ಕನ್ನಡ ಸುದ್ದಿ  /  Karnataka  /  Vijayapura News Rare Birds Including Stork Tittibha Fly In To The City Of Victory To Offspring Smu

Vijayapura News: ಬರದ ನಾಡಿನಲ್ಲಿ ಹಕ್ಕಿಗಳ ಕಲರವ; ಸಂತಾನ ಅಭಿವೃದ್ಧಿಗಾಗಿ ವಿಜಯಪುರಕ್ಕೆ ಬಂದಿಳಿದ ವಿದೇಶದ ಅಪರೂಪದ ಅತಿಥಿಗಳು

Vijayapura News: ವಿಜಯಪುರದ ನಗರದ ಆಶ್ರಮ ರಸ್ತೆಯಲ್ಲಿರುವ ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಸಮೀಪವಿರುವ ಬೃಹತ್ ಕಲ್ಲಿನ ಗಣಿ ಬಳಿ ಇರುವ ತ್ಯಾಜ್ಯದ ನೀರಿನ ಬಳಿ ಹಕ್ಕಿಗಳು ಸಂತಾನೋತ್ಪತ್ತಿಗೆ ವಲಸೆ ಬಂದಿವೆ. ( ವರದಿ: ಸಮೀವುಲ್ಲಾ ಉಸ್ತಾದ್)

ವಿಜಯಪುರಕ್ಕೆ ವಲಸೆ ಬಂದ ವಿದೇಶಿ ಹಕ್ಕಿಗಳು
ವಿಜಯಪುರಕ್ಕೆ ವಲಸೆ ಬಂದ ವಿದೇಶಿ ಹಕ್ಕಿಗಳು

ವಿಜಯಪುರ: ಬರದ ನಾಡು ಎಂದೇ ಹಣೆ ಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಬಾತುಕೋಳಿ, ಕೊಕ್ಕರೆ, ಬೆಳ್ಳಕ್ಕಿಗಳ ಕಲರವ ಜೋರಾಗಿದೆ. ದೇಶ, ವಿದೇಶಗಳಿಂದ ಬಂದ ಅತಿಥಿಗಳು ಸಂತಾನಾಭಿವೃದ್ಧಿಗಾಗಿ ಗೂಡು ಕಟ್ಟಿಕೊಂಡು ಸಂತಾನ ಅಭಿವೃದ್ಧಿ ಕೆಲಸದಲ್ಲಿ ನಿರತವಾಗಿವೆ.

ಋತುಮಾನ ಬದಲಾವಣೆಗೆ ಅನುಗುಣವಾಗಿ ಉತ್ತರ ಭಾರತ ಹಾಗೂ ವಿದೇಶಗಳಿಂದ ಸಾಕಷ್ಟು ಹಕ್ಕಿಗಳು ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಅದರಂತೆಯೇ ವಿಜಯಪುರಕ್ಕೂ ವಿವಿಧ ಜಾತಿಯ ಬಾತುಕೋಳಿ, ಕೊಕ್ಕರೆ, ಬೆಳ್ಳಕ್ಕಿ, ಬಿಳಿ ಹಾಗೂ ಕರಿ ಬಣ್ಣದ ಕೆಂಬರಲು, ಟಿಟ್ಟಿಭ, ಲಗಡ ಮುಂತಾದ ಪಕ್ಷಿಗಳ ಆಗಮನವಾಗಿದ್ದು ಪಕ್ಷಿ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಚಳಿಯಿಂದ ತಪ್ಪಿಸಿಕೊಳ್ಳಲು ವಲಸೆ ಬರುವ ಹಕ್ಕಿಗಳು

