಳಿತದ ಸೂಚನೆ ಮೇರೆಗೆ ಮಗುವಿನ ರಕ್ಷಣಾ ಕಾರ್ಯಾರಣೆ ಭರದಿಂದ ಸಾಗಿತು.
ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾಧಿಕಾರಿ ಭೂಬಾಲನ್, ಎಸ್ಪಿ ಋಷಿಕೇಶ ಭಗವಾನ್, ಎಸಿ. ಆಬೀದ್ ಗದ್ಯಾಳ, ಡಿವೈಎಸ್‌ಪಿ ಜಗದೀಶ ಅವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಇಂಡಿ ಗ್ರಾಮೀಣ, ನಗರ ಠಾಣೆ ಪೊಲೀಸರು, ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದ್ದರು. ಸಿಸಿ ಕ್ಯಾಮೆರಾ ಮೂಲಕ ಮಗುವಿನ ಚಲನ ವಲನಗಳ ಮೇಲೆ ನಿಗಾ ವಹಿಸಲಾಗುತ್ತಿತ್ತು. ಕೊಳವೆ ಬಾವಿಗೆ ಸಿಸಿ ಕ್ಯಾಮೆರಾ ಇಳಿ ಬಿಟ್ಟಿದ್ದ ಅಧಿಕಾರಿಗಳು ಮಗುವಿನ ಪರಿಸ್ಥಿತಿ ಅವಲೋಕನ ಮಾಡುತ್ತಲೇ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದರು. ಮಗು ಸಿಕ್ಕಿಕೊಂಡಿರುವ ಆಧಾರದಲ್ಲಿ ಮಗು ಇರುವ ಸ್ಥಳಕ್ಕೆ ರಕ್ಷಣೆಗಾಗಿ ತೆರಳಲು ಸುಮಾರು 20 ಅಡಿ ದೂರದಿಂದ ಸುರಂಗ ಕೊರೆಯುವ ಕಾರ್ಯವನ್ನು ನಡೆಸಿದ್ದರು.
ನೂರಾರು ಮಂದಿ ಪ್ರಾರ್ಥನೆಗೆ ಸಿಕ್ಕ ಫಲ
ಕೊಳವೆಬಾವಿಯಲ್ಲಿ ಮಗು ಸಿಲುಕಿದ ಘಟನೆ ವರದಿಯಾಗುತ್ತಿದ್ದಂತೆ ಜಿಲ್ಲೆಯ ಜನತೆ ಮಗುವನ್ನು ಹೇಗಾದರೂ ಬದುಕಿಸು ದೇವಾ ಎಂದು ಪ್ರಾರ್ಥಿಸಿದರು. ಲಚ್ಯಾಣ, ಇಂಡಿ ಸೇರಿದಂತೆ ನಾನಾ ಭಾಗಗಳಿಂದ ಜನತೆ ರಕ್ಷಣಾ ಕಾರ್ಯ ನಡೆದ ಸ್ಥಳಕ್ಕೆ ಆಗಮಿಸಿದ್ದರು. ಮಗುವಿನ ರಕ್ಷಣಾ ಕಾರ್ಯವನ್ನು ನೋಡಿ ದೇವರ ಮೊರೆ ಹೋದರು. ಬಿರು ಬಿಸಿಲಿನಲ್ಲಿಯೂ ಲೆಕ್ಕಿಸದೇ ರಕ್ಷಣಾ ಕಾರ್ಯದಲ್ಲಿ ತೊಡದಿದ್ದ ಸಿಬ್ಬಂದಿಗೆ ಭಾರಿ ಮೆಚ್ಚುಗೆಯ ವ್ಯಕ್ತಪಡಿಸಲಾಗಿದೆ. 21 ಗಂಟೆಗೂ ಅಧಿಕ ಕಾಲ ನಡೆದ ಕಾರ್ಯಾಚರಣೆಯಲ್ಲಿ ಅನೇಕರು ಜನರು ಸ್ಥಳ ಬಿಟ್ಟು ಕದಲಲಿಲ್ಲ. ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಿದ ರೀತಿಗೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಖಾಲಿ ಕೊಳವೆ ಬಾವಿಗಳನ್ನು ಮುಚ್ಚಬೇಕು, ಯಾವುದೇ ಕಾರಣಕ್ಕೂ ಹಾಗೆ ಬಿಡಬಾರದೆಂದು ಸರ್ಕಾರಗಳು ಎಷ್ಟೇ ಜಾಗೃತಿ ಮೂಡಿಸಿದರೂ ದೇಶದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇವೆ. ರೈತರು ಇನ್ನಾದರೂ ಖಾಲಿ ಕೊಳವೆ ಬಾವಿಗಳನ್ನು ತೆರೆದಿಡದೆ ಸಂಪೂರ್ಣವಾಗಿ ಮುಚ್ಚಬೇಕಿದೆ. (ವರದಿ: ಸಮೀವುಲ್ಲಾ ಉಸ್ತಾದ)