Almatti Dam: ಮಹಾರಾಷ್ಟ್ರದಲ್ಲಿ ಬಿರುಸು ಮಳೆ, ಕೃಷ್ಣಾ ನದಿಗೆ ನೀರು, ಅರ್ಧ ತುಂಬಿತು ಆಲಮಟ್ಟಿ ಜಲಾಶಯ
Vijayapura News ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ವಿಜಯಪುರ: ಮಹಾರಾಷ್ಟ್ರದ ಮಲೆನಾಡು ಭಾಗದಲ್ಲಿ( Maharashtra Rains) ಭಾರೀ ಮಳೆಯ ಪರಿಣಾಮವಾಗಿ ಕೃಷ್ಣಾ ನದಿ( Krishna River) ತುಂಬಿ ಹರಿಯುತ್ತಿದೆ.ಬೆಳಗಾವಿ ಜಿಲ್ಲೆಯಲ್ಲಿ ಹಲವು ಕಡೆ ಸೇತುವೆ ಮಟ್ಟಕ್ಕೂ ನೀರು ಹರಿಯುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಅಲ್ಲಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯಲು ಆರಂಭಿಸಿದೆ. ಈ ವಾರದಲ್ಲಿಇನ್ನೂ ಹೆಚ್ಚುವ ನಿರೀಕ್ಷೆಯೂ ಇದೆ. ಕೃಷ್ಣಾ ನದಿ ನೀರು ಪ್ರಮಾಣ ಏರಿಕೆಯಾಗಿರುವುದರಿಂದ ಆಲಮಟ್ಟಿ ಜಲಾಶಯಕ್ಕೂ( Almatti dam) ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಂದು ವಾರದಿಂದ ನಿರಂತರವಾಗಿ ನೀರಿನ ಪ್ರಮಾಣದಲ್ಲಿ ಹೆಚ್ಚಿಗೆಯಾಗಿ ಅರ್ಧ ಜಲಾಶಯ ತುಂಬಿದೆ. ಕಳೆದ ವರ್ಷ ಜಲಾಶಯದಲ್ಲಿ ನೀರಿನ ಒಳಹರಿವು ಪ್ರಮಾಣ ಕಡಿಮೆಯಿತ್ತು.
ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಸಂಜೆ ಹೊತ್ತಿಗೆ 60,603 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದಿಂದ ಆ ಭಾಗದ ನದಿಗಳು ಉಕ್ಕಿ ಹರಿಯುತ್ತಿವೆ. ವಿಶೇಷವಾಗಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲು ಹೆಚ್ಚಳವಾಗಿರುವುದರಿಂದ ಅದು ಬೆಳಗಾವಿ, ಬಾಗಲಕೋಟೆ ಜಿಲ್ಲೆಯನ್ನು ದಾಟಿಕೊಂಡು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ತಲುಪುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ಪ್ರಮಾಣದ ಒಳಹರಿವು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವುದು ಇದೇ ಮೊದಲು. ಜಲಾಶಯದಲ್ಲಿ ಸದ್ಯ 515.16 ಅಡಿ ನೀರು ಸಂಗ್ರಹವಾಗಿದೆ.ಜಲಾಶಯದ ಗರಿಷ್ಠ ಮಟ್ಟವು 519.60 ಅಡಿ. ಜಲಾಶಯದಲ್ಲಿ 64.594 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 123.08 ಟಿಎಂಸಿ ನೀರು ಸಂಗ್ರಹ ಮಾಡಬಹುದು.
ಕಳೆದ ವರ್ಷ ಇದೇ ದಿನ ಆಲಮಟ್ಟಿ ಜಲಾಶಯಕ್ಕೆ ಶೂನ್ಯ ಒಳ ಹರಿವು ಇತ್ತು. ಜಲಾಶಯದಲ್ಲಿ 507.34 ಅಡಿ ನೀರು ಸಂಗ್ರಹವಾಗಿತ್ತು. ಹಿಂದಿನ ವರ್ಷದಲ್ಲಿ 19.104 ಟಿಎಂಸಿ ನೀರು ಇತ್ತು. ಈ ಬಾರಿ ಪರಿಸ್ಥಿತಿಯೇ ಭಿನ್ನವಾಗಿದೆ.
ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಚೆನ್ನಾಗಿದೆ. ಇನ್ನೂ ಈ ಪ್ರಮಾಣ ಏರಿಕೆಯಾಗಲಿದೆ. ಇದೇ ಪ್ರಮಾಣದಲ್ಲಿ ಒಳ ಹರಿವು ಬಂದರೆ ಮಾಸಾಂತ್ಯದೊಳಗೆ ಆಲಮಟ್ಟಿ ಜಲಾಶಯವು ತುಂಬುವ ನಿರೀಕ್ಷೆಯಿದೆ. ನೀರಿನ ಪ್ರಮಾಣ ಏರಿಕೆಯಾಗದರೆ ಅದಕ್ಕಿಂತ ಮುಂಚೆಯೇ ತುಂಬಬಹುದು. ರಾಜ್ಯದಲ್ಲಿ ಅತಿ ದೊಡ್ಡ ಜಲಾಶಯವಾಗಿರುವ ಆಲಮಟ್ಟಿಯಿಂದ ಹಿಂದೆಲ್ಲಾ ಎಂಟು ಲಕ್ಷ ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಒಳ ಹರಿವು ಆರು ಲಕ್ಷ ಕ್ಯೂಸೆಕ್ ವರೆಗೂ ಬಂದ ಉದಾಹರಣೆಯಿದೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಆಲಮಟ್ಟಿ ಜಲಾಶಯದ ನೀರಿನ ಮಟ್ಟವು ಉತ್ತಮ ಸ್ಥಿತಿಯಲ್ಲಂತೂ ಇದೆ ಎನ್ನುವುದು ಅಧಿಕಾರಿಗಳ ವಿವರಣೆ.
ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜುಲೈ ಎರಡನೇ ವಾರದಲ್ಲಿಯೇ ಉತ್ತಮ ನೀರಿನ ಸಂಗ್ರಹವಿದೆ. ಕಳೆದ ವರ್ಷ ಬರದ ನೆಪದಿಂದ ನಾಲೆಗಳಿಗೆ ನೀರು ಹರಿಸದೇ ಬೆಳೆಯನ್ನೂ ಬೆಳೆಯಲು ಆಗಲಿಲ್ಲ. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಿ. ಕೂಡಲೇ ಕೃಷ್ಣಾ ನದಿ ನೀರು ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸಬೇಕು. ಕೆರೆಗಳಿಗೆ ನೀರು ತುಂಬಿಸಲು ಕೃಷ್ಣ ಭಾಗ್ಯ ಜಲ ನಿಗಮವು ಗಮನ ನೀಡಬೇಕು.ಅದನ್ನು ಬಿಟ್ಟು ತುಂಬುವವರೆಗೂ ಕಾಯ್ದು ಕೃಷ್ಣಾ ನದಿ ಮೂಲಕ ನೆರೆಯ ಆಂಧ್ರಪ್ರದೇಶ, ತೆಲಂಗಾಣಕ್ಕೆ ನೀರು ಹರಿಸುವುದನ್ನು ಮಾಡುವುದು ಬೇಡ. ಜಲಾಶಯ ನಿರ್ಮಿಸಿರುವುದು ಈ ಭಾಗದ ರೈತರಿಗೆ ಸಹಾಯಕವಾಗಲಿ ಎನ್ನುವ ಉದ್ದೇಶದಿಂದಲೇ. ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದೇ ಇದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಅರವಿಂದ ಕುಲಕರ್ಣಿ ಮನವಿ ಸಲ್ಲಿಸಿದ್ದಾರೆ.