ಹಿಮಾಲಯ ಪ್ರದೇಶಗಳ ಚಳಿಗಾಲದ ಸಮಯದಲ್ಲಿ ವಿಪರೀತ ಹಿಮ ಬೀಳುವುದರಿಂದ ಹಕ್ಕಿಗಳಿಗೆ ಆಹಾರದ ಅಭಾವ ಉಂಟಾಗುತ್ತದೆ. ಚಳಿಯಿಂದ ತಪ್ಪಿಸಿಕೊಳ್ಳಲು ಹಕ್ಕಿಗಳು ವಲಸೆ ಬರುತ್ತವೆ. ಚಳಿಗಾಲ ಆರಂಭದಿಂದ ಮಾರ್ಚ್ ಅಂತ್ಯದವರೆಗೆ ಇಲ್ಲಿಯೇ ಇದ್ದು ಸಂತಾನೋತ್ಪತ್ತಿ ಮಾಡಿ ಬಳಿಕ ಸ್ವದೇಶಕ್ಕೆ ಮರಳುತ್ತವೆ. ಸದಾ ತ್ಯಾಜ್ಯದ ನೀರಿನಿಂದ ಕೆರೆಯಂತೆ ಭಾಸವಾಗುವ ವಿಜಯಪುರದ ನಗರದ ಆಶ್ರಮ ರಸ್ತೆಯಲ್ಲಿರುವ ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಸಮೀಪವಿರುವ ಬೃಹತ್ ಕಲ್ಲಿನ ಗಣಿಯಲ್ಲಿ ಈ ಪಕ್ಷಿಗಳು ಠಿಕಾಣಿ ಹೂಡಿವೆ. ಕಳೆದ 12 ವರ್ಷಗಳಿಂದ ಈ ಹಕ್ಕಿಗಳು ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತಿದ್ದವು. ಇದನ್ನು ಪಕ್ಷಿಧಾಮವಾಗಿ ಅಭಿವೃದ್ಧಿಪಡಿಸಲು ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ಮುಂದಾಗದೆ ಇರುವುದು ವಿಪರ್ಯಾಸ.

ಕಲ್ಲಿನ ಗಣಿಯ ಸುತ್ತ ನಾಲ್ಕು ದಿಕ್ಕುಗಳಲ್ಲೂ ಜಾಲಿ ಗಿಡಗಳು ಆವರಿಸಿವೆ. ಇದರಿಂದ ಸಾರ್ವಜನಿಕರು ಇತ್ತ ಬರುವುದು ವಿರಳ. ಪ್ರಶಾಂತ ವಾತಾವರಣ ಬಯಸುವ ಹಕ್ಕಿಗಳಿಗೆ ಈ ಸ್ಥಳ ಸೂಕ್ತ. ಹೀಗಾಗಿ ವಿಸ್ತಾರವಾಗಿರುವ ಈ ಗಣಿಯ ನಡುಗಡ್ಡೆಯಲ್ಲಿ ಬೆಳೆದಿರುವ ವಿಶಾಲ ಜಾಲಿ ಗಿಡಗಳ ಮೇಲೆ ಪಕ್ಷಿಗಳು ಅಹಾರಕ್ಕಾಗಿ ಕಾದು ಕುಳಿತಿರುವುದನ್ನು ನೋಡುವುದೇ ಚೆಂದ. ವಿವಿಧ ಜಾತಿಯ ಬಾತುಕೋಳಿ, ಕೊಕ್ಕರೆ, ಬೆಳ್ಳಕ್ಕಿ, ಬಿಳಿ ಹಾಗೂ ಕರಿ ಬಣ್ಣದ ಕೆಂಬರಲು, ಟಿಟ್ಟಿಭ, ಲಗಡ ಮುಂತಾದ ಪಕ್ಷಿಗಳು ಇಲ್ಲಿಗೆ ಆಗಮಿಸಿದ್ದು ಅವುಗಳ ಚಿನ್ನಾಟವನ್ನೂ ಕಣ್ತುಂಬಿಕೊಳ್ಳಬಹುದಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶದಿಂದ ವಲಸೆ

ಇಲ್ಲಿಗೆ ವಲಸೆ ಬಂದಿರುವ ಪ್ರಮುಖ ಹಕ್ಕಿಗಳಲ್ಲಿ ಹಿಮಾಲಯದಲ್ಲಿ ಕಾಣಸಿಗುವ ಪೇಂಟಡ್‌ ಸ್ಟಾರ್ಕ್ಸ್‌ (ಬಣ್ಣದ ಕೊಕ್ಕರೆ), ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುವ ಗ್ರೇ ಹೆರಾನ್ಸ್‌, ಭಾರತದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಗ್ರೇ ಹೆಡೆಡ್‌ ಸ್ವಾಂಫೆನ್‌ ಪಕ್ಷಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿಯೇ ಬಿಡಾರ ಹೂಡಿವೆ. ಸಣ್ಣ ಮೀನುಗಳನ್ನು ಬೇಟೆಯಾಡಿ, ಮರಗಳ ಮೇಲೆ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ. ಮರಿಗಳು ಹಾರಾಡಲು ಆರಂಭಿಸಿದ ನಂತರ ಸ್ವದೇಶಕ್ಕೆ ಮರಳುತ್ತವೆ.

ಸದಾ ಬರಗಾಲದಿಂದ ತತ್ತರಿಸಿ ಪಕ್ಷಿ ಸಂಕುಲ ಗಣನೀಯವಾಗಿ ಕಡಿಮೆಯಾಗಿರುವ ಸಂದರ್ಭದಲ್ಲಿ ಹಕ್ಕಿಗಳು ಆಗಮಿಸುತ್ತಿರುವುದು ಸಂತಸದ ವಿಷಯ. ಕಲ್ಲಿನ‌ ಗಣಿಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಅಭಿವೃದ್ಧಿ ಪಡಿಸಬೇಕೆಂಬುದು ಪಕ್ಷಿಪ್ರೇಮಿಗಳ ಒತ್ತಾಸೆಯಾಗಿದೆ. ಕಲ್ಲಿನ ಗಣಿ ನಿರ್ಲಕ್ಷ್ಯಕ್ಕೆ ಗುರಿಯಾಗಿ, ತ್ಯಾಜ್ಯ ಎಸೆಯುವ ಬ್ಲ್ಯಾಕ್‌ ಪಾಯಿಂಟ್‌ ಆಗಿ ಪರಿವರ್ತನೆಯಾಗಿದೆ. ಇಲ್ಲಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬೇಕು. ಗಣಿಯ ಸುತ್ತ ಸುಸಜ್ಜಿತ ಕಾಂಪೌಂಡ್‌ ನಿರ್ಮಿಸಿ ಈ ತಾಣವನ್ನು ಅಭಿವೃದ್ಧಿ ಪಡಿಸಿದರೆ ಜೀವ ವೈವಿಧ್ಯ ಉಳಿಸಿ, ರಾಜ್ಯದ ಪಕ್ಷಿ ಪ್ರೇಮಿಗಳು ಹಾಗೂ ಪ್ರವಾಸಿಗರನ್ನೂ ಆಕರ್ಷಿಸಿದಂತಾಗುತ್ತದೆ.

ಇನ್ನು ಕೊಕ್ಕರೆಗಳು ಬಂದಿರುವ ಸುದ್ದಿ ತಿಳಿದಿರುವ ಪ್ರವಾಸಿಗರು ಹಾಗೂ ಪಕ್ಷಿಪ್ರೇಮಿಗಳು ಕಲ್ಲಿನ ಗಣಿಗೆ ಭೇಟಿ ನೀಡುತ್ತಿದ್ದು, ವಿವಿಧ ಪಕ್ಷಿಗಳನ್ನು ವೀಕ್ಷಿಸುವುದಲ್ಲದೇ, ಕ್ಯಾಮೆರಾಗಳಲ್ಲಿ ಸೆರೆ ಹಿಡಿದುಕೊಂಡು ಆನಂದಿಸುತ್ತಿದ್ದಾರೆ.

ವರದಿ: ಸಮೀವುಲ್ಲಾ ಉಸ್ತಾದ್

ವಿಭಾಗ